11
ಲಾಜರನ ಮರಣ
ಲಾಜರನೆಂಬ ಒಬ್ಬನು ಅಸ್ವಸ್ಥನಾಗಿದ್ದನು. ಅವನು ಬೆಥಾನಿ ಎಂಬ ಊರಿನಲ್ಲಿ ವಾಸವಾಗಿದ್ದನು. ಮರಿಯಳು ಮತ್ತು ಆಕೆಯ ಸಹೋದರಿಯಾದ ಮಾರ್ಥಳು ಈ ಊರಿನಲ್ಲೇ ವಾಸವಾಗಿದ್ದರು. ಪ್ರಭುವಿಗೆ (ಯೇಸುವಿಗೆ) ಪರಿಮಳತೈಲವನ್ನು ಹಚ್ಚಿ ಆತನ ಪಾದಗಳನ್ನು ತನ್ನ ತಲೆಕೂದಲಿನಿಂದ ಒರಸಿದವಳೇ ಈ ಮರಿಯಳು. ಅಸ್ವಸ್ಥನಾಗಿದ್ದ ಲಾಜರನು ಮರಿಯಳ ಸಹೋದರನಾಗಿದ್ದನು. ಆದ್ದರಿಂದ ಮರಿಯಳು ಮತ್ತು ಮಾರ್ಥಳು, “ಪ್ರಭುವೇ, ನಿನ್ನ ಪ್ರಿಯ ಸ್ನೇಹಿತನಾದ ಲಾಜರನು ಅಸ್ವಸ್ಥನಾಗಿದ್ದಾನೆ” ಎಂಬ ಸಂದೇಶವನ್ನು ಆತನಿಗೆ ತಿಳಿಸಲು ಒಬ್ಬನನ್ನು ಕಳುಹಿಸಿಕೊಟ್ಟರು.
ಯೇಸು ಇದನ್ನು ಕೇಳಿದಾಗ, “ಈ ಕಾಯಿಲೆಯು ದೇವರ ಮತ್ತು ದೇವಕುಮಾರನ ಮಹಿಮೆಗಾಗಿ ಬಂದಿದೆಯೇ ಹೊರತು ಮರಣಕ್ಕಾಗಿಯಲ್ಲ” ಎಂದು ಹೇಳಿದನು. ಯೇಸು ಮಾರ್ಥಳನ್ನು, ಆಕೆಯ ಸಹೋದರಿಯನ್ನು ಮತ್ತು ಲಾಜರನ್ನು ಪ್ರೀತಿಸುತ್ತಿದ್ದನು. ‘ಲಾಜರನು ಅಸ್ವಸ್ಥನಾಗಿದ್ದಾನೆ’ ಎಂಬ ವಾರ್ತೆಯನ್ನು ಆತನು ಕೇಳಿದಾಗ ತಾನಿದ್ದ ಸ್ಥಳದಲ್ಲಿಯೇ ಇನ್ನೂ ಎರಡು ದಿನಗಳವರೆಗೆ ತಂಗಿದನು. ಬಳಿಕ ಆತನು ತನ್ನ ಶಿಷ್ಯರಿಗೆ, “ನಾವು ಜುದೇಯಕ್ಕೆ ಹಿಂತಿರುಗಿ ಹೋಗಬೇಕು” ಎಂದು ಹೇಳಿದನು.
ಶಿಷ್ಯರು, “ಗುರುವೇ, ಜುದೇಯದ ಯೆಹೂದ್ಯರು ನಿನ್ನನ್ನು ಕಲ್ಲುಗಳಿಂದ ಕೊಲ್ಲಲು ಪ್ರಯತ್ನಿಸಿದರು. ಅದಾದದ್ದು ಕೇವಲ ಸ್ವಲ್ಪಕಾಲದ ಹಿಂದೆಯಷ್ಟೇ. ಈಗ ನೀನು ಮತ್ತೆ ಅಲ್ಲಿಗೆ ಹೋಗಬೇಕೆನ್ನುವಿಯಾ?” ಎಂದು ಉತ್ತರಕೊಟ್ಟರು.
