15
ಆದ್ದರಿಂದ ನಂಬಿಕೆಯಲ್ಲಿ ಬಲಹೀನವಾಗಿರುವವರ ಬಲಹೀನತೆಗಳನ್ನು ನಾವು ಸಹಿಸಿಕೊಳ್ಳಬೇಕು. ನಾವು ಕೇವಲ ನಮ್ಮ ಹಿತವನ್ನು ಮಾತ್ರ ನೋಡಿಕೊಳ್ಳಬಾರದು. ನಮ್ಮಲ್ಲಿ ಪ್ರತಿಯೊಬ್ಬರು ತಮ್ಮ ನೆರೆಯವರ ಹಿತವನ್ನು ನೋಡಿಕೊಳ್ಳಬೇಕು. ನಂಬಿಕೆಯಲ್ಲಿ ಬಲಹೀನರಾಗಿರುವವರನ್ನು ಬಲಗೊಳಿಸಲು ನೆರವಾಗಿರಬೇಕು. ಕ್ರಿಸ್ತನು ಸಹ ತನ್ನ ಜೀವಮಾನದಲ್ಲಿ ತನ್ನ ಹಿತಕ್ಕಾಗಿ ಪ್ರಯತ್ನಿಸಲಿಲ್ಲ. “ನಿನಗೆ ಅವಮಾನ ಮಾಡಿದ ಜನರು ನನಗೂ ಅವಮಾನ ಮಾಡಿದರು” ಉಲ್ಲೇಖನ: ಕೀರ್ತನೆ. 69:9. ಎಂಬುದಾಗಿ ಆತನ ಬಗ್ಗೆ ಪವಿತ್ರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. ಹಿಂದಿನ ಕಾಲದಲ್ಲಿ ಬರೆಯಲ್ಪಟ್ಟಿರುವ ಪ್ರತಿಯೊಂದೂ ನಮ್ಮ ಉಪದೇಶಕ್ಕಾಗಿಯೇ ಬರೆಯಲ್ಪಟ್ಟಿದೆ. ನಾವು ನಿರೀಕ್ಷೆ ಉಳ್ಳವರಾಗಿರಬೇಕೆಂದು ಆ ಸಂಗತಿಗಳು ಬರೆಯಲ್ಪಟ್ಟಿವೆ. ಪವಿತ್ರ ಗ್ರಂಥವು ನಮಗೆ ಕೊಡುವ ತಾಳ್ಮೆಯಿಂದಲೂ ಶಕ್ತಿಯಿಂದಲೂ ಈ ನಿರೀಕ್ಷೆ ಬರುತ್ತದೆ. ತಾಳ್ಮೆ ಮತ್ತು ಶಕ್ತಿ ದೇವರಿಂದ ಬರುತ್ತವೆ. ಕ್ರಿಸ್ತ ಯೇಸು ಬಯಸುವ ಮಾರ್ಗವನ್ನು ನೀವೆಲ್ಲರೂ ಒಟ್ಟಾಗಿ ಒಪ್ಪಿಕೊಳ್ಳಲು ದೇವರು ನಿಮಗೆ ಸಹಾಯ ಮಾಡಲೆಂದು ನಾನು ಪ್ರಾರ್ಥಿಸುತ್ತೇನೆ. ಹೀಗೆ ನೀವೆಲ್ಲರೂ ಒಂದೇ ಹೃದಯದಿಂದಲೂ ಒಂದೇ ಮನಸ್ಸಿನಿಂದಲೂ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ತಂದೆಯಾದ ದೇವರನ್ನು ಮಹಿಮೆಪಡಿಸುವಿರಿ. ಕ್ರಿಸ್ತನು ನಿಮ್ಮನ್ನು ಸ್ವೀಕರಿಸಿಕೊಂಡನು. ಆದ್ದರಿಂದ ನೀವು ಒಬ್ಬರನ್ನೊಬ್ಬರು ಸ್ವೀಕರಿಸಿಕೊಳ್ಳಬೇಕು. ಇದು ದೇವರಿಗೆ ಮಹಿಮೆಯನ್ನು ಉಂಟು ಮಾಡುತ್ತದೆ. ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನಗಳು ಸತ್ಯವಾದುವುಗಳೆಂದು ತೋರಿಸುವುದಕ್ಕಾಗಿಯೂ ದೇವರು ಆ ವಾಗ್ದಾನಗಳನ್ನು ನೆರವೇರಿಸುತ್ತಾನೆ ಎಂಬುದನ್ನು ನಿರೂಪಿಸುವುದಕ್ಕಾಗಿಯೂ ದೇವರು ತಮಗೆ ತೋರುವ ಕರುಣೆಗಾಗಿ ಯೆಹೂದ್ಯರಲ್ಲದವರು ಆತನನ್ನು ಮಹಿಮೆಪಡಿಸಲೆಂದು ಕ್ರಿಸ್ತನು ಯೆಹೂದ್ಯರ ಸೇವಕನಾದನು. ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆಯಲ್ಪಟ್ಟಿದೆ:
 
