17
ಆಮೇಲೆ ಮನಸ್ಸೆ ಕುಲದವರಿಗೆ ಭೂಮಿಯನ್ನು ಕೊಡಲಾಯಿತು. ಮನಸ್ಸೆಯು ಯೋಸೇಫನ ಚೊಚ್ಚಲ ಮಗನು. ಗಿಲ್ಯಾದನ ತಂದೆಯಾದ ಮಾಕೀರನು ಮನಸ್ಸೆಯ ಚೊಚ್ಚಲ ಮಗನು. ಮಾಕೀರನು ವೀರ ಸೈನಿಕನಾಗಿದ್ದನು. ಈ ಕಾರಣದಿಂದ ಗಿಲ್ಯಾದ್ ಮತ್ತು ಬಾಷಾನ್ ಕ್ಷೇತ್ರಗಳನ್ನು ಮಾಕೀರ ಮನೆತನದವರಿಗೆ ಕೊಡಲಾಯಿತು. ಮನಸ್ಸೆ ಕುಲದ ಅಬೀಯೆಜೆರ್, ಹೇಲೆಕ್, ಅಸ್ರೀಯೇಲ್, ಶೆಕೆಮ್, ಹೇಫೇರ್, ಶೆಮೀದಾ ಎಂಬವರ ವಂಶದವರಿಗೂ ಭೂಮಿಯನ್ನು ಕೊಡಲಾಯಿತು. ಇವರೆಲ್ಲರು ಯೋಸೇಫನ ಮಗನಾದ ಮನಸ್ಸೆಯ ಉಳಿದ ಗಂಡುಮಕ್ಕಳು. ಈ ಜನರ ವಂಶದವರೂ ತಮ್ಮ ಪಾಲಿನ ಭೂಮಿಯನ್ನು ಪಡೆದುಕೊಂಡರು.
ಚಲ್ಪಹಾದನು ಹೇಫೆರನ ಮಗನು, ಹೇಫೆರನು ಗಿಲ್ಯಾದನ ಮಗನು, ಗಿಲ್ಯಾದನು ಮಾಕೀರನ ಮಗನು. ಮಾಕೀರನು ಮನಸ್ಸೆಯ ಮಗನು. ಚಲ್ಪಹಾದನಿಗೆ ಗಂಡುಮಕ್ಕಳಿರಲಿಲ್ಲ. ಆದರೆ ಅವನಿಗೆ ಐದು ಜನ ಹೆಣ್ಣುಮಕ್ಕಳಿದ್ದರು. ಅವರ ಹೆಸರುಗಳು: ಮಹ್ಲಾ, ನೋಹಾ, ಹೊಗ್ಲಾ, ಮಿಲ್ಕಾ ಮತ್ತು ತಿರ್ಚಾ. ಆ ಹೆಣ್ಣುಮಕ್ಕಳು ಯಾಜಕನಾದ ಎಲ್ಲಾಜಾರ್, ನೂನನ ಮಗನಾದ ಯೆಹೋಶುವ ಮತ್ತು ಇಸ್ರೇಲರ ನಾಯಕರ ಹತ್ತಿರ ಹೋಗಿ, “ಗಂಡುಮಕ್ಕಳಿಗೆ ಕೊಟ್ಟ ಹಾಗೆ ನಮಗೂ ಭೂಮಿಯನ್ನು ಕೊಡಬೇಕೆಂದು ಯೆಹೋವನು ಮೋಶೆಗೆ ಹೇಳಿದ್ದಾನೆ” ಅಂದರು. ಎಲ್ಲಾಜಾರನು ಯೆಹೋವನ ಆಜ್ಞೆಯನ್ನು ಪಾಲಿಸಿ ಆ ಹೆಣ್ಣುಮಕ್ಕಳಿಗೆ ಸ್ವಲ್ಪ ಭೂಮಿಯನ್ನು ಕೊಟ್ಟನು. ಹೀಗೆ ಈ ಹೆಣ್ಣಮಕ್ಕಳು ಗಂಡುಮಕ್ಕಳಂತೆಯೇ ಭೂಮಿಯನ್ನು ಪಡೆದರು.
