11
ಪ್ರಾರ್ಥನೆಯ ಕುರಿತು ಯೇಸುವಿನ ಉಪದೇಶ
(ಮತ್ತಾಯ 6:9-15)
ಒಮ್ಮೆ ಯೇಸು ಒಂದು ಸ್ಥಳದಲ್ಲಿ ಪ್ರಾರ್ಥಿಸುತ್ತಿದ್ದನು. ಯೇಸು ಪ್ರಾರ್ಥನೆ ಮಾಡಿ ಮುಗಿಸಿದಾಗ, ಆತನ ಶಿಷ್ಯರಲ್ಲೊಬ್ಬನು, “ಪ್ರಭುವೇ, ಯೋಹಾನನು ತನ್ನ ಶಿಷ್ಯರಿಗೆ ಪ್ರಾರ್ಥಿಸುವ ವಿಧಾನವನ್ನು ಕಲಿಸಿದಂತೆ, ದಯಮಾಡಿ ನಮಗೂ ಪ್ರಾರ್ಥಿಸುವ ವಿಧಾನವನ್ನು ಹೇಳಿಕೊಡು” ಎಂದನು.
ಯೇಸು ಅವರಿಗೆ ಹೀಗೆಂದನು: “ನೀವು ಹೀಗೆ ಪ್ರಾರ್ಥಿಸಿರಿ:
 
‘ತಂದೆಯೇ, ನಿನ್ನ ನಾಮವು ಯಾವಾಗಲೂ ಪರಿಶುದ್ಧವಾಗಿರಲಿ.
ನಿನ್ನ ರಾಜ್ಯವು ಬರಲಿ.
ನಮ್ಮ ಅನುದಿನದ ಆಹಾರವನ್ನು ನಮಗೆ ದಯಪಾಲಿಸು.
ನಮಗೆ ತಪ್ಪುಮಾಡಿದವರನ್ನು ನಾವು ಕ್ಷಮಿಸುವಂತೆ
ನಮ್ಮಪಾಪಗಳನ್ನೂ ಕ್ಷಮಿಸು.
ನಮ್ಮನ್ನು ಶೋಧನೆಗೆ ಒಳಪಡಿಸಬೇಡ.’ ”
ಎಡಬಿಡದೆ ಪ್ರಾರ್ಥಿಸಿ
(ಮತ್ತಾಯ 7:7-11)
5-6 ಆಗ ಯೇಸು ಅವರಿಗೆ, “ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನೊಬ್ಬನ ಮನೆಗೆ ರಾತ್ರಿ ಬಹಳ ತಡವಾಗಿ ಹೋಗಿದ್ದಾನೆ ಎಂದು ಭಾವಿಸಿಕೊಳ್ಳೋಣ. ಅವನು ತನ್ನ ಸ್ನೇಹಿತನಿಗೆ, ‘ನನ್ನ ಗೆಳೆಯನೊಬ್ಬನು ನನ್ನನ್ನು ನೋಡಲು ದೂರದಿಂದ ನಮ್ಮ ಮನೆಗೆ ಬಂದಿದ್ದಾನೆ. ಆದರೆ ಅವನಿಗೆ ಊಟಕ್ಕೆ ಕೊಡಲು ನನಲ್ಲಿ ಏನೂ ಇಲ್ಲ. ದಯಮಾಡಿ ನನಗೆ ಮೂರು ರೊಟ್ಟಿಗಳನ್ನು ಕೊಡು’ ಎಂದು ಕೇಳುತ್ತಾನೆ. ಮನೆಯೊಳಗಿರುವ ಸ್ನೇಹಿತನು, ‘ಹೊರಟುಹೋಗು! ನನಗೆ ತೊಂದರೆ ಕೊಡಬೇಡ! ಬಾಗಿಲು ಮುಚ್ಚಿದೆ! ನಾನು ಮತ್ತು ನನ್ನ ಮಕ್ಕಳು ಮಲಗಿದ್ದೇವೆ. ಈಗ ಎದ್ದು ನಿನಗೆ ರೊಟ್ಟಿ ಕೊಡಲಾರೆ’ ಎಂದು ಉತ್ತರಕೊಡುತ್ತಾನೆ. ಕೇವಲ ಸ್ನೇಹವೊಂದೇ ಅವನನ್ನು ಏಳಿಸಿ ರೊಟ್ಟಿ ಕೊಡುವಂತೆ ಮಾಡಲಾರದೆಂದು ನಾನು ನಿಮಗೆ ಹೇಳುತ್ತೇನೆ. ಆದರೆ ಅವನು ಎಡಬಿಡದೆ ಕೇಳುತ್ತಲೇ ಇದ್ದರೆ, ಅವನು ಎದ್ದು ತನ್ನ ಸ್ನೇಹಿತನಿಗೆ ಬೇಕಾಗಿರುವ ರೊಟ್ಟಿಯನ್ನು ಖಂಡಿತವಾಗಿ ಕೊಡುವನು. ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ಬೇಡಿಕೊಳ್ಳಿರಿ, ನಿಮಗೆ ದೊರೆಯುವುದು. ಹುಡುಕಿರಿ, ಆಗ ನೀವು ಕಂಡುಕೊಳ್ಳುವಿರಿ. ತಟ್ಟಿರಿ, ಆಗ ನಿಮಗೆ ಬಾಗಿಲು ತೆರೆಯುವುದು. 10 ಹೌದು, ಎಡಬಿಡದೆ ಬೇಡಿಕೊಳ್ಳುವವನಿಗೆ ದೊರೆಯುವುದು. ಎಡಬಿಡದೆ ಹುಡುಕುವವನು ಕಂಡುಕೊಳ್ಳುವನು. ಒಬ್ಬನು ಎಡಬಿಡದೆ ತಟ್ಟುತ್ತಿದ್ದರೆ, ಅವನಿಗೆ ಬಾಗಿಲು ತೆರೆಯಲ್ಪಡುವುದು. 11 ನಿಮ್ಮಲ್ಲಿ ಎಷ್ಟು ಜನರು ತಂದೆಗಳಾಗಿದ್ದೀರಿ? ನಿಮ್ಮ ಮಗನು ಮೀನನ್ನು ಕೇಳಿದರೆ, ನೀವು ಅವನಿಗೆ ಹಾವನ್ನು ಕೊಡುವಿರೋ? ಇಲ್ಲ! ನೀವು ಮೀನನ್ನೇ ಕೊಡುತ್ತೀರಿ. 12 ನಿಮ್ಮ ಮಗನು ಮೊಟ್ಟೆಯನ್ನು ಕೇಳಿದರೆ, ನೀವು ಅವನಿಗೆ ಚೇಳನ್ನು ಕೊಡುವಿರೋ? ಇಲ್ಲ! 13 ನೀವು ಇತರ ಜನರಂತೆ ಕೆಟ್ಟವರಾಗಿದ್ದೀರಿ. ಆದರೆ ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡುತ್ತೀರಿ. ಅದೇ ರೀತಿಯಲ್ಲಿ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ತನ್ನನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮನನ್ನು ಖಂಡಿತವಾಗಿ ಕೊಡುತ್ತಾನೆ” ಎಂದು ಹೇಳಿದನು.
ಯೇಸುವಿನ ಶಕ್ತಿ ದೇವರಿಂದ ಬಂದದ್ದು
(ಮತ್ತಾಯ 12:22-30; ಮಾರ್ಕ 3:20-27)
14 ಒಮ್ಮೆ ಯೇಸು ಮೂಕದೆವ್ವದಿಂದ ಪೀಡಿತನಾಗಿದ್ದ ಒಬ್ಬನನ್ನು ಬಿಡಿಸುತ್ತಿದ್ದನು. ಆ ದೆವ್ವವು ಅವನನ್ನು ಬಿಟ್ಟು ಹೊರಗೆ ಬಂದಾಗ ಅವನು ಮಾತಾಡಿದನು. ಇದನ್ನು ಕಂಡ ಜನರು ಬೆರಗಾದರು. 15 ಆದರೆ ಕೆಲವರು, “ದೆವ್ವದಿಂದ ಪೀಡಿತರಾಗಿರುವವರನ್ನು ಇವನು ಬೆಲ್ಜೆಬೂಲನ ಶಕ್ತಿಯಿಂದ ಬಿಡಿಸುತ್ತಾನೆ. ಬೆಲ್ಜೆಬೂಲನು ದೆವ್ವಗಳ ಅಧಿಪತಿ” ಎಂದು ಹೇಳಿದರು.
16 ಇತರ ಜನರು ಯೇಸುವನ್ನು ಪರೀಕ್ಷಿಸಬೇಕೆಂದು ದೇವರಿಂದ ಒಂದು ಸೂಚಕಕಾರ್ಯವನ್ನು ನಮಗೆ ತೋರಿಸು ಎಂದು ಕೇಳಿದರು. 17 ಆದರೆ ಅವರ ಆಲೋಚನೆಯನ್ನು ತಿಳಿದಿದ್ದ ಯೇಸು ಅವರಿಗೆ, “ಒಡೆದುಹೋದ ಮತ್ತು ತನಗೆ ವಿರುದ್ಧವಾಗಿ ತಾನೇ ಕಾದಾಡುವ ರಾಜ್ಯವು ನಾಶವಾಗುವುದು. ಭೇದಭಾವದಿಂದ ಕೂಡಿರುವ ಕುಟುಂಬವು ಮುರಿದು ಹೋಗುವುದು. 18 ಅಂತೆಯೇ, ಸೈತಾನನು ತನಗೆ ವಿರುದ್ಧವಾಗಿ ತಾನೇ ಕಾದಾಡಿದರೆ ಅವನ ರಾಜ್ಯವು ಮುಂದುವರಿಯಲು ಹೇಗೆ ಸಾಧ್ಯ? ನಾನು ದೆವ್ವಗಳನ್ನು ಬೆಲ್ಜೆಬೂಲನ ಶಕ್ತಿಯಿಂದ ಬಿಡಿಸುತ್ತೇನೆಂದು ನೀವು ಹೇಳುತ್ತೀರಿ. 19 ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾಗಿದ್ದರೆ, ನಿಮ್ಮ ಜನರು ದೆವ್ವಗಳನ್ನು ಯಾವ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನಿಮ್ಮ ಸ್ವಂತ ಜನರೇ ನಿಮ್ಮನು ತಪ್ಪಿತಸ್ಥರೆಂದು ಹೇಳುತ್ತಾರೆ. 20 ಆದರೆ ನಾನು ದೆವ್ವಗಳನ್ನು ದೇವರ ಬಲದಿಂದ ಹೊರಡಿಸುವುದಾದರೆ ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ.
21 “ಒಬ್ಬ ಬಲಿಷ್ಠನು ಅನೇಕ ಆಯುಧಗಳಿಂದ ಸುಸಜ್ಜಿತನಾಗಿ ತನ್ನ ಮನೆಯನ್ನು ಕಾಯುತ್ತಿರುವಾಗ, ಮನೆಯೊಳಗಿರುವ ವಸ್ತುಗಳು ಸುರಕ್ಷಿತವಾಗಿರುತ್ತವೆ. 22 ಆದರೆ ಅವನಿಗಿಂತಲೂ ಬಲಿಷ್ಠನಾದ ಮತ್ತೊಬ್ಬನು ಬಂದು ಅವನನ್ನು ಸೋಲಿಸಿದರೆ, ಮೊದಲನೆಯ ಬಲಿಷ್ಠನು ತನ್ನ ಮನೆಯನ್ನು ಸುರಕ್ಷಿತವಾಗಿಡುವುದಕ್ಕಾಗಿ ಅವಲಂಬಿಸಿಕೊಂಡಿದ್ದ ಆಯುಧಗಳನ್ನೆಲ್ಲಾ ಆ ಮತ್ತೊಬ್ಬ ಬಲಿಷ್ಠನು ತೆಗೆದುಕೊಂಡು ಹೋಗುವನು. ಬಳಿಕ ಆ ಮತ್ತೊಬ್ಬ ಬಲಿಷ್ಠನು ಆ ಮನುಷ್ಯನ ವಸ್ತುಗಳನ್ನು ತನಗೆ ಇಷ್ಟಬಂದ ಹಾಗೆ ಮಾಡುವನು.
