29
ಯೋಬನು ಮುಂದುವರಿಸಿದ ಮಾತು
ಯೋಬನು ಮಾತನ್ನು ಮುಂದುವರಿಸಿ ಹೀಗೆಂದನು:
 
“ನನ್ನ ಜೀವಿತವು ಕೆಲವು ತಿಂಗಳುಗಳ ಮುಂಚೆ ಇದ್ದಂತೆ ಈಗಲೂ ಇದ್ದಿದ್ದರೆ ಎಷ್ಟೋ ಒಳ್ಳೆಯದಿತ್ತು.
ಆ ದಿನಗಳಲ್ಲಿ ದೇವರು ನನ್ನನ್ನು ಕಾಯುತ್ತಾ ಪರಿಪಾಲಿಸುತ್ತಿದ್ದನು.
ಆ ದಿನಗಳಲ್ಲಿ ದೇವರ ದೀಪವು ನನ್ನ ಮೇಲೆ ಪ್ರಕಾಶಿಸುತ್ತಿದ್ದ ಕಾರಣ
ನಾನು ಕಾರ್ಗತ್ತಲೆಯಲ್ಲೂ ಸಂಚರಿಸುತ್ತಿದ್ದೆನು.
ಆ ದಿನಗಳು ನನ್ನ ಜೀವಿತದ ಸುಗ್ಗಿಕಾಲವಾಗಿದ್ದವು;
ಆ ದಿನಗಳಲ್ಲಿ ದೇವರ ಸ್ನೇಹವು ನನ್ನೊಂದಿಗೂ ನನ್ನ ಮನೆಯವರೊಂದಿಗೂ ಇತ್ತು.
ಆ ದಿನಗಳಲ್ಲಿ ಸರ್ವಶಕ್ತನಾದ ದೇವರು ಇನ್ನೂ ನನ್ನೊಂದಿಗಿದ್ದನು;
ನನ್ನ ಮಕ್ಕಳು ನನ್ನ ಸುತ್ತಲೂ ಇದ್ದರು.
ಆ ದಿನಗಳಲ್ಲಿ ನನ್ನ ಜೀವಿತವು ತುಂಬ ಚೆನ್ನಾಗಿತ್ತು.
ನನ್ನ ಮಾರ್ಗಗಳು ಕೆನೆಯಿಂದ ತುಂಬಿರುವಂತೆಯೂ
ಬಂಡೆಗಳು ನನಗಾಗಿ ಆಲೀವ್ ಎಣ್ಣೆಯ ನದಿಗಳನ್ನೇ ಹರಿಸುತ್ತಿರುವಂತೆಯೂ ನನ್ನ ಜೀವಿತವಿತ್ತು.
 
“ಆ ದಿನಗಳಲ್ಲಿ ನಾನು ನಗರದ ಹೆಬ್ಬಾಗಿಲಿನ ಬಳಿಗೆ ಹೋಗಿ,
ಸಾರ್ವಜನಿಕ ಸಭಾಸ್ಥಳದಲ್ಲಿ ಪಟ್ಟಣದ ಹಿರಿಯರೊಂದಿಗೆ ಕುಳಿತುಕೊಳ್ಳುತ್ತಿದ್ದೆನು.
ಅಲ್ಲಿದ್ದ ಜನರೆಲ್ಲರೂ ನನ್ನನ್ನು ಗೌರವಿಸುತ್ತಿದ್ದರು;
ಯೌವನಸ್ಥರು ನನ್ನನ್ನು ಕಂಡು ಹಿಂದಕ್ಕೆ ಸರಿದು ದಾರಿಮಾಡಿಕೊಡುತ್ತಿದ್ದರು;
ವೃದ್ಧರು ಗೌರವದಿಂದ ಎದ್ದುನಿಂತುಕೊಳ್ಳುತ್ತಿದ್ದರು.
ಮಾತಾಡುತ್ತಿದ್ದ ಜನನಾಯಕರು
ತಮ್ಮ ಬಾಯಿ ಮೇಲೆ ಕೈಯಿಟ್ಟುಕೊಂಡು ಮೌನವಾಗುತ್ತಿದ್ದರು.
10 ಪ್ರಮುಖನಾಯಕರುಗಳು ಸಹ ನಾಲಿಗೆಯು ಸಿಕ್ಕಿಕೊಂಡಂತೆ
ತಮ್ಮ ಧ್ವನಿಯನ್ನು ಕಡಿಮೆಮಾಡುತ್ತಿದ್ದರು.
11 ನನ್ನ ಮಾತನ್ನು ಕೇಳಿದವರೆಲ್ಲರೂ ನನ್ನನ್ನು ಪ್ರಶಂಸಿಸುತ್ತಿದ್ದರು;
ನಾನು ಮಾಡಿದ್ದನ್ನು ಕಂಡವರೆಲ್ಲರೂ ನನ್ನನ್ನು ಹೊಗಳುತ್ತಿದ್ದರು.
12 ಯಾಕೆಂದರೆ ಬೇಡಿಕೊಂಡ ಬಡವರಿಗೆ ಸಹಾಯ ಮಾಡಿದೆನು;
ಗತಿಯಿಲ್ಲದ ಅನಾಥರನ್ನು ರಕ್ಷಿಸಿದೆನು.
13 ಜನರು ತಮ್ಮ ಸಾವಿನ ಗಳಿಗೆಯಲ್ಲೂ ನನ್ನನ್ನು ಆಶೀರ್ವದಿಸಿದರು.
ಕಷ್ಟದಲ್ಲಿದ್ದ ವಿಧವೆಯರಿಗೆ ನನ್ನಿಂದ ಆನಂದವಾಯಿತು.
14 ನೀತಿಯೇ ನನ್ನ ಉಡುಪಾಗಿತ್ತು; ಅದೇ ನನ್ನ ನಿಲುವಂಗಿಯಾಗಿತ್ತು.
ನ್ಯಾಯವು ನನಗೆ ನಿಲುವಂಗಿಯೂ ಪೇಟವಾಗಿಯೂ ಇತ್ತು.
15 ನಾನು ಕುರುಡನಿಗೆ ಕಣ್ಣಾಗಿಯೂ
ಕುಂಟನಿಗೆ ಕಾಲಾಗಿಯೂ ಇದ್ದೆನು.
16 ನಾನು ಬಡವರಿಗೆ ತಂದೆಯಂತಿದ್ದೆನು.
ತೊಂದರೆಯಲ್ಲಿದ್ದ ಅಪರಿಚಿತರ ವ್ಯಾಜ್ಯವನ್ನು ವಿಚಾರಿಸುತ್ತಿದ್ದೆನು.
17 ನಾನು ದುಷ್ಟರ ಕೋರೆಗಳನ್ನು ಮುರಿದು
ಅವರ ಬಾಯೊಳಗಿಂದ ಬೇಟೆಗಳನ್ನು ಕಿತ್ತು ತರುತ್ತಿದ್ದೆನು.
 