ಮನಸ್ಸೆ ಕುಲದವರು ಜೋರ್ಡನ್ ನದಿಯ ಪಶ್ಚಿಮದಲ್ಲಿ ಹತ್ತು ಭೂಭಾಗಗಳನ್ನು ಮತ್ತು ಆ ನದಿಯ ಮತ್ತೊಂದು ದಿಕ್ಕಿನಲ್ಲಿ ಗಿಲ್ಯಾದ್ ಮತ್ತು ಬಾಷಾನ್ ಎಂಬ ಮತ್ತೆರಡು ಭೂಭಾಗಗಳನ್ನು ಪಡೆದುಕೊಂಡರು. ಮನಸ್ಸೆಯ ಹೆಣ್ಣುಮಕ್ಕಳು ಗಂಡುಮಕ್ಕಳಂತೆಯೇ ಭೂಮಿಯನ್ನು ಪಡೆದರು. ಗಿಲ್ಯಾದ್ ಪ್ರದೇಶವನ್ನು ಮನಸ್ಸೆ ಕುಲದ ಉಳಿದ ಕುಟುಂಬಗಳಿಗೆ ಕೊಡಲಾಯಿತು.
ಮನಸ್ಸೆ ಕುಲದವರ ಪ್ರದೇಶಗಳು ಆಶೇರ್ ಮತ್ತು ಶೆಕಮಿನ ಹತ್ತಿರವಿದ್ದ ಮಿಕ್ಮೆತಾತಿನ ಮಧ್ಯದಲ್ಲಿ ಬರುತ್ತವೆ. ಅದರ ಸೀಮೆಯು ದಕ್ಷಿಣದಲ್ಲಿ ಎನ್‌ತಪ್ಪೂಹ ಪ್ರದೇಶಕ್ಕೆ ಮುಟ್ಟುತ್ತದೆ. ಎನ್‌ತಪ್ಪೂಹದ ಸುತ್ತಮುತ್ತಲಿನ ಭೂಮಿ ಮನಸ್ಸೆಕುಲದವರ ಸ್ವತ್ತಾಗಿದ್ದರೂ ಆ ಊರು ಮಾತ್ರ ಅವರ ಅಧೀನದಲ್ಲಿರಲಿಲ್ಲ. ಎನ್‌ತಪ್ಪೂಹ ಎಂಬ ಊರು ಮನಸ್ಸೆ ಕುಲದವರ ಪ್ರಾಂತ್ಯದ ಸೀಮೆಯಲ್ಲಿದ್ದರೂ ಅದು ಎಫ್ರಾಯೀಮ್ ಜನರ ಸ್ವಾಸ್ತ್ಯದಲ್ಲಿತ್ತು. ಮನಸ್ಸೆ ಪ್ರಾಂತ್ಯದ ಸೀಮೆ ದಕ್ಷಿಣದಲ್ಲಿ ಕಾನಾ ನದಿಯವರೆಗೆ ಹೋಗುತ್ತದೆ. ಈ ಕ್ಷೇತ್ರ ಮನಸ್ಸೆ ಕುಲದವರ ಸ್ವಾಸ್ತ್ಯದಲ್ಲಿದ್ದರೂ ಪಟ್ಟಣಗಳು ಎಫ್ರಾಯೀಮ್ ಜನರ ಸ್ವಾಸ್ತ್ಯದಲ್ಲಿದ್ದವು. ಮನಸ್ಸೆ ಪ್ರಾಂತ್ಯದ ಸೀಮೆಯು ನದಿಯ ಉತ್ತರದಿಕ್ಕಿನಿಂದ ಪಶ್ಚಿಮದಲ್ಲಿ ಮೆಡಿಟರೆನಿಯನ್ ಸಮುದ್ರದವರೆಗೆ ಮುಂದುವರೆದಿದೆ. 10 ದಕ್ಷಿಣದ ಭೂಮಿ ಎಫ್ರಾಯೀಮ್ ಜನರಿಗೆ ಸೇರಿದೆ. ಉತ್ತರದ ಭೂಮಿ ಮನಸ್ಸೆಯ ಜನರಿಗೆ ಸೇರಿದೆ. ಮೆಡಿಟರೆನಿಯನ್ ಸಮುದ್ರವು ಅದರ ಪಶ್ಚಿಮದ ಗಡಿಯಾಗಿತ್ತು. ಅದರ ಸೀಮೆಯು ಉತ್ತರದಲ್ಲಿ ಆಶೇರ್ ಕುಲದವರ ಪ್ರಾಂತ್ಯವನ್ನೂ ಪೂರ್ವದಲ್ಲಿ ಇಸ್ಸಾಕಾರ್ ಕುಲದವರ ನಾಡನ್ನೂ ಮುಟ್ಟುತ್ತದೆ.
