9
ಸೆರೆವಾಸದ ದುಃಖ
ಇಸ್ರೇಲೇ, ಇತರ ಜನಾಂಗಗಳವರಂತೆ ಹಬ್ಬವನ್ನು ಆಚರಿಸಬೇಡ, ಉಲ್ಲಾಸಗೊಳ್ಳಬೇಡ. ನೀನು ವೇಶ್ಯೆಯಂತೆ ವರ್ತಿಸಿ ನಿನ್ನ ದೇವರನ್ನು ತೊರೆದುಬಿಟ್ಟೆ. ಪ್ರತಿಯೊಂದು ಕಣದ ಮೇಲೆ ಲೈಂಗಿಕ ಪಾಪವನ್ನು ನಡೆಸಿದಿ. ಆದರೆ ಆ ಕಣದಲ್ಲಿ ತೂರಿದ ಧಾನ್ಯವು ಇಸ್ರೇಲಿಗೆ ಸಾಕಾಗುವಷ್ಟು ಆಹಾರವನ್ನು ಒದಗಿಸದು. ಇಸ್ರೇಲಿಗೆ ಬೇಕಾಗುವಷ್ಟು ದ್ರಾಕ್ಷಾರಸವಿರದು.
ಯೆಹೋವನ ದೇಶದಲ್ಲಿ ಇಸ್ರೇಲು ವಾಸಿಸದು. ಎಫ್ರಾಯೀಮ್ ಈಜಿಪ್ಟಿಗೆ ಹಿಂದಿರುಗುವದು. ಅಶ್ಶೂರ್ಯದಲ್ಲಿ ಅವರು ತಮಗೆ ನಿಷೇಧಿಸಲ್ಪಟ್ಟ ಆಹಾರವನ್ನು ತಿನ್ನುವರು. ಇಸ್ರೇಲರು ಯೆಹೋವನಿಗೆ ದ್ರಾಕ್ಷಾರಸದ ಸಮರ್ಪಣೆ ಮಾಡುವದಿಲ್ಲ. ಆತನಿಗೆ ಯಜ್ಞವನ್ನರ್ಪಿಸುವದಿಲ್ಲ. ಅವರ ಯಜ್ಞಗಳು ಸಮಾಧಿಗಳಲ್ಲಿ ಉಣ್ಣುವ ಆಹಾರದಂತಿರುವದು. ಅದನ್ನು ಯಾವನಾದರೂ ಉಂಡಲ್ಲಿ ಅವನು ಅಶುದ್ಧನಾಗುವನು. ಅವರ ರೊಟ್ಟಿಯು ದೇವರ ಆಲಯದೊಳಗೆ ಇಡಲ್ಪಡುವದಿಲ್ಲ. ಅವರೇ ಅದನ್ನು ತಿನ್ನಬೇಕು. ಯೆಹೋವನ ಹಬ್ಬಗಳನ್ನಾಗಲಿ ವಿಶ್ರಾಂತಿ ದಿನವನ್ನಾಗಲಿ ಅವರಿಗೆ ಆಚರಿಸಲಾಗದು.
ಶತ್ರುಗಳು ಇಸ್ರೇಲರಿಂದ ಎಲ್ಲವನ್ನು ದೋಚಿಕೊಂಡು ಹೋದುದರಿಂದ ಇಸ್ರೇಲರು ಬಿಟ್ಟು ಹೊರಟರು. ಈಜಿಪ್ಟ್ ಅವರನ್ನು ಒಟ್ಟಿಗೆ ಸೇರಿಸಿಕೊಳ್ಳುವುದು. ಮೆಂಫಿಸ್ ಪಟ್ಟಣವು ಅವರನ್ನು ಹೂಳಿಡುವದು. ಅವರ ಬೆಳ್ಳಿಯ ನಿಕ್ಷೇಪದ ಮೇಲೆ ಕಳೆ ಬೆಳೆಯುವದು. ಇಸ್ರೇಲರು ವಾಸಿಸಿದ್ದಲ್ಲಿ ಮುಳ್ಳಿನ ಗಿಡಗಳು ಬೆಳೆಯುವವು.
