11
ಯೆಫ್ತಾಹನು ಗಿಲ್ಯಾದ್ ಕುಲದವನಾಗಿದ್ದನು. ಅವನು ಪರಾಕ್ರಮಶಾಲಿಯಾಗಿದ್ದನು. ಆದರೆ ಯೆಫ್ತಾಹನು ಒಬ್ಬ ವೇಶ್ಯೆಯ ಮಗನಾಗಿದ್ದನು. ಅವನ ತಂದೆಯ ಹೆಸರು ಗಿಲ್ಯಾದ್. ಗಿಲ್ಯಾದನ ಹೆಂಡತಿಗೆ ಅನೇಕ ಜನ ಮಕ್ಕಳಿದ್ದರು. ಆ ಮಕ್ಕಳು ದೊಡ್ಡವರಾದ ಮೇಲೆ ಯೆಫ್ತಾಹನನ್ನು ಇಷ್ಟಪಡಲಿಲ್ಲ. ಯೆಫ್ತಾಹನು ತನ್ನ ಹುಟ್ಟೂರನ್ನು ಬಿಡುವಂತೆ ಆ ಮಕ್ಕಳು ಒತ್ತಾಯಮಾಡಿದರು. ಅವರು ಅವನಿಗೆ, “ನೀನು ನಮ್ಮ ತಂದೆಯ ಆಸ್ತಿಯಲ್ಲಿ ಯಾವ ಭಾಗವನ್ನೂ ಪಡೆಯಲಾರೆ. ನೀನು ವೇಶ್ಯೆಯ ಮಗ” ಎಂದು ಹೇಳಿದರು. ಯೆಫ್ತಾಹನು ತನ್ನ ಸಹೋದರರ ಬಳಿಯಿಂದ ಓಡಿಹೋಗಿ ಟೋಬ್ ದೇಶದಲ್ಲಿ ವಾಸಮಾಡತೊಡಗಿದನು. ಟೋಬ್ ದೇಶದಲ್ಲಿ ಕೆಲವು ಪುಂಡರು ಯೆಫ್ತಾಹನ ಜೊತೆ ಸೇರಿಕೊಂಡರು.
ಸ್ವಲ್ಪಕಾಲದ ತರುವಾಯ ಅಮ್ಮೋನಿಯರು ಇಸ್ರೇಲರ ವಿರುದ್ಧ ಯುದ್ಧ ಪ್ರಾರಂಭಿಸಿದರು. ಅಮ್ಮೋನಿಯರು ಯುದ್ಧ ಪ್ರಾರಂಭಿಸಿದ ತರುವಾಯ ಗಿಲ್ಯಾದಿನ ನಾಯಕರು ಯೆಫ್ತಾಹನ ಹತ್ತಿರ ಹೋದರು. ಯೆಫ್ತಾಹನು ಟೋಬ್ ದೇಶವನ್ನು ಬಿಟ್ಟು ಗಿಲ್ಯಾದಿಗೆ ಬರಬೇಕೆಂಬುದು ಅವರ ಅಪೇಕ್ಷೆಯಾಗಿತ್ತು.
ಆ ಹಿರಿಯರು ಯೆಫ್ತಾಹನಿಗೆ, “ನಾವು ಅಮ್ಮೋನಿಯರೊಡನೆ ಮಾಡುವ ಯುದ್ಧದಲ್ಲಿ ನೀನೇ ನಮ್ಮ ನಾಯಕನಾಗು” ಎಂದು ಬೇಡಿಕೊಂಡರು.
ಆದರೆ ಗಿಲ್ಯಾದಿನ ಹಿರಿಯರಿಗೆ ಯೆಫ್ತಾಹನು, “ನನ್ನ ತಂದೆಯ ಮನೆಯನ್ನು ಬಿಡುವಂತೆ ನೀವು ನನಗೆ ಒತ್ತಾಯ ಮಾಡಿದಿರಿ; ನೀವು ನನ್ನನ್ನು ದ್ವೇಷಿಸುತ್ತೀರಿ. ಆದರೆ ಕಷ್ಟದಲ್ಲಿ ನೀವು ನನ್ನ ಬಳಿಗೆ ಬರುವುದೇಕೆ?” ಎಂದು ಕೇಳಿದನು.
