22
ದೇವರಾದ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಆರೋನನಿಗೂ ಅವನ ಪುತ್ರರಿಗೂ ಹೀಗೆ ಹೇಳು: ಇಸ್ರೇಲರು ನನಗೆ ಕಾಣಿಕೆಗಳನ್ನು ಸಮರ್ಪಿಸುವರು. ಅವು ಪರಿಶುದ್ಧವಾದವುಗಳು. ಅವು ನನ್ನವು, ಆದ್ದರಿಂದ ಯಾಜಕರಾದ ನೀವು ಅವುಗಳನ್ನು ತೆಗೆದುಕೊಳ್ಳಬಾರದು. ನೀವು ಆ ಪರಿಶುದ್ಧ ವಸ್ತುಗಳನ್ನು ಉಪಯೋಗಿಸಿದರೆ, ನನ್ನ ಪರಿಶುದ್ಧ ಹೆಸರಿಗೆ ಅವಮಾನವಾಗುವುದು. ನಾನೇ ಯೆಹೋವನು! ನಿಮ್ಮ ಸಂತತಿಯವರೆಲ್ಲರಲ್ಲಿ ಯಾವನಾದರೂ ಅಪವಿತ್ರನಾಗಿರುವಾಗ ಅವುಗಳನ್ನು ಮುಟ್ಟಿದರೆ, ಅವನನ್ನು ನನ್ನ ಸನ್ನಿಧಿ ಸೇವೆಯಿಂದ ತೆಗೆದುಹಾಕಬೇಕು! ಇಸ್ರೇಲರು ಅವುಗಳನ್ನು ನನಗೆ ಕೊಟ್ಟಿದ್ದಾರೆ. ನಾನೇ ಯೆಹೋವನು!
“ಆರೋನನ ಸಂತತಿಯವರಲ್ಲಿ ಯಾವನಿಗಾದರೂ ಕೆಟ್ಟದಾದ ಚರ್ಮರೋಗವಾಗಲಿ ಸ್ರಾವವಾಗಲಿ ಇದ್ದರೆ, ಅವನು ಶುದ್ಧನಾಗುವವರೆಗೆ ದೇವರಿಗೆ ನೈವೇದ್ಯವಾದ ಪದಾರ್ಥಗಳನ್ನು ತಿನ್ನಬಾರದು. ಅಶುದ್ಧನಾಗುವ ಪ್ರತಿ ಯಾಜಕನಿಗೂ ಈ ನಿಯಮ ಅನ್ವಯಿಸುತ್ತದೆ. ಆ ಯಾಜಕನು ಹೆಣವನ್ನು ಮುಟ್ಟಿದರೆ, ವೀರ್ಯಸ್ಖಲನ ಮಾಡಿಕೊಂಡರೆ, ಯಾವುದೇ ಅಶುದ್ಧವಾದ ಹರಿದಾಡುವ ಜಂತುಗಳನ್ನು ಮುಟ್ಟಿದರೆ, ಅಶುದ್ಧನಾದ ವ್ಯಕ್ತಿಯನ್ನು ಮುಟ್ಟಿದರೆ ಅಶುದ್ಧನಾಗುವನು. ಯಾವುದು ಅವನನ್ನು ಅಶುದ್ಧಪಡಿಸಿತು ಎಂಬುದು ಪ್ರಾಮುಖ್ಯವಲ್ಲ. ಒಬ್ಬನು ಅವುಗಳಲ್ಲಿ ಯಾವುದನ್ನು ಮುಟ್ಟಿದರೂ ಸಾಯಂಕಾಲದವರೆಗೆ ಅಶುದ್ಧನಾಗುವನು. ಅವನು ನೈವೇದ್ಯ ಪದಾರ್ಥಗಳಲ್ಲಿ ಯಾವುದನ್ನೂ ತಿನ್ನಬಾರದು. ಅವನು ತನ್ನನ್ನು ನೀರಿನಿಂದ ತೊಳೆದುಕೊಂಡರೂ ಪವಿತ್ರ ಪದಾರ್ಥವನ್ನು ತಿನ್ನಬಾರದು.* ಪವಿತ್ರ … ತಿನ್ನಬಾರದು ಅಥವಾ “ಅವನು ತನ್ನನ್ನು ನೀರಿನಿಂದ ತೊಳೆದುಕೊಂಡ ನಂತರ ಪವಿತ್ರ ಆಹಾರವನ್ನು ತಿನ್ನಬಹುದು.” ಸೂರ್ಯನು ಮುಳುಗಿದ ನಂತರವೇ ಅವನು ಶುದ್ಧನಾಗುವನು. ಬಳಿಕ ಅವನು ನೈವೇದ್ಯ ಪದಾರ್ಥವನ್ನು ತಿನ್ನಬಹುದು. ಯಾಕೆಂದರೆ ಆ ಪದಾರ್ಥವು ಅವನ ಪಾಲಾಗುತ್ತದೆ.
