12
ದೇವರ ಮಗನ ಆಗಮನ
(ಮತ್ತಾಯ 21:33-46; ಲೂಕ 20:9-19)
ಯೇಸು ಜನರಿಗೆ ಸಾಮ್ಯಗಳ ಮೂಲಕ ಉಪದೇಶಿಸುತ್ತಾ ಅವರಿಗೆ ಹೇಳಿದ್ದೇನೆಂದರೆ: “ಒಬ್ಬನು ದ್ರಾಕ್ಷಿಯ ತೋಟವನ್ನು ಮಾಡಿ, ಸುತ್ತಲೂ ಗೋಡೆ ಹಾಕಿಸಿ, ದ್ರಾಕ್ಷಾರಸವನ್ನು ತೆಗೆಯಲು ಅಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದನು. ಅವನು ಕೆಲವು ರೈತರಿಗೆ ತೋಟವನ್ನು ಗುತ್ತಿಗೆಗೆ ಕೊಟ್ಟು ಪ್ರವಾಸಕ್ಕೆ ಹೊರಟನು.
“ತರುವಾಯ ಫಲಕಾಲವು ಬಂದಾಗ ತನ್ನ ಪಾಲಿನ ದ್ರಾಕ್ಷಿಯನ್ನು ತರುವುದಕ್ಕಾಗಿ ಒಬ್ಬ ಸೇವಕನನ್ನು ಕಳುಹಿಸಿದನು. ಆದರೆ ರೈತರು ಆ ಸೇವಕನನ್ನು ಹಿಡಿದುಕೊಂಡು ಹೊಡೆದು ಏನನ್ನೂ ಕೊಡದೆ ಅವನನ್ನು ಕಳುಹಿಸಿಬಿಟ್ಟರು. ಆಗ ಯಜಮಾನನು ಮತ್ತೊಬ್ಬ ಸೇವಕನನ್ನು ರೈತರ ಬಳಿಗೆ ಕಳುಹಿಸಿದನು. ರೈತರು ಅವನಿಗೂ ತಲೆಯ ಮೇಲೆ ಹೊಡೆದು ಅವಮಾನ ಮಾಡಿದರು. ಆದ್ದರಿಂದ ಯಜಮಾನನು ಮತ್ತೊಬ್ಬ ಸೇವಕನನ್ನು ಕಳುಹಿಸಿದನು. ರೈತರು ಈ ಸೇವಕನನ್ನು ಕೊಂದುಹಾಕಿದರು. ಆ ಯಜಮಾನನು ಇತರ ಅನೇಕ ಸೇವಕರನ್ನು ರೈತರ ಬಳಿಗೆ ಕಳುಹಿಸಿದನು. ರೈತರು ಕೆಲವು ಸೇವಕರನ್ನು ಹೊಡೆದರು, ಕೆಲವರನ್ನು ಕೊಂದುಹಾಕಿದರು.
“ಆ ಯಜಮಾನನಿಗೆ ರೈತರ ಬಳಿಗೆ ಕಳುಹಿಸಲು ಪ್ರಿಯ ಮಗನೊಬ್ಬನೇ ಉಳಿದಿದ್ದನು. ಅವನು ಕಳುಹಿಸಬಹುದಾದ ಕೊನೆಯ ವ್ಯಕ್ತಿ ಅವನ ಸ್ವಂತ ಮಗನಾಗಿದ್ದನು. ‘ರೈತರು ನನ್ನ ಮಗನಿಗೆ ಗೌರವ ಕೊಡುತ್ತಾರೆ’ ಎಂದುಕೊಂಡು ಯಜಮಾನನು ಅವನನ್ನೇ ಕಳುಹಿಸಿದನು.
“ಆದರೆ ರೈತರು ಒಬ್ಬರಿಗೊಬ್ಬರು, ‘ಇವನು ಯಜಮಾನನ ಮಗನು. ಈ ದ್ರಾಕ್ಷಿತೋಟದ ಹಕ್ಕುದಾರ. ನಾವು ಇವನನ್ನು ಕೊಂದರೆ, ದ್ರಾಕ್ಷಿತೋಟ ನಮ್ಮದಾಗುತ್ತದೆ’ ಎಂದುಕೊಂಡು, ಮಗನನ್ನು ಹಿಡಿದು ಕೊಂದುಹಾಕಿ, ದ್ರಾಕ್ಷಿತೋಟದ ಹೊರಗೆ ಎಸೆದುಬಿಟ್ಟರು.
“ಹೀಗಿರುವಾಗ ಆ ದಾಕ್ಷಿತೋಟದ ಯಜಮಾನನು ಏನು ಮಾಡುತ್ತಾನೆ? ಅವನು ತೋಟಕ್ಕೆ ಹೋಗಿ, ಆ ರೈತರನ್ನು ಕೊಂದು ತೋಟವನ್ನು ಬೇರೆ ರೈತರಿಗೆ ಒಪ್ಪಿಸಿಕೊಡುತ್ತಾನೆ. 10 ಪವಿತ್ರಗ್ರಂಥದಲ್ಲಿ ಬರೆದಿರುವಂತೆ,
 
‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.
11 ಇದು ಪ್ರಭುವಿನಿಂದ ಆಯಿತು. ಇದು ನಮಗೆ ಆಶ್ಚರ್ಯವಾಗಿ ತೋರುತ್ತದೆ.’ ” ಕೀರ್ತನೆ. 118:22-23
 
12 ಯೇಸು ಹೇಳಿದ ಈ ಸಾಮ್ಯವನ್ನು ಯೆಹೂದ್ಯನಾಯಕರು ಕೇಳಿ ತಮ್ಮನ್ನು ಕುರಿತಾಗಿಯೇ ಇದನ್ನು ಹೇಳಿದನೆಂದು ತಿಳಿದುಕೊಂಡು ಯೇಸುವನ್ನು ಬಂಧಿಸಲು ಪ್ರಯತ್ನಿಸಿದರೂ ಜನರಿಗೆ ಹೆದರಿಕೊಂಡು ಆತನನ್ನು ಬಿಟ್ಟುಹೋದರು.
ಯೇಸುವನ್ನು ವಂಚಿಸಲು ಯೆಹೂದ್ಯನಾಯಕರ ಪ್ರಯತ್ನ
(ಮತ್ತಾಯ 22:15-22; ಲೂಕ 20:20-26)
13 ಅನಂತರ ಯೆಹೂದ್ಯನಾಯಕರು ಕೆಲವು ಫರಿಸಾಯರನ್ನು ಹಾಗೂ ಹೆರೋದ್ಯರ ಗುಂಪಿನಿಂದ ಕೆಲವರನ್ನು ಯೇಸುವಿನ ಮಾತಿನಲ್ಲಿ ಏನಾದರೂ ತಪ್ಪು ಕಂಡುಹಿಡಿಯಲು ಕಳುಹಿಸಿದರು. 14 ಫರಿಸಾಯರು ಮತ್ತು ಹೆರೋದ್ಯರು ಯೇಸುವಿನ ಬಳಿಗೆ ಬಂದು, ಆತನಿಗೆ, “ಉಪದೇಶಕನೇ, ನೀನು ಯಥಾರ್ಥನೆಂಬುದು ನಮಗೆ ತಿಳಿದಿದೆ. ನಿನ್ನ ಬಗ್ಗೆ ಜನರು ಏನು ಯೋಚಿಸುತ್ತಾರೆಂಬುದರ ಬಗ್ಗೆ ನಿನಗೆ ಹೆದರಿಕೆಯಿಲ್ಲ. ಜನರೆಲ್ಲರೂ ನಿನಗೆ ಒಂದೇ. ಮತ್ತು ನೀನು ದೇವರ ಮಾರ್ಗವನ್ನು ಕುರಿತು ಸತ್ಯವನ್ನೇ ಉಪದೇಶಿಸುತ್ತಿರುವೆ ಎಂದು ನಮಗೆ ಗೊತ್ತಿದೆ. ಆದ್ದರಿಂದ ನಮಗೆ ಹೇಳು: ಸೀಸರನಿಗೆ ತೆರಿಗೆ ಕೊಡುವುದು ಸರಿಯೋ? ಅಥವಾ ತಪ್ಪೋ? ನಾವು ತೆರಿಗೆಗಳನ್ನು ಕೊಡಬೇಕೇ ಅಥವಾ ಕೊಡಬಾರದೇ?” ಎಂದರು.
