42
ಅವರು ಗೇರುಥ್ ಕಿಮ್ಹಾಮಿನಲ್ಲಿಇಳಿದುಕೊಂಡಿದ್ದಾಗ ಯೋಹಾನಾನನೂ ಹೋಷಾಯನ ಮಗನಾದ ಯೆಜನ್ಯನೂ ಪ್ರವಾದಿಯಾದ ಯೆರೆಮೀಯನಲ್ಲಿಗೆ ಹೋದರು. ಯೋಹಾನಾನ ಮತ್ತು ಯೆಜನ್ಯನ ಸಂಗಡ ಎಲ್ಲಾ ಅಧಿಕಾರಿಗಳೂ ಅಪ್ರಮುಖರಿಂದ ಅತಿ ಪ್ರಮುಖವರೆಗಿನ ಎಲ್ಲಾ ಜನರೂ ಹೋದರು. ಅವರೆಲ್ಲರೂ ಅವನಿಗೆ, “ಯೆರೆಮೀಯನೇ, ನಮ್ಮ ಬೇಡಿಕೆಯನ್ನು ದಯವಿಟ್ಟು ಕೇಳು. ಯೆಹೂದ ಕುಲದಲ್ಲಿ ಅಳಿದುಳಿದ ಎಲ್ಲಾ ಜನರಿಗಾಗಿ ನಿನ್ನ ದೇವರಾದ ಯೆಹೋವನನ್ನು ಪ್ರಾರ್ಥಿಸು. ಯೆರೆಮೀಯನೇ, ನಮ್ಮಲ್ಲಿ ಈಗ ಬಹಳ ಜನ ಉಳಿದಿಲ್ಲವೆಂಬುದು ನಿನಗೆ ಗೊತ್ತಿದೆ. ಒಂದು ಕಾಲದಲ್ಲಿ ನಾವು ಬಹಳ ಜನರಿದ್ದೆವು. ಯೆರೆಮೀಯನೇ, ನಾವು ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎಂಬುದನ್ನು ಹೇಳಬೇಕೆಂದು ನಿನ್ನ ದೇವರನ್ನು ಪ್ರಾರ್ಥಿಸು” ಎಂದರು.
ಆಗ ಪ್ರವಾದಿಯಾದ ಯೆರೆಮೀಯನು, “ನಾನು ಏನು ಮಾಡಬೇಕೆಂದು ನೀವು ಬಯಸುವಿರೆಂಬುದು ನನಗೆ ಗೊತ್ತು. ನೀವು ಹೇಳಿದಂತೆಯೇ, ನಿಮ್ಮ ದೇವರಾದ ಯೆಹೋವನನ್ನು ಪ್ರಾರ್ಥಿಸುವೆನು. ಯೆಹೋವನು ಹೇಳಿದ್ದನ್ನೆಲ್ಲವನ್ನು ನಾನು ನಿಮಗೆ ಹೇಳುತ್ತೇನೆ. ನಾನು ನಿಮ್ಮಿಂದ ಏನನ್ನೂ ಮುಚ್ಚಿಡುವದಿಲ್ಲ” ಎಂದನು.
ಆಗ ಅವರು, “ನಿನ್ನ ದೇವರಾದ ಯೆಹೋವನು ಹೇಳಿದ ಎಲ್ಲವನ್ನು ನಾವು ಮಾಡದಿದ್ದಲ್ಲಿ ಯೆಹೋವನು ಸಬತಃ ನಮ್ಮ ವಿರುದ್ಧ ಸ್ಥಿರವಾದ ಸತ್ಯಸಾಕ್ಷಿಯಾಗಿ ನಿಲ್ಲಲಿ. ನಾವು ಏನು ಮಾಡಬೇಕೆಂಬುದನ್ನು ತಿಳಿಸಲು ನಿನ್ನ ದೇವರಾದ ಯೆಹೋವನು ನಿನ್ನನ್ನು ಕಳುಹಿಸುತ್ತಾನೆಂದು ನಾವು ಬಲ್ಲೆವು. ಯೆಹೋವನ ಸಂದೇಶವು ನಮಗೆ ಇಷ್ಟವಾಗಲಿ ಅಥವಾ ಇಷ್ಟವಾಗದಿರಲಿ ನಾವು ನಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಪಾಲಿಸುತ್ತೇವೆ. ಯೆಹೋವನ ಸಂದೇಶಕ್ಕಾಗಿ ನಾವು ನಿನ್ನನ್ನು ಆತನಲ್ಲಿಗೆ ಕಳುಹಿಸುತ್ತಿದ್ದೇವೆ. ಆತನು ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ. ಆಗ ನಮಗೆ ಒಳ್ಳೆಯದಾಗುತ್ತದೆ. ಹೌದು, ನಮ್ಮ ದೇವರಾದ ಯೆಹೋವನು ಹೇಳಿದಂತೆಯೇ ನಾವು ನಡೆದುಕೊಳ್ಳುತ್ತೇವೆ” ಎಂದು ಹೇಳಿದರು.