“ಯಾಜಕನು ಸತ್ತ ಪ್ರಾಣಿಯನ್ನಾಗಲಿ ಕ್ರೂರ ಪ್ರಾಣಿಗಳಿಂದ ಕೊಲ್ಲಲ್ಪಟ್ಟ ಪ್ರಾಣಿಯನ್ನಾಗಲಿ ತಿನ್ನಬಾರದು. ಅವನು ಅದನ್ನು ತಿಂದರೆ ಅಶುದ್ಧನಾಗುವನು. ನಾನೇ ಯೆಹೋವನು!
“ಯಾಜಕರು ನನ್ನ ಅಗತ್ಯತೆಗಳನ್ನು ಎಚ್ಚರಿಕೆಯಿಂದ ಪೂರೈಸಿದರೆ ಅಪರಾಧಕ್ಕೆ ಒಳಗಾಗುವುದಿಲ್ಲ. ಅವರು ಪವಿತ್ರವಾದವುಗಳನ್ನು ಅಪವಿತ್ರಗೊಳಿಸಿದರೆ ಸಾಯುವರು. ಯೆಹೋವನಾದ ನಾನೇ ಅವರನ್ನು ಪರಿಶುದ್ಧರನ್ನಾಗಿ ಮಾಡಿದ್ದೇನೆ ಮತ್ತು ಈ ವಿಶೇಷ ಸೇವೆಗಾಗಿ ಪ್ರತ್ಯೇಕಿಸಿದ್ದೇನೆ. 10 ಯಾಜಕರ ಕುಟುಂಬದ ಜನರು ಮಾತ್ರವೇ ನೈವೇದ್ಯ ಪದಾರ್ಥಗಳನ್ನು ತಿನ್ನಬಹುದು. ಯಾಜಕನೊಂದಿಗೆ ಇಳಿದುಕೊಂಡವನಾಗಲಿ ಕೂಲಿಯಾಳಾಗಲಿ ನೈವೇದ್ಯ ಪದಾರ್ಥಗಳಲ್ಲಿ ಯಾವುದನ್ನೂ ತಿನ್ನಬಾರದು. 11 ಆದರೆ ಯಾಜಕನು ತನ್ನ ಸ್ವಂತ ಹಣದಿಂದ ಒಬ್ಬನನ್ನು ಗುಲಾಮನನ್ನಾಗಿ ಕೊಂಡುಕೊಂಡರೆ, ಆ ಗುಲಾಮನು ನೈವೇದ್ಯ ಪದಾರ್ಥಗಳಲ್ಲಿ ಕೆಲವನ್ನು ತಿನ್ನಬಹುದು. ಯಾಜಕನ ಮನೆಯಲ್ಲಿ ಹುಟ್ಟಿದ ಗುಲಾಮರು ಸಹ ಯಾಜಕನ ಆಹಾರದಲ್ಲಿ ಕೆಲವನ್ನು ತಿನ್ನಬಹುದು. 12 ಯಾಜಕನ ಮಗಳು ಯಾಜಕನಲ್ಲದವನನ್ನು ಮದುವೆಯಾದರೆ ಅವಳು ನೈವೇದ್ಯ ಸಮರ್ಪಣೆಗಳಲ್ಲಿ ಯಾವುದನ್ನೂ ತಿನ್ನಬಾರದು. 