“ಆದ್ದರಿಂದ ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ನಾನು ನಿನ್ನನ್ನು ಸ್ತುತಿಸುವೆನು:
ನಾನು ನಿನ್ನ ಹೆಸರನ್ನು ಸಂಕೀರ್ತಿಸುವೆನು.” ಕೀರ್ತನೆ. 18:49
 
10 ಇದಲ್ಲದೆ ಪವಿತ್ರ ಗ್ರಂಥವು ಹೀಗೆನ್ನುತ್ತದೆ:
 
“ಯೆಹೂದ್ಯರಲ್ಲದ ನೀವು ದೇವರ ಸ್ವಂತ ಜನರೊಂದಿಗೆ ಸೇರಿ ಸಂತೋಷದಿಂದಿರಬೇಕು.” ಧರ್ಮೋಪದೇಶ. 32:43
 
11 ಮತ್ತೊಂದು ಕಡೆ ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ:
 
“ಯೆಹೂದ್ಯರಲ್ಲದ ನೀವೆಲ್ಲರೂ ಪ್ರಭುವನ್ನು ಸ್ತುತಿಸಿರಿ.
ಎಲ್ಲಾ ಜನರು ಪ್ರಭುವಿಗೆ ಸ್ತೋತ್ರ ಮಾಡಲಿ.” ಕೀರ್ತನೆ. 117:1
 
12 ಯೆಶಾಯನು ಹೀಗೆ ಹೇಳಿದ್ದಾನೆ:
 
“ಇಷಯನ ಕುಟುಂಬದಿಂದ ಒಬ್ಬ ವ್ಯಕ್ತಿಯು ಬರುವನು.
ಆತನು ಯೆಹೂದ್ಯರಲ್ಲದವರನ್ನು ಆಳುವುದಕ್ಕಾಗಿ ಬರುವನು.
ಯೆಹೂದ್ಯರಲ್ಲದ ಜನರು ಆತನಲ್ಲಿ ನಿರೀಕ್ಷೆಯನ್ನು ಹೊಂದಿಕೊಳ್ಳುವರು.” ಯೆಶಾಯ 11:10
 
