16
ಮೋಶೆಗೆ ವಿರುದ್ಧ ದಂಗೆ ಎದ್ದದ್ದು
ಕೋರಹ, ದಾತಾನ್, ಅಬೀರಾಮ್ ಮತ್ತು ಓನ್ ಎಂಬವರು ಮೋಶೆಗೆ ವಿರುದ್ಧವಾಗಿ ಎದ್ದರು. (ಕೋರಹನು ಇಚ್ಹಾರನ ಮಗನು, ಇಚ್ಹಾರನು ಕೆಹಾತನ ಮಗನು. ಕೆಹಾತನು ಲೇವಿಯ ಮಗನು. ದಾತಾನ್ ಮತ್ತು ಅಬೀರಾಮ್ ಇವರು ಎಲೀಯಾಬನ ಗಂಡುಮಕ್ಕಳು ಮತ್ತು ಓನನು ಪೆಲೆತನ ಮಗನು. ದಾತಾನ್, ಅಬೀರಾಮ್ ಮತ್ತು ಓನ್ ಇವರು ರೂಬೇನನ ಸಂತತಿಯವರು.) ಈ ನಾಲ್ಕು ಮಂದಿ ಇಸ್ರೇಲರು ಇನ್ನಿತರ ಇನ್ನೂರೈವತ್ತು ಗಂಡಸರೊಂದಿಗೆ ಮೋಶೆಗೆ ವಿರುದ್ಧವಾಗಿ ಎದ್ದರು. ಅವರು ಜನರಿಂದ ಆರಿಸಲ್ಪಟ್ಟ ನಾಯಕರಾಗಿದ್ದುದರಿಂದ ಜನರೆಲ್ಲರೂ ಅವರನ್ನು ಬಲ್ಲವರಾಗಿದ್ದರು. ಅವರು ಮೋಶೆ ಮತ್ತು ಆರೋನರ ವಿರುದ್ಧ ಒಟ್ಟಾಗಿ ಸೇರಿಬಂದು, ಅವರಿಗೆ, “ನೀವು ಅಧಿಕಾರವನ್ನು ಮತ್ತು ಘನತೆಯನ್ನು ಅತಿಯಾಗಿ ಅಪೇಕ್ಷಿಸುತ್ತಿರುವಿರಿ. ಈ ಸಮೂಹದವರಲ್ಲಿರುವ ಪ್ರತಿಯೊಬ್ಬನೂ ದೇವರಿಗೆ ಪ್ರತಿಷ್ಠಿತನೇ. ಯೆಹೋವನು ಇವರೆಲ್ಲರ ಮಧ್ಯದಲ್ಲಿ ಇದ್ದಾನೆ. ಹೀಗಿರಲಾಗಿ ಯೆಹೋವನ ಜನರಿಗಿಂತಲೂ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವುದೇನು?” ಎಂದು ಕೇಳಿದರು.
ಮೋಶೆ ಇದನ್ನು ಕೇಳಿ ನೆಲದವರೆಗೆ ಬಾಗಿ ಕೋರಹ ಮತ್ತು ಅವನ ಹಿಂಬಾಲಕರೆಲ್ಲರಿಗೆ ಹೇಳಿದ್ದೇನೆಂದರೆ: “ನಾಳೆ ಮುಂಜಾನೆ ಯಾವನು ಯೆಹೋವನವನೆಂದು ಯೆಹೋವನು ತೋರಿಸುವನು. ಯಾವನು ಪ್ರತಿಷ್ಠಿತನೆಂದು ಯೆಹೋವನು ತೋರಿಸುವನು ಮತ್ತು ಯೆಹೋವನು ಅವನನ್ನು ತನ್ನ ಹತ್ತಿರ ಕರೆದುಕೊಳ್ಳುವನು. ಆದ್ದರಿಂದ ಕೋರಹನೇ, ನೀನೂ ನಿನ್ನ ಹಿಂಬಾಲಕರೆಲ್ಲರೂ ಈ ಕಾರ್ಯವನ್ನು ಮಾಡಬೇಕು: ನಾಳೆ ಅಗ್ಗಿಷ್ಠಿಕೆಗಳನ್ನು ತೆಗೆದುಕೊಂಡು ಅವುಗಳ ಮೇಲೆ ಉರಿಯುವ ಕೆಂಡಗಳನ್ನು ಹಾಕಿರಿ ಮತ್ತು ಯೆಹೋವನ ಮುಂದೆ ಅವುಗಳ ಮೇಲೆ ಧೂಪವನ್ನು ಹಾಕಿರಿ. ಆಗ ಯೆಹೋವನು ಯಾರನ್ನು ಆರಿಸಿಕೊಳ್ಳುವನೊ ಅವನೇ ನಿಜವಾಗಿಯೂ ಪವಿತ್ರನಾದವನು. ಲೇವಿಯರಾದ ನೀವು ಅಧಿಕಾರವನ್ನು ಮತ್ತು ಘನತೆಯನ್ನು ಅತಿಯಾಗಿ ಅಪೇಕ್ಷಿಸುತ್ತೀರಿ.” ಎಂದು ಹೇಳಿದನು
ಮೋಶೆಯು ಕೋರಹನಿಗೆ, “ಲೇವಿಯರೇ, ಕೇಳಿರಿ! ಇಸ್ರೇಲರ ದೇವರು ನಿಮ್ಮನ್ನು ಸರ್ವಸಮೂಹದಿಂದ ಆರಿಸಿಕೊಂಡದ್ದಕ್ಕಾಗಿ ನೀವು ಸಂತೋಷಪಡಬೇಕು. ದೇವರ ಪವಿತ್ರ ಗುಡಾರಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುವುದಕ್ಕೂ ಇಸ್ರೇಲರ ಸೇವೆಯನ್ನು ಮಾಡುವುದಕ್ಕೂ ಮತ್ತು ಯಜ್ಞಗಳನ್ನು ಸಿದ್ಧಪಡಿಸುವುದರಲ್ಲಿ ಅವರಿಗೆ ಸಹಾಯಮಾಡುವುದಕ್ಕೂ ಯೆಹೋವನು ನಿಮ್ಮನ್ನು ತನ್ನ ಸಮೀಪಕ್ಕೆ ಬರಗೊಡಿಸಿದ್ದಾನೆ. ಅದು ನಿಮಗೆ ಸಾಕಾಗಲಿಲ್ಲವೇ? 10 ಈ ರೀತಿ ಆತನ ಬಳಿಯಲ್ಲಿ ಸೇವೆಮಾಡಲು ನಿನಗೂ ನಿನ್ನ ಸಹೋದ್ಯೋಗಿಗಳಾದ ಎಲ್ಲಾ ಲೇವಿಯರಿಗೂ ಯೆಹೋವನು ಅವಕಾಶ ಕೊಟ್ಟಿದ್ದಾನೆ. ಆದರೆ ಈಗ ನೀವು ಯಾಜಕರಾಗಬೇಕೆಂದು ಸಹ ಪ್ರಯತ್ನಿಸುತ್ತಿದ್ದೀರಿ. 11 ನೀವೂ ನಿಮ್ಮ ಹಿಂಬಾಲಕರೂ ಒಟ್ಟಾಗಿ ಸೇರಿಕೊಂಡು ಯೆಹೋವನಿಗೆ ವಿರೋಧವಾಗಿ ದಂಗೆ ಎದ್ದಿದ್ದೀರಿ. ಆರೋನನು ತನ್ನನ್ನು ತಾನೇ ಮಹಾಯಾಜಕನನ್ನಾಗಿ ಆರಿಸಿಕೊಂಡನೋ? ಇಲ್ಲ! ಹೀಗಿರಲು ಆರೋನನಿಗೆ ವಿರೋಧವಾಗಿ ಗುಣುಗುಟ್ಟುವುದೇಕೆ?” ಎಂದು ಹೇಳಿದನು.