13 ಯಾಜಕನ ಮಗಳು ವಿಧವೆಯಾಗಿದ್ದರೆ ಅಥವಾ ಗಂಡ ಬಿಟ್ಟವಳಾಗಿದ್ದರೆ ಅಲ್ಲದೆ ಅವಳಿಗೆ ಆಧಾರ ನೀಡುವಂಥ ಮಕ್ಕಳೂ ಇಲ್ಲದಿದ್ದರೆ ಮತ್ತು ಅವಳು ತನ್ನ ತಂದೆಯ ಮನೆಗೆ ಹಿಂತಿರುಗಿ ಹೋದರೆ, ಆಗ ಅವಳು ತಂದೆಯ ಆಹಾರದಲ್ಲಿ ಸ್ವಲ್ಪ ತಿನ್ನಬಹುದು. ಆದರೆ ಯಾಜಕನ ಕುಟುಂಬದವರು ಮಾತ್ರವೇ ಈ ಆಹಾರವನ್ನು ತಿನ್ನಬಹುದು.
14 “ಒಬ್ಬನು ತಿಳಿಯದೆ ನೈವೇದ್ಯ ಪದಾರ್ಥವನ್ನು ತಿಂದರೆ ಅವನು ಆ ಪದಾರ್ಥವನ್ನೂ ಪದಾರ್ಥದ ಬೆಲೆಯ ಐದನೆಯ ಒಂದಂಶವನ್ನೂ ಅದಕ್ಕೆ ಸೇರಿಸಿ ಯಾಜಕನಿಗೆ ಕೊಡಬೇಕು.
15 “ಇಸ್ರೇಲರು ಯೆಹೋವನಿಗೆ ಕೊಡುವ ಕಾಣಿಕೆಗಳು ಪರಿಶುದ್ಧವಾಗಿವೆ. ಆದ್ದರಿಂದ ಯಾಜಕರು ಆ ಪರಿಶುದ್ಧ ವಸ್ತುಗಳನ್ನು ಅಶುದ್ಧಮಾಡಬಾರದು. 16 ಯಾಜಕರು ಅವುಗಳನ್ನು ಪರಿಶುದ್ಧವಾದವುಗಳೆಂದು ಪರಿಗಣಿಸದೆ ನೈವೇದ್ಯ ಪದಾರ್ಥಗಳನ್ನು ತಿಂದರೆ ಪಾಪಕ್ಕೆ ಒಳಗಾಗುವರು. ಯೆಹೋವನಾದ ನಾನೇ ಅವುಗಳನ್ನು ಪವಿತ್ರಗೊಳಿಸಿದ್ದೇನೆ.”
17 ಯೆಹೋವನು ಮೋಶೆಗೆ ಹೀಗೆಂದನು: 18 “ಆರೋನನಿಗೆ, ಅವನ ಪುತ್ರರಿಗೆ ಮತ್ತು ಇಸ್ರೇಲರೆಲ್ಲರಿಗೆ ಹೀಗೆ ಹೇಳು: ಒಂದುವೇಳೆ ಇಸ್ರೇಲನಾಗಲಿ ಅಥವಾ ಪರದೇಶಸ್ಥನಾಗಲಿ ಹರಕೆಯಾಗಿ ಅಥವಾ ಕಾಣಿಕೆಯಾಗಿ ಸರ್ವಾಂಗಹೋಮ ಮಾಡುವಾಗ, 19-20 ಅದು ಸ್ವೀಕೃತವಾಗುವಂತೆ ಪೂರ್ಣಾಂಗವಾದ ಹೋರಿಯನ್ನಾಗಲಿ ಟಗರನ್ನಾಗಲಿ ಹೋತವನ್ನಾಗಲಿ ಅರ್ಪಿಸಬೇಕು. ಅಂಗದೋಷವುಳ್ಳ ಯಾವುದನ್ನೂ ನೀವು ಸಮರ್ಪಿಸಬಾರದು. ಅಂಗದೋಷವುಳ್ಳವುಗಳನ್ನು ನಾನು ಸ್ವೀಕರಿಸುವುದಿಲ್ಲ.
