32
ಜೋರ್ಡನ್ ಹೊಳೆಯ ಪೂರ್ವದಲ್ಲಿ ಇಸ್ರೇಲರ ಕುಟುಂಬಗಳು
ರೂಬೇನ್ ಕುಲದವರಿಗೂ ಗಾದ್ ಕುಲದವರಿಗೂ ಬಹಳ ದನಗಳಿದ್ದವು. ಅವರು ಯಗ್ಜೇರ್ ಮತ್ತು ಗಿಲ್ಯಾದ್ ಪ್ರದೇಶಗಳನ್ನು ನೋಡಿದಾಗ ಅವು ಅವರ ಪಶುಗಳ ಮೇವಿಗೆ ಒಳ್ಳೆಯ ಸ್ಥಳವೆಂದು ತಿಳಿದುಕೊಂಡರು. ಆದ್ದರಿಂದ ರೂಬೇನ್ ಮತ್ತು ಗಾದ್ ಕುಲದವರು ಮೋಶೆಯ ಬಳಿಗೆ ಬಂದರು. ಅವರು ಮೋಶೆಯ ಸಂಗಡದಲ್ಲೂ ಯಾಜಕನಾದ ಎಲ್ಲಾಜಾರನ ಸಂಗಡದಲ್ಲೂ ಜನರ ನಾಯಕರ ಸಂಗಡದಲ್ಲೂ ಮಾತಾಡಿ ಹೀಗೆ ಹೇಳಿದರು: 3-4 “ಯೆಹೋವನು ಇಸ್ರೇಲರಿಗೆ ಅಧೀನಪಡಿಸಿದ ಈ ಪ್ರದೇಶವು ಅಂದರೆ, ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್ ಎಂಬ ಪಟ್ಟಣಗಳ ಪ್ರದೇಶವು ಪಶುಗಳ ಮೇವಿಗೆ ಒಳ್ಳೆಯ ಸ್ಥಳವಾಗಿದೆ. ನಿಮ್ಮ ದಾಸರಾದ ನಮಗೆ ಬಹಳ ಪಶುಗಳು ಇವೆ. ಆದ್ದರಿಂದ ಈ ಪ್ರದೇಶವನ್ನೇ ನಮಗೆ ಸ್ವಾಸ್ತ್ಯವನ್ನಾಗಿ ಕೊಟ್ಟರೆ ನಮಗೆ ಉಪಕಾರ ಮಾಡಿದಂತಾಗುವುದು. ನಾವು ಜೋರ್ಡನ್ ನದಿಯನ್ನು ದಾಟಿ ಹೋಗುವಂತೆ ಮಾಡಬೇಡ.”
ಮೋಶೆಯು ರೂಬೇನ್ ಮತ್ತು ಗಾದ್ ಕುಲಗಳವರಿಗೆ, “ನಿಮ್ಮ ಸಹೋದರರು ಯುದ್ಧಕ್ಕೆ ಹೋಗುವಾಗ ನೀವು ಇಲ್ಲೇ ಕುಳಿತಿರಬೇಕೇ? ಯೆಹೋವನು ಇಸ್ರೇಲರಿಗೆ ಕೊಟ್ಟ ದೇಶಕ್ಕೆ ಅವರು ಹೋಗದಂತೆ ನೀವು ಯಾಕೆ ಅವರಿಗೆ ಅಧೈರ್ಯವನ್ನು ಹುಟ್ಟಿಸುತ್ತೀರಿ? ಆ ದೇಶವನ್ನು ನೋಡಿಕೊಂಡು ಬರುವುದಕ್ಕೆ ನಾನು ಕಾದೇಶ್ ಬರ್ನೇಯದಿಂದ ನಿಮ್ಮ ಪೂರ್ವಿಕರನ್ನು ಗೂಢಚಾರರನ್ನಾಗಿ ಕಳುಹಿಸಿದಾಗ ಅವರೂ ಹಾಗೆಯೇ ಮಾಡಿದರಲ್ಲಾ. ಅವರು ಎಷ್ಕೋಲ್ ತಗ್ಗಿಗೆ ಬಂದು ಆ ದೇಶವನ್ನು ನೋಡಿ ಇಸ್ರೇಲರಿಗೆ ಅಧೈರ್ಯವನ್ನು ಹುಟ್ಟಿಸಿದ್ದರಿಂದ ಇಸ್ರೇಲರು ತಮಗೆ ಯೆಹೋವನು ವಾಗ್ದಾನ ಮಾಡಿದ್ದ ದೇಶಕ್ಕೆ ಹೋಗಲೇ ಇಲ್ಲ. 10 ಆಗ ಯೆಹೋವನು ಕೋಪಗೊಂಡು, 11-12 ‘ಈಜಿಪ್ಟಿನಿಂದ ಬಂದ ಈ ಜನರಲ್ಲಿ ಮತ್ತು ಇಪ್ಪತ್ತು ವರ್ಷ ಮೊದಲುಗೊಂಡು ಅದಕ್ಕಿಂತ ಹೆಚ್ಚು ವಯಸ್ಸಾದ ನಿಮ್ಮವರೆಲ್ಲಾ ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನ ಮತ್ತು ನೂನನ ಮಗನಾದ ಯೆಹೋಶುವನ ಹೊರತು ಯಾರೂ ನನ್ನನ್ನು ನಿಜವಾಗಿಯೂ ಅನುಸರಿಸದೆ ಹೋದದ್ದರಿಂದ, ನಾನು ಅಬ್ರಹಾಮ್, ಇಸಾಕ್, ಯಾಕೋಬರಿಗೆ ಪ್ರಮಾಣಪೂರ್ವಕವಾಗಿ ಕೊಟ್ಟ ದೇಶವನ್ನು ಅವರಿಬ್ಬರೇ ಹೊರತು ಬೇರೆ ಯಾರೂ ನೋಡುವುದೇ ಇಲ್ಲ’ ಎಂದು ಖಂಡಿತವಾಗಿ ಹೇಳಿದನು.
13 “ಆದ್ದರಿಂದ ಯೆಹೋವನು ಇಸ್ರೇಲರ ಮೇಲೆ ಕೋಪಗೊಂಡು, ತನ್ನನ್ನು ಬೇಸರಗೊಳಿಸಿದ್ದ ಇಡೀ ತಲೆಮಾರು ಸಾಯುವತನಕ ಇಸ್ರೇಲರನ್ನು ಮರುಭೂಮಿಯಲ್ಲಿ ನಲವತ್ತು ವರ್ಷಗಳ ಕಾಲ ಅಲೆದಾಡಿಸಿದನು. 14 ದುಷ್ಟ ಸಂತತಿಯವರೇ, ಈಗ ನೀವು ಯೆಹೋವನ ಭಯಂಕರವಾದ ಕೋಪವನ್ನು ಇನ್ನೂ ಹೆಚ್ಚಾಗಿ ಮಾಡಲು ನಿಮ್ಮ ಪೂರ್ವಿಕರ ಸ್ಥಾನವನ್ನು ತೆಗೆದುಕೊಂಡಿದ್ದೀರಿ. 15 ನೀವು ಆತನನ್ನು ಹಿಂಬಾಲಿಸದೆ ಹೋದರೆ, ಆತನು ಇಸ್ರೇಲರನ್ನು ಮರುಭೂಮಿಯಲ್ಲಿ ಇನ್ನೂ ಹೆಚ್ಚು ಕಾಲ ಬಿಟ್ಟುಬಿಡುವನು. ಈ ಜನರೆಲ್ಲರ ನಾಶನಕ್ಕೆ ನೀವೇ ಕಾರಣರಾಗುವಿರಿ” ಎಂದು ಹೇಳಿದನು.
