೨೩
ದಾವೀದನು ಕೆಯೀಲಾ ಊರಿನಲ್ಲಿ ವಾಸಮಾಡಿದ್ದು
೧ ಫಿಲಿಷ್ಟಿಯರು ಕೆಯೀಲಕ್ಕೆ ಮುತ್ತಿಗೆ ಹಾಕಿ ಅಲ್ಲಿನ ಕಣಗಳನ್ನು ಸೂರೆಮಾಡುತ್ತಿದ್ದಾರೆ ಎಂಬ ವರ್ತಮಾನವು ದಾವೀದನಿಗೆ ಮುಟ್ಟಲು ೨ ಅವನು, “ನಾನು ಹೋಗಿ ಆ ಫಿಲಿಷ್ಟಿಯರನ್ನು ಹೊಡೆಯಬಹುದೋ” ಎಂದು ಯೆಹೋವನನ್ನು ಕೇಳಿದನು. ಆತನು ಅವನಿಗೆ, “ಹೋಗಿ ಫಿಲಿಷ್ಟಿಯರನ್ನು ಹೊಡೆದು ಕೆಯೀಲಾ ಊರನ್ನು ರಕ್ಷಿಸು” ಎಂದು ಉತ್ತರ ಕೊಟ್ಟನು. ೩ ಆದರೆ ದಾವೀದನ ಸೈನಿಕರು ಅವನಿಗೆ, “ನಮಗೆ ಯೆಹೂದ ಸೀಮೆಯಲ್ಲಿಯೇ ಇಷ್ಟು ಭಯವಿರುವಾಗ ಫಿಲಿಷ್ಟಿಯ ಸೈನ್ಯದೊಡನೆ ಯುದ್ಧಮಾಡುವುದಕ್ಕೆ ಕೆಯೀಲಕ್ಕೆ ಹೋದರೆ ಅಲ್ಲಿ ಇನ್ನೂ ಹೆಚ್ಚು ಭಯ ಉಂಟಾಗುತ್ತದೆ” ಅಂದರು. ೪ ಆದುದರಿಂದ ಅವನು ಪುನಃ ಯೆಹೋವನನ್ನು ಕೇಳಿದನು. ಆತನು, “ನೀನೆದ್ದು ಕೆಯೀಲಕ್ಕೆ ಹೋಗು. ನಾನು ಫಿಲಿಷ್ಟಿಯರನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು” ಎಂದು ಉತ್ತರಕೊಟ್ಟನು. ೫ ಆಗ ದಾವೀದನು ತನ್ನ ಜನರೊಡನೆ ಕೆಯೀಲಕ್ಕೆ ಹೋಗಿ, ಫಿಲಿಷ್ಟಿಯರೊಡನೆ ಯುದ್ಧಮಾಡಿ, ಅವರನ್ನು ಸಂಪೂರ್ಣವಾಗಿ ಸೋಲಿಸಿ, ಅವರ ಪಶುಗಳನ್ನು ತೆಗೆದುಕೊಂಡು ಕೆಯೀಲದವರನ್ನು ರಕ್ಷಿಸಿದನು. ೬ ದಾವೀದನ ಬಳಿಗೆ ಓಡಿಬಂದಿದ್ದ ಅಹೀಮೆಲೆಕನ ಮಗನಾದ ಎಬ್ಯಾತಾರನು ಕೆಯೀಲಕ್ಕೆ ಬರುವಾಗ ಏಫೋದನ್ನು ತಂದಿದ್ದನು, ೭ ದಾವೀದನು ಕೆಯೀಲದಲ್ಲಿದ್ದಾನೆಂಬ ವರ್ತಮಾನವು ಸೌಲನಿಗೆ ಮುಟ್ಟಿತು. ಆಗ ಅವನು, ದೇವರು ದಾವೀದನನ್ನು ನನ್ನ ಕೈಗೆ ಒಪ್ಪಿಸಿದನು. ಅವನು ಅಗುಳಿ ಬಾಗಿಲುಗಳಿಂದ ಭದ್ರವಾಗಿರುವ ಪಟ್ಟಣವನ್ನು ಪ್ರವೇಶಿಸಿದ್ದಾನಲ್ಲಾ ಅವನು ಅಲ್ಲಿಂದ ತಪ್ಪಿಸಿಕೊಳ್ಳಲಾರನು ಅಂದುಕೊಂಡು, ೮ ಕೆಯೀಲದಲ್ಲಿದ್ದ ದಾವೀದನನ್ನೂ, ಅವನ ಜನರನ್ನೂ ಹಿಡಿಯಲು ಹೋಗುವುದಕ್ಕೋಸ್ಕರ ಸೈನ್ಯವನ್ನು ಕೂಡಿಸಿದನು. ೯ ಸೌಲನು ತನಗೆ ಕೇಡುಮಾಡಬೇಕೆಂದಿದ್ದಾನೆ ಎಂಬುದನ್ನು ದಾವೀದನು ತಿಳಿದು ಯಾಜಕನಾದ ಎಬ್ಯಾತಾರನಿಗೆ, “ಏಫೋದನ್ನು ಇಲ್ಲಿಗೆ ತೆಗೆದುಕೊಂಡು ಬಾ” ಎಂದನು. ೧೦ ಆಗ ದಾವೀದನು, “ಇಸ್ರಾಯೇಲ್ಯರ ದೇವರಾದ ಯೆಹೋವನೇ ಸೌಲನು ಕೆಯೀಲಕ್ಕೆ ಬಂದು ನನ್ನ ನಿಮಿತ್ತವಾಗಿ ಪಟ್ಟಣವನ್ನು ಹಾಳು ಮಾಡಬೇಕೆಂದಿದ್ದಾನೆಂದು ನಿನ್ನ ಸೇವಕನಾದ ನನಗೆ ಸುದ್ದಿ ಬಂದಿತು. ೧೧ ನಾನು ಕೇಳಿದ ಸುದ್ದಿಯಂತೆ ಅವನು ನಿಜವಾಗಿ ಬರುವನೋ ಕೆಯೀಲಾ ಊರಿನವರು ನನ್ನನ್ನು ಅವನ ಕೈಗೆ ಒಪ್ಪಿಸುವರೋ? ಇಸ್ರಾಯೇಲರ ದೇವರಾದ ಯೆಹೋವನೇ ಈ ವಿಷಯದಲ್ಲಿ ಉತ್ತರ ದಯಪಾಲಿಸು” ಎಂದು ಪ್ರಾರ್ಥಿಸಲು ಅವನು ಬರುವನೆಂಬುದಾಗಿ ಯೆಹೋವನಿಂದ ಉತ್ತರ ಸಿಕ್ಕಿತು. ೧೨ ದಾವೀದನು ತಿರುಗಿ ಯೆಹೋವನನ್ನು, “ಕೆಯೀಲದವರು ನನ್ನನ್ನೂ, ನನ್ನ ಜನರನ್ನೂ ಸೌಲನ ಕೈಗೆ ಒಪ್ಪಿಸುವರೋ” ಎಂದು ಕೇಳಿದಾಗ ಆತನು, “ಒಪ್ಪಿಸಿಕೊಡುವರು” ಎಂದು ಉತ್ತರಕೊಟ್ಟನು. ೧೩ ಆಗ ದಾವೀದನು ತನ್ನ ಸಂಗಡ ಇದ್ದ * 1 ಸಮು. 27:2.ಆರುನೂರು ಜನರ ಸಹಿತವಾಗಿ ಕೆಯೀಲಾ ಊರನ್ನು ಬಿಟ್ಟು ಮನಬಂದ ಕಡೆಗೆ ಅಲೆದಾಡಿದರು. ದಾವೀದನು ಕೆಯೀಲದಿಂದ ತಪ್ಪಿಸಿಕೊಂಡನೆಂದು ಸೌಲನಿಗೆ ಗೊತ್ತಾಗಲು ಅವನು ಹೊರಡುವುದನ್ನು ನಿಲ್ಲಿಸಿಬಿಟ್ಟನು.
ದಾವೀದನು ಜೀಫ್ ಅರಣ್ಯದಲ್ಲಿ ಇದ್ದದ್ದು.
