24
ದೇವರು ಇಸ್ರೇಲನ್ನು ಶಿಕ್ಷಿಸುವನು
ಇಗೋ, ಯೆಹೋವನು ಈ ದೇಶವನ್ನು ನಾಶಮಾಡುವನು. ಆತನು ಅದನ್ನು ಸಂಪೂರ್ಣವಾಗಿ ನಿರ್ಮೂಲ ಮಾಡುವನು. ಜನರನ್ನು ಅತಿದೂರಕ್ಕೆ ಚದರಿಸಿಬಿಡುವನು. ಆ ಸಮಯದಲ್ಲಿ ಸಾಧಾರಣ ಜನರಿಗೂ ಯಾಜಕವರ್ಗದವರಿಗೂ ವ್ಯತ್ಯಾಸವಿರದು. ಸೇವಕರಿಗೂ ಅವರ ಯಜಮಾನರಿಗೂ ವ್ಯತ್ಯಾಸವಿರದು. ದಾಸಿಯರಿಗೂ ಅವರ ಯಜಮಾನಿಯರಿಗೂ ವ್ಯತ್ಯಾಸವಿರದು. ಮಾರುವವರಿಗೂ ಕೊಳ್ಳುವವರಿಗೂ ವ್ಯತ್ಯಾಸವಿರದು. ಸಾಲಕೊಡುವವರಿಗೂ ಸಾಲ ತೆಗೆದುಕೊಳ್ಳುವವರಿಗೂ ವ್ಯತ್ಯಾಸವಿರದು. ಬಡ್ಡಿಹಾಕುವವನಿಗೂ ಬಡ್ಡಿಕೊಡುವವನಿಗೂ ವ್ಯತ್ಯಾಸವಿರದು. ಎಲ್ಲಾ ಜನರು ದೇಶದಿಂದ ಹೊರಕ್ಕೆ ಹಾಕಲ್ಪಡುವರು. ದೇಶದ ಸಂಪತ್ತನ್ನು ಕಿತ್ತುಕೊಳ್ಳಲಾಗುವದು. ಇದು ಯೆಹೋವನ ಆಜ್ಞೆಯಾಗಿರುವದರಿಂದ ನೆರವೇರುವದು. ದೇಶವು ನಿರ್ಜನವಾಗಿ ಶೋಕಿಸುವದು. ಇಡೀ ಪ್ರಪಂಚವೇ ನಿರ್ಜನವಾಗಿ ಬಲಹೀನವಾಗುವದು. ಈ ಪ್ರಪಂಚದ ಪ್ರಸಿದ್ಧ ಜನರೂ ಬಲಹೀನರಾಗುವರು.
ದೇಶದ ಜನರು ದೇವರ ಉಪದೇಶಗಳಿಗೆ ವಿರುದ್ಧವಾಗಿ ನಡೆದು ತಮ್ಮ ದೇಶವನ್ನು ಹೊಲಸುಮಾಡಿದರು. ದೇವರ ಕಟ್ಟಳೆಗಳನ್ನು ಅವರು ಅನುಸರಿಸಲಿಲ್ಲ. ಬಹಳ ಕಾಲದ ಹಿಂದೆ ಜನರು ದೇವರೊಂದಿಗೆ ಒಡಂಬಡಿಕೆ ಮಾಡಿಕೊಂಡರು. ಆದರೆ ಆ ಜನರು ಆ ಒಡಂಬಡಿಕೆಯನ್ನು ಮುರಿದರು. ಆ ದೇಶದಲ್ಲಿ ವಾಸಿಸುವ ಜನರು ದೇವರಿಗೆ ವಿರುದ್ಧವಾಗಿ ನಡೆದರು. ಆದ್ದರಿಂದ ದೇವರು ಈ ದೇಶವನ್ನು ನಾಶಮಾಡಲು ತೀರ್ಮಾನಿಸಿದನು. ಜನರು ಶಿಕ್ಷಿಸಲ್ಪಡುವರು. ಕೆಲವೇ ಮಂದಿ ಮಾತ್ರ ಉಳಿಯುವರು.