16 ಆಗ ಅವರು ಮೋಶೆಯ ಬಳಿಗೆ ಬಂದು, “ನಮ್ಮ ಪಶುಗಳಿಗಾಗಿ ನಾವು ಬೇಲಿಯನ್ನು ಹಾಕೋಣ ಮತ್ತು ಸ್ತ್ರೀಯರಿಗಾಗಿ ಮತ್ತು ಮಕ್ಕಳಿಗಾಗಿ ಊರುಗಳನ್ನು ಕಟ್ಟುವೆವು. 17 ಬಳಿಕ ಇಸ್ರೇಲರನ್ನು ಅವರವರ ಸ್ಥಳಗಳಿಗೆ ಸೇರಿಸುವವರೆಗೆ ನಾವು ಅವರ ಮುಂದೆ ಹೋಗುವ ಸೈನಿಕರಾಗಿ ಹೊರಡುವೆವು ಅಲ್ಲದೆ ನಮ್ಮ ಸ್ತ್ರೀಯರು ಮತ್ತು ಮಕ್ಕಳು ಈ ದೇಶದ ಇತರ ನಿವಾಸಿಗಳಿಂದ ತೊಂದರೆಗೊಳಗಾಗದೆ ಕೋಟೆಗಳುಳ್ಳ ಊರುಗಳಲ್ಲಿ ಸುರಕ್ಷಿತವಾಗಿರುವರು. 18 ಪ್ರತಿಯೊಬ್ಬ ಇಸ್ರೇಲನು ದೇಶದಲ್ಲಿ ತನಗೆ ಬರಬೇಕಾದ ಸ್ವಾಸ್ತ್ಯವನ್ನು ತೆಗೆದುಕೊಳ್ಳುವ ತನಕ ನಾವು ನಮ್ಮ ಮನೆಗಳಿಗೆ ಹೋಗುವುದಿಲ್ಲ. 19 ನಮಗೆ ಜೋರ್ಡನ್ ಹೊಳೆಯ ಈಚೆ ಪೂರ್ವದಿಕ್ಕಿನಲ್ಲಿ ಸ್ವಾಸ್ತ್ಯವು ದೊರಕಿದ್ದರಿಂದ ನಾವು ಹೊಳೆಯ ಆಚೆ ಎಲ್ಲಿಯೂ ಅವರೊಂದಿಗೆ ಸ್ವಾಸ್ತ್ಯವನ್ನು ಅಪೇಕ್ಷಿಸುವುದಿಲ್ಲ” ಅಂದರು.
20-22 ಅದಕ್ಕೆ ಮೋಶೆ, “ನೀವು ನಿಮ್ಮ ಮಾತಿನಂತೆ ಯೆಹೋವನ ಮುಂದೆ ಸನ್ನದ್ಧರಾದ ಸೈನಿಕರಾಗಿ ಯುದ್ಧಕ್ಕೆ ಹೋಗುವುದಾದರೆ, ಯೆಹೋವನು ತನ್ನ ವೈರಿಗಳನ್ನು ಓಡಿಸುವ ತನಕ ಮತ್ತು ಆ ದೇಶವನ್ನು ಗೆದ್ದುಕೊಳ್ಳುವ ತನಕ ಪ್ರತಿಯೊಬ್ಬ ಪ್ರವೀಣ ಸೈನಿಕನು ಯೆಹೋವನ ಮುಂದೆ ಜೋರ್ಡನ್ ನದಿಯನ್ನು ದಾಟುವುದಾದರೆ, ಆ ಬಳಿಕ ನೀವು ನಿಮ್ಮ ಮನೆಗಳಿಗೆ ಹಿಂತಿರುಗಬಹುದು ಮತ್ತು ನೀವು ಯೆಹೋವನ ದೃಷ್ಟಿಯಲ್ಲಿಯೂ ಇಸ್ರೇಲರ ದೃಷ್ಟಿಯಲ್ಲಿಯೂ ನಿಮ್ಮ ಕರ್ತವ್ಯವನ್ನು ಮಾಡಿದವರಾಗಿರುವಿರಿ. 23 ಆದರೆ ನೀವು ಈ ಸಂಗತಿಗಳನ್ನು ಮಾಡದಿದ್ದರೆ, ಯೆಹೋವನಿಗೆ ವಿರೋಧವಾಗಿ ಪಾಪ ಮಾಡಿದವರಾಗಿರುವಿರಿ. ಮತ್ತು ನಿಮ್ಮ ಪಾಪವು ನಿಮ್ಮನ್ನು ಹಿಡಿಯುವ ತನಕ ಹುಡುಕಿಕೊಂಡೇ ಬರುವುದು ಎಂದು ಖಚಿತವಾಗಿ ತಿಳಿದುಕೊಳ್ಳಿರಿ. 24 ನಿಮ್ಮ ಸ್ತ್ರೀಯರಿಗಾಗಿಯೂ ಮಕ್ಕಳಿಗಾಗಿಯೂ ಊರುಗಳನ್ನು ಕಟ್ಟಿರಿ ಮತ್ತು ಪಶುಗಳಿಗಾಗಿ ದೊಡ್ಡಿಯನ್ನು ಕಟ್ಟಿರಿ. ಬಳಿಕ ನೀವು ವಾಗ್ದಾನ ಮಾಡಿದಂತೆಯೇ ಮಾಡಿರಿ” ಎಂದನು.