13 ನಿರೀಕ್ಷೆಯನ್ನು ಕೊಡುವ ದೇವರು ನಂಬಿಕೆಯಿಂದ ಉಂಟಾಗುವ ಆನಂದವನ್ನೂ ಸಮಾಧಾನವನ್ನೂ ನಿಮಗೆ ಸಂಪೂರ್ಣವಾಗಿ ದಯಪಾಲಿಸಲೆಂದು ನಾನು ಪ್ರಾರ್ಥಿಸುತ್ತೇನೆ. ಆಗ ಪವಿತ್ರಾತ್ಮನ ಶಕ್ತಿಯ ಮೂಲಕ ನಿರೀಕ್ಷೆಯು ನಿಮ್ಮಲ್ಲಿ ತುಂಬಿ ಹೊರಸೂಸುವುದು.
ತನ್ನ ಸೇವೆಯ ಬಗ್ಗೆ ಪೌಲನ ವಿವರಣೆ
14 ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಳ್ಳೆಯತನವು ತುಂಬಿದೆಯೆಂದು ನನಗೆ ನಿಶ್ಚಯವಾಗಿ ಗೊತ್ತಿದೆ. ಅಗತ್ಯವಾದ ಸಕಲ ಜ್ಞಾನವು ನಿಮಗಿದೆಯೆಂದು ಮತ್ತು ಒಬ್ಬರಿಗೊಬ್ಬರು ಸಲಹೆ ನೀಡಬಲ್ಲಿರೆಂದು ನನಗೆ ಗೊತ್ತಿದೆ. 15 ನೀವು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕೆಂದು ನಾನು ಅಪೇಕ್ಷಿಸಿದ ಕೆಲವು ಸಂಗತಿಗಳನ್ನು ನಾನು ನಿಮಗೆ ಧೈರ್ಯವಾಗಿ ಬರೆದಿರುವೆ. ಕ್ರಿಸ್ತ ಯೇಸುವಿನ ಸೇವಕ ಎಂಬ ವಿಶೇಷವಾದ ವರವನ್ನು ದೇವರು ನನಗೆ ಕೊಟ್ಟಿರುವುದರಿಂದ ನಾನು ಹೀಗೆ ಬರೆದಿದ್ದೇನೆ. 16 ಯೆಹೂದ್ಯರಲ್ಲದ ಜನರಿಗೆ ಸಹಾಯ ಮಾಡುವುದಕ್ಕಾಗಿ ದೇವರು ನನ್ನನ್ನು ತನ್ನ ಸೇವಕನನ್ನಾಗಿ ಮಾಡಿಕೊಂಡನು. ದೇವರ ಸುವಾರ್ತೆಯನ್ನು ಉಪದೇಶಿಸುವುದರ ಮೂಲಕ ನಾನು ಆತನ ಸೇವೆ ಮಾಡುವವನಾಗಿದ್ದೇನೆ. ಯೆಹೂದ್ಯರಲ್ಲದ ಜನರು ಸಹ ದೇವರು ಸ್ವೀಕರಿಸಿಕೊಳ್ಳುವ ಕಾಣಿಕೆಯಂತಾಗಬೇಕೆಂದು ನಾನು ಈ ಸೇವೆ ಮಾಡುವವನಾಗಿದ್ದೇನೆ. ಆ ಜನರು ದೇವರಿಗೋಸ್ಕರವಾಗಿ ಪವಿತ್ರಾತ್ಮನ ಮೂಲಕ ಪವಿತ್ರರಾಗಿದ್ದಾರೆ.
17 ಆದ್ದರಿಂದ ಕ್ರಿಸ್ತ ಯೇಸುವಿನಲ್ಲಿ ನಾನು ದೇವರಿಗೋಸ್ಕರ ಮಾಡುವ ಕಾರ್ಯಗಳ ಬಗ್ಗೆ ಹೆಮ್ಮೆಪಡುತ್ತೇನೆ. 18 ನಾನು ನನ್ನ ಸ್ವಕಾರ್ಯಗಳ ಬಗ್ಗೆಯೂ ಮಾತಾಡುವುದಿಲ್ಲ. ಯೆಹೂದ್ಯರಲ್ಲದ ಜನರನ್ನು ತನಗೆ ವಿಧೇಯರನ್ನಾಗಿ ಮಾಡಿಕೊಳ್ಳಲು ಕ್ರಿಸ್ತನು ನನ್ನ ಮೂಲಕ ಮಾತಿನಲ್ಲಿಯೂ ಕ್ರಿಯೆಯಲ್ಲಿಯೂ ಮಾಡಿದ ಕಾರ್ಯಗಳನ್ನು ಹೇಳಿಕೊಳ್ಳುತ್ತೇನೆ. 19 ಅದ್ಭುತಕಾರ್ಯಗಳ ಶಕ್ತಿಯನ್ನು ಮತ್ತು ಮಹಾಕಾರ್ಯಗಳನ್ನು ನೋಡಿದ್ದರಿಂದಲೂ ಪವಿತ್ರಾತ್ಮನ ಶಕ್ತಿಯ ನಿಮಿತ್ತದಿಂದಲೂ ಅವರು ದೇವರಿಗೆ ವಿಧೇಯರಾದರು. ನಾನು ಜೆರುಸಲೇಮಿನಿಂದ ಇಲ್ಲುರಿಕ ಪ್ರಾಂತ್ಯದವರೆಗೂ ಸುವಾರ್ತೆಯನ್ನು ಬೋಧಿಸಿ, ನನ್ನ ಆ ಕರ್ತವ್ಯವನ್ನು ಪೂರೈಸಿದ್ದೇನೆ. 20 ಕ್ರಿಸ್ತನ ಬಗ್ಗೆ ಜನರು ಎಂದೂ ಕೇಳಿಲ್ಲದ ಸ್ಥಳಗಳಲ್ಲಿ ಸುವಾರ್ತೆಯನ್ನು ಬೋಧಿಸಲು ನಾನು ಯಾವಾಗಲೂ ಅಪೇಕ್ಷಿಸುತ್ತೇನೆ; ಏಕೆಂದರೆ ಮತ್ತೊಬ್ಬನು ಆಗಲೇ ಆರಂಭಿಸಿರುವ ಕೆಲಸದ ಮೇಲೆ ಕಟ್ಟಲು ನನಗೆ ಇಷ್ಟವಿಲ್ಲ. 21 ಆದರೆ ಇದು ಸಹ ಪವಿತ್ರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ:
 
