ನ್ಯಾಯಸ್ಥಾಪಕನಾದ ಯೆಹೋವನನ್ನು ಕೊಂಡಾಡುವ ಇಬ್ರಿಯ ಅಕ್ಷರಕ್ರಮಾನುಸಾರವಾದ ಕೀರ್ತನೆ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಮೂತ್ಲಬ್ಬೇನೆಂಬ ರಾಗ; ದಾವೀದನ ಕೀರ್ತನೆ.
 
೧ ಯೆಹೋವನೇ, ಮನಃಪೂರ್ವಕವಾಗಿ ನಿನ್ನನ್ನು ಕೊಂಡಾಡುವೆನು;
ನೀನು ಮಾಡಿದ ಅದ್ಭುತಕಾರ್ಯಗಳನ್ನೆಲ್ಲಾ ವರ್ಣಿಸುವೆನು.
೨ ಪರಾತ್ಪರನೇ, ನಾನು ನಿನ್ನಲ್ಲಿ ಸಂತೋಷಿಸಿ ಉತ್ಸಾಹಗೊಳ್ಳುವೆನು;
ನಿನ್ನ ಹೆಸರನ್ನು ಕೀರ್ತಿಸುವೆನು.
೩ ನನ್ನ ಹಗೆಗಳು ನಿನ್ನ ಎದುರಿನಿಂದ ಹಿಂದಿರುಗಿ ಎಡವಿಬಿದ್ದು ಹಾಳಾದರಲ್ಲಾ.
೪ ನನ್ನ ವ್ಯಾಜ್ಯದಲ್ಲಿ ನೀನು ನ್ಯಾಯವನ್ನು ಸ್ಥಾಪಿಸಿದಿ;
ನೀನು ಆಸನಾರೂಢನಾಗಿ ನೀತಿಯಿಂದ ನ್ಯಾಯವನ್ನು ನಿರ್ಣಯಿಸುತ್ತಿ.
೫ ನೀನು ಜನಾಂಗಗಳನ್ನು ಹೆದರಿಸಿ ದುಷ್ಟರನ್ನು ನಾಶ ಮಾಡಿದ್ದಿ,
ಅವರ ಹೆಸರನ್ನು ಯುಗಯುಗಾಂತರಕ್ಕೂ ಅಳಿಸಿಬಿಟ್ಟಿದ್ದಿ.
೬ ಶತ್ರುಗಳು ನಿಶ್ಶೇಷವಾದರು;
ನೀನು ಕೆಡವಿದ ಅವರ ಪಟ್ಟಣಗಳು ಸಂಪೂರ್ಣವಾಗಿ ಹಾಳಾದವು.
ಅವರ ಸ್ಮರಣೆಯೇ ಇಲ್ಲವಾಯಿತು.
೭ ಯೆಹೋವನಾದರೋ ಯಾವಾಗಲೂ ನೆಲೆಗೊಂಡಿದ್ದು,
ನ್ಯಾಯವಿಚಾರಿಸುವುದಕ್ಕಾಗಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ.
೮ ಆತನೇ ನೀತಿಗನುಸಾರವಾಗಿ ಲೋಕಕ್ಕೆ ನ್ಯಾಯ ತೀರಿಸುವವನು;
ಆತನು ಜನಾಂಗಗಳಿಗೆ ಸತ್ಯಕ್ಕನುಸಾರವಾಗಿ ತೀರ್ಪುಕೊಡುವನು.
೯ ಯೆಹೋವನು ಕುಗ್ಗಿದವರಿಗೆ ಆಶ್ರಯವೂ,
ಆಪತ್ಕಾಲದಲ್ಲಿ ದುರ್ಗವೂ ಆಗಿರುವನು.
೧೦ ಯೆಹೋವನೇ, ನಿನ್ನ ನಾಮಮಹಿಮೆಯನ್ನು ಬಲ್ಲವರು
ನಿನ್ನಲ್ಲಿ ಭರವಸವಿಡುವರು;
ಏಕೆಂದರೆ ನಿನ್ನ ಮೊರೆಹೋಗುವವರನ್ನು ನೀನು ಕೈಬಿಡುವವನಲ್ಲ.
