21
ದೇವರು ರಾಜನಾದ ಚಿದ್ಕೀಯನ ಪ್ರಾರ್ಥನೆಯನ್ನು ತಿರಸ್ಕರಿಸಿದನು
ಯೆಹೋವನಿಂದ ಯೆರೆಮೀಯನಿಗೆ ಈ ಸಂದೇಶ ಬಂದಿತು. ಯೆಹೂದದ ರಾಜನಾದ ಚಿದ್ಕೀಯನು ಮಲ್ಕೀಯನ ಮಗನಾದ ಪಷ್ಹೂರನನ್ನೂ ಮಾಸೇಯನ ಮಗನಾದ ಯಾಜಕ ಚೆಫನ್ಯನನ್ನೂ ಯೆರೆಮೀಯನ ಬಳಿಗೆ ಕಳುಹಿಸಿದಾಗ ಈ ಸಂದೇಶ ಬಂದಿತು. ಪಷ್ಹೂರ ಮತ್ತು ಚೆಫನ್ಯರು ಯೆರೆಮೀಯನಿಗೆ ರಾಜನ ಸಂದೇಶವನ್ನು ತಂದಿದ್ದರು. ಪಷ್ಹೂರ ಮತ್ತು ಚೆಫನ್ಯರು ಹೀಗೆಂದರು: “ನಮಗೋಸ್ಕರ ಯೆಹೋವನನ್ನು ಪ್ರಾರ್ಥಿಸಿ ಮುಂದೆ ಸಂಭವಿಸುವುದನ್ನು ವಿಚಾರಿಸು. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ನಮಗೆ ವಿರುದ್ಧವಾಗಿ ಯುದ್ಧಮಾಡುತ್ತಿರುವನು; ಆದ್ದರಿಂದ ಮುಂದೆ ಸಂಭವಿಸುವುದನ್ನು ನಾವು ತಿಳಿಯ ಬಯಸುತ್ತೇವೆ. ಮೊದಲಿನಂತೆ ಯೆಹೋವನು ನಮಗೋಸ್ಕರ ಅದ್ಭುತಗಳನ್ನೂ ಮಾಡಬಹುದು. ನೆಬೂಕದ್ನೆಚ್ಚರನು ನಮ್ಮ ಮೇಲೆ ಧಾಳಿ ಮಾಡುವುದನ್ನು ನಿಲ್ಲಿಸಿ ಹೊರಟುಹೋಗುವಂತೆ ಆತನು ಮಾಡಬಹುದು.”
ಆಗ ಯೆರೆಮೀಯನು ಪಷ್ಹೂರ ಮತ್ತು ಚೆಫನ್ಯರಿಗೆ ಹೀಗೆ ಉತ್ತರಕೊಟ್ಟನು: “ರಾಜನಾದ ಚಿದ್ಕೀಯನಿಗೆ ಹೇಳಿರಿ. ಇಸ್ರೇಲಿನ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ, ‘ನಿಮ್ಮ ಕೈಯಲ್ಲಿ ಯುದ್ಧದ ಆಯುಧಗಳಿವೆ. ಆ ಆಯುಧಗಳನ್ನು ನೀವು ನಿಮ್ಮ ರಕ್ಷಣೆಗಾಗಿಯೂ ಬಾಬಿಲೋನಿನ ರಾಜನ ವಿರುದ್ಧವಾಗಿಯೂ ಮತ್ತು ಬಾಬಿಲೋನಿನ ಜನರ ವಿರುದ್ಧವಾಗಿಯೂ ಬಳಸುತ್ತಿದ್ದೀರಿ. ಆದರೆ ನಾನು ಆ ಆಯುಧಗಳನ್ನು ವಿಫಲಗೊಳಿಸುತ್ತೇನೆ.
