Malachi
ಮಲಾಕಿಯನು
ಸ್ವಜನರ ಮೇಲೆ ಯೆಹೋವನ ಪ್ರೀತಿ
೧ ಯೆಹೋವನು ಇಸ್ರಾಯೇಲರ ಕುರಿತು ಮಲಾಕಿಯ ಮೂಲಕ ನುಡಿದ ದೈವೋಕ್ತಿ.
೨ ಯೆಹೋವನು ಇಂತೆನ್ನುತ್ತಾನೆ, “ನಾನು ನಿಮ್ಮನ್ನು ಪ್ರೀತಿಸಿದ್ದೇನೆ.” ನೀವೋ “ಯಾವ ವಿಷಯದಲ್ಲಿ ನಮ್ಮನ್ನು ಪ್ರೀತಿಸಿದ್ದೀ?” ಅಂದುಕೊಳ್ಳುತ್ತೀರಲ್ಲಾ. ಏಸಾವನು ಯಾಕೋಬನ ಅಣ್ಣನಲ್ಲವೆ? ೩ “ಆದರೆ ನಾನು ಯಾಕೋಬನನ್ನು ಪ್ರೀತಿಸಿ, ಏಸಾವನನ್ನು ದ್ವೇಷಿಸಿ, ಅವನ ಬೆಟ್ಟಗಳನ್ನು ಹಾಳುಮಾಡಿ ಅವನ ಪಿತ್ರಾರ್ಜಿತ ಆಸ್ತಿಯನ್ನು ಕಾಡುನರಿಗಳ ಪಾಲುಮಾಡಿದ್ದೇನಷ್ಟೆ” ಇದು ಯೆಹೋವನ ನುಡಿ. ೪ ಹೀಗಿರಲು ಎದೋಮ್ಯರು, “ನಾವು ಹಾಳಾದೆವು, ಆದರೆ ಹಾಳುಪ್ರದೇಶಗಳನ್ನು ಮತ್ತೆ ಕಟ್ಟುವೆವು” ಅಂದುಕೊಂಡರೆ ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಅವರು ಕಟ್ಟಿದರೂ ನಾನು ಕೆಡವಿಹಾಕುವೆನು; ಅವರು ದುಷ್ಟ ಕೇಡಿಗರು, ಯೆಹೋವನ ನಿತ್ಯ ಕೋಪಕ್ಕೆ ಗುರಿಯಾದ ಜನರೂ ಅನ್ನಿಸಿಕೊಳ್ಳುವರು. ೫ ನೀವೇ ಇದನ್ನು ಕಣ್ಣಾರೆ ಕಂಡು ಯೆಹೋವನು ಇಸ್ರಾಯೇಲಿನ ಮೇರೆಯ ಆಚೆಯೂ, ‘ಮಹಾ ಮಹಿಮೆಯುಳ್ಳವನು’ ” ಅಂದುಕೊಳ್ಳುವಿರಿ.
ಅಯೋಗ್ಯ ಯಾಜಕರಿಗೆ ಶಾಪ; ಅಶುದ್ಧವಾದ ಯಜ್ಞಗಳು
೬ “ನನ್ನ ನಾಮವನ್ನು ಧಿಕ್ಕರಿಸುವ ಯಾಜಕರೇ, ಮಗನು ತಂದೆಗೆ ಸನ್ಮಾನ ಸಲ್ಲಿಸುತ್ತಾನಲ್ಲಾ, ಆಳು ಧಣಿಗೆ ಭಯಭಕ್ತಿ ತೋರಿಸುತ್ತಾನಷ್ಟೇ; ನಾನು ತಂದೆಯಾಗಿರಲು ನನಗೆ ಸಲ್ಲುವ ಸನ್ಮಾನವೆಲ್ಲಿ? ನಾನು ದಣಿಯಾಗಿರಲು ನನಗೆ ತೋರಿಸುವ ಭಯಭಕ್ತಿಯೆಲ್ಲಿ?” ಎಂದು ಸೇನಾಧೀಶ್ವರನಾದ ಯೆಹೋವನು ನಿಮಗೇ ನುಡಿಯುತ್ತಾನೆ. ಆದರೆ ನೀವು, “ಯಾವ ವಿಷಯದಲ್ಲಿ ನಿನ್ನ ನಾಮವನ್ನು ಧಿಕ್ಕರಿಸಿದ್ದೇವೆ?” ಅನ್ನುತ್ತೀರಿ. ೭ ನನ್ನ ಯಜ್ಞವೇದಿಯ ಮೇಲೆ ಅಶುದ್ಧ ಪದಾರ್ಥಗಳನ್ನು ಅರ್ಪಿಸುತ್ತೀರಲ್ಲಾ. “ಯಾವ ವಿಷಯದಲ್ಲಿ ಅಶುದ್ಧಗೊಳಿಸಿದ್ದೇವೆ?” ಅನ್ನುತ್ತೀರಿ. “ಯೆಹೋವನ ಮೇಜಿಗೆ ಘನತೆಯೇನಿದೆ?” ಎಂದು ನೀವು ಅಂದುಕೊಳ್ಳುವುದರಲ್ಲಿಯೇ ಇದೆ.