ಗಿಲ್ಯಾದಿನ ಹಿರಿಯರು ಯೆಫ್ತಾಹನಿಗೆ, “ಕಷ್ಟ ಬಂದಿರುವುದರಿಂದಲೇ ನಿನ್ನಲ್ಲಿಗೆ ಬಂದಿದ್ದೇವೆ. ದಯವಿಟ್ಟು ನಮ್ಮೊಡನೆ ಬಾ; ಅಮ್ಮೋನಿಯರ ವಿರುದ್ಧ ಯುದ್ಧ ಮಾಡು. ಗಿಲ್ಯಾದಿನಲ್ಲಿ ವಾಸಮಾಡುತ್ತಿರುವ ಜನರೆಲ್ಲರಿಗೂ ನೀನು ನಾಯಕನಾಗುವೆ” ಅಂದರು.
ಆಗ ಯೆಫ್ತಾಹನು ಗಿಲ್ಯಾದಿನ ಹಿರಿಯರಿಗೆ, “ನಾನು ಗಿಲ್ಯಾದಿಗೆ ಹಿಂದಿರುಗಿ ಬಂದು ಅಮ್ಮೋನಿಯರ ವಿರುದ್ಧ ಯುದ್ಧಮಾಡಬೇಕೆಂದು ನೀವು ಅಪೇಕ್ಷಿಸುವುದೇನೋ ಒಳ್ಳೆಯದು. ಆದರೆ ಯೆಹೋವನ ಕೃಪೆಯಿಂದ ನಾನು ಗೆದ್ದರೆ ನಾನು ನಿಮಗೆ ಹೊಸ ನಾಯಕನಾಗುತ್ತೇನೆ” ಎಂದನು.
10 ಗಿಲ್ಯಾದಿನ ಹಿರಿಯರು ಯೆಫ್ತಾಹನಿಗೆ, “ನಾವು ಹೇಳುತ್ತಿರುವ ಎಲ್ಲವನ್ನು ಯೆಹೋವನು ಕೇಳುತ್ತಿದ್ದಾನೆ. ನೀನು ಹೇಳಿದಂತೆಯೇ ಮಾಡುತ್ತೇವೆ ಎಂದು ನಾವು ಮಾತುಕೊಡುತ್ತೇವೆ” ಎಂದರು.
11 ಯೆಫ್ತಾಹನು ಗಿಲ್ಯಾದಿನ ಹಿರಿಯರ ಸಂಗಡ ಹೊರಟುಹೋದನು. ಅವರು ಯೆಫ್ತಾಹನನ್ನು ತಮ್ಮ ನಾಯಕನನ್ನಾಗಿಯೂ ಸೇನಾಧಿಪತಿಯನ್ನಾಗಿಯೂ ಮಾಡಿದರು. ಯೆಫ್ತಾಹನು ಮಿಚ್ಛೆ ನಗರದಲ್ಲಿ ಯೆಹೋವನ ಸಮ್ಮುಖದಲ್ಲಿ ತನ್ನ ಎಲ್ಲಾ ಮಾತುಗಳನ್ನು ಮತ್ತೊಮ್ಮೆ ಹೇಳಿದನು.
ಅಮ್ಮೋನಿಯರ ಅರಸನಲ್ಲಿಗೆ ಯೆಫ್ತಾಹನು ದೂತರನ್ನು ಕಳುಹಿಸಿದನು
12 ಯೆಫ್ತಾಹನು ಅಮ್ಮೋನಿಯರ ಅರಸನಿಗೆ ತನ್ನ ದೂತರ ಮೂಲಕ, “ಅಮ್ಮೋನಿಯರ ಮತ್ತು ಇಸ್ರೇಲರ ಮಧ್ಯೆ ಯಾವ ಸಮಸ್ಯೆ ಇದೆ? ನೀವು ನಮ್ಮ ದೇಶದಲ್ಲಿ ಯುದ್ಧಮಾಡಲು ಏಕೆ ಬಂದಿರುವಿರಿ?” ಎಂಬ ಸಂದೇಶವನ್ನು ಕಳುಹಿಸಿದನು.