15 ಈ ಜನರು ನಿಜವಾಗಿಯೂ ತನ್ನನ್ನು ವಂಚಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಅವರಿಗೆ, “ನನ್ನ ಮಾತಿನಲ್ಲಿ ತಪ್ಪನ್ನು ಕಂಡುಹಿಡಿಯಲು ಏಕೆ ಪ್ರಯತ್ನಿಸುತ್ತೀರಿ? ನನಗೆ ಒಂದು ಬೆಳ್ಳಿನಾಣ್ಯವನ್ನು* ಬೆಳ್ಳಿನಾಣ್ಯ ಮೂಲಭಾಷೆಯಲ್ಲಿ ದಿನಾರಿ. ರೋಮ್ ಸಾಮ್ರಾಜ್ಯದ ಬೆಳ್ಳಿನಾಣ್ಯ. ಕೊಡಿರಿ, ನಾನು ಅದನ್ನು ನೋಡಬೇಕು” ಎಂದನು. 16 ಅವರು ಆತನಿಗೆ ಒಂದು ನಾಣ್ಯವನ್ನು ಕೊಟ್ಟರು. ಯೇಸು ಅವರಿಗೆ, “ನಾಣ್ಯದ ಮೇಲೆ ಯಾರ ಚಿತ್ರವಿದೆ? ಮತ್ತು ಅದರ ಮೇಲೆ ಯಾರ ಹೆಸರಿದೆ?” ಎಂದು ಕೇಳಿದನು. ಅವರು, “ಇದು ಸೀಸರನ ಚಿತ್ರ ಮತ್ತು ಸೀಸರನ ಹೆಸರು” ಎಂದು ಉತ್ತರಿಸಿದರು.
17 ಆಗ ಯೇಸು ಅವರಿಗೆ, “ಸೀಸರನದನ್ನು ಸೀಸರನಿಗೆ ಕೊಡಿ. ದೇವರದನ್ನು ದೇವರಿಗೆ ಕೊಡಿ” ಎಂದು ಹೇಳಿದನು. ಯೇಸು ಹೇಳಿದ್ದನ್ನು ಕೇಳಿ ಅವರು ಅತ್ಯಾಶ್ಚರ್ಯಪಟ್ಟರು.
ಯೇಸುವನ್ನು ವಂಚಿಸಲು ಸದ್ದುಕಾಯರ ಪ್ರಯತ್ನ
(ಮತ್ತಾಯ 22:23-33; ಲೂಕ 20:27-40)
18 ನಂತರ ಸದ್ದುಕಾಯರಲ್ಲಿ (ಸದ್ದುಕಾಯರು ಪುನರುತ್ಥಾನವಿಲ್ಲವೆಂದು ನಂಬುತ್ತಾರೆ.) ಕೆಲವರು ಯೇಸುವಿನ ಬಳಿಗೆ ಬಂದು, 19 “ಉಪದೇಶಕನೇ, ವಿವಾಹಿತನೊಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ಸಹೋದರನು ಮದುವೆ ಮಾಡಿಕೊಂಡು ಸತ್ತುಹೋದ ಸಹೋದರನಿಗಾಗಿ ಸಂತಾನ ಪಡೆಯಬೇಕೆಂದು ಮೋಶೆಯು ಬರೆದಿದ್ದಾನೆ. 20 ಏಳು ಜನ ಸಹೋದರರಿದ್ದರು. ಮೊದಲನೆಯ ಸಹೋದರನು ಮದುವೆ ಮಾಡಿಕೊಂಡು ಮಕ್ಕಳಿಲ್ಲದೆ ಸತ್ತುಹೋದನು. 21 ಆದ್ದರಿಂದ ಎರಡನೆಯ ಸಹೋದರನು ಆಕೆಯನ್ನು ಮದುವೆಯಾದನು. ಆದರೆ ಅವನೂ ಮಕ್ಕಳಿಲ್ಲದೆ ಸತ್ತುಹೋದನು. ಮೂರನೆಯ ಸಹೋದರನಿಗೂ ಹೀಗೆಯೇ ಆಯಿತು. 22 ಏಳು ಮಂದಿ ಸಹೋದರರೂ ಆಕೆಯನ್ನು ಮದುವೆಯಾಗಿ ಆಕೆಯಲ್ಲಿ ಮಕ್ಕಳಿಲ್ಲದೆ ಸತ್ತುಹೋದರು. ಕೊನೆಗೆ ಆಕೆಯೂ ಸತ್ತುಹೋದಳು. 23 ಹೀಗಿರಲು ಜನರು ಪುನರುತ್ಥಾನ ಹೊಂದಿದಾಗ ಆಕೆಯು ಯಾರ ಹೆಂಡತಿಯಾಗುವಳು?” ಎಂದರು.
