8
ಎಜ್ರನ ಧರ್ಮಶಾಸ್ತ್ರ ಪಠಣ
ಆ ವರ್ಷದ ಏಳನೆಯ ತಿಂಗಳಲ್ಲಿ ಎಲ್ಲಾ ಇಸ್ರೇಲರು ಒಂದೇ ಮನಸ್ಸುಳ್ಳವರಾಗಿ ಕೂಡಿಬಂದರು. ಅವರು ಬುಗ್ಗೆ ಬಾಗಿಲಿನ ಮುಂದಿದ್ದ ಜಾಗದಲ್ಲಿ ಸೇರಿಬಂದರು. ಇಸ್ರೇಲರಿಗೆ ಮೋಶೆಯ ಮೂಲಕವಾಗಿ ಯೆಹೋವನು ಕೊಟ್ಟಿದ್ದ ಧರ್ಮಶಾಸ್ತ್ರವನ್ನು ಓದಲು ಜನರು ಎಜ್ರನನ್ನು ಕೇಳಿಕೊಂಡರು. ಹೀಗೆ ಆ ವರ್ಷದ ಏಳನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಎಜ್ರನು ಧರ್ಮಶಾಸ್ತ್ರವನ್ನು ಆ ಜನರ ಮುಂದೆ ತಂದನು. ಆ ಜನಸಮೂಹದಲ್ಲಿ ಧರ್ಮಶಾಸ್ತ್ರಕ್ಕೆ ಕಿವಿಗೊಟ್ಟು ಗ್ರಹಿಸಿಕೊಳ್ಳಬಲ್ಲ ಸ್ತ್ರೀಪುರುಷರಿದ್ದರು. ಎಜ್ರನು ಮುಂಜಾನೆಯಿಂದ ಹಿಡಿದು ಮಧ್ಯಾಹ್ನದವರೆಗೆ ಬುಗ್ಗೆಬಾಗಿಲಿನ ಮುಂದೆ ಇರುವ ಮೈದಾನದಲ್ಲಿ ಸೇರಿ ಬಂದಿದ್ದ ಜನರೆದುರಾಗಿ ನಿಂತು ಗಟ್ಟಿಯಾಗಿ ಧರ್ಮಶಾಸ್ತ್ರವನ್ನು ಓದಿದನು. ಎಲ್ಲಾ ಜನರು ಎಚ್ಚರಿಕೆಯಿಂದ ಕೇಳಿ ಧರ್ಮಶಾಸ್ತ್ರವನ್ನು ಗ್ರಹಿಸಿಕೊಂಡರು.
ಆ ಸಮಯಕ್ಕೋಸ್ಕರವೇ ಕಟ್ಟಿದ ಮರದ ವೇದಿಕೆಯ ಮೇಲೆ ಎಜ್ರನು ನಿಂತಿದ್ದನು. ಅವನ ಬಲಬದಿಯಲ್ಲಿ ಮತ್ತಿತ್ಯ, ಶೆಮ, ಅನಾಯ, ಊರೀಯ, ಹಿಲ್ಕೀಯ ಮತ್ತು ಮಾಸೇಯ; ಎಡಬದಿಯಲ್ಲಿ ಪೆದಾಯ, ಮಿಷಾಯೇಲ್, ಮಲ್ಕೀಯ, ಹಾಷುಮ್, ಹಷ್ಬದ್ದಾನ, ಜೆಕರ್ಯ ಮತ್ತು ಮೆಷುಲ್ಲಾಮ್ ನಿಂತಿದ್ದರು.
ಎಜ್ರನು ಎತ್ತರವಾದ ವೇದಿಕೆಯ ಮೇಲೆ ನಿಂತಿದ್ದರಿಂದ ಎಲ್ಲರೂ ಅವನನ್ನು ನೋಡಲು ಸಾಧ್ಯವಾಯಿತು. ಎಜ್ರನು ಧರ್ಮಶಾಸ್ತ್ರವನ್ನು ತೆರೆಯುವಾಗ ಎಲ್ಲಾ ಜನರು ನಿಂತರು. ಎಜ್ರನು ಮಹೋನ್ನತ ದೇವರಾದ ಯೆಹೋವನನ್ನು ಸ್ತುತಿಸಿದನು. ಆಗ ಜನರೆಲ್ಲರೂ ಕೈಗಳನ್ನೆತ್ತಿ, “ಆಮೆನ್! ಆಮೆನ್!” ಎಂದು ಹೇಳಿದರು; ತಲೆಬಾಗಿ ಯೆಹೋವನನ್ನು ಆರಾಧಿಸಿದರು.