23 “ನನ್ನೊಂದಿಗಿಲ್ಲದವನು ನನಗೆ ವಿರೋಧವಾಗಿದ್ದಾನೆ. ನನ್ನೊಂದಿಗೆ ಶೇಖರಿಸದವನು ಚದರಿಸುವವನಾಗಿದ್ದಾನೆ.
ಬರಿದಾದ ಹೃದಯ
(ಮತ್ತಾಯ 12:43-45)
24 “ದೆವ್ವವು ಒಬ್ಬ ವ್ಯಕ್ತಿಯಿಂದ ಹೊರಗೆ ಬಂದ ಮೇಲೆ ವಿಶ್ರಾಂತಿಗಾಗಿ ಸ್ಥಳವನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ಅಲೆದಾಡುತ್ತದೆ. ಆದರೆ ವಿಶ್ರಮಿಸಿಕೊಳ್ಳಲು ಅದಕ್ಕೆ ಸ್ಥಳ ದೊರೆಯುವುದಿಲ್ಲ. ಆದ್ದರಿಂದ ‘ನಾನು ಬಿಟ್ಟುಬಂದ ಮನೆಗೆ (ವ್ಯಕ್ತಿ) ಹಿಂತಿರುಗುವೆನು’ ಎಂದುಕೊಳ್ಳುತ್ತದೆ. 25 ಅದು ಆ ವ್ಯಕ್ತಿಯ ಬಳಿಗೆ ಹಿಂತಿರುಗಿ ಬಂದಾಗ, ಆ ಮನೆಯನ್ನು (ವ್ಯಕ್ತಿ) ಗುಡಿಸಿ ಅಲಂಕರಿಸಿರುವುದನ್ನು ಕಾಣುತ್ತದೆ. 26 ಆಗ ಹೊರಟುಹೋಗಿ ತನಗಿಂತಲೂ ಹೆಚ್ಚು ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುತ್ತದೆ. ಬಳಿಕ ಆ ದೆವ್ವಗಳೆಲ್ಲಾ ಆ ಮನುಷ್ಯನೊಳಗೆ ಹೋಗಿ ಅಲ್ಲೇ ವಾಸಿಸುತ್ತವೆ. ಆಗ ಆ ವ್ಯಕ್ತಿಯು ಮೊದಲಿಗಿಂತಲೂ ಹೆಚ್ಚಿನ ಸಂಕಟಕ್ಕೆ ಒಳಗಾಗುತ್ತಾನೆ” ಎಂದು ಹೇಳಿದನು.
ನಿಜವಾದ ಭಾಗ್ಯವಂತರು
27 ಯೇಸು ಈ ಸಂಗತಿಗಳನ್ನು ಹೇಳಿದಾಗ, ಅಲ್ಲಿ, ಜನರೊಂದಿಗಿದ್ದ ಒಬ್ಬ ಸ್ತ್ರೀ ಯೇಸುವಿಗೆ, “ನಿನ್ನನ್ನು ಹೆತ್ತು ಪೋಷಿಸಿದ ತಾಯಿ ಭಾಗ್ಯವಂತಳೇ ಸರಿ!” ಎಂದು ಹೇಳಿದಳು.
28 ಆದರೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದಕ್ಕೆ ವಿಧೇಯರಾಗುವ ಜನರೇ ಭಾಗ್ಯವಂತರು!” ಎಂದನು.
ನಮಗೆ ಸಾಕ್ಷಿ ಕೊಡು!
(ಮತ್ತಾಯ 12:38-42; ಮಾರ್ಕ 8:12)
29 ಜನರ ಗುಂಪು ದೊಡ್ಡದಾಗುತ್ತಿರಲು ಯೇಸು ಅವರಿಗೆ, “ಈ ಸಂತತಿಯು ಕೆಟ್ಟ ಸಂತತಿಯೇ ಸರಿ! ಇದು ಸೂಚಕಕಾರ್ಯವನ್ನು ನೋಡಬೇಕೆನ್ನುತ್ತದೆ. ಆದರೆ ಯೋನನ ಜೀವಿತದಲ್ಲಾದ ಸೂಚಕಕಾರ್ಯದ ಹೊರತು ಬೇರೆ ಯಾವುದೂ ಇದಕ್ಕೆ ದೊರೆಯುವುದಿಲ್ಲ. 30 ನಿನೆವೆಯಲ್ಲಿ ಜೀವಿಸುತ್ತಿದ್ದ ಜನರಿಗೆ ಯೋನನು ಒಂದು ಸೂಚನೆಯಾಗಿದ್ದನು. ಅದೇ ರೀತಿಯಲ್ಲಿ ಈ ಕಾಲದ ಜನರಿಗೆ ಮನುಷ್ಯಕುಮಾರನು ಸೂಚನೆಯಾಗಿದ್ದಾನೆ.
31 “ನ್ಯಾಯತೀರ್ಪಿನ ದಿನದಲ್ಲಿ ದಕ್ಷಿಣ ದೇಶದ ರಾಣಿಯು ಈ ಪೀಳಿಗೆಯವರೊಂದಿಗೆ ಎದ್ದುನಿಂತು ಇವರನ್ನು ಅಪರಾಧಿಗಳೆಂದು ಹೇಳುವಳು. ಏಕೆಂದರೆ ಆ ರಾಣಿಯು ಬಹುದೂರದಿಂದ ಸೊಲೊಮೋನನ ಜ್ಞಾನಬೋಧನೆಯನ್ನು ಕೇಳಲು ಬಂದಳು. ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಾನು ಸೊಲೊಮೋನನಿಗಿಂತಲೂ ಹೆಚ್ಚಿನವನಾಗಿದ್ದೇನೆ!
32 “ನ್ಯಾಯತೀರ್ಪಿನ ದಿನದಲ್ಲಿ ನಿನೆವೆ ಪಟ್ಟಣದವರು ಈ ಸಂತತಿಗೆ ಎದುರಾಗಿ ನಿಂತು ಇವರನ್ನು ಅಪರಾಧಿಗಳೆಂದು ತೋರಿಸುವರು. ಏಕೆಂದರೆ ಅವರು ಪ್ರವಾದಿಯಾದ ಯೋನನ ಬೋಧನೆಯನ್ನು ಕೇಳಿ ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡರು. ಆದರೆ ನಾನು ಪ್ರವಾದಿ ಯೋನನಿಗಿಂತಲೂ ಹೆಚ್ಚಿನವನಾಗಿದ್ದೇನೆ.
ಲೋಕಕ್ಕೆ ಬೆಳಕಾಗಿರಿ!
(ಮತ್ತಾಯ 5:15; 6:22-23)
33 “ದೀಪವನ್ನು ಹಚ್ಚಿ ಪಾತ್ರೆಯೊಳಗಾಗಲಿ ಬೇರೆ ಎಲ್ಲೇ ಆಗಲಿ ಅಡಗಿಸಿಡುವುದಿಲ್ಲ. ಒಳಗೆ ಬರುವವರಿಗೆ ಬೆಳಕು ಕಾಣಿಸಲೆಂದು ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. 34 ನಿನ್ನ ಕಣ್ಣು ದೇಹಕ್ಕೆ ಬೆಳಕಾಗಿದೆ, ನಿನ್ನ ಕಣ್ಣು ಒಳ್ಳೆಯದಾಗಿದ್ದರೆ, ನಿನ್ನ ದೇಹವೆಲ್ಲಾ ಪೂರ್ಣ ಬೆಳಕಾಗಿರುವುದು. ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ, ನಿನ್ನ ದೇಹವೆಲ್ಲಾ ಪೂರ್ಣಕತ್ತಲಾಗಿರುವುದು. 35 ಆದ್ದರಿಂದ ಎಚ್ಚರಿಕೆಯಾಗಿರು! ನಿನ್ನೊಳಗಿರುವ ಬೆಳಕು ಕತ್ತಲಾಗದಂತೆ ನೋಡಿಕೊ. 36 ನಿನ್ನ ದೇಹವೆಲ್ಲಾ ಬೆಳಕಿನಿಂದ ತುಂಬಿದ್ದು ಯಾವ ಭಾಗದಲ್ಲಿಯೂ ಕತ್ತಲಿಲ್ಲದಿದ್ದರೆ ನೀನು ಪ್ರಜ್ವಲಿಸುವ ಬೆಳಕಿನಂತಿರುವೆ” ಎಂದು ಹೇಳಿದನು.