13 ಅಮ್ಮೋನಿಯರ ಅರಸನು ಯೆಫ್ತಾಹನ ದೂತರಿಗೆ, “ಇಸ್ರೇಲರು ಈಜಿಪ್ಟಿನಿಂದ ಬಂದಾಗ ನಮ್ಮ ಪ್ರದೇಶವನ್ನು ತೆಗೆದುಕೊಂಡರು; ಆದ್ದರಿಂದ ಈಗ ನಾವು ಇಸ್ರೇಲರೊಂದಿಗೆ ಯುದ್ಧ ಮಾಡುತ್ತಿದ್ದೇವೆ. ಅವರು ಅರ್ನೋನ್ ನದಿಯಿಂದ ಯಬ್ಬೋಕ್ ನದಿಯವರೆಗೂ ಜೋರ್ಡನ್ ನದಿಯವರೆಗಿನ ಭೂಮಿಯನ್ನೂ ತೆಗೆದುಕೊಂಡಿದ್ದಾರೆ. ಈಗ ನಮ್ಮ ಭೂಮಿಯನ್ನು ನಮಗೆ ಶಾಂತಿಯಿಂದ ಹಿಂದಿರುಗಿಸಬೇಕು” ಎಂದನು.
14 ಯೆಫ್ತಾಹನ ದೂತರು ಈ ಸಂದೇಶವನ್ನು ಯೆಫ್ತಾಹನಿಗೆ ಮುಟ್ಟಿಸಿದರು. ಆಗ ಯೆಫ್ತಾಹನು ಮತ್ತೊಮ್ಮೆ ಅಮ್ಮೋನಿಯರ ಅರಸನಲ್ಲಿಗೆ ದೂತರನ್ನು ಕಳುಹಿಸಿದನು. 15 ಅವರು ಈ ಸಂದೇಶವನ್ನು ತೆಗೆದುಕೊಂಡು ಹೋದರು:
 
“ಯೆಫ್ತಾಹನು ಹೇಳುವುದೇನೆಂದರೆ: ಇಸ್ರೇಲರು ಮೋವಾಬ್ಯರ ಪ್ರದೇಶವನ್ನಾಗಲಿ ಅಮ್ಮೋನಿಯರ ಪ್ರದೇಶವನ್ನಾಗಲಿ ತೆಗೆದುಕೊಳ್ಳಲಿಲ್ಲ. 16 ಇಸ್ರೇಲರು ಈಜಿಪ್ಟನ್ನು ಬಿಟ್ಟುಬಂದ ಮೇಲೆ ಅರಣ್ಯ ಮಾರ್ಗವಾಗಿ ಕೆಂಪುಸಮುದ್ರಕ್ಕೆ ಹೋದರು. ತರುವಾಯ ಅವರು ಕಾದೇಶಿಗೆ ಹೋದರು. 17 ಅವರು ಎದೋಮ್ಯರ ಅರಸನ ಬಳಿಗೆ ದೂತರನ್ನು ಕಳುಹಿಸಿ, ‘ನಿನ್ನ ಪ್ರದೇಶವನ್ನು ದಾಟಿಹೋಗುವುದಕ್ಕೆ ದಯವಿಟ್ಟು ಅನುಮತಿಕೊಡು’ ಎಂದು ಕೇಳಿಕೊಂಡರು. ಆದರೆ ಎದೋಮಿನ ಅರಸನು ಅವರಿಗೆ ತಮ್ಮ ದೇಶವನ್ನು ದಾಟಿಹೋಗಲು ಅನುಮತಿಕೊಡಲಿಲ್ಲ. ತರುವಾಯ ಅವರು ಮೋವಾಬ್ಯರ ಅರಸನ ಬಳಿಗೆ ಅದೇ ಸಂದೇಶವನ್ನು ಕಳುಹಿಸಿದರು. ಆದರೆ ಮೋವಾಬ್ಯರ ಅರಸನು ಸಹ ಅವರಿಗೆ ಅವರ ದೇಶವನ್ನು ದಾಟಿಹೋಗಲು ಅನುಮತಿ ಕೊಡಲಿಲ್ಲ. ಆದ್ದರಿಂದ ಇಸ್ರೇಲರು ಕಾದೇಶಿನಲ್ಲಿ ನೆಲೆನಿಂತರು.