ದ್ರಾಕ್ಷಿಬಳ್ಳಿಗಳು ಸಾಯುತ್ತಲಿವೆ. ಹೊಸ ದ್ರಾಕ್ಷಾರಸವು ಹುಳಿಯಾಗಿದೆ. ಹಿಂದಿನ ಕಾಲದಲ್ಲಿ ಜನರು ಹರ್ಷಭರಿತರಾಗಿದ್ದರು. ಆದರೆ ಈಗ ಆ ಜನರು ದುಃಖದಲ್ಲಿರುತ್ತಾರೆ. ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸುವದಿಲ್ಲ. ಸಂತಸದ ಗದ್ದಲವು ಕೇಳಿಸುವದಿಲ್ಲ. ಆ ಶಬ್ದಗಳೆಲ್ಲಾ ನಿಂತುಹೋಗಿವೆ. ಹಾರ್ಪ್‌ವಾದ್ಯದ ಮತ್ತು ದಮ್ಮಡಿಗಳ ಶಬ್ದವು ನಿಂತಿದೆ. ಜನರು ದ್ರಾಕ್ಷಾರಸ ಕುಡಿಯುತ್ತಿರುವಾಗ ಹಾಡು ಹಾಡುವುದಿಲ್ಲ. ಅವರು ಕುಡಿಯುವ ಮದ್ಯವು ಅವರಿಗೆ ಕಹಿಯಾಗಿದೆ.
10 ಈ ನಗರಕ್ಕೆ “ಪೂರ್ಣ ಗಲಿಬಿಲಿ” ಎಂಬುದೇ ತಕ್ಕ ಹೆಸರು. ನಗರವು ಕೆಡವಲ್ಪಟ್ಟಿತು. ಜನರು ಮನೆಗಳಿಗೆ ಪ್ರವೇಶಿಸಲಿಕ್ಕಾಗದು. ಕದಗಳನ್ನು ತೆರೆಯಲು ಸಾಧ್ಯವಾಗದು. 11 ಮಾರುಕಟ್ಟೆಗಳಲ್ಲಿ ಜನರು ಈಗಲೂ ದ್ರಾಕ್ಷಾರಸವನ್ನು ಕೇಳುವರು. ಆದರೆ ಸಂತೋಷವೇ ಹೋಗಿಬಿಟ್ಟಿದೆ. ಹರ್ಷವು ಬಹುದೂರ ಒಯ್ಯಲ್ಪಟ್ಟಿದೆ. 12 ನಗರಕ್ಕೆ ನಾಶನವು ಕಾದಿದೆ; ಪುರದ್ವಾರವು ನಜ್ಜುಗುಜ್ಜಾಗಿದೆ.
 
13 ಕೊಯ್ಯುವ ಕಾಲದಲ್ಲಿ ಜನರು ಆಲೀವ್ ಮರಗಳನ್ನು ಹೊಡೆದು ಕಾಯಿಗಳನ್ನು ಉದುರಿಸುವರು.
ಆದರೆ ಕೆಲವು ಕಾಯಿಗಳು ಮರದಲ್ಲಿ ಉಳಿಯುವವು.
ಜನಾಂಗಗಳ ಮಧ್ಯದಲ್ಲಿ ದೇಶವೂ ಹೀಗೆಯೇ ಇರುವದು.
14 ಉಳಿದ ಜನರು ಚೀರಾಡುವರು. ಅದು ಭೋರ್ಗರೆಯುವ ಸಮುದ್ರದ ಶಬ್ದಕ್ಕಿಂತಲೂ ಜೋರಾಗಿ ಕೇಳಿಸುವದು.
ದೇವರ ಕೃಪೆಯ ನಿಮಿತ್ತ ಅವರು ಸಂತೋಷದಲ್ಲಿರುವರು.
15 ಆ ಜನರು, “ಪೂರ್ವದಲ್ಲಿರುವ ಜನರೇ, ದೇವರಿಗೆ ಸ್ತೋತ್ರಮಾಡಿರಿ!
ದೂರ ದೇಶಗಳಲ್ಲಿರುವ ಜನರೇ,
ಇಸ್ರೇಲರ ದೇವರಾದ ಯೆಹೋವನ ಹೆಸರನ್ನು ಕೊಂಡಾಡಿರಿ” ಎಂದು ಹೇಳುವರು.
16 ದೇವರ ಸ್ತುತಿಯನ್ನು ನಾವು ಭೂಮಿಯ ಎಲ್ಲಾ ಕಡೆಗಳಿಂದಲೂ ಕೇಳಿಸಿಕೊಳ್ಳುತ್ತೇವೆ.
ಈ ಸ್ತುತಿಹಾಡುಗಳು ದೇವರ ಒಳ್ಳೆತನವನ್ನು ವರ್ಣಿಸುವವು.
ಆದರೆ ನಾನು, “ಸಾಕು, ನನಗೆ ಸಾಕು.