“ ‘ಬಾಬಿಲೋನಿನ ಸೈನ್ಯವು ನಗರದ ಸುತ್ತಲಿನ ಪೌಳಿಗೋಡೆಯ ಬಳಿಯಿದೆ. ತಕ್ಷಣವೇ ನಾನು ಆ ಸೈನ್ಯವನ್ನು ಜೆರುಸಲೇಮಿನ ಒಳಗಡೆ ತರುತ್ತೇನೆ. ಯೆಹೂದಿಗಳಾದ ನಿಮ್ಮ ವಿರುದ್ಧ ನಾನೇ ಕಾದಾಡುತ್ತೇನೆ. ನಾನು ನನ್ನ ಬಲಿಷ್ಠವಾದ ಕೈಗಳಿಂದ ನಿಮ್ಮ ವಿರುದ್ಧ ಹೋರಾಡುತ್ತೇನೆ. ನಿಮ್ಮ ಮೇಲೆ ನನಗೆ ಬಹಳ ಕೋಪ ಬಂದಿದೆ; ಅದಕ್ಕಾಗಿ ನನ್ನ ಬಲಿಷ್ಠವಾದ ತೋಳಿನಿಂದ ನಾನು ನಿಮ್ಮ ಸಂಗಡ ಯುದ್ಧ ಮಾಡುತ್ತೇನೆ. ನಾನು ನಿಮ್ಮ ವಿರುದ್ಧ ಬಹಳ ರಭಸದಿಂದ ಯುದ್ಧಮಾಡಿ ನನಗೆ ಎಷ್ಟು ಕೋಪ ಬಂದಿದೆ ಎಂಬುದನ್ನು ತೋರಿಸುತ್ತೇನೆ. ಜೆರುಸಲೇಮಿನಲ್ಲಿ ವಾಸಮಾಡುತ್ತಿರುವ ಜನರನ್ನು ನಾನು ಕೊಂದುಬಿಡುತ್ತೇನೆ. ನಾನು ಜನರನ್ನು ಮತ್ತು ಪ್ರಾಣಿಗಳನ್ನು ಕೊಲ್ಲುತ್ತೇನೆ. ಅವರುಗಳು ನಗರದಲ್ಲೆಲ್ಲಾ ಹರಡಿದ ಭಯಂಕರವಾದ ರೋಗದಿಂದ ಮಡಿಯುವರು.’ ” ಇದು ಯೆಹೋವನ ನುಡಿ. “ ‘ಇದಾದ ಮೇಲೆ ನಾನು ಯೆಹೂದದ ರಾಜನಾದ ಚಿದ್ಕೀಯನನ್ನು ಮತ್ತು ಅಧಿಪತಿಗಳನ್ನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನಿಗೆ ಒಪ್ಪಿಸುತ್ತೇನೆ. ಜೆರುಸಲೇಮಿನ ಕೆಲವು ಜನರು ಭಯಂಕರವಾದ ರೋಗದಿಂದ ಸಾಯುವುದಿಲ್ಲ; ಕೆಲವು ಜನರು ಖಡ್ಗಗಳಿಗೆ ಆಹುತಿಯಾಗುವದಿಲ್ಲ; ಕೆಲವರು ಹಸಿವಿನಿಂದ ಸಾಯುವುದಿಲ್ಲ. ಅಂಥವರನ್ನು ನಾನು ನೆಬೂಕದ್ನೆಚ್ಚರನಿಗೆ ಕೊಡುತ್ತೇನೆ. ಯೆಹೂದದ ವೈರಿಯು ಗೆಲ್ಲುವಂತೆ ನಾನು ಮಾಡುತ್ತೇನೆ. ನೆಬೂಕದ್ನೆಚ್ಚರನ ಸೈನಿಕರು ಯೆಹೂದ್ಯರನ್ನು ಕೊಲ್ಲಬಯಸುತ್ತಾರೆ. ಆದ್ದರಿಂದ ಯೆಹೂದ ಮತ್ತು ಜೆರುಸಲೇಮಿನ ಜನರು ಖಡ್ಗಗಳಿಗೆ ಬಲಿಯಾಗುವರು. ನೆಬೂಕದ್ನೆಚ್ಚರನು ಸ್ವಲ್ಪವೂ ದಯೆ ತೋರುವದಿಲ್ಲ. ಆ ಜನರ ಸಲುವಾಗಿ ಅವನು ಮರುಗುವದಿಲ್ಲ.’