12 ಬಳಿಕ ಮೋಶೆ ಎಲೀಯಾಬನ ಗಂಡುಮಕ್ಕಳಾದ ದಾತಾನನನ್ನೂ ಅಬೀರಾಮನನ್ನೂ ಕರೇಕಳುಹಿಸಲಾಗಿ, ಅವರು ಅವನಿಗೆ, “ನಾವು ಬರುವುದಿಲ್ಲ. 13 ನೀನು ಹಾಲೂ ಜೇನೂ ಹರಿಯುವ ದೇಶದಿಂದ ನಮ್ಮನ್ನು ಕರೆದುಕೊಂಡು ಬಂದು ಮರಳುಗಾಡಿನಲ್ಲಿ ಸಾಯಿಸುವುದು ಸಾಕಾಗಲಿಲ್ಲವೆಂದು ಭಾವಿಸಿ ನಮ್ಮ ಮೇಲೆ ದೊರೆತನ ಮಾಡಲು ಅಪೇಕ್ಷಿಸುತ್ತಿರುವೆಯೋ? 14 ನಾವು ನಿನ್ನನ್ನು ಯಾಕೆ ಹಿಂಬಾಲಿಸಬೇಕು? ನೀನು ನಮ್ಮನ್ನು ಹಾಲೂ ಜೇನೂ ಹರಿಯುವ ದೇಶಕ್ಕೆ ಕರೆದುಕೊಂಡು ಬರಲಿಲ್ಲ. ನೀನು ನಮ್ಮ ಸ್ವಂತಕ್ಕೆ ಹೊಲಗಳನ್ನಾಗಲಿ ದ್ರಾಕ್ಷೇತೋಟಗಳನ್ನಾಗಲಿ ಕೊಡಲಿಲ್ಲ! ನೀನು ಈ ಜನರಿಗೆ ಇದೇ ರೀತಿ ಮೋಸಮಾಡಬೇಕೆಂದಿರುವೆಯೋ? ನಾವು ಬರುವುದಿಲ್ಲ” ಎಂದು ಹೇಳಿದರು.
15 ಇದರಿಂದ ಮೋಶೆ ಬಹಳ ಕೋಪಗೊಂಡನು. ಅವನು ಯೆಹೋವನಿಗೆ, “ನಾನು ಈ ಜನರಿಗೆ ಎಂದೂ ತೊಂದರೆ ಮಾಡಲಿಲ್ಲ. ಅವರಿಂದ ನಾನು ಒಂದು ಕತ್ತೆಯನ್ನಾದರೂ ತೆಗೆದುಕೊಂಡವನಲ್ಲ. ಯೆಹೋವನೇ, ಅವರ ಕಾಣಿಕೆಯನ್ನು ಸ್ವೀಕರಿಸಬೇಡ” ಎಂದು ಮನವಿ ಮಾಡಿದನು.
16 ಆಗ ಮೋಶೆಯು ಕೋರಹನಿಗೆ, “ನೀನು ಮತ್ತು ನಿನ್ನ ಹಿಂಬಾಲಕರೆಲ್ಲರು ನಾಳೆ ಯೆಹೋವನ ಸನ್ನಿಧಿಯಲ್ಲಿ ಆರೋನನೊಡನೆ ನಿಲ್ಲಬೇಕು. 17 ನಿಮ್ಮಲ್ಲಿ ಪ್ರತಿಯೊಬ್ಬನು ತನ್ನತನ್ನ ಧೂಪಾರತಿಯನ್ನು ಅಂದರೆ ಒಟ್ಟಾಗಿ ಇನ್ನೂರೈವತ್ತು ಧೂಪಾರತಿಗಳನ್ನು ತೆಗೆದುಕೊಂಡು ಧೂಪಹಾಕಿ ಯೆಹೋವನ ಸನ್ನಿಧಿಗೆ ಬರಬೇಕು. ಹಾಗೆಯೇ ನೀನೂ ಆರೋನನೂ ನಿಮ್ಮನಿಮ್ಮ ಧೂಪಾರತಿಗಳನ್ನು ತೆಗೆದುಕೊಂಡು ಬರಬೇಕು” ಎಂದು ಹೇಳಿದನು.