24 ಯೇಸು, “ನೀವು ಇಂಥಾ ತಪ್ಪನ್ನು ಮಾಡುವುದೇಕೆ? ಪವಿತ್ರಗ್ರಂಥವಾಗಲಿ, ದೇವರ ಶಕ್ತಿಯಾಗಲಿ ನಿಮಗೆ ಗೊತ್ತಿಲ್ಲ. 25 ಸತ್ತ ಜನರು ಪುನರುತ್ಥಾನ ಹೊಂದಿದಾಗ ಸ್ತ್ರೀಯರು ಮತ್ತು ಪುರುಷರು ಮದುವೆ ಮಾಡಿಕೊಳ್ಳುವುದೂ ಇಲ್ಲ. ತಮ್ಮ ಮಕ್ಕಳಿಗೂ ಮದುವೆ ಮಾಡಿಸುವುದೂ ಇಲ್ಲ. ಅವರೆಲ್ಲರೂ ಪರಲೋಕದಲ್ಲಿರುವ ದೇವದೂತರಂತಿರುತ್ತಾರೆ. 26 ಸತ್ತಜನರ ಪುನರುತ್ಥಾನದ ಬಗ್ಗೆ ದೇವರು ಹೇಳಿರುವುದನ್ನು ನೀವು ಖಂಡಿತವಾಗಿ ಓದಿದ್ದೀರಿ. ದೇವರು ಮೋಶೆಗೆ, ‘ನಾನೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’ ಉಲ್ಲೇಖನ: ವಿಮೋಚನ. 3:6. ಎಂದು ಹೇಳಿದ್ದನ್ನು ಮೋಶೆಯ ಪುಸ್ತಕದಲ್ಲಿರುವ ಉರಿಯುವ ಪೊದೆಯ ಅಧ್ಯಾಯದಲ್ಲಿ ಕಾಣಬಹುದು. 27 ದೇವರು ತನ್ನನ್ನು ಅಬ್ರಹಾಮನ, ಇಸಾಕನ, ಯಾಕೋಬನ ದೇವರು ಎಂದು ಹೇಳಿಕೊಂಡಿರುವುದರಿಂದ ಇವರು ನಿಜವಾಗಿಯೂ ಸತ್ತಿಲ್ಲ. ಏಕೆಂದರೆ, ದೇವರು ಜೀವಿತರಿಗೆ ದೇವರಾಗಿದ್ದಾನೆಯೇ ಹೊರತು ಸತ್ತವರಿಗೆ ಅಲ್ಲ.” ದೇವರು … ಅಲ್ಲ ಇಲ್ಲಿ ಇದರರ್ಥ: ಅಬ್ರಹಾಮ, ಇಸಾಕ, ಯಾಕೋಬ ಇನ್ನೂ ಜೀವಂತವಾಗಿದ್ದಾರೆ. ಸದ್ದುಕಾಯರಾದ ನೀವು ತಪ್ಪಾಗಿ ತಿಳಿದುಕೊಂಡಿದ್ದೀರಿ!” ಎಂದು ಉತ್ತರಿಸಿದನು.
