3
ಕ್ರಿಸ್ತನೇ ಎಲ್ಲಕ್ಕಿಂತಲೂ ಮುಖ್ಯ
ನನ್ನ ಸಹೋದರ ಸಹೋದರಿಯರೇ, ಪ್ರಭುವಿನಲ್ಲಿ ಸಂತೋಷವಾಗಿರಿ. ನಾನು ಮೊದಲು ಬರೆದದ್ದನ್ನೇ ಮತ್ತೆ ಬರೆಯಲು ನನಗೆ ಬೇಸರವೇನೂ ಇಲ್ಲ; ಏಕೆಂದರೆ ಅದು ನಿಮ್ಮನ್ನು ಮತ್ತಷ್ಟು ಸಂರಕ್ಷಿಸುತ್ತದೆ.
ಕೇಡುಮಾಡುವಂಥ ಜನರ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ಅವರು ನಾಯಿಗಳಂತಿದ್ದಾರೆ. ಸುನ್ನತಿ ಎಂದು ಹೇಳಿಕೊಂಡು ಅಂಗಚ್ಛೇದನೆ ಮಾಡುವವರ ವಿಷಯದಲ್ಲಿ ಎಚ್ಚರಿಕೆಯಾಗಿರಿ. ನಾವಾದರೋ ನಿಜವಾದ ಸುನ್ನತಿಯನ್ನು ಹೊಂದಿದವರಾಗಿದ್ದೇವೆ; ದೇವರನ್ನು ಆತ್ಮನ ಮೂಲಕ ಆರಾಧಿಸುವವರಾಗಿದ್ದೇವೆ.* ನಾವಾದರೋ … ಆರಾಧಿಸುವವರಾಗಿದ್ದೇವೆ ಅಂದರೆ, ದೇವರನ್ನು ಆತ್ಮದಿಂದ ಆರಾಧಿಸುವುದು. ನಾವು ಕ್ರಿಸ್ತ ಯೇಸುವಿನಲ್ಲಿರಲು ಹೆಮ್ಮೆಪಡುತ್ತೇವೆ. ನಾವು ನಮ್ಮ ಮೇಲಾಗಲಿ ನಾವು ಮಾಡಬಲ್ಲವುಗಳ ಮೇಲಾಗಲಿ ಭರವಸೆ ಇಡುವುದಿಲ್ಲ. ನಾನು ನನ್ನ ಮೇಲೆ ಭರವಸೆ ಇಡಬಲ್ಲವನಾಗಿದ್ದರೂ ಇಡುವುದಿಲ್ಲ. ತನ್ನ ಮೇಲೆ ಭರವಸೆ ಇಡಲು ತನಗೆ ಆಧಾರವಿರುವುದಾಗಿ ಯಾವನಾದರೂ ಯೋಚಿಸಿದರೆ, ನನ್ನ ಮೇಲೆ ಭರವಸೆ ಇಡಲು ನನಗೆ ಅದಕ್ಕಿಂತಲೂ ಹೆಚ್ಚಿನ ಆಧಾರವಿದೆ. ಹುಟ್ಟಿದ ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು. ನಾನು ಇಸ್ರೇಲ್ ವಂಶದವನು ಮತ್ತು ಬೆನ್ಯಾಮೀನನ ಕುಲದವನು. ನಾನು ಇಬ್ರಿಯನು ಮತ್ತು ನನ್ನ ತಂದೆತಾಯಿಗಳು ಸಹ ಇಬ್ರಿಯರು. ನಾನು ಮೋಶೆಯ ಧರ್ಮಶಾಸ್ತ್ರವನ್ನು ಮುಖ್ಯವಾದದ್ದೆಂದು ಪರಿಗಣಿಸಿ ಫರಿಸಾಯನಾದೆನು; ಯೆಹೂದ್ಯ ಧರ್ಮದಲ್ಲಿ ಬಹಳ ಆಸಕ್ತಿಯುಳ್ಳವನಾಗಿದ್ದು ಕ್ರೈಸ್ತಸಭೆಯನ್ನು (ವಿಶ್ವಾಸಿಗಳನ್ನು) ಹಿಂಸಿಸಿದೆನು. ಮೋಶೆಯ ಧರ್ಮಶಾಸ್ತ್ರಕ್ಕೆ ಯಾವಾಗಲೂ ವಿಧೇಯನಾಗಿದ್ದುದರಿಂದ ಯಾರೂ ನನ್ನ ವಿಷಯದಲ್ಲಿ ತಪ್ಪನ್ನು ಕಂಡುಹಿಡಿಯಲಾಗಲಿಲ್ಲ.