ಅವರೆಲ್ಲಾ ನಿಂತಿರುವಾಗ ಲೇವಿಯರು ಧರ್ಮಶಾಸ್ತ್ರವನ್ನು ಅವರಿಗೆ ಓದಿತಿಳಿಸಿದರು. ಅವರು ಯಾರೆಂದರೆ: ಯೇಷೂವ, ಬಾನೀ, ಶೇರಬ್ಯ, ಯಾಮೀನ್, ಅಕ್ಕೂಬ್, ಶಬ್ಬೆತೈ, ಹೋದೀಯ, ಮಾಸೇಯ, ಕೆಲೀಟ, ಅಜರ್ಯ, ಯೋಜಾಬಾದ್, ಹಾನಾನ್ ಮತ್ತು ಪೆಲಾಯ. ಈ ಲೇವಿಯರು ಜನರಿಗೆ ಅರ್ಥವಾಗುವ ರೀತಿಯಲ್ಲಿ ದೇವರ ಧರ್ಮಶಾಸ್ತ್ರವನ್ನು ವಿವರಿಸಿ ಹೇಳಿದರು.
ಆಗ ಜನರೆಲ್ಲಾ ಅಳಲು ಪ್ರಾರಂಭಿಸಿದರು. ಆಗ ರಾಜ್ಯಪಾಲನಾದ ನೆಹೆಮೀಯನೂ ಯಾಜಕನೂ ಮತ್ತು ಉಪದೇಶಕನೂ ಆಗಿದ್ದ ಎಜ್ರನೂ ಲೇವಿಯರೂ ಎದ್ದುನಿಂತು ಜನರಿಗೆ, “ಈ ದಿನವು ನಿಮ್ಮ ದೇವರಾದ ಯೆಹೋವನಿಗೆ ವಿಶೇಷ ದಿನವಾಗಿದೆ. ಆದ್ದರಿಂದ ದುಃಖಿಸಬೇಡಿ ಮತ್ತು ಅಳಬೇಡಿರಿ” ಎಂದು ಹೇಳಿದರು.
10 “ಹೋಗಿ ಮೃಷ್ಟಾನ್ನ ಭೋಜನ ಮಾಡಿ ಸಿಹಿ ಪಾನೀಯಗಳನ್ನು ಕುಡಿಯಿರಿ. ಅಡಿಗೆ ಮಾಡದೆ ಇದ್ದವರಿಗೂ ಅವುಗಳನ್ನು ಕೊಡಿರಿ. ಈ ದಿನ ಯೆಹೋವನಿಗೆ ವಿಶೇಷ ದಿನವಾಗಿದೆ. ದುಃಖಿಸಬೇಡಿರಿ. ಯಾಕೆಂದರೆ ಯೆಹೋವನ ಸಂತೋಷವು ನಮ್ಮನ್ನು ಬಲಗೊಳಿಸುತ್ತದೆ” ಎಂದು ನೆಹೆಮೀಯನು ಜನರಿಗೆ ಹೇಳಿದನು.
11 ಲೇವಿಯರು ಜನರಿಗೆ, “ದುಃಖಿಸಬೇಡಿರಿ, ಈ ದಿನ ವಿಶೇಷ ದಿನ. ಸಮಾಧಾನ ಮಾಡಿಕೊಳ್ಳಿ” ಎಂದು ಹೇಳಿದರು.
12 ಅನಂತರ ಎಲ್ಲರೂ ವಿಶೇಷ ಊಟಕ್ಕೆ ಹೋದರು, ಅವರು ತಮ್ಮ ಆಹಾರವನ್ನು ಮತ್ತು ಪಾನೀಯವನ್ನು ಹಂಚಿಕೊಂಡರು. ಅವರೆಲ್ಲರೂ ಸಂತೋಷದಿಂದ ಆ ವಿಶೇಷ ದಿನವನ್ನು ಆಚರಿಸಿದರು, ಧರ್ಮೋಪದೇಶಕರು ಉಪದೇಶಿಸಿದ ಯೆಹೋವನ ಕಟ್ಟಳೆಗಳನ್ನು ಅವರು ಅರ್ಥಮಾಡಿಕೊಂಡರು.
13 ಆ ತಿಂಗಳ ಎರಡನೆಯ ದಿನದಲ್ಲಿ ಗೋತ್ರಪ್ರಧಾನರೂ ಯಾಜಕರೂ ಲೇವಿಯರೂ ಧರ್ಮಶಾಸ್ತ್ರವನ್ನು ಅಭ್ಯಾಸಿಸಲು ಉಪದೇಶಕನಾದ ಎಜ್ರನ ಸುತ್ತಲೂ ಸೇರಿಬಂದರು.