ಅತ್ಯಂತ ಮುಖ್ಯ ಆಜ್ಞೆ ಯಾವುದು?
(ಮತ್ತಾಯ 22:34-40; ಲೂಕ 10:25-28)
28 ಈ ವಾದವಿವಾದವನ್ನು ಕೇಳುತ್ತಿದ್ದ ಧರ್ಮೋಪದೇಶಕರಲ್ಲಿ ಒಬ್ಬನು ಯೇಸು ಸದ್ದುಕಾಯರಿಗೆ ಹಾಗೂ ಫರಿಸಾಯರಿಗೆ ಒಳ್ಳೆಯ ಉತ್ತರ ಕೊಟ್ಟದ್ದನ್ನು ಗಮನಿಸಿ, ಆತನ ಬಳಿಗೆ ಬಂದು, “ಆಜ್ಞೆಗಳಲ್ಲೆಲ್ಲಾ ಅತ್ಯಂತ ಮುಖ್ಯವಾದ ಆಜ್ಞೆ ಯಾವುದು?” ಎಂದು ಕೇಳಿದನು.
29 ಅದಕ್ಕೆ ಯೇಸು, “ಇಸ್ರೇಲಿನ ಜನರೇ ಕೇಳಿರಿ, ‘ನಮ್ಮ ದೇವರಾದ ಪ್ರಭುವೊಬ್ಬನೇ ದೇವರು. 30 ನಿಮ್ಮ ದೇವರಾದ ಪ್ರಭುವನ್ನು ನೀವು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.’ ಉಲ್ಲೇಖನ: ಧರ್ಮೋಪದೇಶ. 6:4-5. ಇದೇ ಅತ್ಯಂತ ಮುಖ್ಯವಾದ ಆಜ್ಞೆ. 31 ‘ನೀವು ನಿಮ್ಮನ್ನು ಪ್ರೀತಿಸುವಂತೆ ನಿಮ್ಮ ನೆರೆಯವರನ್ನು ಪ್ರೀತಿಸಬೇಕು’ ಉಲ್ಲೇಖನ: ಯಾಜಕ. 19:18. ಎಂಬುದೇ ಅತ್ಯಂತ ಮುಖ್ಯವಾದ ಎರಡನೇ ಆಜ್ಞೆ. ಇವುಗಳೇ ಅತ್ಯಂತ ಮುಖ್ಯವಾದವು” ಎಂದು ಹೇಳಿದನು.
32 ಆಗ ಅವನು, “ಉಪದೇಶಕನೇ, ಅದು ಒಳ್ಳೆಯ ಉತ್ತರ. ನೀನು ಸರಿಯಾಗಿ ಹೇಳಿದೆ. ದೇವರೊಬ್ಬನೇ ಪ್ರಭು. 33 ಆತನಲ್ಲದೆ ಬೇರೆ ದೇವರಿಲ್ಲ. ದೇವರನ್ನು ಪೂರ್ಣಹೃದಯದಿಂದ, ಪೂರ್ಣಬುದ್ಧಿಯಿಂದ ಹಾಗೂ ಪೂರ್ಣಶಕ್ತಿಯಿಂದ ಪ್ರೀತಿಸಬೇಕು ಮತ್ತು ಒಬ್ಬ ವ್ಯಕ್ತಿಯು ತನ್ನನ್ನು ಪ್ರೀತಿಸುವಂತೆಯೇ ಇತರರನ್ನೂ ಪ್ರೀತಿಸಬೇಕು. ನಾವು ದೇವರಿಗೆ ಅರ್ಪಿಸುವ ಪಶುಯಜ್ಞಗಳಿಗಿಂತಲೂ ಈ ಆಜ್ಞೆಗಳು ಹೆಚ್ಚು ಮುಖ್ಯವಾಗಿವೆ” ಎಂದು ಉತ್ತರಿಸಿದನು.