ಒಂದು ಕಾಲದಲ್ಲಿ ಇವುಗಳೆಲ್ಲ ನನಗೆ ಮುಖ್ಯವಾಗಿದ್ದವು. ಆದರೆ ಈಗ ಅವುಗಳೆಲ್ಲ ಕ್ರಿಸ್ತನ ದೆಸೆಯಿಂದ ನಿಷ್ಪ್ರಯೋಜಕವಾಗಿವೆ. ಅಷ್ಟೇ ಅಲ್ಲ, ನನ್ನ ಪ್ರಭುವಾದ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವುದೇ ಎಲ್ಲಾ ಸಂಗತಿಗಳಿಗಿಂತಲೂ ಅತಿಶ್ರೇಷ್ಠವಾದದ್ದೆಂದು ನನಗೆ ಮನದಟ್ಟಾಗಿದೆ. ನಾನು ಯಾವುದನ್ನು ಮುಖ್ಯವಾದವುಗಳೆಂದು ಪರಿಗಣಿಸಿದ್ದೆನೋ ಅವುಗಳನ್ನೆಲ್ಲ ಕ್ರಿಸ್ತನ ನಿಮಿತ್ತ ಕಳೆದುಕೊಂಡೆನು. ಅವುಗಳೆಲ್ಲ ನಿಷ್ಪ್ರಯೋಜಕವಾದವುಗಳೆಂದು ನನಗೆ ತಿಳಿದಿದೆ. ನಾನು ಕ್ರಿಸ್ತನನ್ನು ಹೊಂದಿಕೊಳ್ಳಲು ಮತ್ತು ಕ್ರಿಸ್ತನಲ್ಲಿರಲು ಇದು ನನಗೆ ಅವಕಾಶ ಮಾಡಿಕೊಡುತ್ತದೆ. ನಾನು ಕ್ರಿಸ್ತನ ಮೂಲಕ ನೀತಿವಂತನಾಗಿದ್ದೇನೆ. ಈ ನೀತಿಯು, ಧರ್ಮಶಾಸ್ತ್ರವನ್ನು ಅನುಸರಿಸಿದ ಮಾತ್ರಕ್ಕೆ ದೊರೆಯುವುದಿಲ್ಲ. ಇದು ನಂಬಿಕೆಯ ಮೂಲಕ ದೇವರಿಂದ ಬರುತ್ತದೆ. ಕ್ರಿಸ್ತನಲ್ಲಿ ನನಗಿರುವ ನಂಬಿಕೆಯ ಮೂಲಕ ದೇವರು ನನ್ನನ್ನು ನೀತಿವಂತನನ್ನಾಗಿ ಮಾಡಿದನು. 10 ಕ್ರಿಸ್ತನನ್ನೂ ಪುನರುತ್ಥಾನದ ಶಕ್ತಿಯನ್ನೂ ತಿಳಿದುಕೊಂಡು ಆತನ ಸಂಕಟದಲ್ಲಿ ಪಾಲುಗಾರನಾಗಿ ಆತನ ಮರಣದಲ್ಲಿ ಆತನಂತಾಗಬೇಕೆಂಬುದೇ ನನ್ನ ಅಪೇಕ್ಷೆ. 11 ಹೀಗಾದರೆ, ನಾನು ಸತ್ತವರೊಳಗಿಂದ ಎಬ್ಬಿಸಲ್ಪಡುತ್ತೇನೆ ಎಂಬ ನಿರೀಕ್ಷೆ ನನಗಿದೆ.
ಗುರಿಮುಟ್ಟಲು ಪ್ರಯತ್ನ
12 ಈಗಾಗಲೇ ನಾನು ಇದೆಲ್ಲವನ್ನು ಸಾಧಿಸಿ ಪರಿಪೂರ್ಣತೆಯನ್ನು ಗಳಿಸಿದ್ದೇನೆ ಎಂದು ಹೇಳುತ್ತಿಲ್ಲ. ನಾನು ಆ ಗುರಿಯನ್ನು ಇನ್ನೂ ಮುಟ್ಟಿಲ್ಲ. ಆದರೆ ಆ ಗುರಿಯನ್ನು ಮುಟ್ಟಿ ಅದನ್ನು ನನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇದು ಕ್ರಿಸ್ತನ ಅಪೇಕ್ಷೆ. ಆದಕಾರಣವೇ, ಕ್ರಿಸ್ತನು ನನ್ನನ್ನು ತನ್ನವನನ್ನಾಗಿ ಮಾಡಿಕೊಂಡನು. 13 ಸಹೋದರ ಸಹೋದರಿಯರೇ, ನಾನಿನ್ನೂ ಆ ಗುರಿಯನ್ನು ಮುಟ್ಟಿಲ್ಲವೆಂಬುದು ನನಗೆ ಗೊತ್ತಿದೆ. ಆದರೆ ನಾನು ಯಾವಾಗಲೂ ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ನನ್ನ ಮುಂದಿರುವ ಗುರಿಯನ್ನು ಮುಟ್ಟಲು ನನ್ನಿಂದಾದಷ್ಟರ ಮಟ್ಟಿಗೆ ಓಡುತ್ತಿದ್ದೇನೆ. 14 ದೇವರು ನಮ್ಮನ್ನು ಕ್ರಿಸ್ತನ ಮೂಲಕ ಮೇಲೋಕದ ಜೀವಿತಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಹುಮಾನವನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.