ಹತ್ತು ದಿನಗಳ ನಂತರ ಯೆರೆಮೀಯನಿಗೆ ಯೆಹೋವನಿಂದ ಸಂದೇಶ ಬಂದಿತು. ಆಗ ಯೆರೆಮೀಯನು ಕಾರೇಹನ ಮಗನಾದ ಯೋಹಾನಾನನನ್ನೂ ಅವನ ಜೊತೆಗಿದ್ದ ಸೇನಾಧಿಪತಿಗಳನ್ನೂ ಕರೆದನು. ಪ್ರಮುಖರು, ಅಪ್ರಮುಖರು ಎನ್ನದೆ ಒಟ್ಟಾಗಿ ಬರಲು ಎಲ್ಲಾ ಜನರನ್ನು ಯೆರೆಮೀಯನು ಕರೆದನು. ಯೆರೆಮೀಯನು ಅವರಿಗೆ ಹೀಗೆ ಹೇಳಿದನು: “ಇಸ್ರೇಲರ ದೇವರಾದ ಯೆಹೋವನು ಹೀಗೆನ್ನುತ್ತಾನೆ. ನೀವು ನನ್ನನ್ನು ಆತನಲ್ಲಿಗೆ ಕಳುಹಿಸಿದಿರಿ. ನೀವು ಕೇಳೆಂದು ನನಗೆ ಹೇಳಿದ್ದನ್ನು ನಾನು ಯೆಹೋವನಿಗೆ ಕೇಳಿದೆ. ಯೆಹೋವನು ಹೀಗೆ ಹೇಳುತ್ತಾನೆ. 10 ‘ನೀವು ಯೆಹೂದದಲ್ಲಿ ವಾಸಮಾಡಿದರೆ ನಾನು ನಿಮ್ಮನ್ನು ನಾಶಮಾಡದೆ ಬಲಶಾಲಿಗಳನ್ನಾಗಿ ಮಾಡುತ್ತೇನೆ. ನಾನು ನಿಮ್ಮನ್ನು ನೆಡುತ್ತೇನೆ, ನಿಮ್ಮನ್ನು ಕೀಳುವುದಿಲ್ಲ. ನಾನು ನಿಮಗೆ ಬರಮಾಡಿದ ಭಯಂಕರವಾದ ಕೇಡಿಗಾಗಿ ದುಃಖಿತನಾಗಿದ್ದೇನೆ. 11 ಈಗ ನೀವು ಬಾಬಿಲೋನಿನ ರಾಜನಿಗೆ ಹೆದರಿದ್ದೀರಿ. ಆದರೆ ಅವನಿಗೆ ಅಂಜಬೇಡಿರಿ.’ ಇದು ಯೆಹೋವನ ನುಡಿ. ‘ಏಕೆಂದರೆ ನಾನು ನಿಮ್ಮೊಂದಿಗಿದ್ದೇನೆ. ನಾನೇ ನಿಮ್ಮನ್ನು ರಕ್ಷಿಸುವೆನು. ನಾನು ನಿಮ್ಮನ್ನು ಕಷ್ಟದಿಂದ ಪಾರು ಮಾಡುವೆನು. ಅವನ ಕೈಗೆ ನೀವು ಸಿಗುವುದಿಲ್ಲ. 12 ನಾನು ನಿಮಗೆ ದಯೆತೋರುತ್ತೇನೆ. ಬಾಬಿಲೋನಿನ ರಾಜನು ಸಹ ನಿಮಗೆ ದಯೆತೋರುವನು. ಅವನು ನಿಮ್ಮನ್ನು ನಿಮ್ಮ ದೇಶಕ್ಕೆ ಮರಳಿ ತರುವನು.’ 