6
ಪ್ರವಾದಿಯಾಗಲು ಯೆಶಾಯನಿಗೆ ದೇವರಿಂದ ಕರೆ
ಅರಸನಾದ ಉಜ್ಜೀಯನು ಮರಣಹೊಂದಿದ ವರ್ಷದಲ್ಲಿ ನಾನು ನನ್ನ ಒಡೆಯನನ್ನು ಕಂಡೆನು. ಆತನು ಅದ್ಭುತವೂ ಉನ್ನತವೂ ಆಗಿರುವ ಸಿಂಹಾಸನದ ಮೇಲೆ ಕುಳಿತಿದ್ದನು. ಆತನ ಉದ್ದವಾದ ನಿಲುವಂಗಿಯು ಆಲಯವನ್ನು ತುಂಬಿಕೊಂಡಿತ್ತು. ಆರು ರೆಕ್ಕೆಗಳುಳ್ಳ ಸೆರಾಫಿಯರು ಯೆಹೋವನ ಸುತ್ತ್ತಲೂ ನಿಂತಿದ್ದರು. ಆ ದೇವದೂತರು ಎರಡು ರೆಕ್ಕೆಗಳಿಂದ ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದರು; ಎರಡು ರೆಕ್ಕೆಗಳಿಂದ ತಮ್ಮ ಕಾಲುಗಳನ್ನು ಮುಚ್ಚಿಕೊಂಡಿದ್ದರು; ಉಳಿದ ಎರಡು ರೆಕ್ಕೆಗಳಿಂದ ಹಾರಾಡುತ್ತಿದ್ದರು. ಪ್ರತಿಯೊಬ್ಬ ದೂತನು ಇನ್ನೊಬ್ಬ ದೂತನನ್ನು ಕರೆದು, “ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಸರ್ವಶಕ್ತನಾದ ಯೆಹೋವನು ಮಹಾ ಪರಿಶುದ್ಧನು. ಆತನ ಮಹಿಮೆಯು ಇಡೀ ಭೂಮಂಡಲವನ್ನು ಆವರಿಸಿಕೊಂಡಿದೆ” ಎಂದು ಗಟ್ಟಿಯಾದ ಸ್ವರದಲ್ಲಿ ಹೇಳುತ್ತಿದ್ದರು. ಅವರ ಗಟ್ಟಿಯಾದ ಸ್ವರಕ್ಕೆ ಬಾಗಿಲಿನ ನಿಲುವುಗಳು ಅಲುಗಾಡುತ್ತಿದ್ದವು; ಆಲಯವು ಹೊಗೆಯಿಂದ ತುಂಬಿಹೋಯಿತು.
ಆಗ ನಾನು ಬಹು ಭಯಗೊಂಡು, “ಅಯ್ಯೋ, ನಾನು ನಾಶವಾಗುತ್ತಿದ್ದೇನೆ. ನಾನು ದೇವರೊಂದಿಗೆ ಮಾತನಾಡುವಷ್ಟು ಯೋಗ್ಯನಲ್ಲ. ದೇವರೊಂದಿಗೆ ಮಾತಾಡಲು ಯೋಗ್ಯರಲ್ಲದ ಜನರೊಂದಿಗೆ ನಾನು ಜೀವಿಸುತ್ತಿದ್ದೇನೆ. ಆದರೂ ನಾನು ಸರ್ವಶಕ್ತನಾದ ಯೆಹೋವನನ್ನು, ರಾಜಾಧಿರಾಜನನ್ನು ನೋಡಿದೆನು” ಎಂದೆನು.
ಯಜ್ಞವೇದಿಕೆಯ ಮೇಲೆ ಬೆಂಕಿ ಇತ್ತು. ಸೆರಾಫಿಯರಲ್ಲೊಬ್ಬನು ಇಕ್ಕುಳಿಯಲ್ಲಿ ಬೆಂಕಿಯೊಳಗಿಂದ ಉರಿಯುವ ಕೆಂಡವನ್ನು ತೆಗೆದು ನನ್ನ ಬಳಿಗೆ ಹಾರಿಬಂದನು. ಆ ಸೆರಾಫಿಯನು ಉರಿಯುವ ಕೆಂಡವನ್ನು ನನ್ನ ಬಾಯಿಗೆ ಮುಟ್ಟಿಸಿದನು. ಆಗ ಆ ದೂತನು, “ಇಗೋ, ಈ ಉರಿಯುವ ಕೆಂಡವು ನಿನ್ನ ತುಟಿಗಳಿಗೆ ತಗಲಿದ್ದರಿಂದ ನೀನು ಮಾಡಿದ ಕೆಟ್ಟಕಾರ್ಯಗಳೆಲ್ಲಾ ನಿನ್ನಿಂದ ತೊಲಗಿ ಹೋದವು. ಈಗ ನಿನ್ನ ಪಾಪವು ಅಳಿಸಿಹಾಕಲ್ಪಟ್ಟಿದೆ”* ಅಳಿಸಿಹಾಕಲ್ಪಟ್ಟಿದೆ ಅಕ್ಷರಶಃ, “ಪ್ರಾಯಶ್ಚಿತ್ತ ಮಾಡಲಾಗಿದೆ.” ಎಂದು ಹೇಳಿದನು.
