ಇಸ್ರಾಯೇಲರ ಹಿಂದಿನ ಅನುಭವಗಳು
೧೧
೧ ಆದುದರಿಂದ ನೀವು ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ, ಆತನ ನಿಯಮಗಳನ್ನು ಕೈಕೊಂಡು, ಆತನ ಆಜ್ಞಾವಿಧಿನಿಯಮಗಳನ್ನು ಯಾವಾಗಲೂ ಅನುಸರಿಸಬೇಕು.
೨ ಈ ಕಾರ್ಯಗಳನ್ನು ನೋಡದೆಯೂ ಮತ್ತು ತಿಳಿಯದೆಯೂ ಇರುವ ನಿಮ್ಮ ಮಕ್ಕಳಿಗೆ ನಾನು ಈ ಮಾತನ್ನು ಹೇಳುವುದಿಲ್ಲ. ನೀವು ನಿಮ್ಮ ದೇವರಾದ ಯೆಹೋವನ ಶಿಕ್ಷಣ ಕ್ರಮವನ್ನೂ, ಮಹಿಮೆಯನ್ನೂ, ಭುಜಬಲವನ್ನೂ ಮತ್ತು ಶಿಕ್ಷಾಹಸ್ತದಿಂದ ನಡಿಸಿದ ಸೂಚಕಕಾರ್ಯಗಳನ್ನೂ ಮತ್ತು ಮಹತ್ಕಾರ್ಯಗಳನ್ನೂ ನೋಡಿದಿರಿ. ೩ ಆತನು ಐಗುಪ್ತದೇಶದಲ್ಲಿ ಫರೋಹನನ್ನೂ ಹಾಗೂ ಅವನ ದೇಶವನ್ನೂ ಶಿಕ್ಷಿಸುವುದಕ್ಕಾಗಿ ೪ ಐಗುಪ್ತ್ಯರ ಸೈನ್ಯ ಅಂದರೆ, ಅವರ ರಥಾಶ್ವಬಲಗಳು ನಿಮ್ಮನ್ನು ಹಿಂದಟ್ಟಿ ಬಂದಾಗ ಆತನು ಕೆಂಪು ಸಮುದ್ರದ ನೀರನ್ನು ಅವರ ಮೇಲೆ ಬರಮಾಡಿ ಸಂಪೂರ್ಣವಾಗಿ ನಾಶಮಾಡಿದ್ದನ್ನೂ, ೫ ನೀವು ಈ ಸ್ಥಳಕ್ಕೆ ಸೇರುವ ತನಕ ಆತನು ನಿಮಗೋಸ್ಕರ ಅರಣ್ಯದಲ್ಲಿ ಉಪಕಾರಮಾಡಿದ್ದನ್ನೂ, ೬ ರೂಬೇನನ ಮೊಮ್ಮಕ್ಕಳೂ, ಎಲೀಯಾಬನ ಮಕ್ಕಳೂ ಆದ ದಾತಾನ್ ಮತ್ತು ಅಬೀರಾಮರು ತಿರುಗಿ ಬಿದ್ದಾಗ ಭೂಮಿಯು ಬಾಯ್ದೆರೆದು ಅವರನ್ನೂ, ಅವರ ಮನೆಯವರನ್ನೂ, ಅವರ ಡೇರೆಗಳನ್ನೂ ಮತ್ತು ಅವರಿಗೆ ಸೇರಿದ ಎಲ್ಲಾ ಪ್ರಾಣಿಗಳನ್ನೂ ಇಸ್ರಾಯೇಲರ ನಡುವೆ ನುಂಗಿಬಿಟ್ಟದ್ದನ್ನೂ ಈಗ ಜ್ಞಾಪಕಮಾಡಿಕೊಳ್ಳಿರಿ. ೭ ಯೆಹೋವನು ನಡಿಸಿದ ಆ ವಿಶೇಷ ಕಾರ್ಯಗಳನ್ನು ಪ್ರತ್ಯಕ್ಷವಾಗಿ ನೋಡಿದವರಾದ ನಿಮಗೇ ಹೇಳುತ್ತಿದ್ದೇನೆ.