11 ಮನಸ್ಸೆ ಕುಲದವರು ಇಸ್ಸಾಕಾರ್, ಆಶೇರ್ ಪ್ರಾಂತಗಳಲ್ಲಿಯೂ ಕೆಲವು ಊರುಗಳನ್ನು ಹೊಂದಿದ್ದರು. ಬೇತ್‌ಷೆಯಾನ್, ಇಬ್ಲೆಯಾಮ್ ಮತ್ತು ಅವುಗಳ ಸುತ್ತಮುತ್ತಲಿನ ಸಣ್ಣ ಊರುಗಳು ಮನಸ್ಸೆಯ ಜನರ ಅಧೀನದಲ್ಲಿದ್ದವು. ಮನಸ್ಸೆಯ ಜನರು ದೋರ್, ಎಂದೋರ್, ತಾನಕ್, ಮೆಗಿದ್ದೋ ಮತ್ತು ಆ ಪಟ್ಟಣಗಳ ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ವಾಸವಾಗಿದ್ದರು. ಅವರು ನಾಫೊತ್‌ನ ಮೂರು ಊರುಗಳಲ್ಲಿಯೂ ಇದ್ದರು. 12 ಮನಸ್ಸೆ ಕುಲದವರಿಗೆ ಆ ಪಟ್ಟಣಗಳಲ್ಲಿದ್ದ ಜನರನ್ನು ಹೊರಡಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಕಾನಾನ್ಯರು ಅಲ್ಲಿಯೇ ನೆಲೆಸಿದರು. 13 ಆದರೆ ಸ್ವಲ್ಪ ಕಾಲದ ನಂತರ ಇಸ್ರೇಲರು ಬಲಶಾಲಿಗಳಾಗಿ ಕಾನಾನ್ಯರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ಆದರೆ ಅವರನ್ನು ಅಲ್ಲಿಂದ ಹೊರಗಟ್ಟಲಿಲ್ಲ.
14 ಯೋಸೇಫನ ವಂಶಸ್ಥರು ಯೆಹೋಶುವನೊಂದಿಗೆ ಮಾತನಾಡಿ, “ನೀನು ನಮಗೆ ಸ್ವಾಸ್ತ್ಯದ ಒಂದು ಕ್ಷೇತ್ರವನ್ನು ಮಾತ್ರ ಕೊಟ್ಟಿರುವೆ. ಆದರೆ ನಾವು ಬಹಳ ಜನರಿದ್ದೇವೆ. ಯೆಹೋವನು ತನ್ನ ಜನರಿಗೆ ಕೊಟ್ಟ ಈ ದೇಶದಲ್ಲಿ ನೀನು ನಮಗೆ ಕೇವಲ ಒಂದು ಭಾಗವನ್ನು ಮಾತ್ರ ಏಕೆ ಕೊಟ್ಟೆ?” ಎಂದು ಕೇಳಿದರು.