ಯೇಸು ಫರಿಸಾಯರನ್ನು ಖಂಡಿಸಿದನು
(ಮತ್ತಾಯ 23:1-36; ಮಾರ್ಕ 12:38-40; ಲೂಕ 20:45-47)
37 ಯೇಸು ಮಾತಾಡಿ ಮುಗಿಸಿದ ಮೇಲೆ ಫರಿಸಾಯನೊಬ್ಬನು ಯೇಸುವನ್ನು ತನ್ನ ಮನೆಗೆ ಊಟಕ್ಕೆ ಬರಬೇಕೆಂದು ಕರೆದನು. ಆದ್ದರಿಂದ ಯೇಸು ಅವನ ಮನೆಯೊಳಗೆ ಹೋಗಿ ಊಟಕ್ಕೆ ಕುಳಿತುಕೊಂಡನು. 38 ಆದರೆ ಯೇಸು ತನ್ನ ಕೈಗಳನ್ನು ತೊಳೆದುಕೊಳ್ಳದೆ ಊಟಕ್ಕೆ ಕುಳಿತಿರುವುದನ್ನು ಕಂಡಾಗ ಫರಿಸಾಯನಿಗೆ ಆಶ್ಚರ್ಯವಾಯಿತು. 39 ಪ್ರಭುವು (ಯೇಸು) ಅವನಿಗೆ ಹೇಳಿದ್ದೇನೆಂದರೆ: “ಫರಿಸಾಯರಾದ ನೀವು ಪಾತ್ರೆಯ ಮತ್ತು ಬಟ್ಟಲಿನ ಹೊರಭಾಗವನ್ನು ಶುಚಿಮಾಡುತ್ತೀರಿ. ಆದರೆ ನಿಮ್ಮ ಒಳಭಾಗವು ಮೋಸದಿಂದಲೂ ಕೆಟ್ಟತನದಿಂದಲೂ ತುಂಬಿಹೋಗಿದೆ. 40 ನೀವು ಬುದ್ಧಿಹೀನರು! ಹೊರಭಾಗವನ್ನು ಮಾಡಿದಾತನೇ (ದೇವರು) ಒಳಭಾಗವನ್ನೂ ಮಾಡಿದ್ದಾನೆ. 41 ಆದ್ದರಿಂದ ಪಾತ್ರೆ ಮತ್ತು ಬಟ್ಟಲುಗಳ ಒಳಗಿರುವುದನ್ನು ಬಡವರಿಗೆ ದಾನಮಾಡಿರಿ. ಆಗ ನೀವು ಪೂರ್ಣಶುದ್ಧರಾಗುತ್ತೀರಿ.
42 “ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ದೇವರಿಗೆ ನಿಮ್ಮಲ್ಲಿರುವ ಪ್ರತಿಯೊಂದರಲ್ಲಿಯೂ ಹತ್ತನೆಯ ಒಂದು ಭಾಗವನ್ನು ಕೊಡುತ್ತೀರಿ. ನಿಮ್ಮ ತೋಟದಲ್ಲಿ ಬೆಳೆಯುವ ಮರುಗ, ಸದಾಪು ಮುಂತಾದ ಚಿಕ್ಕ ಸಸಿಗಳಲ್ಲಿಯೂ ಹತ್ತನೆಯ ಒಂದು ಭಾಗವನ್ನು ಕೊಡುತ್ತೀರಿ. ಆದರೆ ಬೇರೆಯವರಿಗೆ ನ್ಯಾಯತೋರಿಸುವುದನ್ನೂ ದೇವರನ್ನು ಪ್ರೀತಿಸುವುದನ್ನೂ ಮರೆತುಬಿಟ್ಟಿದ್ದೀರಿ. ನೀವು ಮೊದಲು ಇವುಗಳನ್ನು ಮಾಡಬೇಕು ಮತ್ತು ಉಳಿದವುಗಳನ್ನು ಕಡೆಗಣಿಸಬಾರದು.