34 ಅವನ ಬುದ್ಧಿವಂತಿಕೆಯ ಉತ್ತರವನ್ನು ಕೇಳಿದ ಯೇಸು, “ನೀನು ದೇವರ ರಾಜ್ಯಕ್ಕೆ ಹತ್ತಿರವಾಗಿರುವೆ” ಎಂದನು. ಅಂದಿನಿಂದ, ಯೇಸುವಿಗೆ ಹೆಚ್ಚು ಪ್ರಶೆಗಳನ್ನು ಕೇಳಲು ಯಾರಿಗೂ ಸಾಕಷ್ಟು ಧೈರ್ಯ ಬರಲಿಲ್ಲ.
ಮೆಸ್ಸೀಯನು ದಾವೀದನ ಮಗನೋ ಅಥವಾ ದಾವೀದನ ಪ್ರಭುವೋ?
(ಮತ್ತಾಯ 22:41-46; ಲೂಕ 20:41-44)
35 ಯೇಸು ದೇವಾಲಯದಲ್ಲಿ ಉಪದೇಶಿಸುತ್ತಿದ್ದಾಗ ಆತನು ಅವರಿಗೆ, “ಕ್ರಿಸ್ತನು ದಾವೀದನ ಮಗನೆಂದು ಧರ್ಮೋಪದೇಶಕರು ಹೇಳುವುದೇಕೆ?
 
36 ‘ಪ್ರಭುವು ನನ್ನ ಪ್ರಭುವಿಗೆ,
ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ
ನನ್ನ ಬಲಗಡೆಯಲ್ಲಿ ನನ್ನೊಂದಿಗೆ ಕುಳಿತುಕೊಂಡಿರು’ ಕೀರ್ತನೆ. 110:1
 
ಎಂದು ಹೇಳಿದ್ದಾನೆ ಎಂಬುದಾಗಿ ದಾವೀದನೇ ಪವಿತ್ರಾತ್ಮ ಪ್ರೇರಣೆಯಿಂದ ಬರೆದಿದ್ದಾನಲ್ಲಾ! 37 ದಾವೀದನೇ ಕ್ರಿಸ್ತನನ್ನು ‘ಪ್ರಭು’ ಎಂದು ಕರೆದಿರುವಾಗ ಕ್ರಿಸ್ತನು ದಾವೀದನ ಮಗನಾಗುವುದು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದನು. ಯೇಸುವಿನ ಮಾತನ್ನು ಕೇಳಿ, ಅನೇಕ ಜನರು ಬಹಳ ಸಂತೋಷಪಟ್ಟರು.
ಯೇಸು ಧರ್ಮೋಪದೇಶಕರನ್ನು ಖಂಡಿಸಿದ್ದು
(ಮತ್ತಾಯ 23:1-36; ಲೂಕ 20:45-47)
38 ಯೇಸು ತನ್ನ ಉಪದೇಶವನ್ನು ಮುಂದುವರಿಸಿ, “ಧರ್ಮೋಪದೇಶಕರ ಬಗ್ಗೆ ಎಚ್ಚರಿಕೆಯಿಂದಿರಿ! ಅವರು ನಿಲುವಂಗಿಗಳನ್ನು ಧರಿಸಿಕೊಂಡು ತಿರುಗಾಡುತ್ತಾರೆ. ಅವರು ಪೇಟೆಬೀದಿಗಳಲ್ಲಿ ಜನರಿಂದ ಗೌರವ ಪಡೆಯಲು ಅಪೇಕ್ಷಿಸುತ್ತಾರೆ. 39 ಸಭಾಮಂದಿರಗಳಲ್ಲಿ ಮತ್ತು ಔತಣಗಳಲ್ಲಿ ಉನ್ನತ ಆಸನಗಳನ್ನು ಬಯಸುತ್ತಾರೆ. 40 ಅವರು ವಿಧವೆಯರ ಆಸ್ತಿಯನ್ನು ಕಸಿದುಕೊಳ್ಳುತ್ತಾರೆ. ಉದ್ದುದ್ದ ಪ್ರಾರ್ಥನೆಗಳನ್ನು ಮಾಡುವುದರ ಮೂಲಕ ತಮ್ಮನ್ನು ತಾವೇ ಒಳ್ಳೆಯವರೆಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ದೇವರು ಈ ಜನರನ್ನು ಕಠಿಣವಾಗಿ ಶಿಕ್ಷಿಸುತ್ತಾನೆ” ಎಂದು ಹೇಳಿದನು.
