79
ಸ್ತುತಿಗೀತೆ. ರಚನೆಗಾರ: ಆಸಾಫ.
ದೇವರೇ, ಅನ್ಯ ಜನಾಂಗಗಳು ನಿನ್ನ ಜನರಿಗೆ ಮುತ್ತಿಗೆ ಹಾಕಿದ್ದಾರೆ.
ಅವರು ನಿನ್ನ ಪವಿತ್ರಾಲಯವನ್ನು ಹೊಲಸು ಮಾಡಿದರು;
ಜೆರುಸಲೇಮನ್ನು ನಾಶ ಮಾಡಿದರು.
ಅವರು ನಿನ್ನ ಸೇವಕರ ಸತ್ತದೇಹಗಳನ್ನು ಕ್ರೂರ ಪಕ್ಷಿಗಳಿಗೆ ಆಹಾರ ಮಾಡಿದರು.
ಅವರು ನಿನ್ನ ಭಕ್ತರ ದೇಹಗಳನ್ನು ಕ್ರೂರ ಪ್ರಾಣಿಗಳಿಗೆ ಹಾಕಿದರು.
ರಕ್ತವು ನೀರಿನಂತೆ ಹರಿಯುವ ತನಕ ಶತ್ರುಗಳು ನಿನ್ನ ಜನರನ್ನು ಕೊಂದುಹಾಕಿದರು.
ಶವಗಳನ್ನು ಹೂಳಲು ಯಾರೂ ಉಳಿದಿಲ್ಲ.
ನಮ್ಮ ನೆರೆಹೊರೆಯ ದೇಶಗಳವರು ನಮಗೆ ಅವಮಾನ ಮಾಡಿದರು.
ನಮ್ಮ ಸುತ್ತಮುತ್ತಲಿನ ಜನರೆಲ್ಲರೂ ನಮ್ಮನ್ನು ನೋಡಿ ನಗುತ್ತಾ ಗೇಲಿ ಮಾಡಿದರು.
ದೇವರೇ, ಇನ್ನೆಷ್ಟರವರೆಗೆ ನೀನು ನಮ್ಮ ಮೇಲೆ ಕೋಪದಿಂದಿರುವೆ?
ನಿನ್ನ ಕೋಪಾಗ್ನಿಯು ಉರಿಯುತ್ತಲೇ ಇರಬೇಕೇ?
ನಿನ್ನನ್ನು ಅರಿಯದ ಜನಾಂಗಗಳ ಮೇಲೆಯೂ
ನಿನ್ನ ಹೆಸರನ್ನು ಆರಾಧಿಸದ ಜನಾಂಗಗಳ ಮೇಲೆಯೂ ನಿನ್ನ ರೌದ್ರವನ್ನು ಸುರಿದುಬಿಡು.
ಯಾಕೆಂದರೆ ಆ ಜನಾಂಗಗಳು
ಯಾಕೋಬ್ಯರನ್ನೂ ಅವರ ದೇಶವನ್ನೂ ನಾಶಮಾಡಿದರು.
ನಮ್ಮ ಪೂರ್ವಿಕರು ಮಾಡಿದ ಪಾಪಕ್ಕೆ ಬರಬೇಕಾದ ದಂಡನೆಯನ್ನು ನಮ್ಮ ಮೇಲೆ ಬರಗೊಡಿಸಬೇಡ.
ಬೇಗನೆ ನಿನ್ನ ಕರುಣೆಯನ್ನು ನಮಗೆ ತೋರು!
ನೀನು ನಮಗೆ ಎಷ್ಟೋ ಅಗತ್ಯವಾಗಿರುವೆ!
ನಮ್ಮ ರಕ್ಷಕನಾದ ದೇವರೇ, ನಮಗೆ ಸಹಾಯಮಾಡು!
ನಿನ್ನ ಹೆಸರಿನ ಘನತೆಗಾಗಿ ನಮಗೆ ಸಹಾಯಮಾಡು!
ನಮ್ಮನ್ನು ರಕ್ಷಿಸಿ ನಿನ್ನ ಹೆಸರಿನ ಘನತೆಗೋಸ್ಕರ
ನಮ್ಮ ಪಾಪಗಳನ್ನು ಅಳಿಸಿಬಿಡು.
10 ಅನ್ಯ ಜನಾಂಗಗಳು, “ನಿಮ್ಮ ದೇವರು ಎಲ್ಲಿ? ಆತನು ನಿಮಗೆ ಸಹಾಯಮಾಡಲಾರನೇ?”
ಎಂದು ಹೇಳಲು ಅವಕಾಶ ಕೊಡಬೇಡ.
ದೇವರೇ, ಅವರು ನಿನ್ನ ಸೇವಕರನ್ನು ಕೊಂದದ್ದಕ್ಕಾಗಿ
ನಮ್ಮ ಕಣ್ಣೆದುರಿನಲ್ಲಿಯೇ ಅವರನ್ನು ದಂಡಿಸು.
11 ದಯವಿಟ್ಟು, ಸೆರೆಯಾಳುಗಳ ಗೋಳಾಟಕ್ಕೆ ಕಿವಿಗೊಡು!
ಸಾಯಲಿರುವವರನ್ನು ನಿನ್ನ ಮಹಾಶಕ್ತಿಯಿಂದ ಕಾಪಾಡು.
12 ಒಡೆಯನೇ, ನಮ್ಮ ಸುತ್ತಮುತ್ತಲಿನ ಜನರು ಮಾಡಿದ ಕಾರ್ಯಗಳಿಗಾಗಿ
ಅವರನ್ನು ಏಳರಷ್ಟು ದಂಡಿಸು.
ನಿನಗೆ ಅವಮಾನಮಾಡಿದ್ದರಿಂದ ಅವರನ್ನು ದಂಡಿಸು.
13 ನಾವು ನಿನ್ನ ಜನರೂ ನೀನು ಪಾಲಿಸುವ ಮಂದೆಯೂ ಆಗಿದ್ದೇವೆ.
ನಾವು ನಿನ್ನನ್ನು ಎಂದೆಂದಿಗೂ ಕೊಂಡಾಡುವೆವು.
ನಿನ್ನನ್ನು ಸದಾಕಾಲ ಸ್ತುತಿಸುವೆವು.