43 “ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಸಭಾಮಂದಿರಗಳಲ್ಲಿ ಉನ್ನತಪೀಠಗಳನ್ನೂ ಮಾರುಕಟ್ಟೆಗಳಲ್ಲಿ ಜನರಿಂದ ಗೌರವವನ್ನೂ ಆಶಿಸುತ್ತೀರಿ. 44 ನೀವು ಮರೆಯಾಗಿರುವ ಸಮಾಧಿಗಳಂತಿದ್ದೀರಿ. ಜನರು ಸಮಾಧಿಗಳೆಂದು ತಿಳಿಯದೆ ಅವುಗಳ ಮೇಲೆ ನಡೆಯುತ್ತಾರೆ.”
ಧರ್ಮೋಪದೇಶಕನಿಗೆ ಯೇಸು ನೀಡಿದ ಉತ್ತರ
45 ಧರ್ಮೋಪದೇಶಕನೊಬ್ಬನು ಯೇಸುವಿಗೆ, “ಬೋಧಕನೇ, ನೀನು ಫರಿಸಾಯರ ಕುರಿತಾಗಿ ಈ ಸಂಗತಿಗಳನ್ನು ಹೇಳಿದಾಗ ನಮ್ಮನ್ನು ಸಹ ಖಂಡಿಸಿದಂತಾಯಿತು” ಎಂದು ಹೇಳಿದನು.
46 ಅದಕ್ಕೆ ಯೇಸು, “ಧರ್ಮೋಪದೇಶಕರೇ, ನಿಮ್ಮ ಗತಿಯನ್ನು ಏನು ಹೇಳಲಿ! ಜನರು ಅನುಸರಿಸಲಾಗದ ನಿಯಮಗಳನ್ನು ನೀವು ಮಾಡುತ್ತೀರಿ.* ಧರ್ಮೋಪದೇಶಕರೇ … ಮಾಡುತ್ತೀರಿ ಅಕ್ಷರಶಃ, “ನೀವು ಜನರ ಮೇಲೆ ಹೊರಲಾಗದ ಹೊರೆಗಳನ್ನು ಹೊರಿಸುತ್ತೀರಿ.” ಆ ನಿಯಮಗಳಿಗೆ ವಿಧೇಯರಾಗುವಂತೆ ಬೇರೆಯವರಿಗೆ ಬಲವಂತ ಮಾಡುತ್ತೀರಿ. ಆದರೆ ಆ ನಿಯಮಗಳಲ್ಲಿ ಒಂದನ್ನಾದರೂ ಪಾಲಿಸಲು ನೀವು ಪ್ರಯತ್ನಿಸುವುದಿಲ್ಲ. 47 ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಪ್ರವಾದಿಗಳಿಗೆ ಗೋರಿಗಳನ್ನು ಗೋರಿಗಳು ಸತ್ತುಹೋದ ಪ್ರಮುಖರ ಗೌರವಾರ್ಥವಾಗಿ ಕಟ್ಟಿದ ಚಿಕ್ಕ ಕಟ್ಟಡಗಳು. ಕಟ್ಟುತ್ತೀರಿ. ಆದರೆ ಆ ಪ್ರವಾದಿಗಳನ್ನು ಕೊಂದವರು ನಿಮ್ಮ ಪಿತೃಗಳೇ! 48 ಇದರಿಂದಾಗಿ, ನಿಮ್ಮ ಪಿತೃಗಳು ಮಾಡಿದ ಕೃತ್ಯಗಳನ್ನು ನೀವು ಒಪ್ಪಿಕೊಂಡಿದ್ದೀರೆಂಬುದನ್ನು ಎಲ್ಲಾ ಜನರಿಗೆ ತೋರಿಸುತ್ತೀರಿ. ಅವರು ಪ್ರವಾದಿಗಳನ್ನು ಕೊಂದರು. ನೀವು ಆ ಪ್ರವಾದಿಗಳಿಗಾಗಿ ಗೋರಿಗಳನ್ನು ಕಟ್ಟುತ್ತೀರಿ! 49 ಆದಕಾರಣ ದೇವರ ಜ್ಞಾನವು ಹೇಳಿದ್ದೇನೆಂದರೆ, ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸುವೆನು. ನನ್ನ ಕೆಲವು ಪ್ರವಾದಿಗಳು ಮತ್ತು ಅಪೊಸ್ತಲರು ಕೆಡುಕರಿಂದ ಹತರಾಗುವರು. ಬೇರೆ ಕೆಲವರು ಸಂಕಟಕ್ಕೆ ಗುರಿಯಾಗುವರು.’