ನಿಜ ಪ್ರವಾದಿಗಳನ್ನು ಇಸ್ರೇಲ್ ನಿರಾಕರಿಸಿದರು
ಪ್ರವಾದಿಯು ಹೀಗೆ ಹೇಳುತ್ತಾನೆ, “ಇಸ್ರೇಲೇ, ಇದನ್ನು ಕಲಿತುಕೋ. ಶಿಕ್ಷೆಯ ಸಮಯವು ಬಂದದೆ. ನೀನು ಮಾಡಿದ ದುಷ್ಟತನಕ್ಕೆ ಪ್ರತಿಯಾಗಿ ದೊರಕಬೇಕಾದ ಸಂಬಳ (ಫಲ)ದ ಸಮಯವು ಬಂತು.” ಆದರೆ ಇಸ್ರೇಲ್ ಜನರು ಹೀಗೆ ಹೇಳುತ್ತಾರೆ: “ಪ್ರವಾದಿಯು ಮೂರ್ಖನಾಗಿದ್ದಾನೆ. ದೇವರಾತ್ಮನುಳ್ಳ ಈ ಮನುಷ್ಯನು ಹುಚ್ಚನಾಗಿದ್ದಾನೆ.” ಪ್ರವಾದಿಯು ಹೀಗೆ ಹೇಳಿದನು, “ನಿನ್ನ ಕೆಟ್ಟ ಪಾಪಗಳಿಗಾಗಿ ನೀನು ಶಿಕ್ಷಿಸಲ್ಪಡುವೆ. ನೀನು ಹಗೆ ಮಾಡಿದುದಕ್ಕೆ ನೀನು ಶಿಕ್ಷೆ ಅನುಭವಿಸುವೆ.” ದೇವರೂ ಪ್ರವಾದಿಯೂ ಕಾವಲುಗಾರರಂತೆ ಎಫ್ರಾಯೀಮನ್ನು ಕಾಪಾಡುತ್ತಿದ್ದಾರೆ. ಆದರೆ ದಾರಿಯಲ್ಲಿ ಅನೇಕ ಉರುಲುಗಳಿವೆ. ಜನರು ಪ್ರವಾದಿಯನ್ನು ಹಗೆ ಮಾಡುತ್ತಾರೆ. ದೇವರ ಆಲಯದಲ್ಲಿಯೂ ಅವನನ್ನು ಹಗೆ ಮಾಡುತ್ತಾರೆ.
ಗಿಬ್ಯದ ಕಾಲದಂತೆ ಇಸ್ರೇಲರು ನಾಶನದ ಕಡೆಗೆ ಆಳವಾಗಿ ಇಳಿದಿದ್ದಾರೆ. ಯೆಹೋವನು ಇಸ್ರೇಲರ ಪಾಪಗಳನ್ನು ತನ್ನ ನೆನಪಿಗೆ ತಂದುಕೊಂಡು ಅವರನ್ನು ಶಿಕ್ಷಿಸುವನು.
ವಿಗ್ರಹಾರಾಧನೆಯಿಂದ ಇಸ್ರೇಲ್ ನಾಶವಾಗುತ್ತಿದೆ
10 “ನನಗೆ ಇಸ್ರೇಲ್ ಜನಾಂಗವು ಮರುಭೂಮಿಯಲ್ಲಿ ದೊರಕಿದ ದ್ರಾಕ್ಷಿಹಣ್ಣಿನಂತಿತ್ತು. ನಿನ್ನ ಪೂರ್ವಿಕರು ಫಲಕಾಲದ ಆರಂಭದಲ್ಲಿ ದೊರೆತ ಅಂಜೂರದ ಹಣ್ಣಿನಂತಿದ್ದರು. ಆದರೆ ಅವರು ಬಾಳ್‌ಪೆಗೋರಿಗೆ ಬಂದಾಗ ಅವರು ಬದಲಾದರು. ಅವರು ಕೊಳೆತುಹೋದ ವಸ್ತುವಿನಂತೆ ಆದರು. ಅವರು ಪ್ರೀತಿಸಿದ ಭಯಂಕರ ವಿಗ್ರಹಗಳಂತೆ ಆದರು.