25 ಆಗ ಗಾದ್ಯರು ಮತ್ತು ರೂಬೇನ್ಯರು ಮೋಶೆಗೆ, “ಸ್ವಾಮೀ, ನಾವು ನಿನ್ನ ಸೇವಕರಾಗಿದ್ದೇವೆ. ಆದ್ದರಿಂದ ನೀನು ಆಜ್ಞಾಪಿಸಿದಂತೆಯೇ ನಾವು ಮಾಡುತ್ತೇವೆ. 26 ನಮ್ಮ ಹೆಂಡತಿಯರು, ಮಕ್ಕಳು, ಪಶುಗಳು ಮತ್ತು ಇತರ ಪ್ರಾಣಿಗಳು ಗಿಲ್ಯಾದಿನ ಊರುಗಳಲ್ಲಿ ವಾಸಿಸುವರು. 27 ಆದರೆ ನಿನ್ನ ಸೇವಕರಾದ ನಾವು ಮತ್ತು ದಂಡೆಯಾತ್ರೆಗಾಗಿ ಆರಿಸಲ್ಪಟ್ಟವರು ನಿನ್ನ ಆಜ್ಞೆಯ ಪ್ರಕಾರ ಜೋರ್ಡನ್ ನದಿಯನ್ನು ಯೆಹೋವನ ಮುಂದೆ ದಾಟಿಹೋಗಿ ಹೋರಾಡುತ್ತೇವೆ” ಎಂದರು.
28 ಆದ್ದರಿಂದ ಮೋಶೆಯು, ಅವರ ಬಗ್ಗೆ ಯಾಜಕ ಎಲ್ಲಾಜಾರನಿಗೂ ನೂನನ ಮಗನಾದ ಯೆಹೋಶುವನಿಗೂ ಇಸ್ರೇಲ್ ಕುಲಗಳ ಗೋತ್ರಪ್ರಧಾನರಿಗೂ ಆದೇಶಗಳನ್ನು ಕೊಟ್ಟನು. 29 ಮೋಶೆ ಅವರಿಗೆ, “ಗಾದ್ ಮತ್ತು ರೂಬೇನ್ ಕುಲಗಳಿಂದ ಯುದ್ಧಕ್ಕಾಗಿ ಆರಿಸಲ್ಪಟ್ಟವರು ಜೋರ್ಡನ್ ನದಿಯನ್ನು ಯೆಹೋವನ ಮುಂದೆ ದಾಟಿ ಆ ದೇಶವನ್ನು ಗೆದ್ದುಕೊಂಡರೆ, ನೀವು ಅವರಿಗೆ ಗಿಲ್ಯಾದ್ ಪ್ರಾಂತ್ಯವನ್ನು ಸ್ವಾಸ್ತ್ಯವಾಗಿ ಕೊಡಬೇಕು. 30 ಆದರೆ ಆರಿಸಲ್ಪಟ್ಟವರು ನಿಮ್ಮೊಂದಿಗೆ ನದಿಯನ್ನು ದಾಟದಿದ್ದರೆ, ಅವರು ನಿಮ್ಮೊಂದಿಗೆ ಕಾನಾನ್ ದೇಶದಲ್ಲಿ ಭೂಮಿಯನ್ನು ಪಡೆದುಕೊಳ್ಳಬೇಕು” ಎಂದು ಹೇಳಿದನು.
31 ಅದಕ್ಕೆ ಗಾದ್ ಮತ್ತು ರೂಬೇನ್ ಕುಲಗಳವರು ಒಪ್ಪಿ, “ನಿನ್ನ ಸೇವಕರಾದ ನಾವು ಯೆಹೋವನ ಆಜ್ಞೆಯಂತೆಯೇ ಮಾಡುವೆವು. 32 ನಾವೇ ಯುದ್ಧ ಮಾಡುವ ಸೈನಿಕರಾಗಿ ನದಿಯನ್ನು ದಾಟಿ ಯೆಹೋವನ ಮುಂದೆ ಕಾನಾನ್ ದೇಶದೊಳಗೆ ಹೋಗುವೆವು. ಆದರೆ ನಮ್ಮ ಸ್ವಾಸ್ತ್ಯವಾದ ಭೂಮಿಯು ಜೋರ್ಡನ್ ನದಿಯ ಈಚೆಕಡೆಯಲ್ಲಿರುವುದು” ಎಂದರು.
33 ಆಗ ಮೋಶೆಯು ಗಾದ್ ಮತ್ತು ರೂಬೇನ್ ಕುಲಗಳವರಿಗೆ ಮತ್ತು ಯೋಸೇಫನ ಮಗನಾದ ಮನಸ್ಸೆಯ ಅರ್ಧಕುಲದವರಿಗೆ ಅಮೋರಿಯರ ರಾಜನಾದ ಸೀಹೋನನ ರಾಜ್ಯವನ್ನೂ ಬಾಷಾನಿನ ರಾಜನಾದ ಓಗನ ರಾಜ್ಯವನ್ನೂ ಅವುಗಳ ಎಲ್ಲಾ ಊರುಗಳನ್ನೂ ಆ ಊರುಗಳಿಗೆ ಸೇರಿದ ಭೂಮಿಗಳನ್ನೂ ಕೊಟ್ಟನು.