ಯೇಸು, “ಹಗಲಿಗೆ ಹನ್ನೆರಡು ತಾಸುಗಳಿರುತ್ತವೆ. ಹೌದಲ್ಲವೇ? ಹಗಲಿನಲ್ಲಿ ನಡೆಯುವವನು ಎಡವಿಬೀಳುವುದಿಲ್ಲ. ಏಕೆಂದರೆ ಈ ಲೋಕದ ಬೆಳಕಿನಿಂದ ಅವನು ನೋಡಬಲ್ಲನು. 10 ಆದರೆ ರಾತ್ರಿಯಲ್ಲಿ ನಡೆಯುವವನು ಎಡವುತ್ತಾನೆ. ಏಕೆಂದರೆ ನೋಡಿಕೊಂಡು ನಡೆಯಲು ಅವನಿಗೆ ಯಾವ ಬೆಳಕೂ ಇರುವುದಿಲ್ಲ” ಎಂದು ಉತ್ತರಕೊಟ್ಟನು.
11 ಯೇಸು ಈ ಸಂಗತಿಗಳನ್ನು ಹೇಳಿದ ಮೇಲೆ, “ನಮ್ಮ ಸ್ನೇಹಿತನಾದ ಲಾಜರನು ಈಗ ನಿದ್ರಿಸುತ್ತಿದ್ದಾನೆ. ಅವನನ್ನು ಎಬ್ಬಿಸಲು ನಾನು ಅಲ್ಲಿಗೆ ಹೋಗುತ್ತಿದ್ದೇನೆ” ಎಂದು ಹೇಳಿದನು.
12 ಶಿಷ್ಯರು, “ಪ್ರಭುವೇ, ಅವನು ನಿದ್ರೆ ಮಾಡುತ್ತಿದ್ದರೆ ಆರೋಗ್ಯ ಹೊಂದುವನು” ಎಂದು ಉತ್ತರಕೊಟ್ಟರು. 13 ಲಾಜರನು ಸತ್ತುಹೋಗಿದ್ದಾನೆ. ಎಂಬರ್ಥದಲ್ಲಿ ಯೇಸು ಹೇಳಿದನು. ಆದರೆ ಲಾಜರನು ನಿಜವಾಗಿಯೂ ನಿದ್ರಿಸುತ್ತಿದ್ದಾನೆ ಎಂಬರ್ಥದಲ್ಲಿ ಯೇಸು ಹೇಳಿದನೆಂಬುದಾಗಿ ಶಿಷ್ಯರು ಭಾವಿಸಿಕೊಂಡರು.
14 ಆದ್ದರಿಂದ ಯೇಸು, “ಲಾಜರನು ಸತ್ತುಹೋಗಿದ್ದಾನೆ. 15 ಆದರೆ ನಾನು ಅಲ್ಲಿ ಇಲ್ಲದಿದ್ದ ಕಾರಣ ಸಂತೋಷಿಸುತ್ತೇನೆ. ನಿಮ್ಮ ವಿಷಯದಲ್ಲಿಯೂ ನಾನು ಸಂತೋಷಪಡುತ್ತೇನೆ. ಏಕೆಂದರೆ, ಆಗ ನೀವು ನನ್ನಲ್ಲಿ ನಂಬಿಕೆ ಇಡುವಿರಿ. ಬನ್ನಿ, ಅವನ ಬಳಿಗೆ ಹೋಗೋಣ” ಎಂದು ಸ್ವಷ್ಟವಾಗಿ ಹೇಳಿದನು.
16 ಆಗ ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ, “ನಾವು ಸಹ ಯೇಸುವಿನೊಂದಿಗೆ ಹೋಗಿ ಜುದೇಯದಲ್ಲಿ ಸಾಯೋಣ” ಎಂದು ಹೇಳಿದನು.