18 ಅದಕ್ಕನುಸಾರವಾಗಿ ಅವರೆಲ್ಲರೂ ತಮ್ಮತಮ್ಮ ಧೂಪಾರತಿಗಳನ್ನು ಕೈಯಲ್ಲಿ ತೆಗೆದುಕೊಂಡು ಅವುಗಳಲ್ಲಿ ಕೆಂಡಗಳನ್ನಿಟ್ಟು ಧೂಪದ್ರವ್ಯಗಳನ್ನು ಹಾಕಿ ಮೋಶೆ ಆರೋನರ ಜೊತೆಯಲ್ಲಿ ದೇವದರ್ಶನಗುಡಾರದ ಪ್ರವೇಶದ್ವಾರದಲ್ಲಿ ನಿಂತುಕೊಂಡರು. 19 ಕೋರಹನು ತಮಗೆ ಎದುರಾಗಿ ಸರ್ವಸಮೂಹದವರನ್ನು ದೇವದರ್ಶನಗುಡಾರದ ಪ್ರವೇಶದ್ವಾರದ ಹತ್ತಿರಕ್ಕೆ ಕೂಡಿಸಿದನು. ಆಗ ಯೆಹೋವನ ಮಹಿಮೆ ಸಮೂಹದವರೆಲ್ಲರಿಗೆ ಪ್ರತ್ಯಕ್ಷವಾಯಿತು.
20 ಯೆಹೋವನು ಮೋಶೆ ಆರೋನರಿಗೆ, 21 “ಈ ಜನರನ್ನು ಬಿಟ್ಟು ಪ್ರತ್ಯೇಕವಾಗಿ ನಿಲ್ಲಿರಿ. ನಾನು ಅವರನ್ನು ಈಗ ನಾಶ ಮಾಡಬಯಸುತ್ತೇನೆ” ಅಂದನು.
22 ಆದರೆ ಮೋಶೆ ಆರೋನರು ನೆಲದವರೆಗೆ ಬಾಗಿ, “ದೇವರೇ, ಎಲ್ಲಾ ಜನರ ಆಲೋಚನೆ ನಿನಗೆ ಗೊತ್ತಿದೆ. ದಯಮಾಡಿ ಎಲ್ಲಾ ಜನರ ಮೇಲೆ ಕೋಪಗೊಳ್ಳಬೇಡ. ನಿಜವಾಗಿ ಪಾಪಮಾಡಿದವನು ಕೇವಲ ಒಬ್ಬನಲ್ಲವೇ?” ಎಂದು ಮೊರೆಯಿಟ್ಟರು.
23 ಆಗ ಯೆಹೋವನು ಮೋಶೆಗೆ, 24 “ಜನರಿಗೆ ಕೋರಹ, ದಾತಾನ್ ಮತ್ತು ಅಬೀರಾಮರ ಗುಡಾರದ ಸುತ್ತಮುತ್ತಲಿಂದ ದೂರಹೋಗಬೇಕೆಂದು ಆಜ್ಞಾಪಿಸು” ಎಂದು ಹೇಳಿದನು.
25 ಮೋಶೆಯು ಎದ್ದು ಕೋರಹ, ದಾತಾನ್ ಮತ್ತು ಅಬೀರಾಮರ ಬಳಿಗೆ ಹೋದನು. ಇಸ್ರೇಲರ ಹಿರಿಯರೆಲ್ಲರೂ ಅವನನ್ನು ಹಿಂಬಾಲಿಸಿದರು. 26 ಮೋಶೆಯು ಜನರನ್ನು ಎಚ್ಚರಿಸಿ, “ಈ ಕೆಟ್ಟ ಜನರ ಗುಡಾರಗಳಿಂದ ಹೊರಟುಹೋಗಿರಿ. ಇವರ ಸ್ವತ್ತಿನಲ್ಲಿ ಯಾವುದನ್ನೂ ಮುಟ್ಟಬಾರದು. ಇಲ್ಲವಾದರೆ ಅವರ ಪಾಪಗಳ ದೆಸೆಯಿಂದ ನೀವೂ ನಾಶವಾಗುವಿರಿ” ಎಂದು ಹೇಳಿದನು.
27 ಆದ್ದರಿಂದ ಜನರು ಕೋರಹ, ದಾತಾನ್ ಮತ್ತು ಅಬೀರಾಮರ ಗುಡಾರಗಳನ್ನು ಬಿಟ್ಟು ದೂರಹೋದರು. ದಾತಾನ್ ಮತ್ತು ಅಬೀರಾಮ್ ಹೊರಗೆ ಬಂದು ತಮ್ಮ ಡೇರೆಗಳ ಪ್ರವೇಶದ್ವಾರದ ಬಳಿ ತಮ್ಮ ಹೆಂಡತಿಯರೊಡನೆ, ಮಕ್ಕಳೊಡನೆ ಮತ್ತು ಕೂಸುಗಳೊಡನೆ ನಿಂತುಕೊಂಡರು.