18 “ತರುವಾಯ ಇಸ್ರೇಲರು ಮರುಭೂಮಿಯಲ್ಲಿ ಪ್ರಯಾಣ ಮಾಡಿ ಎದೋಮ್ ಮತ್ತು ಮೋವಾಬ್ ದೇಶಗಳ ಮೇರೆಗಳನ್ನು ಸುತ್ತಿ ಬಂದರು. ಇಸ್ರೇಲರು ಮೋವಾಬ್ ದೇಶದ ಪೂರ್ವದಿಕ್ಕಿಗೆ ಪ್ರಯಾಣಮಾಡಿ ಅರ್ನೋನ್ ನದಿಯ ಆಚೆಯ ದಡದಲ್ಲಿ ಇಳಿದುಕೊಂಡರು. ಅವರು ಮೋವಾಬ್ ದೇಶದ ಮೇರೆಯನ್ನು ದಾಟಲಿಲ್ಲ. (ಅರ್ನೋನ್ ನದಿಯು ಮೋವಾಬ್ ದೇಶದ ಮೇರೆಯಾಗಿತ್ತು.)
19 “ತರುವಾಯ ಇಸ್ರೇಲರು ಅಮೋರಿಯರ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿದರು. ಹೆಷ್ಬೋನ್ ಅಮೋರಿಯರ ದೇಶದ ರಾಜಧಾನಿಯಾಗಿತ್ತು. ಆ ದೂತರು ಸೀಹೋನನಿಗೆ, ‘ಇಸ್ರೇಲರು ನಿಮ್ಮ ಪ್ರದೇಶದಿಂದ ದಾಟಿಹೋಗುವುದಕ್ಕೆ ಅನುಮತಿಯನ್ನು ಕೊಡು, ನಾವು ನಮ್ಮ ದೇಶಕ್ಕೆ ಹೋಗ ಬಯಸುತ್ತೇವೆ’ ಎಂದು ಕೇಳಿದರು. 20 ಆದರೆ ಅಮೋರಿಯರ ಅರಸನಾದ ಸೀಹೋನನು ಇಸ್ರೇಲರಿಗೆ ತನ್ನ ಪ್ರದೇಶದ ಸೀಮೆಯನ್ನು ದಾಟಲು ಬಿಡಲಿಲ್ಲ. ಸೀಹೋನನು ತನ್ನ ಜನರನ್ನೆಲ್ಲಾ ಸೇರಿಸಿ ಯಹಚದಲ್ಲಿ ಪಾಳೆಯಮಾಡಿಕೊಂಡನು. ಅಮೋರಿಯರು ಇಸ್ರೇಲರೊಂದಿಗೆ ಯುದ್ಧಮಾಡಿದರು. 21 ಆದರೆ ಇಸ್ರೇಲರ ದೇವರಾದ ಯೆಹೋವನು ಇಸ್ರೇಲರಿಗೆ ಸೀಹೋನ ಮತ್ತು ಅವನ ಜನರನ್ನು ಸೋಲಿಸಲು ಸಹಾಯ ಮಾಡಿದನು. ಆದ್ದರಿಂದ ಅಮೋರಿಯರ ಪ್ರದೇಶವು ಇಸ್ರೇಲರ ಸ್ವತ್ತಾಯಿತು. 22 ಇಸ್ರೇಲರು ಅಮೋರಿಯರ ಎಲ್ಲ ಪ್ರದೇಶವನ್ನು ತೆಗೆದುಕೊಂಡರು. ಆ ಪ್ರದೇಶವು ಅರ್ನೋನ್ ನದಿಯಿಂದ ಯಬ್ಬೋಕ್ ನದಿಯವರೆಗೂ ಅರಣ್ಯದಿಂದ ಜೋರ್ಡನ್ ನದಿಯವರೆಗೂ ಹಬ್ಬಿಕೊಂಡಿದೆ.