21 “ಒಬ್ಬನು ಸಮಾಧಾನಯಜ್ಞವನ್ನು ಹರಕೆಯಾಗಿ ಅಥವಾ ಕಾಣಿಕೆಯಾಗಿ ಅರ್ಪಿಸುವಾಗ ಹೋರಿಯನ್ನಾಗಲಿ ಟಗರನ್ನಾಗಲಿ ಅರ್ಪಿಸಬೇಕು; ಅದು ಅಂಗದೋಷವಿಲ್ಲದ್ದಾಗಿರಬೇಕು; ಆರೋಗ್ಯವುಳ್ಳದ್ದಾಗಿರಬೇಕು. ಆಗ ಅದು ಸ್ವೀಕೃತವಾಗುವುದು. 22 ಕುರುಡಾದದ್ದನ್ನಾಗಲಿ ಮೂಳೆ ಮುರಿದುಕೊಂಡದ್ದನ್ನಾಗಲಿ ಕುಂಟಾದದ್ದನ್ನಾಗಲಿ ಸ್ರಾವವುಳ್ಳದ್ದನ್ನಾಗಲಿ ಕೆಟ್ಟದಾದ ಚರ್ಮರೋಗವುಳ್ಳದ್ದನ್ನಾಗಲಿ ನೀವು ಯೆಹೋವನಿಗೆ ಅರ್ಪಿಸಬಾರದು. ಯೆಹೋವನ ಯಜ್ಞವೇದಿಕೆಯ ಬೆಂಕಿಯಲ್ಲಿ ಅನಾರೋಗ್ಯವಾದ ಪ್ರಾಣಿಗಳನ್ನು ಅರ್ಪಿಸಬಾರದು.
23 “ಕಾಲು ಉದ್ದವಾಗಿರುವ ಅಥವಾ ಮೊಂಡಾಗಿರುವ ಹೋರಿಯನ್ನಾಗಲಿ ಕುರಿಯನ್ನಾಗಲಿ ಒಬ್ಬನು ಯೆಹೋವನಿಗೆ ಕಾಣಿಕೆಯಾಗಿ ಕೊಡಲು ಬಯಸಿದರೆ, ಆಗ ಅದು ಸ್ವೀಕೃತವಾಗುವುದು. ಆದರೆ, ಅವನು ಮಾಡಿದ ವಿಶೇಷ ಹರಕೆಯಾಗಿ ಅದು ಸ್ವೀಕೃತವಾಗುವುದಿಲ್ಲ. ಅದು ಸ್ವಇಚ್ಛೆಯಿಂದ ಅರ್ಪಿಸಿದ ಕಾಣಿಕೆಯಾಗಿ ಸ್ವೀಕರಿಸಲ್ಪಡುವುದು.
24 “ಗಾಯಗೊಂಡ, ಜಜ್ಜಿದ ಅಥವಾ ಒಡೆದ ಬೀಜವುಳ್ಳ ಪಶುವನ್ನು ಯೆಹೋವನಿಗೆ ಅರ್ಪಿಸಬಾರದು. ಇದನ್ನು ನಿಮ್ಮ ಸ್ವಂತ ನಾಡಿನಲ್ಲಿ ಮಾಡಬಾರದು.