28 ಆಗ ಮೋಶೆ ಜನರಿಗೆ, “ಈ ಕಾರ್ಯಗಳೆಲ್ಲಾ ನನ್ನ ಆಲೋಚನೆಯಿಂದ ಆಗಲಿಲ್ಲವೆಂದೂ ಯೆಹೋವನೇ ಈ ಕಾರ್ಯಗಳನ್ನು ಮಾಡುವುದಕ್ಕೆ ನನ್ನನ್ನು ಕಳುಹಿಸಿದನೆಂದು ನೀವು ತಿಳಿದುಕೊಳ್ಳುವಂತೆ ನಾನು ಸಾಕ್ಷಿಯನ್ನು ಕೊಡುವೆನು. 29 ಇಲ್ಲಿರುವ ಜನರು ಸಾಯುವರು. ಆದರೆ ಇವರ ಅಂತ್ಯವು ಎಲ್ಲರಿಗೂ ಸಂಭವಿಸುವ ಅಂತ್ಯವಾಗಿದ್ದರೆ, ಯೆಹೋವನು ನನ್ನನ್ನು ಕಳುಹಿಸಲಿಲ್ಲವೆಂದು ತಿಳಿದುಕೊಳ್ಳಬೇಕು. 30 ಆದರೆ ಯೆಹೋವನು ಇವರಿಗೋಸ್ಕರ ಅಪೂರ್ವ ಶಿಕ್ಷೆಯನ್ನು ಕಲ್ಪಿಸಿದರೆ ಅಂದರೆ ಭೂಮಿಯು ಬಾಯ್ದೆರೆದು ಇವರನ್ನೂ ಇವರ ಸರ್ವಸ್ವವನ್ನೂ ನುಂಗುವುದರಿಂದ ಇವರೆಲ್ಲರೂ ಸಜೀವಿಗಳಾಗಿ ಸಮಾಧಿಯಾದರೆ, ಇವರು ನಿಜವಾಗಿಯೂ ಯೆಹೋವನನ್ನು ತಿರಸ್ಕರಿಸಿದವರೆಂದು ನೀವು ತಿಳಿದುಕೊಳ್ಳಬೇಕು” ಎಂದನು.
31 ಕೂಡಲೇ, ಆ ಜನರು ನಿಂತಿದ್ದ ನೆಲವು ಸೀಳಿತು. 32 ಭೂಮಿಯೇ ಬಾಯಿತೆರೆದು ಅವರನ್ನು ನುಂಗಿಬಿಟ್ಟಿತೊ ಎಂಬಂತೆ, ಅವರ ಕುಟುಂಬಗಳವರನ್ನು ಕೋರಹನ ಎಲ್ಲಾ ಹಿಂಬಾಲಕರನ್ನು ಮತ್ತು ಅವರ ಆಸ್ತಿಯೆಲ್ಲವನ್ನು ನುಂಗಿಬಿಟ್ಟಿತು. 33 ಆ ಜನರೆಲ್ಲಾ ಸಜೀವ ಸಮಾಧಿಯಾದರು. ಅವರ ಆಸ್ತಿಪಾಸ್ತಿಯೆಲ್ಲಾ ಅವರೊಡನೆ ಭೂಸಮಾಧಿಯಾಯಿತು. ಆ ಬಳಿಕ ಭೂಮಿ ಅವರ ಸಮೇತವಾಗಿ ಮುಚ್ಚಿಕೊಂಡಿತು. ಅದೇ ಅವರ ಅಂತ್ಯವಾಯಿತು. ಅವರು ಸಮುದಾಯದಿಂದ ಶಾಶ್ವತವಾಗಿ ಇಲ್ಲವಾದರು!
34 ನಾಶವಾಗುತ್ತಿರುವ ಜನರ ಗೋಳಾಟವನ್ನು ಕೇಳಿದ ಇಸ್ರೇಲ್ ಜನರು, “ಭೂಮಿಯು ನಮ್ಮನ್ನೂ ನುಂಗಿಬಿಡುತ್ತದೆ!” ಎಂದುಕೊಂಡು ನಾನಾ ದಿಕ್ಕುಗಳಿಗೆ ಓಡಿಹೋದರು.
