40
ರಚನೆಗಾರ: ದಾವೀದ.
ನಾನು ಯೆಹೋವನಿಗೋಸ್ಕರ ತಾಳ್ಮೆಯಿಂದ ನಿರೀಕ್ಷಿಸಿದೆನು;
ಆತನು ನನ್ನ ಮೊರೆಗೆ ಕಿವಿಗೊಟ್ಟು ಕೇಳಿದನು.
ಆತನು ನನ್ನನ್ನು ನಾಶನದ ಗುಂಡಿಯೊಳಗಿಂದ* ನಾಶನದ ಗುಂಡಿಯೊಳಗಿಂದ “ಶಿಯೊಲ್”ಗೆ ಮತ್ತೊಂದು ಹೆಸರು “ಮರಣದ ಸ್ಥಳ.” ಎತ್ತಿದನು.
ಆತನು ನನ್ನನ್ನು ಕೆಸರಿನ ಸ್ಥಳದಿಂದ ಕೆಸರಿನ ಸ್ಥಳದಿಂದ ಅನೇಕ ಪುರಾತನ ಕಥೆಗಳಲ್ಲಿ ಮರಣದ ಸ್ಥಳವಾದ ಶಿಯೊಲ್ ಸುತ್ತಲೆಲ್ಲಾ ಕೆಸರಿನಿಂದ ಕೂಡಿರುವ ಕತ್ತಲಾದ ಸ್ಥಳವೆಂದು ಹೇಳಲಾಗಿದೆ. ಸಾಮಾನ್ಯವಾಗಿ ಸತ್ತಜನರನ್ನು ನೆಲದೊಳಗೆ ಹೂಳುವುದೇ ಇದಕ್ಕೆ ಕಾರಣ.
ಮೇಲೆತ್ತಿ ಬಂಡೆಯ ಮೇಲಿರಿಸಿದನು;
ದೃಢವಾಗಿ ಹೆಜ್ಜೆಯಿಡುವಂತೆ ಮಾಡಿದನು.
ಆತನು ನನ್ನ ಬಾಯಲ್ಲಿ ಹೊಸ ಕೀರ್ತನೆಯನ್ನು ಹುಟ್ಟಿಸಿದ್ದಾನೆ.
ಅದು ನನ್ನ ದೇವರ ಸ್ತುತಿಗೀತೆ.
ನನಗೆ ಸಂಭವಿಸಿದವುಗಳನ್ನು ಅನೇಕರು ನೋಡಿ
ಯೆಹೋವನಲ್ಲಿ ಭರವಸವಿಟ್ಟು ಆತನನ್ನು ಆರಾಧಿಸುವರು.
ಯಾವನು ಯೆಹೋವನಲ್ಲಿ ಭರವಸವಿಟ್ಟಿದ್ದಾನೋ ಅವನೇ ಧನ್ಯನು.
ಸಹಾಯಕ್ಕಾಗಿ ವಿಗ್ರಹಗಳ ಕಡೆಗೂ ಸುಳ್ಳುದೇವರುಗಳ ಕಡೆಗೂ ತಿರುಗಿಕೊಳ್ಳದವನೇ ಭಾಗ್ಯವಂತನು.
ಯೆಹೋವನೇ, ನನ್ನ ದೇವರೇ, ನೀನು ಅನೇಕ ಮಹತ್ಕಾರ್ಯಗಳನ್ನು ಮಾಡಿರುವೆ!
ನನ್ನ ವಿಷಯದಲ್ಲಿ ನಿನಗೆ ಅತಿಶಯವಾದ ಆಲೋಚನೆಗಳಿವೆ.
ಅವುಗಳನ್ನು ವಿವರಿಸಿ ಹೇಳಲು ಸಾಧ್ಯವಿಲ್ಲ;
ಅವು ಅಸಂಖ್ಯಾತವಾಗಿವೆ.
 
ನಾನು ಗ್ರಹಿಸಿಕೊಂಡಿದ್ದೇನೆಂದರೆ,
ಯಜ್ಞಗಳಾಗಲಿ ಧಾನ್ಯಸಮರ್ಪಣೆಗಳಾಗಲಿ
ಸರ್ವಾಂಗಹೋಮಗಳಾಗಲಿ ಪಾಪಪರಿಹಾರಕ ಯಜ್ಞಗಳಾಗಲಿ ನಿನಗೆ ಬೇಕಿಲ್ಲ.
ಆದ್ದರಿಂದ ನಾನು, “ಇಗೋ, ಬರುತ್ತಿದ್ದೇನೆ.
ನನ್ನ ವಿಷಯವಾಗಿ ಗ್ರಂಥದಲ್ಲಿ ಇದನ್ನು ಬರೆಯಲಾಗಿದೆ.
ನನ್ನ ದೇವರೇ, ನಿನ್ನ ಚಿತ್ತಾನುಸಾರವಾಗಿ ಮಾಡುತ್ತೇನೆ.
ನಿನ್ನ ಉಪದೇಶಗಳನ್ನು ಹೃದಯದಲ್ಲಿಟ್ಟುಕೊಂಡಿದ್ದೇನೆ” ಅಂದೆನು.
ವಿಜಯದ ಶುಭಾವಾರ್ತೆಯನ್ನು ನಾನು ಮಹಾಸಭೆಯಲ್ಲಿ ತಿಳಿಸಿದೆನು.
ಯೆಹೋವನೇ, ನಾನು ಬಾಯಿ ಮುಚ್ಚಿಕೊಂಡಿರುವುದಿಲ್ಲ, ಅದು ನಿನಗೆ ತಿಳಿದೇ ಇದೆ.
10 ನಿನ್ನ ನೀತಿಕಾರ್ಯಗಳ ಕುರಿತು ನಾನು ಹೇಳಿದೆನು.
ಅವುಗಳನ್ನು ನನ್ನ ಹೃದಯದಲ್ಲಿ ಬಚ್ಚಿಟ್ಟುಕೊಳ್ಳಲಿಲ್ಲ.
ನಿನ್ನ ನಂಬಿಗಸ್ತಿಕೆಯನ್ನೂ ರಕ್ಷಣೆಯನ್ನೂ ನಾನು ಅವರಿಗೆ ತಿಳಿಸುವೆನು.
ನಿನ್ನ ಪ್ರೀತಿಯನ್ನೂ ನಿನ್ನ ಸತ್ಯತೆಯನ್ನೂ ಮಹಾಸಭೆಯಲ್ಲಿ ಹೇಳುವೆನು.
11 ಯೆಹೋವನೇ, ನಿನ್ನ ಕರುಣೆಯನ್ನು ನನ್ನಿಂದ ದೂರ ಮಾಡಬೇಡ.
ನಿನ್ನ ದಯೆಯೂ ನಂಬಿಗಸ್ತಿಕೆಯೂ ನನ್ನನ್ನು ಸಂರಕ್ಷಿಸಲಿ.
 
