103
ರಚನೆಗಾರ: ದಾವೀದ.
ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
ನನ್ನ ಸರ್ವಾಂಗಗಳೇ, ಆತನ ಪವಿತ್ರ ಹೆಸರನ್ನು ಕೊಂಡಾಡಿರಿ!
ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ.
ಆತನು ನಮ್ಮ ಪಾಪಗಳನ್ನೆಲ್ಲಾ ಕ್ಷಮಿಸುವನು;
ನಮ್ಮ ಕಾಯಿಲೆಗಳನ್ನೆಲ್ಲಾ ವಾಸಿಮಾಡುವನು.
ಆತನು ನಮ್ಮಜೀವವನ್ನು ನಾಶನದಿಂದ ರಕ್ಷಿಸಿ
ನಮಗೆ ಪ್ರೀತಿಯನ್ನೂ ಕನಿಕರವನ್ನೂ ತೋರುವನು.
ಆತನು ನಮಗೆ ಸುವರಗಳನ್ನು ಹೇರಳವಾಗಿ ದಯಪಾಲಿಸುವನು.
ಹದ್ದಿಗೆ ಬರುವಂತೆಯೇ ನಮಗೆ ಯೌವನವನ್ನು ಬರಮಾಡುತ್ತಾನೆ.
ಯೆಹೋವನು ನೀತಿವಂತನಾಗಿದ್ದಾನೆ.
ಕುಗ್ಗಿಹೋದವರಿಗೆ ಆತನು ನ್ಯಾಯ ದೊರಕಿಸುವನು.
ಆತನು ತನ್ನ ಕಟ್ಟಳೆಗಳನ್ನು ಮೋಶೆಗೆ ಉಪದೇಶಿಸಿದನು;
ತನ್ನ ಮಹತ್ಕಾರ್ಯಗಳನ್ನು ಇಸ್ರೇಲರಿಗೆ ತೋರಿಸಿದನು.
ಯೆಹೋವನು ಕನಿಕರವುಳ್ಳವನೂ ಕೃಪಾಪೂರ್ಣನೂ
ತಾಳ್ಮೆಯುಳ್ಳವನೂ ಪ್ರೀತಿಪೂರ್ಣನೂ ಆಗಿದ್ದಾನೆ.
ಆತನು ಯಾವಾಗಲೂ ಟೀಕಿಸುವವನಲ್ಲ.
ಆತನು ನಮ್ಮ ಮೇಲೆ ನಿತ್ಯವೂ ಕೋಪವಾಗಿರುವವನಲ್ಲ.
10 ನಾವು ದೇವರಿಗೆ ವಿರೋಧವಾಗಿ ಪಾಪಮಾಡಿದೆವು.
ಆದರೂ ತಕ್ಕ ದಂಡನೆಯನ್ನು ಆತನು ನಮಗೆ ಕೊಡಲಿಲ್ಲ.
11 ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವಾಗಿದೆಯೋ
ಆತನ ಮಹಾಪ್ರೀತಿಯು ಆತನ ಭಕ್ತರ ಮೇಲೆ ಅಷ್ಟೇ ಅಪಾರವಾಗಿದೆ.
12 ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟೋ ದೂರವಿರುವಂತೆ
ನಮ್ಮ ಪಾಪಗಳನ್ನು ನಮ್ಮಿಂದ ತೆಗೆದು ದೂರ ಮಾಡಿದ್ದಾನೆ.
13 ತಂದೆಯು ಮಕ್ಕಳನ್ನು ಕನಿಕರಿಸುವಂತೆ
ಯೆಹೋವನು ತನ್ನ ಭಕ್ತರನ್ನು ಕನಿಕರಿಸುವನು.
14 ಆತನು ನಮ್ಮನ್ನು ಸಂಪೂರ್ಣವಾಗಿ ಬಲ್ಲನು.
ನಾವು ಮಣ್ಣಿನಿಂದ ನಿರ್ಮಾಣಗೊಂಡದ್ದೂ ಆತನಿಗೆ ತಿಳಿದಿದೆ.
15 ನಮ್ಮ ಜೀವಮಾನಗಳು ಕೊಂಚವೆಂಬುದು ಆತನಿಗೆ ಗೊತ್ತಿದೆ.