೧೪ ಅನಂತರ ದಾವೀದನು ಅರಣ್ಯದಲ್ಲಿರುವ ಆಯಾ ಆಶ್ರಯಗಿರಿಗಳಲ್ಲಿ ಇರುತ್ತಿದ್ದನು. ಅನಂತರ ಯೆಹೋ. 15:24; ಕೀರ್ತ. 63.ಜೀಫ್ ಅರಣ್ಯದ ಪರ್ವತಪ್ರಾಂತ್ಯಕ್ಕೆ ಬಂದು ಅಲ್ಲಿ ವಾಸಮಾಡಿದನು. ಸೌಲನು ಪ್ರತಿದಿನ ಅವನನ್ನು ಹುಡುಕುತ್ತಿದ್ದರೂ ದೇವರು ಅವನನ್ನು ಸೌಲನ ಕೈಗೆ ಒಪ್ಪಿಸಲಿಲ್ಲ. ೧೫ ಸೌಲನು ತನ್ನನ್ನು ಕೊಲ್ಲಲು ಹೊರಟಿದ್ದಾನೆಂದು ದಾವೀದನು ತಿಳಿದು ಜೀಫ್ ಅರಣ್ಯದ ಹೋರೆಷದಲ್ಲಿ ಅಡಗಿಕೊಂಡಿದ್ದನು. ೧೬ ಆಗ ಸೌಲನ ಮಗನಾದ ಯೋನಾತಾನನು ಅಲ್ಲಿಗೆ ಹೋಗಿ, ೧೭ ದಾವೀದನಿಗೆ, “ಭಯಪಡಬೇಡ; ನೀನು ನನ್ನ ತಂದೆಯಾದ ಸೌಲನ ಕೈಗೆ ಸಿಕ್ಕಿಬೀಳುವುದಿಲ್ಲ. ನೀನು ಇಸ್ರಾಯೇಲ್ಯರ ಅರಸನಾಗುವಿ; ನಾನು ನಿನಗೆ ಎರಡನೆಯವನಾಗಿರುವೆನು. ಹೀಗಾಗುವುದೆಂದು ನನ್ನ ತಂದೆಯಾದ ಸೌಲನೂ ತಿಳಿದುಕೊಂಡಿದ್ದಾನೆ” ಎಂದು ಹೇಳಿ, ದೇವರಲ್ಲಿ ಅವನನ್ನು ಬಲಪಡಿಸಿದನು. ೧೮ ಅವರಿಬ್ಬರೂ ಯೆಹೋವನ ಸನ್ನಿಧಿಯಲ್ಲಿ ಒಡಂಬಡಿಕೆ ಮಾಡಿಕೊಂಡರು. ತರುವಾಯ ಯೋನಾತಾನನು ತನ್ನ ಮನೆಗೆ ಹೋದನು. ದಾವೀದನು ಹೋರೆಷದಲ್ಲಿಯೇ ಇದ್ದನು.
೧೯ ಜೀಫ್ಯರು ಗಿಬೆಯಲ್ಲಿದ್ದ ಸೌಲನ ಬಳಿಗೆ ಬಂದು ಅವನಿಗೆ, “ಒಡೆಯಾ, ಕೇಳು ದಾವೀದನು ನಮ್ಮ ಪ್ರಾಂತ್ಯಕ್ಕೆ ಸೇರಿದ ಹೋರೆಷದ ಗಿರಿಗಳಲ್ಲಿ, ಅಂದರೆ ಅರಣ್ಯ. 21:20.ಅರಣ್ಯದ ದಕ್ಷಿಣದಲ್ಲಿರುವ ಹಕೀಲಾ ಬೆಟ್ಟದಲ್ಲಿ ಅಡಗಿಕೊಂಡಿದ್ದಾನೆ. ೨೦ ಅರಸನು ತನ್ನ ಇಚ್ಛೆಯಂತೆ ನಮ್ಮ ಜೊತೆಯಲ್ಲಿ ಬರೋಣವಾಗಲಿ. ಅವನನ್ನು ಅರಸನ ಕೈಗೆ ಒಪ್ಪಿಸುವ ಕೆಲಸ ನಮ್ಮದು” ಎಂದು ಹೇಳಿದರು. ೨೧ ಆಗ ಸೌಲನು ಅವರಿಗೆ, “ನೀವು ನನ್ನ ಮೇಲೆ ಕನಿಕರ ತೋರಿಸಿ ಸಹಾಯ ಮಾಡುತ್ತಿರುವುದರಿಂದ ಯೆಹೋವನ ಆಶೀರ್ವಾದವು ನಿಮ್ಮ ಮೇಲಿರಲಿ. ೨೨ ನೀವು ದಯವಿಟ್ಟು ಹೋಗಿ ಅವನು ಅಡಗಿಕೊಂಡಿರುವ ಸ್ಥಳವನ್ನು, ಅಲ್ಲಿ ಅವನನ್ನು ಕಂಡವರನ್ನೂ ಸೂಕ್ಷ್ಮವಾಗಿ ವಿಚಾರಿಸಿ, ತಿಳಿದುಕೊಳ್ಳಿರಿ. ಅವನು ಬಹು ಯುಕ್ತಿವಂತನೆಂದು