ನಾನು ನೋಡುವ ವಿಷಯಗಳು ಭಯಂಕರವಾಗಿವೆ.
ದ್ರೋಹಿಗಳು ಜನರಿಗೆ ವಿರುದ್ಧವಾಗಿ ಎದ್ದು ಅವರಿಗೆ ಹಾನಿಮಾಡುವರು.”
 
17 ಈ ದೇಶದಲ್ಲಿ ವಾಸಿಸುವ ಜನರಿಗೆ ಅಪಾಯವು ಕಾದಿದೆ ಎಂದು ನನಗೆ ತೋರುತ್ತಿದೆ.
ಅವರಿಗೆ ಭಯ, ಉರುಲು, ಗುಂಡಿಗಳು ಕಾದಿವೆ.
18 ಜನರು ಅಪಾಯದ ವಿಷಯ ಕೇಳಿ ಭಯಗ್ರಸ್ಥರಾಗುವರು.
ಕೆಲವರು ಓಡಿಹೋಗುವರು.
ಆದರೆ ಅವರು ಗುಂಡಿಯೊಳಗೆ ಬಿದ್ದು ಸಿಕ್ಕಿಕೊಳ್ಳುವರು.
ಅವರಲ್ಲಿ ಕೆಲವರು ಗುಂಡಿಯಿಂದ ಹೊರಬರುವರು,
ಆದರೆ ಅವರು ಇನ್ನೊಂದು ಉರುಲಿನೊಳಗೆ ಸಿಕ್ಕಿಹಾಕಿಕೊಳ್ಳುವರು.
ಆಕಾಶದಲ್ಲಿರುವ ಪ್ರವಾಹದ ದ್ವಾರಗಳು ತೆರೆಯಲ್ಪಡುವವು.
ಪ್ರವಾಹವು ತುಂಬುವದು; ಭೂಮಿಯ ಅಸ್ತಿವಾರಗಳು ಕದಲುವವು.
19 ಭೂಕಂಪಗಳಾಗುವವು.
ಭೂಮಿಯು ಸೀಳಿಹೋಗುವದು.
20 ಲೋಕದ ಪಾಪವು ತುಂಬಾ ಭಾರವಾಗಿದೆ.
ಆ ಭಾರದಿಂದಾಗಿ ಭೂಮಿಯು ಬೀಳುವದು.
ಒಂದು ಹಳೆಯ ಮನೆಯಂತೆ ಭೂಮಿಯು ಅಲುಗಾಡುವದು.
ಕುಡಿದು ಮತ್ತನಾಗಿ ನೆಲಕ್ಕೆ ಬೀಳುವವನಂತೆ ಭೂಮಿಯು ಇರುವದು.
ಭೂಮಿಗೆ ಮುಂದುವರಿಯಲು ಆಗದು.
 
21 ಆ ಸಮಯದಲ್ಲಿ ಯೆಹೋವನು ಪರಲೋಕ ಸೈನ್ಯಕ್ಕೆ
ಪರಲೋಕದಲ್ಲಿ ನ್ಯಾಯತೀರಿಸುವನು.
ಭೂಮಿಯ ಅರಸರನ್ನು ಭೂಮಿಯ ಮೇಲೆ ನ್ಯಾಯವಿಚಾರಣೆಮಾಡುವನು.
22 ಅನೇಕ ಮಂದಿ ಒಟ್ಟು ಸೇರುವರು.
ಕೆಲವರು ಗುಂಡಿಯಲ್ಲಿ ಸಿಕ್ಕಿಹಾಕಿಕೊಳ್ಳುವರು.
ಕೆಲವರು ಸೆರೆಹಿಡಿಯಲ್ಪಡುವರು.
ಆಮೇಲೆ ಸ್ವಲ್ಪ ಕಾಲದ ನಂತರ ಅವರ ನ್ಯಾಯವಿಚಾರಣೆ ನಡಿಯುವದು.
23 ಯೆಹೋವನು ಜೆರುಸಲೇಮಿನ ಚೀಯೋನ್ ಪರ್ವತದಿಂದ ರಾಜ್ಯವನ್ನಾಳುವನು.
ಆತನ ಮಹಿಮೆಯು ಹಿರಿಯರ ಮುಂದಿರುವದು.
ಆತನ ಮಹಿಮೆಯ ಪ್ರಕಾಶಕ್ಕೆ ಚಂದ್ರನು ನಾಚಿಕೊಳ್ಳುವನು;
ಸೂರ್ಯನು ಲಜ್ಜೆಗೊಳ್ಳುವನು.