ನಮ್ಮ ಜೀವಮಾನಗಳು ಹುಲ್ಲಿನಂತಿವೆ ಎಂಬುದೂ ಆತನಿಗೆ ತಿಳಿದಿದೆ.
16 ನಾವು ಅಡವಿಯ ಚಿಕ್ಕ ಹೂವಿನಂತಿದ್ದೇವೆ ಎಂಬುದು ಆತನಿಗೆ ಗೊತ್ತಿದೆ.
ನಮ್ಮ ಹೂವು ಬೇಗನೆ ಬೆಳೆದರೂ ಬಿಸಿಗಾಳಿ ಬೀಸಿದಾಗ ಒಣಗಿಹೋಗುವುದು.
ಬಳಿಕ, ಅದು ಬೆಳೆದ ಸ್ಥಳವನ್ನೂ ಗುರುತಿಸಲಾಗದು.
17 ಆದರೆ ಯೆಹೋವನು ತನ್ನ ಭಕ್ತರನ್ನು ಪ್ರೀತಿಸುತ್ತಲೇ ಬಂದನು.
ಇನ್ನು ಮುಂದೆಯೂ ಪ್ರೀತಿಸುತ್ತಲೇ ಇರುವನು.
ಆತನು ಅವರ ಮಕ್ಕಳಿಗೂ ಮೊಮ್ಮಕ್ಕಳಿಗೂ ಒಳ್ಳೆಯವನಾಗಿರುವನು.
18 ಆತನ ಒಡಂಬಡಿಕೆಗೆ ವಿಧೇಯರಾಗುವ ಜನರಿಗೆ ಆತನು ಒಳ್ಳೆಯವನಾಗಿದ್ದಾನೆ.
ಆತನ ಆಜ್ಞೆಗಳಿಗೆ ವಿಧೇಯರಾಗುವ ಜನರಿಗೆ ಆತನು ಒಳ್ಳೆಯವನಾಗಿದ್ದಾನೆ.
19 ಯೆಹೋವನ ಸಿಂಹಾಸನವು ಪರಲೋಕದಲ್ಲಿದೆ.
ಆತನು ಸಮಸ್ತವನ್ನು ಆಳುವನು.
20 ದೇವದೂತರೇ, ಆತನ ಮಾತಿಗೆ ಕಿವಿಗೊಡುವವರೇ,
ಆತನ ಆಜ್ಞೆಗಳಿಗೆ ವಿಧೇಯರಾಗುವ ಬಲಿಷ್ಠ ಸೈನಿಕರೇ, ಯೆಹೋವನನ್ನು ಕೊಂಡಾಡಿರಿ.
21 ಆತನ ಸೈನ್ಯಗಳೇ,* ಆತನ ಸೈನ್ಯಗಳೇ ಈ ಪದ, “ಸೈನ್ಯಗಳು,” “ದೇವದೂತರು,” ಅಥವಾ “ನಕ್ಷತ್ರಗಳು ಮತ್ತು ಗ್ರಹಗಳು” ಎಂಬರ್ಥಗಳನ್ನು ಕೊಡುತ್ತದೆ. ಚಿತ್ತವನ್ನು ನೇರವೇರಿಸುವ ಸೇವಕರೇ,
ಯೆಹೋವನನ್ನು ಕೊಂಡಾಡಿರಿ.
22 ಸರ್ವಸ್ಥಳಗಲ್ಲಿರುವ ಸಮಸ್ತವನ್ನು ಸೃಷ್ಟಿಸಿದಾತನು ಯೆಹೋವನೇ ಸರ್ವಸ್ಥಳಗಳಲ್ಲಿರುವ ಸಮಸ್ತಕ್ಕೂ ದೇವರೇ ಅಧಿಪತಿ.
ಅವುಗಳೆಲ್ಲಾ ಆತನನ್ನು ಕೊಂಡಾಡಲಿ!
ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
 

*103:21: ಆತನ ಸೈನ್ಯಗಳೇ ಈ ಪದ, “ಸೈನ್ಯಗಳು,” “ದೇವದೂತರು,” ಅಥವಾ “ನಕ್ಷತ್ರಗಳು ಮತ್ತು ಗ್ರಹಗಳು” ಎಂಬರ್ಥಗಳನ್ನು ಕೊಡುತ್ತದೆ.