11
ರಚನೆಗಾರ: ದಾವೀದ.
ನಾನು ಯೆಹೋವನನ್ನೇ ಆಶ್ರಯಿಸಿಕೊಂಡಿದ್ದೇನೆ.
ಹೀಗಿರಲು, “ನಿನ್ನ ಬೆಟ್ಟಕ್ಕೆ ಪಕ್ಷಿಯಂತೆ ಹಾರಿಹೋಗು” ಎಂದು ನೀವು ಹೇಳುವುದೇಕೆ?
 
ದುಷ್ಟರು ಬೇಟೆಗಾರರಂತಿದ್ದಾರೆ;
ಅವರು ಕತ್ತಲೆಯಲ್ಲಿ ಅವಿತುಕೊಂಡಿರುವರು;
ಬಿಲ್ಲುಗಳಿಗೆ ಬಾಣಗಳನ್ನು ಹೂಡಿ ನೀತಿವಂತರ ಹೃದಯಕ್ಕೆ ನೇರವಾಗಿ ಹೊಡೆಯುವರು.
ಅಸ್ತಿವಾರಗಳೇ ನಾಶವಾಗುತ್ತಿದ್ದರೆ
ನೀತಿವಂತನು ಏನು ಮಾಡಲಾದೀತು?
 
ಯೆಹೋವನು ತನ್ನ ಪವಿತ್ರ ಆಲಯದಲ್ಲಿದ್ದಾನೆ.
ಆತನು ಪರಲೋಕದಲ್ಲಿ ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು
ಮನುಷ್ಯರ ಕಾರ್ಯಗಳನ್ನು ಗಮನಿಸುತ್ತಿದ್ದಾನೆ.
ಆತನ ಕಣ್ಣುಗಳು ಅವರನ್ನು ಪರಿಶೋಧಿಸುತ್ತಿವೆ.
ಯೆಹೋವನು ನೀತಿವಂತರಿಗಾಗಿ ಹುಡುಕುವನು.
ಆದರೆ ಆತನು ದುಷ್ಟರನ್ನೂ ಹಿಂಸಕರನ್ನೂ ತಿರಸ್ಕರಿಸುವನು.
ಆತನು ಆ ದುಷ್ಟರ ಮೇಲೆ ಬೆಂಕಿಗಂಧಕಗಳ ಮಳೆಯನ್ನು ಸುರಿಸುವನು.
ಅವರಿಗೆ ಸಿಕ್ಕುವುದೆಂದರೆ ಕಾದ ಉರಿಗಾಳಿಯೊಂದೇ.
ಯಾಕೆಂದರೆ ಯೆಹೋವನು ನೀತಿಸ್ವರೂಪನಾಗಿದ್ದಾನೆ; ಆತನು ನ್ಯಾಯವನ್ನು ಪ್ರೀತಿಸುತ್ತಾನೆ.
ನೀತಿವಂತರು ಆತನ ಮುಖವನ್ನು ನೋಡುವರು.