ಇಸ್ರೇಲರಿಗೆ ಸಂತಾನವೃದ್ಧಿಯಾಗದು
11 “ಎಫ್ರಾಯೀಮ್ಯರ ಮಹಿಮೆಯು ಪಕ್ಷಿಯಂತೆ ಹಾರಿ ಹೋಗುವದು. ಅವರಲ್ಲಿ ಗರ್ಭಿಣಿಯರು ಇರುವದಿಲ್ಲ. ಹೆರುವದೂ ಇಲ್ಲ. ಶಿಶುಗಳೂ ಇರುವದಿಲ್ಲ. 12 ಒಂದುವೇಳೆ ಇಸ್ರೇಲರಿಗೆ ಮಕ್ಕಳು ಹುಟ್ಟಿದರೂ ಪ್ರಯೋಜನವಿಲ್ಲ. ಯಾಕೆಂದರೆ ಆ ಮಕ್ಕಳನ್ನು ಅವರಿಂದ ತೆಗೆದುಬಿಡುವೆನು. ನಾನು ಅವರನ್ನು ತೊರೆದುಬಿಡುವೆನು. ಆಗ ಅವರಿಗೆ ಸಂಕಟದ ಮೇಲೆ ಸಂಕಟವು ಪ್ರಾಪ್ತಿಯಾಗುವದು.”
13 ಎಫ್ರಾಯೀಮನು ತನ್ನ ಮಕ್ಕಳನ್ನು ಉರುಲಿನ ಕಡೆಗೆ ನಡೆಸುತ್ತಿರುವದನ್ನು ನಾನು ನೋಡುತ್ತಿದ್ದೇನೆ. ಕೊಲೆಗಡುಕನೆದುರು ಎಫ್ರಾಯೀಮನು ತನ್ನ ಮಕ್ಕಳನ್ನು ತರುತ್ತಿದ್ದಾನೆ. 14 ಯೆಹೋವನೇ, ನಿನ್ನ ಇಚ್ಛೆಯ ಪ್ರಕಾರ ಅವರಿಗೆ ಕೊಡು. ಮಗುವನ್ನು ಹೆರಲಾರದ ಗರ್ಭವನ್ನು ಅವರಿಗೆ ಕೊಡು. ಮೊಲೆಹಾಲು ಉಣಿಸಲಾರದ ಸ್ತನಗಳನ್ನು ಅವರಿಗೆ ಕೊಡು.
 
15 ಅವರ ದುಷ್ಟತನವೆಲ್ಲಾ ಗಿಲ್ಗಾಲಿನಲ್ಲಿದೆ.
ಅಲ್ಲಿಯೇ ನಾನು ಅವರನ್ನು ದ್ವೇಷಿಸಲು ಪ್ರಾರಂಭಿಸಿದೆನು.
ಅವರು ಮಾಡುವ ದುಷ್ಕೃತ್ಯಗಳ ದೆಸೆಯಿಂದ
ನಾನು ಅವರನ್ನು ನನ್ನ ಮನೆಯಿಂದ ಹೊರಡಿಸುವೆನು.
ಇನ್ನು ಮುಂದೆ ಅವರನ್ನು ನಾನು ಪ್ರೀತಿಸುವುದಿಲ್ಲ.
ಅವರ ನಾಯಕರು ನನಗೆ ವಿರುದ್ಧವಾಗಿ ದಂಗೆ ಎದ್ದವರು; ನನ್ನ ವಿರುದ್ಧವಾಗಿ ತಿರುಗಿಬಿದ್ದರು.
16 ಎಫ್ರಾಯೀಮ್ ಶಿಕ್ಷಿಸಲ್ಪಡುವುದು.
ಅದರ ಬೇರು ಒಣಗುತ್ತಲಿದೆ.
ಇನ್ನು ಅವರಿಗೆ ಮಕ್ಕಳಾಗದು.
ಒಂದುವೇಳೆ ಮಕ್ಕಳಾದಲ್ಲಿ
ಅವರ ದೇಹದಿಂದ ಬರುವ ಆ ಅಮೂಲ್ಯ ಶಿಶುವನ್ನು ನಾನು ಸಾಯಿಸುವೆನು.
17 ಆ ಜನರು ನನ್ನ ದೇವರ ಮಾತನ್ನು ಕೇಳಲೊಲ್ಲರು.
ಆದ್ದರಿಂದ ಆತನು ಅವರಿಗೆ ಕಿವಿಗೊಡುವದಿಲ್ಲ;
ಅವರು ದೇಶದೇಶಗಳಲ್ಲಿ ವಾಸಸ್ಥಾನಗಳಿಲ್ಲದೆ ಅಲೆಯುವರು.