35 ಅಲ್ಲದೆ ಯೆಹೋವನಿಂದ ಬೆಂಕಿಯು ಹೊರಟುಬಂದು ಧೂಪವನ್ನು ಅರ್ಪಿಸುತ್ತಿದ್ದ ಇನ್ನೂರೈವತ್ತು ಮಂದಿಯನ್ನು ದಹಿಸಿಬಿಟ್ಟಿತು.
36 ಆಗ ಯೆಹೋವನು ಮೋಶೆಗೆ, 37 “ಯಾಜಕನಾದ ಆರೋನನ ಮಗ ಎಲ್ಲಾಜಾರನು ಸುಟ್ಟುಹೋದವರ ನಡುವೆಯಿಂದ ಧೂಪಾರತಿಗಳನ್ನು ಎತ್ತಬೇಕೆಂದು ಆಜ್ಞಾಪಿಸು ಮತ್ತು ನೀನು ಅವುಗಳಲ್ಲಿರುವ ಕೆಂಡಗಳನ್ನು ದೂರಕ್ಕೆ ಚೆಲ್ಲು. ಯಾಕೆಂದರೆ ಆ ಧೂಪಾರತಿಗಳು ಪವಿತ್ರವಾದವುಗಳು. 38 ಪ್ರಾಣವನ್ನು ಕಳೆದುಕೊಂಡ ಆ ದೋಷಿಗಳ ಧೂಪಾರತಿಗಳು ಯೆಹೋವನ ಸನ್ನಿಧಿಗೆ ತರಲ್ಪಟ್ಟ ಕಾರಣ ಪರಿಶುದ್ಧವಾಗಿವೆ. ಆದ್ದರಿಂದ ಅವುಗಳನ್ನು ತೆಗೆದು ತಗಡುಗಳಾಗಿ ಹೊಡೆದು ಯಜ್ಞವೇದಿಕೆಗೆ ಮುಚ್ಚಳವನ್ನು ಮಾಡಿಸಬೇಕು. ಇದು ಇಸ್ರೇಲರೆಲ್ಲರಿಗೆ ಎಚ್ಚರಿಕೆಯಾಗಿರುವುದು” ಎಂದು ಹೇಳಿದನು.
39 ಯೆಹೋವನು ಮೋಶೆಗೆ ಕೊಟ್ಟ ಅಪ್ಪಣೆಯ ಮೇರೆಗೆ ಯಾಜಕನಾದ ಎಲ್ಲಾಜಾರನು ಸುಟ್ಟುಹೋದವರಿಂದ ತರಲ್ಪಟ್ಟಿದ್ದ ಆ ತಾಮ್ರದ ಧೂಪಾರತಿಗಳನ್ನು ತೆಗೆದುಕೊಂಡು ತಗಡುಗಳಾಗಿ ಹೊಡಿಸಿ ಯಜ್ಞವೇದಿಕೆಗೆ ಮುಚ್ಚಳವನ್ನು ಮಾಡಿಸಿದನು. 40 ಆರೋನನ ಕುಟುಂಬದವನು ಮಾತ್ರ ಯೆಹೋವನ ಎದುರಿನಲ್ಲಿ ಧೂಪವನ್ನು ಹಾಕತಕ್ಕದ್ದು ಮತ್ತು ಬೇರೆ ಯಾರಾದರೂ ಹಾಕಿದರೆ ಅವರು ಕೋರಹ ಮತ್ತು ಅವನ ಹಿಂಬಾಲಕರಂತೆ ಸಾಯುವರು ಎಂಬುದನ್ನು ಇಸ್ರೇಲರಿಗೆ ಆ ಮುಚ್ಚಳವು ನೆನಪು ಮಾಡುವ ಗುರುತಾಯಿತು.
ಆರೋನನು ಜನರನ್ನು ರಕ್ಷಿಸಿದ್ದು
41 ಮರುದಿನ ಇಸ್ರೇಲರೆಲ್ಲರೂ ಮೋಶೆ ಆರೋನರ ವಿರುದ್ಧ ಗುಣುಗುಟ್ಟುತ್ತಾ, “ನೀವೇ ಯೆಹೋವನ ಜನರನ್ನು ಸಾಯಿಸಿದಿರಿ” ಎಂದು ಹೇಳಿದರು.