ಬಡವಿಧವೆಯ ಕಾಣಿಕೆ
(ಲೂಕ 21:1-4)
41 ಯೇಸು ದೇವಾಲಯದಲ್ಲಿ ಕಾಣಿಕೆ ಪೆಟ್ಟಿಗೆಗಳ ಎದುರಿನಲ್ಲಿ ಕುಳಿತಿದ್ದಾಗ, ಜನರು ಪೆಟ್ಟಿಗೆಯಲ್ಲಿ ಹಣ ಹಾಕುವುದನ್ನು ಗಮನಿಸಿದನು. ಅನೇಕ ಶ್ರೀಮಂತ ಜನರು ಹೆಚ್ಚು ಹಣವನ್ನು ಕೊಟ್ಟರು. 42 ನಂತರ ಒಬ್ಬ ಬಡವಿಧವೆ ಬಂದು, ಎರಡು ತಾಮ್ರದ ನಾಣ್ಯಗಳನ್ನು ತಾಮ್ರದ ನಾಣ್ಯಗಳು ಯೆಹೂದ್ಯರ ಅತ್ಯಂತ ಸಣ್ಣ ನಾಣ್ಯ. ಅಂದರೆ ಒಂದು ಪೈಸೆಯನ್ನು ಹಾಕಿದಳು.
43 ಯೇಸು ತನ್ನ ಶಿಷ್ಯರನ್ನು ಬಳಿಗೆ ಕರೆದು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಕಾಣಿಕೆ ಹಾಕಿದವರೆಲ್ಲರಲ್ಲಿ ಈ ಬಡವಿಧವೆ ಹೆಚ್ಚು ಹಾಕಿದ್ದಾಳೆ. 44 ಉಳಿದವರಾದರೊ ತಮಗೆ ಸಾಕಾಗಿ ಉಳಿದದ್ದರಲ್ಲಿ ಸ್ವಲ್ಪ ಹಾಕಿದರು. ಈಕೆಯಾದರೊ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲ ಕೊಟ್ಟುಬಿಟ್ಟಳು. ಈಕೆಗೆ ಆ ಹಣದ ಅಗತ್ಯವಿತ್ತು” ಎಂದನು.

*12:15: ಬೆಳ್ಳಿನಾಣ್ಯ ಮೂಲಭಾಷೆಯಲ್ಲಿ ದಿನಾರಿ. ರೋಮ್ ಸಾಮ್ರಾಜ್ಯದ ಬೆಳ್ಳಿನಾಣ್ಯ.

12:26: ಉಲ್ಲೇಖನ: ವಿಮೋಚನ. 3:6.

12:27: ದೇವರು … ಅಲ್ಲ ಇಲ್ಲಿ ಇದರರ್ಥ: ಅಬ್ರಹಾಮ, ಇಸಾಕ, ಯಾಕೋಬ ಇನ್ನೂ ಜೀವಂತವಾಗಿದ್ದಾರೆ. ಸದ್ದುಕಾಯರಾದ ನೀವು ತಪ್ಪಾಗಿ ತಿಳಿದುಕೊಂಡಿದ್ದೀರಿ!” ಎಂದು ಉತ್ತರಿಸಿದನು.

12:30: ಉಲ್ಲೇಖನ: ಧರ್ಮೋಪದೇಶ. 6:4-5.

12:31: ಉಲ್ಲೇಖನ: ಯಾಜಕ. 19:18.

12:42: ತಾಮ್ರದ ನಾಣ್ಯಗಳು ಯೆಹೂದ್ಯರ ಅತ್ಯಂತ ಸಣ್ಣ ನಾಣ್ಯ.