15 ಆತ್ಮಿಕತೆಯಲ್ಲಿ ಪರಿಪೂರ್ಣವಾದ ಮಟ್ಟಕ್ಕೆ ಬಂದಿರುವ ನಾವೆಲ್ಲರೂ ಇದೇ ರೀತಿ ಯೋಚಿಸಬೇಕು. ನೀವು ಈ ಸಂಗತಿಗಳಲ್ಲಿ ಯಾವುದನ್ನಾದರೂ ಒಪ್ಪಿಕೊಳ್ಳದಿದ್ದರೆ ದೇವರೇ ನಿಮಗೆ ಅದನ್ನು ಸ್ಪಷ್ಟಪಡಿಸುವನು. 16 ಆದರೆ ನಾವು ಈಗಾಗಲೇ ಹೊಂದಿರುವ ಸತ್ಯವನ್ನು ಅನುಸರಿಸುತ್ತಾ ನಡೆಯೋಣ.
17 ಸಹೋದರ ಸಹೋದರಿಯರೇ, ನೀವೆಲ್ಲರೂ ನನ್ನಂತೆ ಜೀವಿಸಲು ಪ್ರಯತ್ನಿಸಿ. ನಾವು ನಿಮಗೆ ತೋರಿಸಿದ ಮಾದರಿಯ ಪ್ರಕಾರ ಜೀವಿಸುವವರನ್ನು ಅನುಸರಿಸಿರಿ. 18 ಅನೇಕರು ಕ್ರಿಸ್ತನ ಶಿಲುಬೆಗೆ ವೈರಿಗಳೊ ಎಂಬಂತೆ ಜೀವಿಸುತ್ತಾರೆ. ಅವರ ಬಗ್ಗೆ ನಾನು ನಿಮಗೆ ಅನೇಕ ಸಲ ತಿಳಿಸಿದ್ದೇನೆ. ಈಗಲೂ ಕಣ್ಣೀರಿನಿಂದ ಹೇಳುತ್ತೇನೆ. 19 ಅವರ ನಡತೆಯು ಅವರನ್ನು ನಾಶದೆಡೆಗೆ ನಡೆಸುತ್ತಿದೆ. ಅವರು ದೇವರ ಸೇವೆ ಮಾಡುತ್ತಿಲ್ಲ. ಆ ಜನರು ಕೇವಲ ತಮ್ಮ ಸಂತೋಷಕ್ಕಾಗಿ ಜೀವಿಸುತ್ತಿದ್ದಾರೆ. ಅವರು ನಾಚಿಕೆಕರವಾದ ಕೆಲಸಗಳನ್ನು ಮಾಡಿ, ಅವುಗಳ ಬಗ್ಗೆ ಹೆಮ್ಮೆಪಡುತ್ತಾರೆ. ಅವರು ಕೇವಲ ಈ ಲೋಕದ ವಿಷಯಗಳ ಬಗ್ಗೆ ಆಲೋಚಿಸುತ್ತಾರೆ. 20 ನಾವಾದರೋ ಪರಲೋಕ ಸಂಸ್ಥಾನದವರು. ನಮ್ಮ ರಕ್ಷಕನು ಅಲ್ಲಿಂದಲೇ ಬರುವುದನ್ನು ನಾವು ಎದುರುನೋಡುತ್ತಿದ್ದೇವೆ. ಪ್ರಭುವಾದ ಯೇಸು ಕ್ರಿಸ್ತನೇ ನಮ್ಮ ರಕ್ಷಕನು. 21 ಆತನು ತನ್ನ ಶಕ್ತಿಯಿಂದ ಸಮಸ್ತವನ್ನು ಆಳುತ್ತಾನೆ ಮತ್ತು ನಮ್ಮ ದೀನಾವಸ್ಥೆಯ ಈ ಶರೀರವನ್ನು ರೂಪಾಂತರಪಡಿಸಿ ತನ್ನ ಸ್ವಂತ ಮಹಿಮಾಶರೀರದಂತೆ ಮಾಡುತ್ತಾನೆ.

*3:3: ನಾವಾದರೋ … ಆರಾಧಿಸುವವರಾಗಿದ್ದೇವೆ ಅಂದರೆ, ದೇವರನ್ನು ಆತ್ಮದಿಂದ ಆರಾಧಿಸುವುದು.