೮ ಕುರುಡಾದ ಪಶುವನ್ನು ಯಜ್ಞಕ್ಕೆ ಒಪ್ಪಿಸುವುದು ದೋಷವಲ್ಲವೆಂದು ನೆನಸುತ್ತೀರೋ? ಕುಂಟಾದದ್ದನ್ನೂ, ರೋಗದ ಪಶುವನ್ನೂ ಅರ್ಪಿಸುವುದು ದೋಷವಲ್ಲವೆಂದು ನಂಬುತ್ತೀರೋ? ಇಂಥದ್ದನ್ನು ನಿನ್ನ ದೇಶಾಧಿಪತಿಗೆ ಒಪ್ಪಿಸು; ನಿನಗೆ ಮೆಚ್ಚುಗೆ ವ್ಯಕ್ತಪಡಿಸುವನೋ? ನಿಮ್ಮ ಕೋರಿಕೆಯನ್ನು ನೆರವೇರಿಸುವನೋ? ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ೯ “ಹಾಗಾದರೆ ದೇವರ ದಯೆ ದೊರೆಯುವ ಹಾಗೆ ದೇವರನ್ನು ಬೇಡಿಕೊಳ್ಳಿರಿ; ಆಹಾ, ಇದೇ ನಿಮ್ಮ ಕೈಯ ಕಾಣಿಕೆ; ನಿಮ್ಮಲ್ಲಿ ಯಾರಿಗಾದರೂ ಆತನು ಪ್ರಸನ್ನನಾಗುವನೋ?” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
೧೦ “ನನ್ನ ಯಜ್ಞವೇದಿಯ ಮೇಲೆ ಯಾರೂ ಬೆಂಕಿಯನ್ನು ವ್ಯರ್ಥವಾಗಿ ಉರಿಸದಂತೆ ನಿಮ್ಮಲ್ಲೊಬ್ಬನು ದೇವಾಲಯದ ಬಾಗಿಲುಗಳನ್ನು ಮುಚ್ಚಿಬಿಟ್ಟರೆ ಎಷ್ಟೋ ಒಳ್ಳೆಯದು! ನಾನು ನಿಮನ್ನು ಮೆಚ್ಚೆನು, ನಿಮ್ಮ ಕೈಯಿಂದ ನೈವೇದ್ಯವನ್ನು ಸ್ವೀಕರಿಸೆನು” ಇದು ಸೇನಾಧೀಶ್ವರನಾದ ಯೆಹೋವನ ನುಡಿ. ೧೧ “ಸೂರ್ಯನು ಮೂಡುವ ದಿಕ್ಕಿನಿಂದ ಮುಳುಗುವ ದಿಕ್ಕಿನವರೆಗೂ ನನ್ನ ನಾಮವು ಅನ್ಯಜನಾಂಗಗಳಲ್ಲಿ ಘನವಾಗಿದೆ; ಒಂದೊಂದು ಸ್ಥಳದಲ್ಲಿಯೂ ನನ್ನ ನಾಮಕ್ಕೆ ಧೂಪವನ್ನು ಶುದ್ಧ ನೈವೇದ್ಯವನ್ನೂ ಅರ್ಪಿಸುತ್ತಾರೆ. ಹೌದು, ಅನ್ಯ ಜನಾಂಗಗಳಲ್ಲಿಯೇ ನನ್ನ ನಾಮವು ಬಹು ಮಾನ್ಯವಾಗಿದೆ.” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
೧೨ ನೀವೋ, “ಯೆಹೋವನ ಮೇಜು ಅಶುದ್ಧ, ಅದರ ಮೇಲಣ ನೈವೇದ್ಯ ಅಸಹ್ಯ ಅಂದುಕೊಳ್ಳುವುದರಿಂದ ನನ್ನ ನಾಮವನ್ನು ಅಪಕೀರ್ತಿಗೆ ಗುರಿಮಾಡಿದ್ದೀರಿ. ೧೩ ಅಯ್ಯೋ, ಈ ಸೇವೆಯು ಎಷ್ಟೋ ಬೇಸರವೆಂದು ನೀವು ಅಂದುಕೊಂಡು ಅದನ್ನು ತಾತ್ಸರ ಮಾಡುತ್ತೀರಿ” ಇದು ಸೇನಾಧೀಶ್ವರನಾದ ಯೆಹೋವನ ನುಡಿ. “ಕಳುವಾದ ಪಶುವನ್ನೂ, ಊನವಾದದ್ದನ್ನೂ, ರೋಗ ಹಿಡಿದ ಪ್ರಾಣಿಯನ್ನು ತಂದೊಪ್ಪಿಸುತ್ತೀರಿ. ನಾನು ನಿಮ್ಮ ಕೈಯಿಂದ ಸ್ವೀಕರಿಸುವುದಿಲ್ಲ” ಇದು ಯೆಹೋವನ ನುಡಿ. ೧೪ “ಒಬ್ಬನು ಹರಕೆ ಹೊತ್ತು ತನ್ನ ಹಿಂಡಿನಲ್ಲಿರುವ ಗಂಡುಪಶು ಹಾಗೂ ಕಳಂಕವಾದ ಪಶುವನ್ನು ಯೆಹೋವನಿಗೆ ಯಜ್ಞಮಾಡಿದರೆ ಆ ಮೋಸಗಾರನಿಗೆ ಶಾಪವು ತಟ್ಟಲಿ; ನಾನು ರಾಜಾಧಿರಾಜ, ನನ್ನ ನಾಮವು ಅನ್ಯಜನಾಂಗಗಳ ಭಯಭಕ್ತಿಗೆ ಪಾತ್ರವಾಗಿದೆ” ಇದು ಸೇನಾಧೀಶ್ವರನಾದ ಯೆಹೋವನ ನುಡಿ.