9
ನನ್ನ ತಲೆಯಲ್ಲೆಲ್ಲ ನೀರು ತುಂಬಿಕೊಂಡಿದ್ದು,
ನನ್ನ ಕಣ್ಣುಗಳು ನೀರಿನ ಬುಗ್ಗೆಗಳಾಗಿದ್ದರೆ,
ನಾಶಮಾಡಲ್ಪಟ್ಟ ನನ್ನ ಜನರಿಗಾಗಿ ಹಗಲಿರುಳು ಗೋಳಾಡುತ್ತಿದ್ದೆ.
 
ಮರಳುಗಾಡಿನಲ್ಲಿ ನನಗೊಂದು ಸ್ಥಳವಿದ್ದಿದ್ದರೆ,
ಪ್ರಯಾಣಿಕರು ರಾತ್ರಿಯಲ್ಲಿ ತಂಗುವ ಮನೆ ಇದ್ದಿದ್ದರೆ,
ನಾನು ನನ್ನ ಜನರನ್ನು ಅಲ್ಲಿ ಬಿಟ್ಟು,
ಅವರಿಂದ ದೂರ ಹೋಗಬಹುದಾಗಿತ್ತು.
ಏಕೆಂದರೆ ಅವರೆಲ್ಲರೂ ದೇವರಿಗೆ ದ್ರೋಹ ಮಾಡುತ್ತಿದ್ದಾರೆ,
ಅವರೆಲ್ಲರೂ ಆತನಿಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.
 
“ಅವರು ತಮ್ಮ ನಾಲಿಗೆಗಳನ್ನು ಬಿಲ್ಲಿನಂತೆ ಉಪಯೋಗಿಸುತ್ತಿದ್ದಾರೆ.
ಅವರ ಬಾಯಿಂದ ಬಾಣಗಳಂತೆ ಸುಳ್ಳುಗಳು ಬರುತ್ತಿವೆ.
ಈ ನಾಡಿನಲ್ಲಿ ಸತ್ಯವಲ್ಲ, ‘ಅಸತ್ಯ’ ಪ್ರಬಲವಾಗುತ್ತಿದೆ.
ಅವರು ಒಂದು ಪಾಪದಿಂದ ಮತ್ತೊಂದು ಪಾಪಕ್ಕೆ ಹೋಗುತ್ತಿದ್ದಾರೆ.
ಅವರು ನನ್ನನ್ನು ಅರಿತಿಲ್ಲ.”
ಯೆಹೋವನು ಈ ಮಾತನ್ನು ಹೇಳಿದನು.
 
“ನಿಮ್ಮ ನೆರೆಮನೆಯವರ ಬಗ್ಗೆ ಎಚ್ಚರವಹಿಸಿರಿ;
ನಿಮ್ಮ ಸ್ವಂತ ಸಹೋದರನನ್ನೂ ನಂಬಬೇಡಿ.
ಏಕೆಂದರೆ ಪ್ರತಿಯೊಬ್ಬ ಸಹೋದರನೂ ಮೋಸಗಾರನಾಗಿದ್ದಾನೆ.
ಪ್ರತಿಯೊಬ್ಬ ನೆರೆಯವನೂ ನಿಮ್ಮ ಮರೆಯಲ್ಲಿ ನಿಮ್ಮನ್ನು ನಿಂದಿಸುತ್ತಾನೆ.
ಪ್ರತಿಯೊಬ್ಬನೂ ತನ್ನ ನೆರೆಯವನಿಗೆ ಸುಳ್ಳು ಹೇಳುತ್ತಾನೆ.
ಒಬ್ಬನೂ ಸತ್ಯವನ್ನು ನುಡಿಯುವದಿಲ್ಲ.
ಯೆಹೂದದ ಜನರು ತಮ್ಮ ನಾಲಿಗೆಗಳಿಗೆ
ಸುಳ್ಳು ಹೇಳುವದನ್ನು ಕಲಿಸಿದ್ದಾರೆ.
ಅವರು ಹಿಂತಿರುಗಿ ಬರಲು
ಆಯಾಸವಾಗುವಷ್ಟು ಪಾಪಗಳನ್ನು ಮಾಡಿದ್ದಾರೆ.
ಒಂದು ದುಷ್ಕೃತ್ಯ ಮತ್ತೊಂದು ದುಷ್ಕೃತ್ಯವನ್ನು ಹಿಂಬಾಲಿಸಿ ಬಂದಿತು.
ಒಂದು ಸುಳ್ಳು ಇನ್ನೊಂದು ಸುಳ್ಳನ್ನು ಹಿಂಬಾಲಿಸಿತು.
ಜನರು ನನ್ನನ್ನು ಅರಿತುಕೊಳ್ಳಲಿಲ್ಲ.”
ಯೆಹೋವನು ಆ ಮಾತುಗಳನ್ನು ಹೇಳಿದನು.
 