23 “ಇಸ್ರೇಲರ ದೇವರಾದ ಯೆಹೋವನು ಅಮೋರಿಯರನ್ನು ಅವರ ದೇಶದಿಂದ ಬಲವಂತವಾಗಿ ಹೊರಗಟ್ಟಿ ಆ ಪ್ರದೇಶವನ್ನು ಇಸ್ರೇಲರಿಗೆ ಕೊಟ್ಟನು. ಈಗ ಇಸ್ರೇಲರು ಈ ಪ್ರದೇಶವನ್ನು ಬಿಡುವಂತೆ ನೀನು ಮಾಡಬಹುದೆಂದು ತಿಳಿದುಕೊಂಡಿರುವಿಯಾ? 24 ನಿಮ್ಮ ದೇವರಾದ ಕೆಮೋಷನು ನಿಮಗೆ ಕೊಟ್ಟ ಪ್ರದೇಶದಲ್ಲಿ ನೀವು ಖಂಡಿತವಾಗಿ ವಾಸಮಾಡಬಹುದು. ಹಾಗೆಯೇ ಯೆಹೋವನಾದ ನಮ್ಮ ದೇವರು ನಮಗೆ ಕೊಟ್ಟ ಪ್ರದೇಶದಲ್ಲಿ ನಾವೂ ವಾಸಮಾಡುವೆವು. 25 ಚಿಪ್ಪೋರನ ಮಗನಾದ ಬಾಲಾಕನಿಗಿಂತ ನೀನು ಹೆಚ್ಚಿನವನೋ? ಅವನು ಮೋವಾಬ್ ದೇಶದ ರಾಜನಾಗಿದ್ದನು. ಅವನು ಇಸ್ರೇಲರ ಸಂಗಡ ಎಂದಾದರೂ ವಿವಾದ ಮಾಡಿದನೋ? ಅವರಿಗೆ ವಿರೋಧವಾಗಿ ಯುದ್ಧಕ್ಕೆ ಬಂದನೋ? 26 ಇಸ್ರೇಲರು ಮುನ್ನೂರು ವರ್ಷಗಳಿಂದ ಹೆಷ್ಬೋನ್ ನಗರ ಮತ್ತು ಅದರ ಸುತ್ತಮುತ್ತಲಿನ ಪಟ್ಟಣಗಳಲ್ಲಿಯೂ ಅರೋಯೇರ್ ನಗರ ಮತ್ತು ಅದರ ಸುತ್ತಮುತ್ತಲಿನ ಪಟ್ಟಣಗಳಲ್ಲಿಯೂ ಅರ್ನೋನ್ ನದಿತೀರದ ಎಲ್ಲ ನಗರಗಳಲ್ಲಿಯೂ ಮುನ್ನೂರು ವರ್ಷಗಳಿಂದ ವಾಸಮಾಡುತ್ತಲಿದ್ದಾರೆ. ಈ ನಗರಗಳನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳಲು ನೀವು ಇಷ್ಟು ವರ್ಷ ಏಕೆ ಪ್ರಯತ್ನ ಮಾಡಲಿಲ್ಲ? 27 ಇಸ್ರೇಲರು ನಿಮ್ಮ ವಿರುದ್ಧ ಯಾವ ಪಾಪವನ್ನೂ ಮಾಡಿಲ್ಲ. ಆದರೆ ನೀನು ಇಸ್ರೇಲರ ವಿರುದ್ಧ ಬಹಳ ಕೆಟ್ಟದ್ದನ್ನು ಮಾಡುತ್ತಿರುವೆ. ನ್ಯಾಯವು ಇಸ್ರೇಲರ ಪರವಾಗಿದೆಯೋ ಅಥವಾ ಅಮ್ಮೋನಿಯರ ಪರವಾಗಿದೆಯೋ ಎಂಬುದನ್ನು ನಿಜವಾದ ನ್ಯಾಯಾಧೀಶನಾದ ಯೆಹೋವನೇ ತೀರ್ಮಾನಿಸಬೇಕು.”
 
28 ಆದರೆ ಯೆಫ್ತಾಹನ ಸಂದೇಶವನ್ನು ಅಮ್ಮೋನಿಯರ ಅರಸನು ಕಿವಿಗೆ ಹಾಕಿಕೊಳ್ಳಲಿಲ್ಲ.
ಯೆಫ್ತಾಹನ ಹರಕೆ
29 ಆಗ ಯೆಹೋವನ ಆತ್ಮವು ಯೆಫ್ತಾಹನ ಮೇಲೆ ಬಂತು. ಯೆಫ್ತಾಹನು ಗಿಲ್ಯಾದನ ಮತ್ತು ಮನಸ್ಸೆಯ ಪ್ರದೇಶಗಳಲ್ಲಿ ಸಂಚರಿಸಿದನು. ಅವನು ಗಿಲ್ಯಾದಿನ ಮಿಚ್ಛೆಗೆ ಬಂದನು. ಗಿಲ್ಯಾದಿನ ಮಿಚ್ಛೆಯ ನಗರದಿಂದ ಅವನು ಅಮ್ಮೋನಿಯರ ಪ್ರದೇಶಕ್ಕೆ ಹೋದನು.