18 “ನನ್ನ ಬಗ್ಗೆ ಆಲೋಚಿಸುತ್ತಾ, ‘ನನ್ನ ದಿನಗಳು ಮರಳಿನ ಕಣಗಳಷ್ಟು ಅಸಂಖ್ಯಾತವಾಗಿವೆ;
ನಾನು ನನ್ನ ಸ್ವಂತ ಮನೆಯಲ್ಲಿ ಮರಣಹೊಂದುವೆನು.
19 ನನ್ನ ಬೇರುಗಳು ನೀರಿನವರೆಗೂ ವ್ಯಾಪಿಸಿಕೊಂಡಿರುತ್ತವೆ;
ನನ್ನ ಕೊಂಬೆಗಳು ಇಬ್ಬನಿಯಿಂದ ಹಸಿಯಾಗಿರುತ್ತವೆ;
20 ಜನರು ನನ್ನನ್ನು ಹೊಗಳುತ್ತಲೇ ಇರುವರು;
ಕೈಯಲ್ಲಿ ಹೊಸಬಿಲ್ಲು ಇರುವಂತೆ ನಾನು ಬಲಿಷ್ಠನಾಗಿದ್ದೇನೆ’ ಎಂದುಕೊಂಡೆನು.
 
21 “ಆ ದಿನಗಳಲ್ಲಿ ಜನರು ನನಗೆ ಕಿವಿಗೊಡುತ್ತಿದ್ದರು;
ನನ್ನ ಆಲೋಚನೆಯನ್ನು ಕೇಳಲು ಮೌನದಿಂದ ಕಾದುಕೊಂಡಿರುತ್ತಿದ್ದರು.
22 ನನ್ನ ಮಾತುಗಳು ಪರಿಪೂರ್ಣವಾಗಿದ್ದ ಕಾರಣ ಅದಕ್ಕೆ ಬೇರೇನೂ ಸೇರಿಸಲು ಅವರಿಗೆ ಸಾಧ್ಯವಿರಲಿಲ್ಲ.
ನನ್ನ ಮಾತುಗಳು ಅವರ ಕಿವಿಗಳಿಗೆ ಕೋಮಲವಾಗಿದ್ದವು.
23 ಮಳೆಗಾಗಿಯೋ ಎಂಬಂತೆ ಅವರು ನನ್ನ ಮಾತುಗಳಿಗಾಗಿ ಎದುರುನೋಡುತ್ತಿದ್ದರು.
ವಸಂತ ಕಾಲದಲ್ಲಿ ಬೀಳುವ ಮಳೆಯ ನೀರನ್ನೋ ಎಂಬಂತೆ ಅವರು ನನ್ನ ಮಾತುಗಳನ್ನು ಕುಡಿಯುತ್ತಿದ್ದರು.
24 ನಾನು ಅವರನ್ನು ಕಂಡು ಮುಗುಳ್ನಗೆ ಬೀರಿದಾಗ ಅವರಿಗೆ ನಂಬುವುದಕ್ಕೇ ಆಗುತ್ತಿರಲಿಲ್ಲ.
ನನ್ನ ಸಂತೋಷದ ಮುಖವು ಅವರನ್ನು ಪ್ರೋತ್ಸಾಹಗೊಳಿಸಿತು.
25 ನಾನು ನಾಯಕನಾಗಿದ್ದರೂ ಅವರೊಂದಿಗೇ ಇರುತ್ತಿದ್ದೆನು;
ಪಾಳೆಯದಲ್ಲಿ ಸೈನ್ಯಗಳೊಂದಿಗಿರುವ ರಾಜನಂತೆ ನಾನು ದುಃಖಿತರನ್ನು ಆದರಿಸುತ್ತಿದ್ದೆನು.