34 ಗಾದ್ ಕುಲದವರು ದೀಬೋನ್, ಅಟಾರೋತ್, ಅರೋಯೇರ್, 35 ಅಟ್ರೋತ್ಷೋಫಾನ್, ಯಗ್ಜೇರ್, ಯೊಗ್ಬೆಹಾ, ಬೇತ್ನಿಮ್ರಾ, 36 ಬೇತ್‌ಹಾರಾನ್ ಎಂಬ ಕೋಟೆಗಳುಳ್ಳ ಊರುಗಳನ್ನು ಹೊಸದಾಗಿ ಕಟ್ಟಿಕೊಂಡರು ಮತ್ತು ತಮ್ಮ ಪಶುಗಳಿಗಾಗಿ ದೊಡ್ಡಿಗಳನ್ನು ಕಟ್ಟಿಕೊಂಡರು.
37-38 ರೂಬೇನ್ ಕುಲದವರು ಹೆಷ್ಬೋನ್, ಎಲೆಯಾಲೆ, ಕಿರ್ಯಾತಯಿಮ್, ನೆಬೋ, ಬಾಳ್ಮೆಯೋನ್ ಮತ್ತು ಸಿಬ್ಮಾ ಎಂಬ ಊರುಗಳನ್ನು ಕೋಟೆ ಸಮೇತವಾಗಿ ಕಟ್ಟಿದರು; ಅಲ್ಲದೆ ತಮ್ಮ ಪಶುಗಳಿಗಾಗಿ ದೊಡ್ಡಿಯನ್ನು ಕಟ್ಟಿದರು. ಅವರು ತಾವು ಮತ್ತೆ ಕಟ್ಟಿದ ಊರುಗಳಿಗೆ ಅವುಗಳ ಮೊದಲಿನ ಹೆಸರುಗಳನ್ನು ಕೊಟ್ಟರು; ಆದರೆ ನೆಬೋ ಮತ್ತು ಬಾಳ್ಮೆಯೋನ್‌ಗಳ ಹೆಸರುಗಳನ್ನು ಬದಲಾಯಿಸಿದರು.
39 ಮಾಕೀರನ ವಂಶದವರು ಗಿಲ್ಯಾದಿಗೆ ಹೋದರು. (ಮಾಕೀರನು ಮನಸ್ಸೆಯ ಮಗ.) ಅವರು ಆ ಪಟ್ಟಣದಲ್ಲಿ ವಾಸಿಸುತ್ತಿದ್ದ ಅಮೋರಿಯರನ್ನು ಓಡಿಸಿ ಅದನ್ನು ವಶಪಡಿಸಿಕೊಂಡರು. 40 ಆದ್ದರಿಂದ ಮೋಶೆಯು ಗಿಲ್ಯಾದನ್ನು ಮನಸ್ಸೆಯ ಮಗನಾದ ಮಾಕೀರನ ತಿಯವರಿಗೆ ಕೊಟ್ಟನು. ಮಾಕೀರನ ವಂಶದವರು ಅಲ್ಲಿ ನೆಲೆಸಿದರು. 41 ಮನಸ್ಸೆಯ ಕುಲದವನಾದ ಯಾಯೀರನು ಅಮೋರಿಯರ ಕೋಟೆಗಳುಳ್ಳ ಹಳ್ಳಿಗಳನ್ನು ವಶಪಡಿಸಿಕೊಂಡು ಅವುಗಳಿಗೆ, “ಯಾಯೀರನ ಹಳ್ಳಿಗಳು” ಎಂದು ಹೆಸರಿಟ್ಟನು. 42 ನೋಬಹ ಎಂಬವನು ಕೆನಾತ್ ಮತ್ತು ಅದರ ಹತ್ತಿರವಿದ್ದ ಚಿಕ್ಕ ಊರುಗಳನ್ನು ವಶಪಡಿಸಿಕೊಂಡು ಅವುಗಳಿಗೆ “ನೋಬಹ” ಎಂಬ ತನ್ನ ಹೆಸರನ್ನೇ ಕೊಟ್ಟನು.