14-15 ಅವರು ಅಭ್ಯಾಸಿಸಿದಾಗ ಧರ್ಮಶಾಸ್ತ್ರದಲ್ಲಿ ಈ ಆಜ್ಞೆಗಳನ್ನು ಕಂಡುಕೊಂಡರು: ಏಳನೆಯ ತಿಂಗಳಲ್ಲಿ ಯೆಹೋವನ ಆಜ್ಞೆಗನುಸಾರವಾಗಿ ವಿಶೇಷ ಹಬ್ಬವನ್ನು ಆಚರಿಸಲು ಜೆರುಸಲೇಮಿನಲ್ಲಿ ಸೇರಿಬಂದು ತಾತ್ಕಾಲಿಕವಾದ ಬಿಡಾರಗಳಲ್ಲಿ ವಾಸಿಸಬೇಕು. ಅವರು ತಮ್ಮ ಊರುಗಳ ಮತ್ತು ಜೆರುಸಲೇಮಿನ, “ಬೆಟ್ಟಪ್ರದೇಶಗಳಿಗೆ ಹೋಗಿ ಆಲೀವ್, ಖರ್ಜೂರ, ಕಾಡು ಆಲೀವ್, ಸುಗಂಧ ಮುಂತಾದ ಮರಗಳ ರೆಂಬೆಗಳನ್ನು ತೆಗೆದುಕೊಂಡು ಬಂದು ಅವುಗಳಿಂದ ಆ ಬಿಡಾರಗಳನ್ನು ಮಾಡಬೇಕು” ಎಂಬುದಾಗಿ ಯೆಹೋವನು ಮೋಶೆಗೆ ಕೊಟ್ಟಿದ್ದ ಆಜ್ಞೆಗಳೇ ಅವು.
16 ಜನರು ಹೋಗಿ ರೆಂಬೆಗಳನ್ನು ತಂದು ತಮಗಾಗಿ ತಾತ್ಕಾಲಿಕ ಬಿಡಾರಗಳನ್ನು ಮಾಡಿಕೊಂಡರು. ಅವರು ಈ ಬಿಡಾರಗಳನ್ನು ತಮ್ಮ ಮನೆಯ ಮೇಲ್ಛಾವಣಿಗೆಯಲ್ಲೂ ಮನೆಯ ಅಂಗಳಗಳಲ್ಲಿಯೂ, ದೇವಾಲಯದ ಅಂಗಳದಲ್ಲಿಯೂ “ಬುಗ್ಗೆ” ಮತ್ತು “ಎಫ್ರಾಯೀಮ್” ಎಂಬ ದ್ವಾರಗಳ ಸಮೀಪದಲ್ಲಿದ್ದ ಬಯಲುಗಳಲ್ಲಿಯೂ ಹಾಕಿಕೊಂಡರು. 17 ಸೆರೆವಾಸದಿಂದ ಮರಳಿಬಂದ ಇಸ್ರೇಲರು ಬಿಡಾರಗಳನ್ನು ಹಾಕಿಕೊಂಡು ಅವುಗಳಲ್ಲಿ ವಾಸಿಸಿದರು. ನೂನನ ಮಗನಾದ ಯೆಹೋಶುವನ ಕಾಲದಿಂದ ಇಂದಿನವರೆಗೂ ಇಸ್ರೇಲರು ಇಂಥ ಪರ್ಣಶಾಲೆಗಳ ಹಬ್ಬವನ್ನು ಆಚರಿಸಲಿಲ್ಲ. ಪ್ರತಿಯೊಬ್ಬರೂ ಬಹು ಸಂತೋಷಗೊಂಡಿದ್ದರು.
18 ಆ ಹಬ್ಬದ ದಿನಗಳ ಪ್ರತಿಯೊಂದು ದಿನದಲ್ಲಿ ಎಜ್ರನು ಧರ್ಮಶಾಸ್ತ್ರ ಪಾರಾಯಣ ಮಾಡಿದನು. ಮೊದಲನೆ ದಿನದಿಂದ ಪ್ರಾರಂಭಿಸಿ ಕಡೆಯ ದಿನದ ತನಕ ಇಸ್ರೇಲರೆಲ್ಲರೂ ಈ ಹಬ್ಬವನ್ನು ಏಳು ದಿನಗಳವರೆಗೆ ಆಚರಿಸಿದರು. ಎಂಟನೆಯ ದಿನದಲ್ಲಿ ಧರ್ಮಶಾಸ್ತ್ರದ ಪ್ರಕಾರ ವಿಶೇಷಕೂಟಗಳಿಗಾಗಿ ಜನರು ಒಟ್ಟಾಗಿ ಸೇರಿಬಂದರು.