ಆಗ ನಾನು ನನ್ನ ಒಡೆಯನಾದ ಯೆಹೋವನ ಸ್ವರವನ್ನು ಕೇಳಿದೆನು. ಆತನು, “ನಾನು ಯಾರನ್ನು ಕಳುಹಿಸಲಿ? ನಮಗೋಸ್ಕರ ಯಾರು ಹೋಗುವರು?” ಎಂದು ಕೇಳಿದನು.
ಆಗ ನಾನು, “ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ಹೇಳಿದೆನು.
ಆಗ ಯೆಹೋವನು, “ನೀನು ಹೋಗಿ ಇದನ್ನು ಜನರಿಗೆ ಸಾರು: ‘ಸರಿಯಾಗಿ ಕೇಳಿಸಿಕೊಳ್ಳಿ, ಆದರೆ ಅರ್ಥಮಾಡಿಕೊಳ್ಳಬೇಡಿ. ಸೂಕ್ಷ್ಮವಾಗಿ ನೋಡಿ, ಆದರೆ ಕಲಿತುಕೊಳ್ಳಬೇಡಿ.’ 10 ಜನರಲ್ಲಿ ಗಲಿಬಿಲಿಯನ್ನು ಉಂಟುಮಾಡು. ಜನರು ತಾವು ನೋಡಿದ್ದನ್ನು, ಕೇಳಿದ್ದನ್ನು ಅರ್ಥಮಾಡಿಕೊಳ್ಳದ ಹಾಗೆ ಮಾಡು. ನೀನು ಹೀಗೆ ಮಾಡದಿದ್ದಲ್ಲಿ ಜನರು ತಾವು ಕೇಳಿದ್ದನ್ನು ಅರ್ಥಮಾಡಿಕೊಳ್ಳುವರು; ಜನರು ತಮ್ಮ ಮನಸ್ಸಿನಲ್ಲಿ ಅರ್ಥಮಾಡಿಕೊಳ್ಳುವರು. ಅವರು ಹಾಗೆ ಮಾಡಿದ್ದಲ್ಲಿ, ಅವರು ನನ್ನ ಬಳಿಗೆ ಹಿಂದಿರುಗಿ ಬಂದು ಗುಣಹೊಂದುವರು” ಎಂದು ಹೇಳಿದನು.
11 ಆಗ ನಾನು, “ಒಡೆಯನೇ, ಎಷ್ಟರ ತನಕ ನಾನು ಹೀಗೆ ಮಾಡಬೇಕು?” ಎಂದು ವಿಚಾರಿಸಿದೆನು.
ಅದಕ್ಕೆ ಯೆಹೋವನು, “ನಗರಗಳು ನಾಶವಾಗುವ ತನಕ ಹೀಗೆಯೇ ಮಾಡು. ಮನೆಗಳಲ್ಲಿ ಜನರು ಇಲ್ಲದೆ ಹೋಗುವವರೆಗೆ ಹೀಗೆಯೇ ಮಾಡು. ಇಡೀ ದೇಶವು ಹಾಳಾಗಿ ಬೆಂಗಾಡಾಗುವ ತನಕ ಹೀಗೆಯೇ ಮಾಡುತ್ತಿರು” ಎಂದು ಹೇಳಿದನು.
12 ಜನರು ಬಹುದೂರ ಹೋಗುವಂತೆ ಯೆಹೋವನು ಮಾಡುವನು. ದೇಶದೊಳಗೆ ನಿರ್ಜನವಾದ ಸ್ಥಳಗಳು ಬೇಕಾದಷ್ಟು ಇರುವವು. 13 ಆದರೆ ದೇಶದಲ್ಲಿ ಹತ್ತನೆ ಒಂದು ಭಾಗದಷ್ಟು ಜನರು ಮಾತ್ರ ಉಳಿಯುವರು. ಇವರು ನಾಶವಾಗುವುದಿಲ್ಲ. ಯಾಕೆಂದರೆ ಇವರು ಯೆಹೋವನ ಬಳಿಗೆ ಹಿಂತಿರುಗಿ ಬಂದವರು. ಇವರು ಓಕ್ ಮರದಂತಿರುವರು. ಆ ಮರವು ಕಡಿಯಲ್ಪಟ್ಟರೂ ಅದರ ಬುಡವು ಹಾಗೆಯೇ ಉಳಿಯುವದು. ಈ ಕಾಂಡದ ಬುಡವು ಬಹು ವಿಶೇಷವಾದ ಬೀಜವಾಗಿರುವದು ಮತ್ತು ಅದು ಪುನಃ ಬೆಳೆಯುವುದು.

*6:7: ಅಳಿಸಿಹಾಕಲ್ಪಟ್ಟಿದೆ ಅಕ್ಷರಶಃ, “ಪ್ರಾಯಶ್ಚಿತ್ತ ಮಾಡಲಾಗಿದೆ.”