42 ಮೋಶೆ ಆರೋನರನ್ನು ಎದುರಿಸಲು ಜನರು ಒಟ್ಟಾಗಿ ಸೇರಿಬಂದಿದ್ದಾಗ, ದೇವದರ್ಶನಗುಡಾರದ ಕಡೆಗೆ ತಿರುಗಿ ನೋಡಲಾಗಿ, ದೇವದರ್ಶನಗುಡಾರವನ್ನು ಮೋಡ ಮುಚ್ಚಿಕೊಂಡಿರುವುದನ್ನೂ ಯೆಹೋವನ ಮಹಿಮೆಯು ಪ್ರತ್ಯಕ್ಷವಾಗಿರುವುದನ್ನೂ ಅವರು ಕಂಡರು. 43 ಆಗ ಮೋಶೆ ಆರೋನರು ದೇವದರ್ಶನಗುಡಾರದ ಮುಂದಕ್ಕೆ ಬಂದರು.
44 ಯೆಹೋವನು ಮೋಶೆಗೆ, 45 “ಆ ಜನರಿಂದ ನೀವಿಬ್ಬರೂ ದೂರಹೋಗಿರಿ. ನಾನು ಈಗ ಅವರನ್ನು ನಾಶಮಾಡುತ್ತೇನೆ” ಎಂದು ಹೇಳಿದನು. ಆಗ ಮೋಶೆ ಆರೋನರು ಅಡ್ಡಬಿದ್ದರು.
46 ಮೋಶೆಯು ಆರೋನನಿಗೆ, “ಯೆಹೋವನಿಗೆ ಕೋಪವುಂಟಾಗಿ ಈ ಜನರೊಳಗೆ ಘೋರವ್ಯಾಧಿ ಪ್ರಾರಂಭವಾಗಿದೆ. ನೀನು ಧೂಪಾರತಿಯನ್ನು ತೆಗೆದುಕೊಂಡು ಅದರಲ್ಲಿ ಯಜ್ಞವೇದಿಕೆಯಿಂದ ತೆಗೆದ ಕೆಂಡಗಳನ್ನು ಇಟ್ಟು ಧೂಪಹಾಕಿ ಸಮೂಹದವರ ಬಳಿಗೆ ಬೇಗ ಹೋಗಿ ಅವರಿಗೋಸ್ಕರ ದೋಷಪರಿಹಾರವನ್ನು ಮಾಡಬೇಕು” ಎಂದು ಹೇಳಿದನು.
47 ಮೋಶೆ ಹೇಳಿದಂತೆ ಆರೋನನು ಧೂಪಾರತಿಯನ್ನು ತೆಗೆದುಕೊಂಡು ಸಮೂಹದವರ ಮಧ್ಯಕ್ಕೆ ಓಡಿಹೋದಾಗ, ಘೋರವ್ಯಾಧಿ ಆ ಜನರಲ್ಲಿ ಹರಡಿಕೊಳ್ಳುತ್ತಾ ಇತ್ತು. ಅವನು ಧೂಪಹಾಕಿ ಜನರಿಗೋಸ್ಕರ ದೋಷಪರಿಹಾರವನ್ನು ಮಾಡಿದನು. 48 ಅವನು ಸತ್ತವರಿಗೂ ಬದುಕಿರುವವರಿಗೂ ನಡುವೆ ನಿಂತುಕೊಂಡನು. ಆಗ ಕಾಯಿಲೆ ನಿಂತುಹೋಯಿತು. 49 ಕೋರಹನೂ ಸೇರಿದಂತೆ ಆ ಕಾಯಿಲೆಯಿಂದ ಸತ್ತವರು ಹದಿನಾಲ್ಕು ಸಾವಿರದ ಏಳುನೂರು ಮಂದಿ. 50 ಕಾಯಿಲೆಯು ನಿಂತುಹೋದಾಗ, ಆರೋನನು ದೇವದರ್ಶನಗುಡಾರದ ಪ್ರವೇಶದ್ವಾರದಲ್ಲಿದ್ದ ಮೋಶೆಯ ಬಳಿಗೆ ತಿರುಗಿ ಬಂದನು.