13 ಆದರೆ ‘ನಾವು ಯೆಹೂದದಲ್ಲಿ ವಾಸಿಸುವದಿಲ್ಲ’ವೆಂದು ನೀವು ಹೇಳಬಹುದು. ನೀವು ಹಾಗೆ ಹೇಳಿದರೆ ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಮೀರಿದಂತಾಗುತ್ತದೆ. 14 ‘ಇಲ್ಲ, ನಾವು ಈಜಿಪ್ಟಿಗೆ ಹೋಗಿ ಅಲ್ಲಿ ವಾಸಮಾಡುವೆವು. ಅಲ್ಲಿ ನಮಗೆ ಯುದ್ಧದ ಭಯವಿಲ್ಲ. ಯುದ್ಧದ ತುತ್ತೂರಿಗಳ ಶಬ್ಧವು ಕೇಳುವುದಿಲ್ಲ; ಅಲ್ಲಿ ನಮಗೆ ಹಸಿವೆ ಇರುವುದಿಲ್ಲ’ ಎಂದು ನೀವು ಹೇಳಬಹುದು. 15 ಯೆಹೂದದ ಶ್ರೇಷ್ಠ ಜನಗಳೇ, ನೀವು ಒಂದುವೇಳೆ ಹಾಗೆ ಹೇಳುವುದಾದರೆ ಯೆಹೋವನ ಸಂದೇಶವನ್ನು ಕೇಳಿರಿ: ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ: ‘ನೀವು ಈಜಿಪ್ಟಿಗೆ ಹೋಗಿ ಅಲ್ಲಿ ವಾಸಮಾಡಬೇಕೆಂದು ತೀರ್ಮಾನಿಸಿದ್ದರೆ ಪರಿಸ್ಥಿತಿ ಹೀಗಾಗುವುದು: 16 ನೀವು ಯುದ್ಧದ ಖಡ್ಗಕ್ಕೆ ಹೆದರುವಿರಿ. ಆದರೆ ಅದು ನಿಮ್ಮನ್ನು ಅಲ್ಲಿ ಸೋಲಿಸುವುದು. ನಿಮಗೆ ಹಸಿವಿನ ಬಗ್ಗೆ ಯೋಚನೆಯಿದೆ. ಆದರೆ ಈಜಿಪ್ಟಿನಲ್ಲಿ ನೀವು ಹಸಿವಿನಿಂದ ಬಳಲುವಿರಿ. ನೀವು ಅಲ್ಲಿ ಸತ್ತುಹೋಗುವಿರಿ. 17 ಈಜಿಪ್ಟಿಗೆ ಹೋಗಿ ಅಲ್ಲಿ ನೆಲೆಸಬೇಕೆಂದು ನಿಶ್ಚಯಿಸಿದವರೆಲ್ಲರೂ ಖಡ್ಗದಿಂದಾಗಲಿ ಹಸಿವಿನಿಂದಾಗಲಿ ಭಯಂಕರ ವ್ಯಾಧಿಯಿಂದಾಗಲಿ ಸತ್ತುಹೋಗುವರು. ಈಜಿಪ್ಟಿಗೆ ಹೋದವರಲ್ಲಿ ಒಬ್ಬನೂ ಬಂದುಕಿರಲಾರ. ನಾನು ಅವರಿಗೆ ಉಂಟುಮಾಡುವ ಪೀಡೆಯಿಂದ ಒಬ್ಬನೂ ತಪ್ಪಿಸಿಕೊಳ್ಳಲಾರ.’