ಬೆಥಾನಿಯಲ್ಲಿ ಯೇಸು
17 ಯೇಸು ಬೆಥಾನಿಯಕ್ಕೆ ಬಂದನು. ಈಗಾಗಲೇ ಲಾಜರನು ಸತ್ತು ಸಮಾಧಿಯಾಗಿ ನಾಲ್ಕು ದಿನಗಳಾಯಿತೆಂಬುದು ಯೇಸುವಿಗೆ ತಿಳಿಯಿತು. 18 ಬೆಥಾನಿಯು ಜೆರುಸಲೇಮಿನಿಂದ ಸುಮಾರು ಎರಡು ಮೈಲಿಗಳಷ್ಟು ದೂರದಲ್ಲಿತ್ತು. 19 ಅನೇಕ ಯೆಹೂದ್ಯರು ಮಾರ್ಥ ಮತ್ತು ಮರಿಯಳ ಬಳಿಗೆ ಬಂದಿದ್ದರು. ಮಾರ್ಥ ಮತ್ತು ಮರಿಯಳನ್ನು ಅವರ ತಮ್ಮನಾದ ಲಾಜರನ ವಿಷಯದಲ್ಲಿ ಸಂತೈಸಲು ಯೆಹೂದ್ಯರು ಬಂದಿದ್ದರು.
20 ಯೇಸು ಬರುತ್ತಿದ್ದಾನೆ ಎಂಬ ಸುದ್ದಿಯನ್ನು ಕೇಳಿ ಮಾರ್ಥಳು ಆತನನ್ನು ವಂದಿಸಲು ಹೊರಗೆ ಹೋದಳು. ಆದರೆ ಮರಿಯಳು ಮನೆಯಲ್ಲೇ ಇದ್ದಳು. 21 ಮಾರ್ಥಳು ಯೇಸುವಿಗೆ, “ಪ್ರಭುವೇ, ನೀನು ಇಲ್ಲಿ ಇದ್ದಿದ್ದರೆ, ನನ್ನ ಸಹೋದರನು ಸಾಯುತ್ತಿರಲಿಲ್ಲ. 22 ಆದರೆ ಈಗಲೂ ಸಹ ನೀನು ಏನನ್ನೇ ಕೇಳಿಕೊಂಡರೂ ದೇವರು ನಿನಗೆ ಕೊಡುತ್ತಾನೆ ಎಂಬುದು ನನಗೆ ತಿಳಿದಿದೆ” ಎಂದು ಹೇಳಿದಳು.
23 ಯೇಸು, “ನಿನ್ನ ಸಹೋದರನು ಮತ್ತೆ ಜೀವಂತವಾಗಿ ಎದ್ದುಬರುವನು” ಎಂದು ಹೇಳಿದನು.
24 ಮಾರ್ಥಳು, “ಅಂತಿಮ ದಿನದಂದು ಪುನರುತ್ಥಾನವಾಗುವಾಗ ಅವನು ಮತ್ತೆ ಎದ್ದುಬರುವನೆಂದು ನನಗೆ ಗೊತ್ತಿದೆ” ಎಂಬುದಾಗಿ ಉತ್ತರ ಕೊಟ್ಟಳು.
25 ಯೇಸು ಆಕೆಗೆ, “ನಾನೇ ಪುನರುತ್ಥಾನ. ನಾನೇ ಜೀವ. ನನ್ನನ್ನು ನಂಬುವವನು ತಾನು ಸತ್ತನಂತರವೂ ಮತ್ತೆ ಜೀವವನ್ನು ಹೊಂದುವನು. 26 ಮತ್ತು ಬದುಕುತ್ತಾ ನನ್ನನ್ನು ನಂಬುವವನು ಎಂದಿಗೂ ಸಾಯುವುದಿಲ್ಲ. ಮಾರ್ಥಳೇ, ನೀನು ಇದನ್ನು ನಂಬುವಿಯಾ?” ಎಂದನು.
27 ಮಾರ್ಥಳು, “ಹೌದು ಪ್ರಭುವೇ, ನೀನು ದೇವರ ಮಗನಾದ ಕ್ರಿಸ್ತನೆಂದು ನಾನು ನಂಬುವೆ. ಈ ಲೋಕಕ್ಕೆ ಬರಬೇಕಾಗಿದ್ದವನು ನೀನೇ” ಎಂದು ಉತ್ತರಕೊಟ್ಟಳು.