ಸರ್ವಶಕ್ತನಾದ ಯೆಹೋವನು ಹೀಗೆನ್ನುವನು:
“ಜನರು ಲೋಹವನ್ನು ಪುಟಕ್ಕಿಟ್ಟು ಪರೀಕ್ಷಿಸುವಂತೆ
ನಾನು ಯೆಹೂದದ ಜನರನ್ನು ಪರೀಕ್ಷಿಸುತ್ತೇನೆ.
ನನಗೆ ಬೇರೆ ಮಾರ್ಗವೇ ಇಲ್ಲ.
ನನ್ನ ಜನರು ಪಾಪವನ್ನು ಮಾಡಿದ್ದಾರೆ.
ಯೆಹೂದದ ಜನರ ನಾಲಿಗೆಗಳು ಚೂಪಾದ ಬಾಣಗಳಂತಿವೆ.
ಅವರ ಬಾಯಿಗಳು ಸುಳ್ಳಾಡುತ್ತವೆ.
ಪ್ರತಿಯೊಬ್ಬನು ತನ್ನ ನೆರೆಮನೆಯವನೊಂದಿಗೆ ನಯವಾಗಿ ಮಾತನಾಡುತ್ತಾನೆ.
ರಹಸ್ಯವಾಗಿ ತನ್ನ ನೆರೆಮನೆಯವನನ್ನು ಆಕ್ರಮಣಮಾಡಲು ಯುಕ್ತಿ ಮಾಡುತ್ತಿರುತ್ತಾನೆ.
ಹೀಗಿರಲು ನಾನು ಯೆಹೂದದ ಜನರನ್ನು ಶಿಕ್ಷಿಸಬಾರದೇ?”
ಇದು ದೇವರಿಂದ ಬಂದ ಮಾತು.
“ಅಂಥಾ ಜನರನ್ನು ನಾನು ಶಿಕ್ಷಿಸಬೇಕೆಂಬುದು ನಿನಗೆ ಗೊತ್ತು.
ಅವರಿಗೆ ತಕ್ಕ ಶಿಕ್ಷೆಯನ್ನು ನಾನು ಕೊಡಬೇಕು.”
 
10 ನಾನು ಪರ್ವತಗಳಿಗಾಗಿ ಗಟ್ಟಿಯಾಗಿ ಅಳುವೆನು;
ಬರಿದಾದ ಹೊಲಗಳಿಗಾಗಿ ಶೋಕಗೀತೆಯನ್ನು ಹಾಡುವೆನು.
ಏಕೆಂದರೆ ಅಲ್ಲಿ ಸಜೀವ ವಸ್ತುಗಳಿಲ್ಲ.
ಯಾರೂ ಅಲ್ಲಿ ತಿರುಗಾಡುವದಿಲ್ಲ.
ಆ ಸ್ಥಳಗಳಲ್ಲಿ ದನಗಳ ಸದ್ದು ಕೇಳಿಸುವದಿಲ್ಲ.
ಪಕ್ಷಿಗಳು ಹಾರಿಹೋಗಿವೆ;
ಪ್ರಾಣಿಗಳು ಓಡಿಹೋಗಿವೆ.
 