“ಜೆರುಸಲೇಮಿನ ಜನರಿಗೆ ಇದನ್ನು ಸಹ ಹೇಳಿರಿ. ಯೆಹೋವನು ಹೀಗೆನ್ನುತ್ತಾನೆ, ‘ನಾನು ನಿಮಗೆ ಜೀವವನ್ನಾಗಲಿ ಮರಣವನ್ನಾಗಲಿ ಆರಿಸಿಕೊಳ್ಳಲು ಅವಕಾಶ ಕೊಟ್ಟಿದ್ದೇನೆ ಎಂಬುದನ್ನು ತಿಳಿದುಕೊಳ್ಳಿರಿ. ಜೆರುಸಲೇಮಿನಲ್ಲಿ ಉಳಿಯುವವನು ಮರಣಹೊಂದುವನು. ಆತನು ಖಡ್ಗದಿಂದಾಗಲಿ ಹಸಿವಿನಿಂದಾಗಲಿ ಭಯಂಕರವಾದ ರೋಗದಿಂದಾಗಲಿ ಮಡಿಯುವನು. ಆದರೆ ಜೆರುಸಲೇಮಿನಿಂದ ಹೊರಗೆ ಬಾಬಿಲೋನಿನ ಸೈನಿಕರಿಗೆ ಶರಣಾಗತನಾದವನು ಬಂದುಕುವನು. ಆ ಸೈನಿಕರು ನಗರವನ್ನು ಮುತ್ತಿದ್ದಾರೆ. ಯಾರೂ ನಗರದಲ್ಲಿ ಆಹಾರವನ್ನು ತರುವಂತಿಲ್ಲ. ಆದರೆ ನಗರವನ್ನು ಬಿಟ್ಟು ಹೊರಗೆ ಹೋದವರು ಬಂದುಕುವರು. 10 ಜೆರುಸಲೇಮ್ ನಗರಕ್ಕೆ ತೊಂದರೆಯನ್ನು ಉಂಟುಮಾಡಬೇಕೆಂದು ನಾನು ನಿಶ್ಚಯಿಸಿದ್ದೇನೆ. ನಾನು ಈ ನಗರಕ್ಕೆ ಸಹಾಯಮಾಡುವದಿಲ್ಲ.’ ” ಇದು ಯೆಹೋವನಿಂದ ಬಂದ ಸಂದೇಶ. “ ‘ಜೆರುಸಲೇಮ್ ನಗರವನ್ನು ನಾನು ಬಾಬಿಲೋನಿನ ರಾಜನಿಗೆ ಒಪ್ಪಿಸುತ್ತೇನೆ. ಅವನು ಅದನ್ನು ಬೆಂಕಿಯಿಂದ ಸುಟ್ಟುಹಾಕುತ್ತಾನೆ.’ ”
 
11 “ಯೆಹೂದದ ರಾಜಮನೆತನದವರಿಗೆ ಈ ವಿಷಯಗಳನ್ನು ತಿಳಿಸಿರಿ:
‘ಯೆಹೋವನ ಸಂದೇಶವನ್ನು ಕೇಳಿರಿ.
12 ದಾವೀದನ ಮನೆತನದವರೇ, ಯೆಹೋವನು ಹೀಗೆ ಹೇಳುತ್ತಾನೆ:
ನೀವು ಪ್ರತಿದಿನ ನಿಷ್ಪಕ್ಷಪಾತವಾಗಿ ನ್ಯಾಯನಿರ್ಣಯ ಮಾಡಬೇಕು.
ಅಪರಾಧಿಗಳಿಂದ ಕಷ್ಟಕ್ಕೊಳಗಾದವರನ್ನು ರಕ್ಷಿಸಬೇಕು.
ನೀವು ಹಾಗೆ ಮಾಡದಿದ್ದರೆ
ನನಗೆ ಬಹಳ ಕೋಪ ಬರುತ್ತದೆ.
ನನ್ನ ಕೋಪವು ಯಾರಿಂದಲೂ ನಂದಿಸಲಾಗದ ಬೆಂಕಿಯಂತಿದೆ.
ನೀವು ದುಷ್ಕೃತ್ಯಗಳನ್ನು ಮಾಡಿದ್ದರಿಂದ ಹೀಗಾಗುತ್ತದೆ.’
 
13 “ಜೆರುಸಲೇಮ್ ನಗರವೇ, ನಾನು ನಿನ್ನ ವಿರುದ್ಧವಾಗಿದ್ದೇನೆ.
ನೀನು ಬೆಟ್ಟದ ಮೇಲೆ ಕುಳಿತಿರುವೆ,
ನೀನು ರಾಣಿಯಂತೆ ಈ ಕಣಿವೆಯ ಮೇಲೆ ಕುಳಿತಿರುವೆ.
‘ನಮ್ಮ ಮೇಲೆ ಯಾರೂ ಧಾಳಿ ಮಾಡಲಾರರು,
ನಮ್ಮ ಭದ್ರವಾದ ನಗರವನ್ನು ಯಾರೂ ಪ್ರವೇಶ ಮಾಡಲಾರರು’
ಎಂದು ಜೆರುಸಲೇಮಿನ ನಿವಾಸಿಗಳಾದ ನೀವು ಹೇಳುವಿರಿ.”
ಆದರೆ ಯೆಹೋವನ ಸಂದೇಶವನ್ನು ಕೇಳಿರಿ.
 
14 “ನೀವು ತಕ್ಕ ಶಿಕ್ಷೆಯನ್ನು ಅನುಭವಿಸುವಿರಿ.
ನಾನು ನಿಮ್ಮ ಅರಣ್ಯಗಳಲ್ಲಿ ಬೆಂಕಿಯನ್ನು ಹೊತ್ತಿಸುತ್ತೇನೆ.
ಆ ಬೆಂಕಿಯು ನಿಮ್ಮ ಸುತ್ತಮುತ್ತಲಿನ ಪ್ರತಿಯೊಂದು ವಸ್ತುವನ್ನು ಸುಟ್ಟುಹಾಕುತ್ತದೆ.”