50 “ಆದ್ದರಿಂದ ಲೋಕಾದಿಯಿಂದ ಹತರಾದ ಎಲ್ಲಾ ಪ್ರವಾದಿಗಳ ಸಾವಿಗೆ ಈ ಕಾಲದ ಜನರಾದ ನೀವು ದಂಡನೆ ಹೊಂದುವಿರಿ. 51 ಹೇಬೆಲನನ್ನು ಕೊಂದದ್ದಕ್ಕಾಗಿಯೂ ಜಕರೀಯನನ್ನು ಕೊಂದದ್ದಕ್ಕಾಗಿಯೂ ನಿಮಗೆ ದಂಡನೆಯಾಗುವುದು. ಜಕರೀಯನನ್ನು ಯಜ್ಞವೇದಿ ಮತ್ತು ದೇವಾಲಯದ ನಡುವೆ ಕೊಲ್ಲಲಾಯಿತು. ಹೌದು, ಅವರೆಲ್ಲರ ಕೊಲೆಗಳಿಗಾಗಿ ಈಗ ಜೀವಿಸುತ್ತಿರುವ ನಿಮಗೆ ದಂಡನೆ ಆಗುವುದು.
52 “ಧರ್ಮೋಪದೇಶಕರೇ, ನಿಮ್ಮ ಗತಿಯನ್ನು ಏನು ಹೇಳಲಿ! ದೇವರ ಕುರಿತಾಗಿ ಕಲಿಯಲು ಸಾಧನವಾಗಿರುವ ಬೀಗದ ಕೈಯನ್ನು ನೀವು ಬಚ್ಚಿಟ್ಟಿದ್ದೀರಿ. ನೀವೂ ಕಲಿಯುವುದಿಲ್ಲ, ಬೇರೆಯವರಿಗೂ ಕಲಿಯಲು ಬಿಡುವುದಿಲ್ಲ” ಎಂದು ಹೇಳಿದನು.
53 ಯೇಸು ಅಲ್ಲಿಂದ ಹೊರಟಾಗ ಧರ್ಮೋಪದೇಶಕರು ಮತ್ತು ಫರಿಸಾಯರು ಆತನಿಗೆ ಮತ್ತಷ್ಟು ತೊಂದರೆ ಕೊಡಲು ಪ್ರಾರಂಭಿಸಿದರು. ಅವರು ಅನೇಕ ಸಂಗತಿಗಳ ಕುರಿತು ಪ್ರಶ್ನೆಗಳನ್ನು ಕೇಳಿ, ಆತನಿಂದ ಉತ್ತರ ಹೇಳಿಸುವುದಕ್ಕೆ ಪ್ರಯತ್ನಿಸಿದರು. 54 ಯೇಸುವನ್ನು ಮಾತಿನಲ್ಲಿ ಹಿಡಿಯಬೇಕೆಂದು ಯೋಚಿಸಿ, ಆತನು ಏನಾದರೂ ತಪ್ಪು ಹೇಳುವಂತೆ ಮಾಡಲು ಪ್ರಯತ್ನಿಸುತ್ತಿದ್ದರು.

*11:46: ಧರ್ಮೋಪದೇಶಕರೇ … ಮಾಡುತ್ತೀರಿ ಅಕ್ಷರಶಃ, “ನೀವು ಜನರ ಮೇಲೆ ಹೊರಲಾಗದ ಹೊರೆಗಳನ್ನು ಹೊರಿಸುತ್ತೀರಿ.”

11:47: ಗೋರಿಗಳು ಸತ್ತುಹೋದ ಪ್ರಮುಖರ ಗೌರವಾರ್ಥವಾಗಿ ಕಟ್ಟಿದ ಚಿಕ್ಕ ಕಟ್ಟಡಗಳು.