30 ಯೆಫ್ತಾಹನು ಯೆಹೋವನಿಗೆ, “ನಾನು ಅಮ್ಮೋನಿಯರನ್ನು ಸೋಲಿಸುವಂತೆ ನೀನು ಮಾಡಿದರೆ 31 ನಾನು ಜಯಶಾಲಿಯಾಗಿ ಬರುವಾಗ ನನ್ನ ಮನೆಯಿಂದ ಹೊರ ಬರುವ ಮೊದಲನೆಯ ಜೀವಿಯನ್ನು ನಿನಗೆ ಕೊಡುತ್ತೇನೆ. ನಾನು ಅದನ್ನು ಯೆಹೋವನ ಸರ್ವಾಂಗಹೋಮಕ್ಕೆ ಆಹುತಿಯಾಗಿ ಕೊಡುವೆನು” ಎಂದು ಹರಕೆ ಮಾಡಿಕೊಂಡನು.
32 ಆಮೇಲೆ ಯೆಫ್ತಾಹನು ಅಮ್ಮೋನಿಯರ ದೇಶಕ್ಕೆ ಹೋಗಿ ಯುದ್ಧಮಾಡಿದನು. ಅವರನ್ನು ಸೋಲಿಸಲು ಯೆಹೋವನು ಯೆಫ್ತಾಹನಿಗೆ ಸಹಾಯ ಮಾಡಿದನು. 33 ಅವನು ಅವರನ್ನು ಸೋಲಿಸಿ ಅರೋಯೇರ್ ನಗರದಿಂದ ಮಿನ್ನೀತ್ ನಗರದವರೆಗೆ ಇಪ್ಪತ್ತು ನಗರಗಳನ್ನು ಗೆದ್ದುಕೊಂಡನು. ಆಮೇಲೆ ಅವನು ಅಮ್ಮೋನಿಯರ ಸಂಗಡ ಯುದ್ಧಮಾಡಿ ಅಬೇಲ್‌ಕೆರಾಮೀಮ್ ನಗರವನ್ನು ಗೆದ್ದುಕೊಂಡನು. ಇಸ್ರೇಲರು ಅಮ್ಮೋನಿಯರನ್ನು ಸೋಲಿಸಿದರು. ಅಮ್ಮೋನಿಯರಿಗೆ ಇದೊಂದು ದೊಡ್ಡ ಸೋಲಾಯಿತು.
34 ಯೆಫ್ತಾಹನು ಮಿಚ್ಛೆಗೆ ಹಿಂದಿರುಗಿದನು. ಯೆಫ್ತಾಹನು ತನ್ನ ಮನೆಗೆ ಹೋಗುತ್ತಿರಲು ಅವನನ್ನು ಎದುರುಗೊಳ್ಳಲು ಅವನ ಮಗಳು ಮನೆಯಿಂದ ಹೊರಗೆ ಬಂದಳು. ಅವಳು ದಮ್ಮಡಿ ಬಡಿಯುತ್ತ ನಾಟ್ಯವಾಡುತ್ತಿದ್ದಳು. ಅವಳು ಅವನ ಒಬ್ಬಳೇ ಮಗಳಾಗಿದ್ದಳು. ಯೆಫ್ತಾಹನಿಗೆ ಬೇರೆ ಗಂಡುಮಕ್ಕಳಾಗಲಿ ಹೆಣ್ಣುಮಕ್ಕಳಾಗಲಿ ಇರಲಿಲ್ಲ. ಯೆಫ್ತಾಹನು ಅವಳನ್ನು ತುಂಬ ಪ್ರೀತಿಸುತ್ತಿದ್ದನು. 35 ತನ್ನ ಮನೆಯಿಂದ ಹೊರ ಬರುವ ಜೀವಿಗಳಲ್ಲಿ ತನ್ನ ಮಗಳೇ ಮೊದಲನೆಯವಳಾದುದನ್ನು ಕಂಡು ಯೆಫ್ತಾಹನು ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನು. “ಅಯ್ಯೋ! ನನ್ನ ಮಗಳೇ, ನೀನು ನನ್ನನ್ನು ಹಾಳುಮಾಡಿದೆ. ನೀನು ನನಗೆ ಮಹಾಸಂಕಟವನ್ನು ಉಂಟುಮಾಡಿದೆ. ನಾನು ಯೆಹೋವನಿಗೆ ಒಂದು ಹರಕೆ ಹೊತ್ತಿದ್ದೇನೆ; ನಾನು ಅದನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಗೋಳಾಡಿದನು.
