ಇಸ್ರಾಯೇಲರ ರಕ್ಷಕನ ಮಹತ್ವ
೧೧೪
೧ ಇಸ್ರಾಯೇಲರು ಐಗುಪ್ತ ದೇಶವನ್ನೂ,
ಯಾಕೋಬನ ಮನೆತನದವರು ಅನ್ಯಜನಾಂಗವನ್ನು ಬಿಟ್ಟ ಮೇಲೆ,
೨ ಯೆಹೂದವು ದೇವರ ಪರಿಶುದ್ಧ ವಾಸಸ್ಥಾನವೂ,
ಇಸ್ರಾಯೇಲ್ ಆತನ ರಾಜ್ಯವೂ ಆಯಿತು.
೩ ಸಮುದ್ರವು ಕಂಡು ಓಡಿಹೋಯಿತು;
ಯೊರ್ದನ್ ಹೊಳೆಯು ಹಿಂದಿರುಗಿತು.
೪ ಪರ್ವತಗಳು ಟಗರುಗಳಂತೆಯೂ,
ಗುಡ್ಡಗಳು ಕುರಿಮರಿಗಳಂತೆಯೂ ಹಾರಾಡಿದವು.
೫ ಸಮುದ್ರವೇ, ನಿನಗೇನಾಯಿತು? ಏಕೆ ಓಡಿ ಹೋಗುತ್ತೀ?
ಯೊರ್ದನೇ, ಏಕೆ ಹಿಂದಿರುಗುತ್ತೀ?
೬ ಪರ್ವತಗಳೇ, ನೀವು ಟಗರುಗಳಂತೆಯೂ,
ಗುಡ್ಡಗಳೇ, ನೀವು ಕುರಿಮರಿಗಳಂತೆಯೂ ಏಕೆ ಹಾರಾಡುತ್ತೀರಿ?
೭ ಭೂಲೋಕವೇ, ಕರ್ತನು ಪ್ರತ್ಯಕ್ಷನಾಗಿದ್ದಾನೆ,
ಯಾಕೋಬನ ದೇವರು ನಿನ್ನ ಮುಂದೆ ಇದ್ದಾನೆ, ಕಂಪಿಸು.
೮ ಆತನು ಬಂಡೆಯನ್ನು ಕೆರೆಯನ್ನಾಗಿಯೂ,
ಶಿಲೆಯನ್ನು ಬುಗ್ಗೆಯನ್ನಾಗಿಯೂ ಮಾರ್ಪಡಿಸುತ್ತಾನೆ.