11 “ನಾನು (ಯೆಹೋವನು) ಜೆರುಸಲೇಮ್ ನಗರವನ್ನು ಕಸದ ರಾಶಿಯನ್ನಾಗಿ ಮಾಡುವೆನು.
ಅದು ನರಿಗಳ ನಿವಾಸವಾಗುವದು.
ನಾನು ಯೆಹೂದ ಪ್ರಾಂತದ ನಗರಗಳನ್ನು ನಾಶಮಾಡುವೆನು.
ಅಲ್ಲಿ ಒಬ್ಬರೂ ವಾಸಮಾಡಲಾರರು.”
 
12 ಈ ಭೂಮಿಯನ್ನು ಏಕೆ ಹಾಳು ಮಾಡಲಾಯಿತು?
ಇದನ್ನು ಯಾರೂ ಹೋಗದ ಬರಿದಾದ ಮರಳುಗಾಡನ್ನಾಗಿ ಏಕೆ ಮಾಡಲಾಯಿತು?
ಇದನ್ನರಿತ ಜ್ಞಾನಿಯೊಬ್ಬನಿದ್ದಾನೆಯೇ?
ಯೆಹೋವನಿಂದ ತಿಳಿದುಕೊಂಡ ಜ್ಞಾನಿಯೊಬ್ಬನಿದ್ದಾನೆಯೇ?
ಯೆಹೋವನ ಸಂದೇಶವನ್ನು ವಿವರಿಸಬಲ್ಲವನೊಬ್ಬನಿದ್ದಾನೆಯೇ?
 
13 ಯೆಹೋವನು ಈ ಪ್ರಶ್ನೆಗಳಿಗೆ ಉತ್ತರಕೊಟ್ಟನು:
“ಏಕೆಂದರೆ ಯೆಹೂದದ ಜನರು ನನ್ನ ಉಪದೇಶವನ್ನು ಅನುಸರಿಸಲಿಲ್ಲ.
ನಾನು ಅವರಿಗೆ ಧರ್ಮೋಪದೇಶವನ್ನು ಕೊಟ್ಟರೂ
ಅವರು ನನ್ನ ಮಾತನ್ನು ಕೇಳಲು ಒಪ್ಪಲಿಲ್ಲ.
ಅವರು ನನ್ನ ಧರ್ಮೋಪದೇಶಗಳನ್ನು ಅನುಸರಿಸಲಿಲ್ಲ.
14 ಯೆಹೂದದ ಜನರು ತಮ್ಮದೇ ಆದ ರೀತಿಯಲ್ಲಿ ಜೀವಿಸಿದರು.
ಅವರು ಹಟಮಾರಿಗಳಾಗಿದ್ದರು.
ಅವರು ಸುಳ್ಳುದೇವರಾದ ಬಾಳನನ್ನು ಅನುಸರಿಸಿದರು.
ಅವರ ಪೂರ್ವಿಕರು ಸುಳ್ಳುದೇವರುಗಳ ಸೇವೆ ಮಾಡುವದನ್ನು ಅವರಿಗೆ ಕಲಿಸಿದರು.”
 
15 ಇಸ್ರೇಲಿನ ದೇವರಾದ ಸರ್ವಶಕ್ತನಾದ ಯೆಹೋವನ ಸಂದೇಶವಿದು:
“ಯೆಹೂದದ ಜನರು ಕಹಿಯಾದ ಆಹಾರವನ್ನು ತಿನ್ನುವಂತೆ ನಾನು ಬೇಗನೆ ಮಾಡುವೆನು;
ಅವರು ವಿಷಮಿಶ್ರಿತ ನೀರನ್ನು ಕುಡಿಯುವಂತೆ ಮಾಡುವೆನು.
16 ನಾನು ಯೆಹೂದದ ಜನರನ್ನು ಬೇರೆ ಜನಾಂಗಗಳಲ್ಲಿ ಚದರಿಸಿಬಿಡುತ್ತೇನೆ.
ಅವರು ಮತ್ತು ಅವರ ತಂದೆಗಳು ಎಂದೂ ಅರಿಯದ
ಅಪರಿಚಿತ ದೇಶಗಳಲ್ಲಿ ಅವರು ವಾಸಿಸುವರು.
ನಾನು ಖಡ್ಗಧಾರಿಗಳಾದ ಜನರನ್ನು ಕಳುಹಿಸುತ್ತೇನೆ.
ಅವರು ಯೆಹೂದದ ಜನರನ್ನು ನಿರ್ಮೂಲವಾಗುವವರೆಗೆ ಕೊಲ್ಲುವರು.”
 