೧೧ ಚೀಯೋನಿನಲ್ಲಿ ವಾಸಿಸುವ ಯೆಹೋವನನ್ನು ಕೀರ್ತಿಸಿರಿ;
ಆತನ ಮಹತ್ಕಾರ್ಯಗಳನ್ನು ಜನಾಂಗಗಳಲ್ಲಿ ಪ್ರಕಟಿಸಿರಿ.
೧೨ ಆತನು ಕುಗ್ಗಿದವರ ಮೊರೆಯನ್ನು ಮರೆಯದೆ
ಪ್ರಾಣಾಪರಾಧಕ್ಕೆ ಮುಯ್ಯಿತೀರಿಸುವವನಾಗಿ ಅವರನ್ನು ಜ್ಞಾಪಕಮಾಡಿಕೊಳ್ಳುವನು.
೧೩ ಯೆಹೋವನೇ, ಮರಣದ್ವಾರದೊಳಗೆ ಸೇರದಂತೆ;
ನನ್ನನ್ನು ಉದ್ಧರಿಸುವವನೇ, ಕನಿಕರಿಸು;
ಹಗೆಗಳಿಂದ ನನಗುಂಟಾದ ಬಾಧೆಯನ್ನು ಲಕ್ಷ್ಯಕ್ಕೆ ತಂದುಕೋ.
೧೪ ಆಗ ನಾನು ನಿನ್ನ ಸ್ತೋತ್ರವನ್ನು ಪ್ರಸಿದ್ಧಪಡಿಸುವೆನು;
ನಿನ್ನಿಂದಾದ ರಕ್ಷಣೆಗಾಗಿ ಚೀಯೋನೆಂಬ ಕುಮಾರಿಯ ಬಾಗಿಲುಗಳಲ್ಲಿ ಹರ್ಷಿಸುವೆನು.
೧೫ ಜನಾಂಗಗಳವರು ತಾವು ಮಾಡಿದ ಕುಣಿಯಲ್ಲಿ ತಾವೇ ಬಿದ್ದು ಹೋದರು;
ಅವರು ಹಾಸಿದ ಬಲೆಯಲ್ಲಿ ಅವರ ಕಾಲೇ ಸಿಕ್ಕಿಕೊಂಡಿತು.
೧೬ ಯೆಹೋವನು ನ್ಯಾಯತೀರಿಸುವವನಾಗಿ ತನ್ನನ್ನು ಪ್ರಕಟಿಸಿಕೊಂಡಿದ್ದಾನೆ;
ದುಷ್ಟರು ತಾವೇ ಕಲ್ಪಿಸಿದ ಕುಯುಕ್ತಿಯಲ್ಲಿ ಸಿಕ್ಕಿಕೊಂಡಿದ್ದಾರಲ್ಲಾ. ಹಿಗ್ಗಾಯೋನ್
ಸೆಲಾ
೧೭ ದುಷ್ಟರು ಅಂದರೆ ದೇವರನ್ನು ಅಲಕ್ಷ್ಯಮಾಡುವ ಜನಾಂಗಗಳವರೆಲ್ಲಾ
ಪಾತಾಳಕ್ಕೆ ಇಳಿದುಹೋಗುವರು.
೧೮ ದಿಕ್ಕಿಲ್ಲದವರು ಕಡೆಯವರೆಗೆ ಮರೆಯಲ್ಪಡುವುದಿಲ್ಲ;
ದೀನರ ನಿರೀಕ್ಷೆಯು ಕೆಡುವುದೇ ಇಲ್ಲ.
೧೯ ಯೆಹೋವನೇ, ಏಳು; ಮನುಷ್ಯಮಾತ್ರದವರು ಬಲಗೊಳ್ಳಬಾರದು.
ಜನಾಂಗಗಳಿಗೆ ನಿನ್ನ ಸನ್ನಿಧಿಯಲ್ಲಿ ತೀರ್ಪು ಉಂಟಾಗಲಿ.
೨೦ ಯೆಹೋವನೇ, ಅವರಿಗೆ ಭಯವನ್ನು ಹುಟ್ಟಿಸು;
ಜನಾಂಗಗಳು ತಾವು ಮನುಷ್ಯಮಾತ್ರದವರೆಂದು ತಿಳಿದುಕೊಳ್ಳಲಿ.
ಸೆಲಾ.