ಕೇಳಿದ್ದೇನೆ. ೨೩ ಆದುದರಿಂದ ಅವನು ಅಡಗಿಕೊಳ್ಳತಕ್ಕ ಎಲ್ಲಾ ಗುಪ್ತಸ್ಥಳಗಳನ್ನು ಗೊತ್ತುಮಾಡಿಕೊಂಡು ಸರಿಯಾದ ವರ್ತಮಾನವನ್ನು ನನಗೆ ತಲುಪಿಸಿರಿ. ನಾನು ನಿಮ್ಮ ಸಂಗಡ ಬರುವೆನು. ಅವನು ದೇಶದಲ್ಲಿರುವುದಾದರೆ ಎಲ್ಲಾ ಯೆಹೂದ ಪ್ರಜೆಗಳ ಮದ್ಯದಲ್ಲಾಗಲಿ ಹುಡುಕಿ ಅವನನ್ನು ಕಂಡುಹಿಡಿಯುವೆನು” ಅಂದನು. ೨೪ ಅವರು ಹೊರಟು ಸೌಲನ ಮುಂದಾಗಿ ಜೀಫಿಗೆ ಬಂದರು. ದಾವೀದನೂ ಅವನ ಜನರೂ ಮಾವೋನ ಅರಣ್ಯದ ದಕ್ಷಿಣ ದಿಕ್ಕಿನಲ್ಲಿರುವ § ಧರ್ಮೋ. 1:1.ಅರಾಬ್ ಎಂಬ ತಗ್ಗಾದ ಪ್ರದೇಶದಲ್ಲಿದ್ದನು. ೨೫ ಸೌಲನು ತನ್ನ ಜನರೊಡನೆ ದಾವೀದನನ್ನು ಹಿಡಿಯುವುದಕ್ಕೆ ಬಂದನು. ಈ ವರ್ತಮಾನವು ದಾವೀದನಿಗೆ ತಲುಪಲು ಅವನು ಮಾವೋನಿನಲ್ಲಿರುವ ಒಂದು ಕಡಿದಾದ ಬೆಟ್ಟಕ್ಕೆ ಹೋಗಿ ಅಡಗಿಕೊಂಡನು. ಸೌಲನು ಇದನ್ನು ಕೇಳಿ ಮಾವೋನ ಅರಣ್ಯಕ್ಕೆ ಬಂದು ಆ ಬೆಟ್ಟದ ಒಂದು ಕಡೆಯಲ್ಲಿ ಹೋಗುತ್ತಿದ್ದನು. ೨೬ ಅದರ ಇನ್ನೊಂದು ಕಡೆಯಲ್ಲಿ ದಾವೀದನೂ ಅವನ ಜನರೂ ಇದ್ದರು. ದಾವೀದನೂ ಅವನ ಜನರೂ ತಪ್ಪಿಸಿಕೊಳ್ಳುವುದಕ್ಕೆ ತ್ವರೆಪಡುವಷ್ಟರಲ್ಲಿ ಸೌಲನೂ, ಅವನ ಜನರೂ ಬಂದು ಅವರನ್ನು ಮುತ್ತಿಗೆ ಹಾಕುವುದಕ್ಕಿದ್ದರು. ೨೭ ಆಗಲೇ ಒಬ್ಬ ದೂತನು ಸೌಲನ ಬಳಿಗೆ ಬಂದು ಅವನಿಗೆ, “ಬೇಗ ಬಾ, ಫಿಲಿಷ್ಟಿಯರು ದೇಶದೊಳಗೆ ನುಗ್ಗಿದ್ದಾರೆ” ಎಂದು ತಿಳಿಸಿದನು. ೨೮ ಅವನು ದಾವೀದನನ್ನು ಹಿಡಿಯುವ ಕೆಲಸವನ್ನು ಬಿಟ್ಟು ಫಿಲಿಷ್ಟಿಯರ ವಿರುದ್ಧ ಯುದ್ಧಮಾಡಲು ಹೊರಟನು. ಆದುದರಿಂದ ಆ ಬೆಟ್ಟಕ್ಕೆ “ಮಕ್ಹೆಲೋಕೆತ್” ಎಂದರೆ “ಪಾರದ ಬಂಡೆ” ಎಂದು ಹೆಸರಾಯಿತು. ೨೯ ದಾವೀದನು ಅಲ್ಲಿಂದ ಗಟ್ಟಾಹತ್ತಿ ಹೋಗಿ * 2 ಪೂರ್ವ. 20:2; ಯೆಹೆ. 47:10.ಏಂಗೆದಿಯ ಗಿರಿಗಳಲ್ಲಿ ವಾಸಿಸಿದನು.

*೨೩:೧೩ 1 ಸಮು. 27:2.

೨೩:೧೪ ಯೆಹೋ. 15:24; ಕೀರ್ತ. 63.

೨೩:೧೯ ಅರಣ್ಯ. 21:20.

§೨೩:೨೪ ಧರ್ಮೋ. 1:1.

*೨೩:೨೯ 2 ಪೂರ್ವ. 20:2; ಯೆಹೆ. 47:10.