ಯೇಸು ಕಣ್ಣೀರಿಡುವನು
28 ಮಾರ್ಥಳು ಹೀಗೆ ಹೇಳಿದ ಮೇಲೆ, ತನ್ನ ಸಹೋದರಿಯಾದ ಮರಿಯಳ ಬಳಿಗೆ ಹಿಂತಿರುಗಿ ಹೋದಳು. ಮಾರ್ಥಳು ಮರಿಯಳೊಂದಿಗೆ ಪ್ರತ್ಯೇಕವಾಗಿ ಮಾತಾಡಿ, “ಗುರುವು (ಯೇಸು) ನಿನ್ನನ್ನು ಕರೆಯುತ್ತಿದ್ದಾನೆ” ಎಂದು ತಿಳಿಸಿದಳು. 29 ಇದನ್ನು ಕೇಳಿದ ಕೂಡಲೇ ಮರಿಯಳು ಎದ್ದು ಯೇಸುವಿನ ಬಳಿಗೆ ಬೇಗಬೇಗನೆ ಹೋದಳು. 30 ಯೇಸು ಇನ್ನೂ ಊರೊಳಗೆ ಬಂದಿರಲಿಲ್ಲ. ಮಾರ್ಥಳು ತನ್ನನ್ನು ಸಂಧಿಸಿದ ಸ್ಥಳದಲ್ಲೇ ಆತನಿದ್ದನು. 31 ಯೆಹೂದ್ಯರು ಮರಿಯಳೊಂದಿಗೆ ಮನೆಯಲ್ಲಿದ್ದರು. ಅವರು ಆಕೆಯನ್ನು ಸಂತೈಸುತ್ತಿದ್ದರು. ಮರಿಯಳು ಎದ್ದು ಬೇಗನೆ ಹೋಗುವುದನ್ನು ಅವರು ಕಂಡರು. ಆಕೆಯು ಅಳುವುದಕ್ಕಾಗಿ ಸಮಾಧಿಯ ಬಳಿಗೆ ಹೋಗುತ್ತಿದ್ದಾಳೆಂದು ಅವರು ಭಾವಿಸಿಕೊಂಡು ಆಕೆಯನ್ನು ಹಿಂಬಾಲಿಸಿದರು. 32 ಯೇಸು ಇದ್ದ ಸ್ಥಳಕ್ಕೆ ಮರಿಯಳು ಹೋದಳು. ಆಕೆಯು ಯೇಸುವನ್ನು ಕಂಡಾಗ ಆತನ ಪಾದಗಳಿಗೆ ಅಡ್ಡಬಿದ್ದು, “ಪ್ರಭುವೇ, ನೀನು ಇಲ್ಲಿ ಇದ್ದಿದ್ದರೆ, ನನ್ನ ಸಹೋದರನು ಸಾಯುತ್ತಿರಲಿಲ್ಲ” ಎಂದು ಹೇಳಿದಳು.
33 ಮರಿಯಳ ಮತ್ತು ಆಕೆಯೊಂದಿಗೆ ಬಂದಿದ್ದ ಯೆಹೂದ್ಯರ ಗೋಳಾಟವನ್ನು ಯೇಸು ನೋಡಿದಾಗ, ತನ್ನ ಹೃದಯದಲ್ಲಿ ಬಹಳವಾಗಿ ದುಃಖಗೊಂಡು ತತ್ತರಿಸಿದನು. 34 ಯೇಸು ಅವರಿಗೆ, “ಅವನನ್ನು ಎಲ್ಲಿ ಇಟ್ಟಿದ್ದೀರಿ?” ಎಂದು ಕೇಳಿದನು.
ಅದಕ್ಕೆ ಅವರು, “ಸ್ವಾಮೀ, ಬಂದು ನೋಡು” ಎಂದರು.
35 ಯೇಸು ಕಣ್ಣೀರಿಟ್ಟನು.
36 ಆಗ ಯೆಹೂದ್ಯರು, “ನೋಡಿ! ಯೇಸು ಅವನನ್ನು ಬಹಳವಾಗಿ ಪ್ರೀತಿಸುತ್ತಿದ್ದನು!” ಎಂದರು.