18 “ಸರ್ವಶಕ್ತನೂ ಇಸ್ರೇಲರ ದೇವರೂ ಆಗಿರುವ ಯೆಹೋವನು ಹೀಗೆಂದನು: ‘ನಾನು ಜೆರುಸಲೇಮಿನ ಮೇಲೆ ನನ್ನ ಕೋಪವನ್ನು ತೋರಿಸಿದೆ. ಜೆರುಸಲೇಮಿನಲ್ಲಿ ವಾಸಿಸುವ ಜನರನ್ನು ನಾನು ದಂಡಿಸಿದೆ. ಅದೇ ರೀತಿ, ಈಜಿಪ್ಟಿಗೆ ಹೋಗುವವರೆಲ್ಲರ ಮೇಲೂ ನಾನು ನನ್ನ ಕೋಪವನ್ನು ತೋರಿಸುವೆನು. ಬೇರೆಯವರಿಗೆ ಕೆಟ್ಟದಾಗಲಿ ಎಂದು ಹೇಳಬೇಕಾದಾಗ ಜನರು ನಿಮ್ಮಂತೆ ಆಗಲಿ ಎಂದು ನಿಮ್ಮ ಉದಾಹರಣೆಯನ್ನು ಕೊಡುವರು. ನೀವು ಒಂದು ಶಾಪದ ಶಬ್ದವಾಗುವಿರಿ. ಜನರು ನಿಮ್ಮಿಂದ ನಾಚಿಕೆಪಟ್ಟುಕೊಳ್ಳುವರು. ಜನರು ನಿಮ್ಮನ್ನು ಅಪಮಾನ ಮಾಡುವರು. ಯೆಹೂದವನ್ನು ಪುನಃ ನೀವು ಎಂದೂ ನೋಡುವದಿಲ್ಲ.’
19 “ಯೆಹೂದ್ಯರಲ್ಲಿ ಅಳಿದುಳಿದವರೇ, ಯೆಹೋವನು ನಿಮಗೆ, ‘ಈಜಿಪ್ಟಿಗೆ ಹೋಗಬೇಡಿರಿ.’ ಎಂದು ಹೇಳಿದ್ದಾನೆ, ನಾನು ಈಗಲೇ ನಿಮಗೆ ಮುನ್ನೆಚ್ಚರಿಕೆಯನ್ನು ಕೊಡುತ್ತೇನೆ. 20 ನೀವು ನಿಮಗೆ ಮರಣವನ್ನು ಬರಮಾಡುವ ತಪ್ಪನ್ನು ಮಾಡುತ್ತಿದ್ದೀರಿ. ನೀವು ನನ್ನನ್ನು ನಿಮ್ಮ ದೇವರಾದ ಯೆಹೋವನಲ್ಲಿಗೆ ಕಳುಹಿಸಿದಿರಿ. ‘ನಮಗಾಗಿ ಯೆಹೋವನಾದ ನಮ್ಮ ದೇವರನ್ನು ಪ್ರಾರ್ಥಿಸು. ದೇವರು ಮಾಡಬೇಕೆಂದು ಹೇಳಿದ್ದೆಲ್ಲವನ್ನು ನಮಗೆ ಹೇಳು, ನಾವು ಯೆಹೋವನ ಆಜ್ಞೆಯನ್ನು ಪಾಲಿಸುತ್ತೇವೆ’ ಎಂದು ನೀವು ಹೇಳಿದ್ದಿರಿ. 21 ಇಂದು, ನಾನು ನಿಮಗೆ ಯೆಹೋವನ ಸಂದೇಶವನ್ನು ತಿಳಿಸಿದ್ದೇನೆ. ಆದರೆ ನೀವು ನಿಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಪಾಲಿಸಲಿಲ್ಲ. ನನ್ನ ಮೂಲಕ ಆತನು ನಿಮಗೆ ಹೇಳಿದ ಯಾವ ಮಾತನ್ನೂ ನೀವು ಕೇಳಲಿಲ್ಲ. 22 ಈಗ ನೀವು ಇದನ್ನು ನಿಶ್ಚಿತವಾಗಿ ತಿಳಿದುಕೊಳ್ಳಿ. ನೀವು ಈಜಿಪ್ಟಿನಲ್ಲಿ ವಾಸಮಾಡಲು ಹೋಗಬೇಕೆನ್ನುವಿರಿ. ಆದರೆ ಈಜಿಪ್ಟಿನಲ್ಲಿ ನೀವು ಖಡ್ಗದಿಂದಾದರೂ ಸಾಯುವಿರಿ, ಹಸಿವಿನಿಂದಾದರೂ ಸಾಯುವಿರಿ, ಅಥವಾ ಭಯಂಕರವಾದ ವ್ಯಾಧಿಯಿಂದಾದರೂ ಸಾಯುವಿರಿ.”