141
ಸ್ತುತಿಗೀತೆ. ರಚನೆಗಾರ: ದಾವೀದ.
ಯೆಹೋವನೇ, ಸಹಾಯಕ್ಕಾಗಿ ನಿನಗೆ ಮೊರೆಯಿಡುತ್ತಿದ್ದೇನೆ.
ನನ್ನ ಪ್ರಾರ್ಥನೆಗೆ ಕಿವಿಗೊಡು.
ಬೇಗನೆ ಬಂದು ನನಗೆ ಸಹಾಯಮಾಡು!
ನನ್ನ ಪ್ರಾರ್ಥನೆಯು ನಿನಗೆ ಧೂಪದಂತೆಯೂ
ಸಾಯಂಕಾಲದ ಯಜ್ಞದಂತೆಯೂ ಸಮರ್ಪಕವಾಗಲಿ.
 
ಯೆಹೋವನೇ, ನನ್ನ ಮಾತುಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದಕ್ಕೂ
ವಿವೇಚಿಸಿ ನುಡಿಯುವುದಕ್ಕೂ ನನಗೆ ಸಹಾಯ ಮಾಡು.
ಕೆಟ್ಟದ್ದನ್ನು ಮಾಡಲು ನನಗೆ ಅವಕಾಶಕೊಡಬೇಡ.
ಕೆಟ್ಟವರೊಂದಿಗೆ ಸೇರಿ ಕೆಟ್ಟದ್ದನ್ನು ಮಾಡದಂತೆ ನನ್ನನ್ನು ಕಾಪಾಡು.
ಅವರು ಹರ್ಷಿಸುವಂಥವುಗಳಲ್ಲಿ ನಾನು ಪಾಲುಗಾರನಾಗದಂತೆ ನೋಡಿಕೋ.
ನೀತಿವಂತನು ನನ್ನನ್ನು ಸರಿಪಡಿಸಿದರೆ
ಅದು ನನಗೇ ಒಳ್ಳೆಯದು.
ನಿನ್ನ ಭಕ್ತರು ನನ್ನನ್ನು ಗದರಿಸಿದರೆ
ಅದು ನನಗೇ ಒಳ್ಳೆಯದು.
ಆದರೆ ಕೆಟ್ಟವರ ಕೆಟ್ಟಕೃತ್ಯಗಳ ವಿರೋಧವಾಗಿ ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ.
ಅವರ ಅಧಿಪತಿಗಳು ದೊಬ್ಬಲ್ಪಡಲಿ.
ನಾನು ಹೇಳಿದ್ದು ಸತ್ಯವೆಂದು ಆಗ ಜನರು ತಿಳಿದುಕೊಳ್ಳುವರು.
 
ಜನರು ಹೊಲವನ್ನು ಉತ್ತು ಹೆಂಟೆಗಳನ್ನು ಪುಡಿಮಾಡಿ ಚದರಿಸುವಂತೆಯೇ
ಕೆಟ್ಟವರ ಎಲುಬುಗಳು ಅವರ ಸಮಾಧಿಗಳಲ್ಲಿ ಹರಡಿಕೊಂಡಿರುತ್ತವೆ.
ನನ್ನ ಒಡೆಯನಾದ ಯೆಹೋವನೇ, ಸಹಾಯಕ್ಕಾಗಿ ನಿನ್ನನ್ನೇ ಎದುರುನೋಡುವೆನು.
ನಾನು ನಿನ್ನಲ್ಲಿ ಭರವಸವಿಟ್ಟಿದ್ದೇನೆ.
ದಯವಿಟ್ಟು ನನ್ನನ್ನು ಮರಣಕ್ಕೀಡು ಮಾಡಬೇಡ.
ಕೆಟ್ಟವರು ನನಗೆ ಬಲೆಗಳನ್ನು ಒಡ್ಡಿದ್ದಾರೆ.
ಅವರ ಬೋನುಗಳಿಂದ ನನ್ನನ್ನು ತಪ್ಪಿಸು.
10 ಅವರು ತಮ್ಮ ಬಲೆಗಳಿಗೆ ತಾವೇ ಸಿಕ್ಕಿಬೀಳಲಿ.
ಆಗ ನಾನು ತಪ್ಪಿಸಿಕೊಳ್ಳುವೆನು.