37 ಆದರೆ ಕೆಲವು ಯೆಹೂದ್ಯರು, “ಯೇಸು ಕುರುಡನ ಕಣ್ಣುಗಳನ್ನು ಗುಣಪಡಿಸಿದನಲ್ಲಾ; ಲಾಜರನಿಗೂ ಸಹಾಯಮಾಡಿ ಅವನನ್ನು ಸಾವಿನಿಂದ ತಪ್ಪಿಸಬಾರದಾಗಿತ್ತೇ?” ಎಂದರು.
ಮರುಜೀವ ಪಡೆದ ಲಾಜರ
38 ಯೇಸು ತನ್ನ ಹೃದಯದಲ್ಲಿ ಮತ್ತೆ ಬಹಳವಾಗಿ ದುಃಖಗೊಂಡು, ಲಾಜರನಿದ್ದ ಸಮಾಧಿಯ ಬಳಿಗೆ ಬಂದನು. ಆ ಸಮಾಧಿಯು ಒಂದು ಗವಿಯಾಗಿತ್ತು. ಅದರ ಬಾಯಿಗೆ ದೊಡ್ಡಕಲ್ಲನ್ನು ಮುಚ್ಚಿದ್ದರು. 39 “ಆ ಕಲ್ಲನ್ನು ತೆಗೆದುಹಾಕಿರಿ” ಎಂದು ಯೇಸು ಹೇಳಿದನು.
ಲಾಜರನ ಅಕ್ಕಳಾದ ಮಾರ್ಥಳು, “ಪ್ರಭುವೇ, ಲಾಜರನು ಸತ್ತು ನಾಲ್ಕು ದಿನಗಳಾಗಿವೆ. ಆದ್ದರಿಂದ ಅಲ್ಲಿ ದುರ್ವಾಸನೆಯಿರುತ್ತದೆ” ಎಂದು ಹೇಳಿದಳು.
40 ಯೇಸು ಮಾರ್ಥಳಿಗೆ, “ನಾನು ನಿನಗೆ ಹೇಳಿದ್ದನ್ನು ಜ್ಞಾಪಿಸಿಕೊಳ್ಳುವಿಯಾ? ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವೆ ಎಂದು ನಾನು ನಿನಗೆ ಹೇಳಿದೆನು” ಎಂದನು.
41 ಆದ್ದರಿಂದ ಅವರು ಸಮಾಧಿಯ ಬಾಯಿಂದ ಕಲ್ಲನ್ನು ತೆಗೆದುಹಾಕಿದರು. ಆಗ ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ, “ತಂದೆಯೇ, ನನ್ನ ಪ್ರಾರ್ಥನೆಯನ್ನು ಕೇಳಿದರಿಂದ ನಿನ್ನನ್ನು ಕೊಂಡಾಡುತ್ತೇನೆ. 42 ನೀನು ಯಾವಾಗಲೂ ನನಗೆ ಕಿವಿಗೊಡುವೆ ಎಂಬುದು ನನಗೆ ತಿಳಿದಿದೆ. ಆದರೆ ಇಲ್ಲಿ ನನ್ನ ಸುತ್ತಲೂ ನೆರೆದಿರುವ ಜನರಿಗೋಸ್ಕರವಾಗಿ ನಾನು ಈ ಸಂಗತಿಗಳನ್ನು ಹೇಳಿದೆನು. ನೀನೇ ನನ್ನನ್ನು ಕಳುಹಿಸಿರುವುದಾಗಿ ಅವರು ನಂಬಬೇಕೆಂದು ನಾನು ಬಯಸುತ್ತೇನೆ” ಎಂದನು. 43 ಬಳಿಕ ಯೇಸು ಗಟ್ಟಿಯಾದ ಧ್ವನಿಯಿಂದ, “ಲಾಜರನೇ, ಹೊರಗೆ ಬಾ!” ಎಂದು ಕರೆದನು. 44 ಸತ್ತುಹೋಗಿದ್ದವನು (ಲಾಜರನು) ಹೊರಗೆ ಬಂದನು. ಅವನ ಕೈಕಾಲುಗಳನ್ನು ಬಟ್ಟೆಗಳಿಂದ ಸುತ್ತಲಾಗಿತ್ತು. ಅವನ ಮುಖವನ್ನು ಕರವಸ್ತ್ರದಿಂದ ಮುಚ್ಚಲಾಗಿತ್ತು.