25 “ಪರದೇಶಸ್ಥರಿಂದ ಯೆಹೋವನಿಗೆ ಬಲಿಪಶುಗಳನ್ನು ತೆಗೆದುಕೊಳ್ಳಬಾರದು. ಯಾಕೆಂದರೆ ಆ ಪಶುಗಳಿಗೆ ಒಂದುವೇಳೆ ಪೆಟ್ಟಾಗಿರಬಹುದು. ಅವುಗಳಲ್ಲಿ ಏನಾದರೂ ದೋಷವಿರಬಹುದು. ಅವುಗಳು ಸಮರ್ಪಕವಾಗುವುದಿಲ್ಲ.”
26 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 27 “ಕರುವಾಗಲಿ ಕುರಿಮರಿಯಾಗಲಿ ಅಥವಾ ಆಡಾಗಲಿ ಹುಟ್ಟಿದ ಬಳಿಕ ತನ್ನ ತಾಯಿಯೊಂದಿಗೆ ಏಳು ದಿನಗಳವರೆಗೆ ಇರಲೇಬೇಕು. ಎಂಟನೆಯ ದಿನದಲ್ಲಿ ಮತ್ತು ಅದರ ನಂತರ, ಆ ಪಶುವು ಸರ್ವಾಂಗಹೋಮಕ್ಕೆ ಯೋಗ್ಯವಾಗಿರುತ್ತದೆ. 28 ಆದರೆ ನೀವು ಆ ಪಶುವನ್ನೂ ಅದರ ತಾಯಿಯನ್ನೂ ಒಂದೇ ದಿನದಲ್ಲಿ ವಧಿಸಬಾರದು. ಇದೇ ನಿಯಮ ದನಗಳಿಗೂ ಕುರಿಗಳಿಗೂ ಅನ್ವಯಿಸುತ್ತದೆ.
29 “ಯೆಹೋವನಿಗೆ ವಿಶೇಷ ಕೃತಜ್ಞತಾ ಕಾಣಿಕೆಯನ್ನು ಅರ್ಪಿಸಲು ಬಯಸಿದರೆ, ಆ ಕಾಣಿಕೆಯನ್ನು ಯೆಹೋವನಿಗೆ ಮೆಚ್ಚಿಕೆಯಾದ ರೀತಿಯಲ್ಲಿ ಅರ್ಪಿಸಬೇಕು. 30 ನೀವು ಇಡೀ ಪಶುವನ್ನು ಅದೇ ದಿನದಲ್ಲಿ ತಿನ್ನಬೇಕು. ಮರುದಿನ ಮುಂಜಾನೆಯವರೆಗೆ ಮಾಂಸದಲ್ಲಿ ಸ್ವಲ್ಪವನ್ನೂ ಉಳಿಸಬಾರದು. ನಾನೇ ಯೆಹೋವನು!
31 “ನನ್ನ ಆಜ್ಞೆಗಳನ್ನು ಜ್ಞಾಪಕ ಮಾಡಿಕೊಂಡು ಅವುಗಳಿಗೆ ವಿಧೇಯರಾಗಿರಿ. ನಾನೇ ಯೆಹೋವನು! 32 ನನ್ನ ಪವಿತ್ರ ನಾಮವನ್ನು ಗೌರವಿಸಬೇಕು. ನಾನು ಇಸ್ರೇಲರಿಗೆ ಬಹಳ ವಿಶೇಷವಾದವನಾಗಿರಬೇಕು. ಯೆಹೋವನಾದ ನಾನು ನಿಮ್ಮನ್ನು ನನ್ನ ವಿಶೇಷ ಜನರನ್ನಾಗಿ ಮಾಡಿದ್ದೇನೆ. 33 ನಿಮ್ಮ ದೇವರಾಗಿರುವುದಕ್ಕಾಗಿ ನಾನು ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದೆನು. ನಾನೇ ಯೆಹೋವನು!”

*22:6: ಪವಿತ್ರ … ತಿನ್ನಬಾರದು ಅಥವಾ “ಅವನು ತನ್ನನ್ನು ನೀರಿನಿಂದ ತೊಳೆದುಕೊಂಡ ನಂತರ ಪವಿತ್ರ ಆಹಾರವನ್ನು ತಿನ್ನಬಹುದು.”