36 ಆಗ ಯೆಫ್ತಾಹನ ಮಗಳು ಅವನಿಗೆ, “ನನ್ನ ತಂದೆಯೇ, ನೀನು ಯೆಹೋವನಿಗೆ ಹರಕೆ ಹೊತ್ತಿರುವೆ. ನಿನ್ನ ಹರಕೆಯನ್ನು ಪೂರ್ಣಗೊಳಿಸು. ಏನು ಮಾಡುವೆನೆಂದು ಹೇಳಿದ್ದಿಯೋ ಅದನ್ನು ಮಾಡು. ನಿನ್ನ ಶತ್ರುಗಳಾದ ಅಮ್ಮೋನಿಯರನ್ನು ಸೋಲಿಸಲು ಯೆಹೋವನು ನಿನಗೆ ಸಹಾಯ ಮಾಡಿದ್ದಾನೆ” ಎಂದಳು.
37 ಯೆಫ್ತಾಹನ ಮಗಳು ತನ್ನ ತಂದೆಗೆ, “ನನಗೋಸ್ಕರ ಒಂದು ಕೆಲಸವನ್ನು ಮಾಡು. ಎರಡು ತಿಂಗಳುಗಳವರೆಗೆ ನನ್ನನ್ನು ಒಬ್ಬಂಟಿಗಳಾಗಿ ಇರಲು ಬಿಡು. ನಾನು ಬೆಟ್ಟಪ್ರದೇಶಕ್ಕೆ ಹೋಗುತ್ತೇನೆ. ನಾನು ಮದುವೆ ಮಾಡಿಕೊಳ್ಳುವುದಿಲ್ಲ ಮತ್ತು ಮಕ್ಕಳನ್ನು ಹೆರುವದಿಲ್ಲ. ನಾನು ಮತ್ತು ನನ್ನ ಗೆಳತಿಯರು ಹೋಗಿ ಒಟ್ಟಾಗಿ ಅಳುತ್ತೇವೆ” ಎಂದಳು.
38 ಯೆಫ್ತಾಹನು, “ಹೋಗು, ಹಾಗೆಯೇ ಮಾಡು” ಎಂದನು. ಯೆಫ್ತಾಹನು ಅವಳನ್ನು ಎರಡು ತಿಂಗಳುಗಳವರೆಗೆ ಕಳುಹಿಸಿಕೊಟ್ಟನು. ಯೆಫ್ತಾಹನ ಮಗಳು ಮತ್ತು ಆಕೆಯ ಗೆಳತಿಯರು ಬೆಟ್ಟಪ್ರದೇಶದಲ್ಲಿ ವಾಸಮಾಡಿದರು. ಅವಳು ಮದುವೆಯಾಗುವುದಿಲ್ಲ ಮತ್ತು ಮಕ್ಕಳನ್ನು ಹಡೆಯುವುದಿಲ್ಲ ಎಂಬ ಕಾರಣದಿಂದ ಅವರೆಲ್ಲರೂ ಗೋಳಾಡಿದರು.
39 ಎರಡು ತಿಂಗಳು ಗತಿಸಿದ ಮೇಲೆ ಯೆಫ್ತಾಹನ ಮಗಳು ತನ್ನ ತಂದೆಯಲ್ಲಿಗೆ ಬಂದಳು. ಯೆಫ್ತಾಹನು ದೇವರಿಗೆ ಹರಕೆ ಹೊತ್ತಂತೆ ಮಾಡಿದನು. ಯೆಫ್ತಾಹನ ಮಗಳು ಎಂದೂ ಯಾರೊಂದಿಗೂ ಲೈಂಗಿಕ ಸಂಬಂಧ ಹೊಂದಲಿಲ್ಲ. 40 ಪ್ರತಿವರ್ಷ ಇಸ್ರೇಲಿನ ಹೆಂಗಸರು ಗಿಲ್ಯಾದಿನ ಯೆಫ್ತಾಹನ ಮಗಳನ್ನು ಸ್ಮರಿಸುತ್ತಾರೆ. ಇಸ್ರೇಲಿನ ಹೆಂಗಸರು ಯೆಫ್ತಾಹನ ಮಗಳಿಗಾಗಿ ಪ್ರತಿವರ್ಷ ನಾಲ್ಕು ದಿನ ಅಳುತ್ತಾರೆ. ಇದು ಇಸ್ರೇಲಿನಲ್ಲಿ ಒಂದು ಪದ್ಧತಿಯಾಗಿದೆ.