ಆಗ ಯೇಸು, “ಅವನಿಗೆ ಸುತ್ತಿರುವ ಬಟ್ಟೆಗಳನ್ನು ತೆಗೆದುಹಾಕಿರಿ, ಅವನು ಹೋಗಲಿ” ಎಂದು ಹೇಳಿದನು.
ಯೇಸುವನ್ನು ಕೊಲ್ಲಲು ಯೆಹೂದ್ಯ ನಾಯಕರ ಸಂಚು
(ಮತ್ತಾಯ 26:1-5; ಮಾರ್ಕ 14:1-2; ಲೂಕ 22:1-2)
45 ಮರಿಯಳನ್ನು ಸಂದರ್ಶಿಸಲು ಬಂದಿದ್ದ ಅನೇಕ ಯೆಹೂದ್ಯರು ಅಲ್ಲಿದ್ದರು. ಯೇಸು ಮಾಡಿದ ಈ ಕಾರ್ಯವನ್ನು ಕಂಡ ಇವರಲ್ಲಿ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು. 46 ಆದರೆ ಕೆಲವು ಯೆಹೂದ್ಯರು ಫರಿಸಾಯರ ಬಳಿಗೆ ಹೋಗಿ, ಯೇಸು ಮಾಡಿದ್ದನ್ನು ತಿಳಿಸಿದರು. 47 ಆಗ ಮಹಾಯಾಜಕರು ಮತ್ತು ಫರಿಸಾಯರು ಯೆಹೂದ್ಯರ ಆಲೋಚನಾಸಭೆಯನ್ನು ಕರೆದು, “ನಾವು ಏನು ಮಾಡಬೇಕು? ಈ ಮನುಷ್ಯನು (ಯೇಸು) ಅನೇಕ ಸೂಚಕಕಾರ್ಯಗಳನ್ನು ಮಾಡುತ್ತಿದ್ದಾನೆ. 48 ಈ ಕಾರ್ಯಗಳನ್ನು ಮಾಡಲು ನಾವು ಅವನಿಗೆ ಅವಕಾಶ ಕೊಟ್ಟರೆ ಜನರೆಲ್ಲರೂ ಇವನಲ್ಲಿ ನಂಬಿಕೆ ಇಡುವರು. ಆಗ ರೋಮ್ ರಾಜ್ಯದವರು ಬಂದು ನಮ್ಮ ದೇವಾಲಯವನ್ನೂ ನಮ್ಮ ದೇಶವನ್ನೂ ವಶಪಡಿಸಿಕೊಳ್ಳುವರು” ಅಂದರು.
49 ಅವರಲ್ಲಿ ಕಾಯಫನೆಂಬ ಒಬ್ಬನಿದ್ದನು. ಅವನು ಆ ವರ್ಷ ಮಹಾಯಾಜಕನಾಗಿದ್ದನು. ಅವನು, “ನಿಮಗೆ ಏನೂ ಗೊತ್ತಿಲ್ಲ! 50 ಇಡೀ ಜನಾಂಗವು ನಾಶವಾಗುವುದಕ್ಕಿಂತ ಒಬ್ಬನು ಅವರಿಗೋಸ್ಕರವಾಗಿ ಸಾಯುವುದು ಉತ್ತಮ. ಆದರೆ ನೀವು ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ” ಎಂದು ಹೇಳಿದನು.