“ಆತನ ಬಗ್ಗೆ ತಿಳಿಯದ ಜನರು ಆತನನ್ನು (ಕ್ರಿಸ್ತನನ್ನು) ನೋಡುವರು.
ಆತನ ಬಗ್ಗೆ ಕೇಳಿಲ್ಲದ ಜನರು ಆತನನ್ನು ಅರ್ಥಮಾಡಿಕೊಳ್ಳುವರು.” ಯೆಶಾಯ 52:15
ರೋಮಿಗೆ ಹೋಗಲು ಪೌಲನ ಯೋಜನೆ
22 ಈ ಕಾರಣದಿಂದಲೇ, ನಿಮ್ಮ ಬಳಿಗೆ ಬಾರದಂತೆ ನನಗೆ ಅನೇಕ ಸಲ ಅಡಚಣೆ ಆಯಿತು.
23 ಆದರೆ ಈಗ ಈ ಪ್ರಾಂತ್ಯಗಳಲ್ಲಿ ನಾನು ಮಾಡಬೇಕಾಗಿದ್ದ ಸೇವೆಯನ್ನು ಮಾಡಿ ಮುಗಿಸಿದ್ದೇನೆ. ಅನೇಕ ವರ್ಷಗಳಿಂದ ನಾನು ನಿಮ್ಮ ಬಳಿಗೆ ಬರಬೇಕೆಂದಿದ್ದೆ. 24 ಆದ್ದರಿಂದ ನಾನು ಸ್ಪೇನಿಗೆ ಹೋಗುವಾಗ ನಿಮ್ಮನ್ನು ಸಂದರ್ಶಿಸುತ್ತೇನೆ. ಹೌದು, ನಾನು ಸ್ಪೇನಿಗೆ ಪ್ರಯಾಣ ಮಾಡುವಾಗ ನಿಮ್ಮನ್ನು ಸಂದರ್ಶಿಸಿ, ಸ್ವಲ್ಪಕಾಲ ನಿಮ್ಮೊಂದಿಗೆ ಸಂತೋಷವಾಗಿ ತಂಗಿರುತ್ತೇನೆಂಬ ನಿರೀಕ್ಷೆ ನನಗಿದೆ. ಬಳಿಕ ನೀವು ನನ್ನ ಪ್ರಯಾಣಕ್ಕೆ ಸಹಾಯ ಮಾಡಬಹದು.
25 ಈಗ ನಾನು ದೇವಜನರಿಗೆ ಸಹಾಯ ಮಾಡುವುಕ್ಕಾಗಿ ಜೆರುಸಲೇಮಿಗೆ ಹೋಗುತ್ತಿದ್ದೇನೆ. 26 ಅಲ್ಲಿನ ದೇವಜನರಲ್ಲಿ ಕೆಲವರು ಬಡವರಾಗಿದ್ದಾರೆ. ಮಕೆದೋನಿಯ ಮತ್ತು ಅಖಾಯದ ವಿಶ್ವಾಸಿಗಳು ಅಲ್ಲಿನ ಬಡಜನರಿಗಾಗಿ ಸಂತೋಷದಿಂದ ಧನಸಹಾಯ ಮಾಡಿದ್ದಾರೆ. 27 ಮಕೆದೋನಿಯ ಮತ್ತು ಅಖಾಯದ ವಿಶ್ವಾಸಿಗಳು ಸ್ವಂತ ಇಷ್ಟದಿಂದಲೇ ಈ ಕಾರ್ಯವನ್ನು ಮಾಡಿದ್ದಾರೆ. ಅದು ಅವರ ಕರ್ತವ್ಯವೂ ಹೌದು. ಯೆಹೂದ್ಯರಲ್ಲದ ಅವರು ಯೆಹೂದ್ಯರ ಆತ್ಮಿಕ ಅಶೀರ್ವಾದಗಳಲ್ಲಿ ಪಾಲು ಹೊಂದಿರುವುದರಿಂದ ಅವರು ತಮ್ಮಲ್ಲಿರುವಂಥವುಗಳ ಮೂಲಕ ಅವರಿಗೆ ನೆರವು ನೀಡುವುದು ಅವರ ಹೊಣೆಯಾಗಿದೆ. 