15 ಯೆಹೋಶುವನು, “ನಿಮ್ಮಲ್ಲಿ ಬಹಳ ಜನರಿದ್ದರೆ ಬೆಟ್ಟಪ್ರದೇಶಕ್ಕೆ ಹೋಗಿ ಆ ಭೂಮಿಯನ್ನು ತೆಗೆದುಕೊಳ್ಳಿರಿ. ಆ ಭೂಮಿಯು ಈಗ ಪೆರಿಜ್ಜೀಯರ ಮತ್ತು ರೆಫಾಯರ ಸ್ವತ್ತಾಗಿದೆ. ನಿಮಗೆ ಕೊಟ್ಟಿರುವ ಎಫ್ರಾಯೀಮ್ ಬೆಟ್ಟಪ್ರದೇಶವು ಚಿಕ್ಕದೆನಿಸಿದರೆ ಹೋಗಿ ಆ ಭೂಮಿಯನ್ನು ತೆಗೆದುಕೊಳ್ಳಿರಿ” ಎಂದನು.
16 ಯೋಸೇಫನ ಜನರು, “ಎಫ್ರಾಯೀಮ್ ಬೆಟ್ಟಪ್ರದೇಶವು ನಮಗೆ ಸಾಕಾಗುವುದಿಲ್ಲ ಎಂಬುದೇನೋ ನಿಜ. ಆದರೆ ಅಲ್ಲಿ ವಾಸಮಾಡುವ ಕಾನಾನ್ಯರಲ್ಲಿ ಬಲವಾದ ಆಯುಧಗಳಿವೆ; ಕಬ್ಬಿಣದ ರಥಗಳಿವೆ. ಇಜ್ರೇಲ್, ಬೇತ್‌ಷೆಯಾನ್ ಕಣಿವೆಗಳು ಮತ್ತು ಆ ಕ್ಷೇತ್ರದ ಎಲ್ಲ ಸಣ್ಣ ಹಳ್ಳಿಗಳು ಅವರ ಅಧೀನದಲ್ಲಿವೆ” ಎಂದರು.
17 ಆಗ ಯೆಹೋಶುವನು ಯೋಸೇಫನ ಮನೆತನದವರಾದ ಎಫ್ರಾಯೀಮನ ಮತ್ತು ಮನಸ್ಸೆಯ ಜನರಿಗೆ, “ನೀವು ಬಹಳಷ್ಟು ಜನರಿದ್ದೀರಿ. ನೀವು ಬಹಳ ಶಕ್ತಿಶಾಲಿಗಳಾಗಿದ್ದೀರಿ. ಆದ್ದರಿಂದ ನೀವು ದೇಶದ ಒಂದು ಪಾಲಿಗಿಂತಲೂ ಹೆಚ್ಚು ಪಡೆಯಬೇಕು. 18 ನೀವು ಬೆಟ್ಟಪ್ರದೇಶವನ್ನು ತೆಗೆದುಕೊಳ್ಳಿರಿ. ಅದೊಂದು ಕಾಡು. ಆದರೆ ನೀವು ಆ ಮರಗಳನ್ನು ಕಡಿದುಹಾಕಿ ಅದನ್ನು ವಾಸಿಸಲು ಒಳ್ಳೆಯ ಸ್ಥಳವನ್ನಾಗಿ ಮಾಡಿಕೊಳ್ಳಬಹುದು. ನೀವು ಆ ಪ್ರದೇಶವನ್ನೆಲ್ಲಾ ನಿಮ್ಮ ಸ್ವತ್ತನ್ನಾಗಿ ಮಾಡಿಕೊಳ್ಳಿರಿ. ಆ ಪ್ರದೇಶವನ್ನು ಬಿಟ್ಟುಹೋಗುವಂತೆ ಕಾನಾನ್ಯರನ್ನು ಒತ್ತಾಯಿಸಿರಿ. ಅವರು ಶಕ್ತಿಯುತರಾಗಿದ್ದರೂ ಅವರ ಬಳಿ ಬಲವಾದ ಆಯುಧಗಳಿದ್ದರೂ ನೀವು ಅವರನ್ನು ಸೋಲಿಸುವಿರಿ” ಎಂದು ಹೇಳಿದನು.