51 ಇದು ಕಾಯಫನ ಸ್ವಂತ ಆಲೋಚನೆಯಾಗಿರಲಿಲ್ಲ. ಅವನು ಆ ವರ್ಷ ಮಹಾಯಾಜಕನಾಗಿದ್ದನು. ಆದ್ದರಿಂದ ಯೆಹೂದ್ಯರಿಗೋಸ್ಕರವಾಗಿ ಯೇಸು ಸಾಯುತ್ತಾನೆಂದು ಅವನು ನಿಜವಾಗಿಯೂ ಪ್ರವಾದಿಸಿದನು. 52 ಹೌದು, ಯೆಹೂದ್ಯರಿಗಾಗಿಯೂ ಲೋಕದಲ್ಲೆಲ್ಲಾ ಚದರಿಹೋಗಿರುವ ದೇವರ ಮಕ್ಕಳನ್ನೆಲ್ಲ ಒಂದುಗೂಡಿಸುವುದಕ್ಕಾಗಿಯೂ ಆತನು ಸಾಯಲಿದ್ದನು.
53 ಅಂದಿನಿಂದ ಯೆಹೂದ್ಯನಾಯಕರು ಯೇಸುವನ್ನು ಕೊಲ್ಲಲು ಸಂಚು ಮಾಡಲಾರಂಭಿಸಿದರು. 54 ಆದ್ದರಿಂದ ಯೇಸುವು ಯೆಹೂದ್ಯರ ಮಧ್ಯದಲ್ಲಿ ಬಹಿರಂಗವಾಗಿ ಸಂಚರಿಸುವುದನ್ನು ಬಿಟ್ಟುಬಿಟ್ಟನು. ಆತನು ಜೆರುಸಲೇಮನ್ನು ಬಿಟ್ಟು ಮರುಭೂಮಿಯ ಸಮೀಪದಲ್ಲಿದ್ದ ಸ್ಥಳಕ್ಕೆ ಹೋಗಿ ಎಫ್ರಾಯಿಮ್ ಎಂಬ ಊರಿನಲ್ಲಿ ತನ್ನ ಶಿಷ್ಯರ ಸಂಗಡ ಇಳಿದುಕೊಂಡನು.
55 ಆಗ ಯೆಹೂದ್ಯರ ಪಸ್ಕಹಬ್ಬವು ಸಮೀಪವಾಗಿತ್ತು. ಪಸ್ಕಹಬ್ಬಕ್ಕಿಂತ ಮೊದಲೇ ತಮ್ಮ ಗ್ರಾಮಗಳಿಂದ ಅನೇಕ ಜನರು ಜೆರುಸಲೇಮಿಗೆ ಹೋಗಿದ್ದರು. ವಿಶೇಷವಾದ ಕಾರ್ಯಗಳನ್ನು ಮಾಡಿ ಪಸ್ಕಹಬ್ಬಕ್ಕಾಗಿ ತಮ್ಮನ್ನು ಶುದ್ಧೀಕರಿಸಿಕೊಳ್ಳಬೇಕೆಂದು ಅವರು ಹೋಗಿದ್ದರು. 56 ಅವರು ಅಲ್ಲಿ ಯೇಸುವನ್ನು ಹುಡುಕತೊಡಗಿದರು. ಅವರು ದೇವಾಲಯದಲ್ಲಿ ನಿಂತುಕೊಂಡು, “ಆತನು ಹಬ್ಬಕ್ಕೆ ಬರುವನೇ? ನಿಮ್ಮ ಆಲೋಚನೆ ಏನು?” ಎಂದು ಒಬ್ಬರನ್ನೊಬ್ಬರು ಕೇಳುತ್ತಿದ್ದರು. 57 ಆದರೆ ಮಹಾಯಾಜಕರು ಮತ್ತು ಫರಿಸಾಯರು, ಯೇಸು ಎಲ್ಲಿದ್ದಾನೆಂಬುದು ಯಾರಿಗಾದರೂ ತಿಳಿದು ಬಂದರೆ ತಮಗೆ ತಿಳಿಸಬೇಕೆಂದು ವಿಶೇಷ ಆಜ್ಞೆಯನ್ನು ಪ್ರಕಟಿಸಿದ್ದರು. ಅವರು ಆತನನ್ನು ಬಂಧಿಸಬೇಕೆಂದಿದ್ದರು.