12 ದುಷ್ಟರು ನನ್ನನ್ನು ಸುತ್ತುಗಟ್ಟಿದ್ದಾರೆ
ಅವರು ಅಸಂಖ್ಯಾತರಾಗಿದ್ದಾರೆ.
ನನ್ನ ಪಾಪಗಳು ನನ್ನನ್ನು ಹಿಡಿದಿರುವುದರಿಂದ
ಅವುಗಳಿಂದ ತಪ್ಪಿಸಿಕೊಳ್ಳಲಾರೆ.
ನನ್ನ ತಲೆಯ ಕೂದಲುಗಳಿಗಿಂತಲೂ ನನ್ನ ಪಾಪಗಳು ಹೆಚ್ಚಾಗಿವೆ.
ನಾನು ಧೈರ್ಯವನ್ನು ಕಳೆದುಕೊಂಡಿರುವೆ.
13 ಯೆಹೋವನೇ, ನನ್ನನ್ನೇ ರಕ್ಷಿಸು!
ಬೇಗನೆ ಬಂದು ನನ್ನನ್ನು ಕಾಪಾಡು!
14 ಆ ದುಷ್ಟರು ನನ್ನನ್ನು ಕೊಲ್ಲಬೇಕೆಂದಿದ್ದಾರೆ.
ಯೆಹೋವನೇ, ಅವರಿಗೆ ನಾಚಿಕೆಯನ್ನೂ ನಿರಾಶೆಯನ್ನೂ ಬರಮಾಡು.
ನನಗೆ ಕೇಡುಮಾಡಬೇಕೆಂದಿರುವ ಅವರು
ನಾಚಿಕೆಯಿಂದ ಓಡಿಹೋಗಲಿ!
15 ನನ್ನನ್ನು ಗೇಲಿಮಾಡುವ ಆ ದುಷ್ಟರು
ತಮಗಾಗುವ ಅವಮಾನದಿಂದ ಗಾಬರಿಗೊಳ್ಳಲಿ!
16 ಆದರೆ ನಿನ್ನ ದರ್ಶನವನ್ನು ಬೇಡುವವರು ಉಲ್ಲಾಸದಿಂದ ಸಂತೋಷಪಡಲಿ.
ನಿನ್ನ ರಕ್ಷಣೆಯಲ್ಲಿ ಆನಂದಿಸುವವರು, “ಯೆಹೋವನಿಗೆ ಸ್ತೋತ್ರವಾಗಲಿ” ಎಂದು ಯಾವಾಗಲೂ ಹೇಳಲಿ.
 
17 ಒಡೆಯನೇ, ನಾನು ಕೇವಲ ಬಡವನೂ ಅಸಹಾಯಕನೂ ಆಗಿರುವೆ.
ನನಗೆ ಸಹಾಯಮಾಡಿ ನನ್ನನ್ನು ರಕ್ಷಿಸು.
ನನ್ನ ದೇವರೇ, ತಡಮಾಡಬೇಡ.
 

*40:2: ನಾಶನದ ಗುಂಡಿಯೊಳಗಿಂದ “ಶಿಯೊಲ್”ಗೆ ಮತ್ತೊಂದು ಹೆಸರು “ಮರಣದ ಸ್ಥಳ.”

40:2: ಕೆಸರಿನ ಸ್ಥಳದಿಂದ ಅನೇಕ ಪುರಾತನ ಕಥೆಗಳಲ್ಲಿ ಮರಣದ ಸ್ಥಳವಾದ ಶಿಯೊಲ್ ಸುತ್ತಲೆಲ್ಲಾ ಕೆಸರಿನಿಂದ ಕೂಡಿರುವ ಕತ್ತಲಾದ ಸ್ಥಳವೆಂದು ಹೇಳಲಾಗಿದೆ. ಸಾಮಾನ್ಯವಾಗಿ ಸತ್ತಜನರನ್ನು ನೆಲದೊಳಗೆ ಹೂಳುವುದೇ ಇದಕ್ಕೆ ಕಾರಣ.