17 ಸರ್ವಶಕ್ತನಾದ ಯೆಹೋವನು ಹೀಗೆ ಹೇಳುತ್ತಾನೆ:
“ಈಗ ಈ ವಿಷಯಗಳ ಬಗ್ಗೆ ವಿಚಾರ ಮಾಡಿರಿ,
ಶವಸಂಸ್ಕಾರದ ಸಮಯದಲ್ಲಿ ಕೂಲಿ ಪಡೆದು ಅಳುವ ಹೆಂಗಸರನ್ನು ಕರೆಯಿಸಿರಿ.
18 ‘ಆ ಹೆಂಗಸರು, ಬೇಗನೆ ಬಂದು ನಮಗಾಗಿ ಗೋಳಾಡಲಿ.
ಆಗ ನಮ್ಮ ಕಣ್ಣುಗಳು ಕಣ್ಣೀರಿನಿಂದ ತುಂಬುವವು;
ನಮ್ಮ ಕಣ್ಣುಗಳಿಂದ ನೀರಿನ ಪ್ರವಾಹಗಳು ಹರಿಯುವವು’ ಎನ್ನುವರು.
 
19 “ಚೀಯೋನಿನಿಂದ ಮಹಾ ಗೋಳಾಟವು ಕೇಳಿಸುತ್ತಿದೆ:
‘ನಿಜವಾಗಿಯೂ ನಾವು ಹಾಳಾಗಿಹೋದೆವು.
ನಿಜವಾಗಿಯೂ ನಾವು ನಾಚಿಕೆಪಡುವಂತಾಗಿದೆ.
ನಾವು ನಮ್ಮ ನಾಡನ್ನು ಬಿಡಬೇಕು,
ಏಕೆಂದರೆ ನಮ್ಮ ಮನೆಗಳನ್ನು ನಾಶಪಡಿಸಲಾಗಿದೆ.’ ”
 
20 ಯೆಹೂದದ ಸ್ತ್ರೀಯರೇ, ಯೆಹೋವನ ಸಂದೇಶವನ್ನು ಕೇಳಿರಿ.
ಯೆಹೋವನ ಬಾಯಿಂದ ಬರುವ ಮಾತುಗಳನ್ನು ಕೇಳಲು ನಿಮ್ಮ ಕಿವಿಗಳನ್ನು ತೆರೆಯಿರಿ.
ಯೆಹೋವನು ಹೇಳುತ್ತಾನೆ, “ಹೇಗೆ ದೊಡ್ಡ ಧ್ವನಿಯಲ್ಲಿ ಅಳಬೇಕೆಂಬುದನ್ನು ನಿಮ್ಮ ಹೆಣ್ಣುಮಕ್ಕಳಿಗೆ ಕಲಿಸಿಕೊಡಿ.
ಪ್ರತಿಯೊಬ್ಬ ಸ್ತ್ರೀಯು ಈ ಶೋಕಗೀತೆಯನ್ನು ಹಾಡಲು ಕಲಿಯಬೇಕು.
21 ಮೃತ್ಯುವು ಬಂದು ನಮ್ಮ ಕಿಟಕಿಗಳಿಂದ ಇಳಿದಿದೆ.
ಮೃತ್ಯುವು ನಮ್ಮ ಅರಮನೆಗಳಲ್ಲಿ ಪ್ರವೇಶ ಮಾಡಿದೆ.
ಬೀದಿಯಲ್ಲಿ ಆಡುವ ನಮ್ಮ ಮಕ್ಕಳಿಗೆ ಮೃತ್ಯುವು ಹಿಡಿದುಕೊಂಡಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಸೇರುವ ನಮ್ಮ ಯುವಕರಿಗೆ ಮೃತ್ಯುವು ಹಿಡಿದುಕೊಂಡಿದೆ.”
 