28 ಜೆರುಸಲೇಮಿನ ಬಡಜನರಿಗೋಸ್ಕರ ಕೊಟ್ಟಿರುವ ಈ ಹಣವನ್ನೆಲ್ಲಾ ಸುರಕ್ಷಿತವಾಗಿ ಅವರಿಗೆ ತಲುಪಿಸಿದ ಮೇಲೆ ನಾನು ಸ್ಪೇನಿಗೆ ಹೊರಡುವೆನು.
ನಾನು ಸ್ಪೇನಿಗೆ ಪ್ರಯಾಣ ಮಾಡುವಾಗ (ರೋಮಿನಲ್ಲಿ) ಇಳಿದು ನಿಮ್ಮನ್ನು ಸಂದರ್ಶಿಸುವೆನು. 29 ನಾನು ನಿಮ್ಮ ಬಳಿಗೆ ಬರುವಾಗ ಕ್ರಿಸ್ತನ ಆಶೀರ್ವಾದವನ್ನು ಹೇರಳವಾಗಿ ತರುತ್ತೇನೆಂದು ಬಲ್ಲೆನು.
30 ಸಹೋದರ ಸಹೋದರಿಯರೇ, ನೀವು ನನಗೋಸ್ಕರ ದೇವರಲ್ಲಿ ಪ್ರಾರ್ಥಿಸುವುದರ ಮೂಲಕ ನನ್ನ ಸೇವೆಗೆ ಸಹಾಯ ಮಾಡಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನಮ್ಮ ಪ್ರಭುವಾದ ಯೇಸುವಿನ ನಿಮಿತ್ತವಾಗಿಯೂ ಪವಿತ್ರಾತ್ಮನು ನಮಗೆ ಕೊಡುವ ಪ್ರೀತಿಯ ನಿಮಿತ್ತವಾಗಿಯೂ ನೀವು ಪ್ರಾರ್ಥಿಸಿರಿ. 31 ಜುದೇಯದಲ್ಲಿರುವ ಅವಿಶ್ವಾಸಿಗಳ ಕೈಯಿಂದ ನಾನು ಪಾರಾಗುವಂತೆ ಪ್ರಾರ್ಥಿಸಿರಿ. ನಾನು ಜೆರುಸಲೇಮಿಗೆ ತೆಗೆದುಕೊಂಡು ಹೋಗುತ್ತಿರುವ ಈ ಸಹಾಯಧನವು ಅಲ್ಲಿರುವ ದೇವಮಕ್ಕಳಿಗೆ ಮೆಚ್ಚಿಕೆಯಾಗುವಂತೆ ಪ್ರಾರ್ಥಿಸಿರಿ. 32 ಅನಂತರ, ದೇವರು ಬಯಸುವುದಾದರೆ ನಾನು ನಿಮ್ಮ ಬಳಿಗೆ ಬರುತ್ತೇನೆ. ನಾನು ಸಂತೋಷದಿಂದ ಬಂದು ನಿಮ್ಮ ಸಂಗಡವಿದ್ದು ವಿಶ್ರಾಂತಿಯನ್ನು ಪಡೆಯುತ್ತೇನೆ. 33 ಶಾಂತಿಯನ್ನು ಕೊಡುವ ದೇವರು ನಿಮ್ಮೆಲ್ಲರೊಂದಿಗಿರಲಿ. ಆಮೆನ್.

15:3: ಉಲ್ಲೇಖನ: ಕೀರ್ತನೆ. 69:9.