22 ಯೆರೆಮೀಯನೇ, ಯೆಹೋವನು ಹೀಗೆ ಹೇಳುತ್ತಾನೆಂದು ಹೇಳು:
“ ‘ಹೊಲಗಳಲ್ಲಿ ಗೊಬ್ಬರ ಬಿದ್ದಂತೆ ಹೆಣಗಳು ಬೀಳುವವು.
ಆ ಶವಗಳು ಹೊಲ ಕೊಯ್ಯುವವನ ಹಿಂದೆ
ಯಾರೂ ಎತ್ತದೆ ಬಿದ್ದಿರುವ ಮೆದೆಗಳಂತೆ ಬಿದ್ದಿರುವವು.’ ”
 
23 ಯೆಹೋವನು ಹೇಳುತ್ತಾನೆ,
“ಜ್ಞಾನಿಗಳು ತಮ್ಮ ಜ್ಞಾನದ ಬಗ್ಗೆ
ಜಂಬಕೊಚ್ಚಿಕೊಳ್ಳಬಾರದು.
ಬಲಶಾಲಿಗಳು ತಮ್ಮ ಬಲದ ಬಗ್ಗೆ
ಬಡಾಯಿಕೊಚ್ಚಿಕೊಳ್ಳಬಾರದು.
ಶ್ರೀಮಂತರು ತಮ್ಮ ಸಂಪತ್ತಿನ ಬಗ್ಗೆ
ಜಂಬಕೊಚ್ಚಿಕೊಳ್ಳಬಾರದು.
24 ಯಾವನಾದರೂ ಜಂಬಕೊಚ್ಚಿಕೊಳ್ಳಬೇಕಾದರೆ, ಅವನು ನನ್ನನ್ನು ಅರಿತಿರುವುದಾಗಿಯೂ
ನನ್ನನ್ನು ತಿಳಿದುಕೊಂಡಿರುವುದಾಗಿಯೂ ಜಂಬಪಡಲಿ.
ನಾನೇ ಯೆಹೋವನೆಂದು ತಿಳಿದುಕೊಂಡಿರುವುದಕ್ಕಾಗಿ ಅವನು ಜಂಬಪಡಲಿ.
ನಾನು ದಯಾವಂತನೂ ನ್ಯಾಯವಂತನೂ ಆಗಿರುವೆ,
ನಾನು ಭೂಲೋಕದಲ್ಲಿ ಒಳ್ಳೆಯದನ್ನು ಮಾಡುತ್ತೇನೆ ಎಂದು ತಿಳಿದುಕೊಂಡಿರುವವನು ಹೆಮ್ಮೆಪಡಲಿ.
ಆಗ ನನಗೆ ಸಂತೋಷವಾಗುವುದು.”
ಇದು ಯೆಹೋವನ ನುಡಿ.
 
25 “ಕೇವಲ ದೈಹಿಕವಾಗಿ ಸುನ್ನತಿಯನ್ನು ಮಾಡಿಕೊಂಡ ಜನರನ್ನು ನಾನು ಶಿಕ್ಷಿಸುವ ಕಾಲ ಬರಲಿದೆ. 26 ನಾನು ಈಜಿಪ್ಟ್, ಯೆಹೂದ, ಎದೋಮ್, ಅಮ್ಮೋನ್, ಮೋವಾಬ್ ಜನಾಂಗಗಳ ಜನರ ಬಗ್ಗೆ ಮತ್ತು ಮರಳು ಪ್ರದೇಶದಲ್ಲಿ ವಾಸಮಾಡುತ್ತಿರುವ ಎಲ್ಲಾ ಜನಗಳ ಬಗ್ಗೆ ಮಾತನಾಡುತ್ತಿದ್ದೇನೆ. ಈ ಎಲ್ಲಾ ದೇಶಗಳ ಜನರಿಗೆ ದೈಹಿಕವಾಗಿ ಸುನ್ನತಿ ಆಗಿದ್ದಿಲ್ಲ. ಆದರೆ ಇಸ್ರೇಲ್ ವಂಶದವರು ಹೃದಯ ಸುನ್ನತಿಯಿಲ್ಲದವರು” ಎಂದು ಯೆಹೋವನು ಅನ್ನುತ್ತಾನೆ.