ವಾಗ್ದತ್ತ ದೇಶದ ಸೌಭಾಗ್ಯ
೮ ಆದುದರಿಂದಲೇ ನಾನು ಈಗ ನಿಮಗೆ ಬೋಧಿಸುವ ಈ ಧರ್ಮೋಪದೇಶವನ್ನೆಲ್ಲಾ ನೀವು ಅನುಸರಿಸಬೇಕು. ಆಗ ನೀವು ಬಲವುಳ್ಳವರಾಗಿ ಈ ನದಿಯನ್ನು ದಾಟಿ ಆಚೆಯಿರುವ ೯ ದೇಶವನ್ನು ಸೇರಿ ಸ್ವಾಧೀನ ಮಾಡಿಕೊಳ್ಳುವಿರಿ. ಯೆಹೋವನು ನಿಮ್ಮ ಪಿತೃಗಳಿಗೂ ಅವರ ಸಂತತಿಗೂ ಕೊಡುತ್ತೇನೆಂದು ಪ್ರಮಾಣಮಾಡಿದ ಆ ದೇಶದಲ್ಲಿ ನೀವು ಬಹುಕಾಲ ಬದುಕುವಿರಿ. ಅದು ಹಾಲೂ ಮತ್ತು ಜೇನೂ ಹರಿಯುವ ದೇಶ. ೧೦ ನೀವು ಸ್ವತಂತ್ರಿಸಿಕೊಳ್ಳುವುದಕ್ಕೆ ಹೋಗುವ ದೇಶವು ಬಿಟ್ಟುಬಂದ ಐಗುಪ್ತದೇಶದ ಹಾಗಲ್ಲ. ಐಗುಪ್ತದೇಶದಲ್ಲಿ ನೀವು ಹೊಲಗದ್ದೆಗಳಲ್ಲಿ ಬೀಜ ಬಿತ್ತಿದ ಮೇಲೆ ಕಾಯಿಪಲ್ಯಗಳ ತೋಟವನ್ನು ವ್ಯವಸಾಯ ಮಾಡುವ ರೀತಿಯಲ್ಲಿ ಏತವನ್ನು ತುಳಿದು ನೀರು ಕಟ್ಟುತ್ತಿದ್ದಿರಿ. ೧೧ ಆದರೆ ನೀವು ಸ್ವಾಧೀನ ಮಾಡಿಕೊಳ್ಳುವುದಕ್ಕೆ ಹೋಗುವ ದೇಶವೋ ಹಳ್ಳದಿಣ್ಣೆಗಳ ದೇಶ; ಆಕಾಶದಿಂದ ಮಳೆಬಿದ್ದ ಪ್ರಕಾರವೇ ಅದಕ್ಕೆ ನೀರು ದೊರೆಯುವುದು. ೧೨ ಅದು ನಿಮ್ಮ ದೇವರಾದ ಯೆಹೋವನು ಪರಾಂಬರಿಸುವ ದೇಶ; ವರ್ಷದ ಪ್ರಾರಂಭ ಮೊದಲುಗೊಂಡು ಕೊನೆಯ ವರೆಗೂ ಆತನು ಅದನ್ನು ಸದಾ ಕಟಾಕ್ಷಿಸುವನು. ೧೩ ನಾನು ಈಗ ನಿಮಗೆ ಬೋಧಿಸುವ ಆಜ್ಞೆಗಳಿಗೆ ನೀವು ಲಕ್ಷ್ಯಕೊಟ್ಟು, ನಿಮ್ಮ ದೇವರಾದ ಯೆಹೋವನನ್ನು ಸಂಪೂರ್ಣ ಹೃದಯದಿಂದಲೂ, ಸಂಪೂರ್ಣ ಮನಸ್ಸಿನಿಂದಲೂ ಪ್ರೀತಿಸಿ ಆತನನ್ನು ಸೇವಿಸಿದರೆ, ೧೪ ನಿಮಗೆ ಗೋಧಿ, ದ್ರಾಕ್ಷೇ, ಎಣ್ಣೇಕಾಯಿ ಇವುಗಳ ಬೆಳೆ ಚೆನ್ನಾಗಿ ಉಂಟಾಗುವಂತೆ ಆತನು ನಿಮ್ಮ ಭೂಮಿಗೆ ಬೇಕಾದ ಮುಂಗಾರು ಮತ್ತು ಹಿಂಗಾರು ಮಳೆಯನ್ನು ಸರಿಯಾಗಿ ಕೊಡುವನು. ೧೫ ಅಡವಿಯಲ್ಲಿ ದನಕರುಗಳಿಗೆ ಬೇಕಾದಷ್ಟು ಹುಲ್ಲನ್ನು ಕೊಡುವನು; ನೀವು ಆಹಾರದಿಂದ ತೃಪ್ತರಾಗಿರುವಿರಿ. ೧೬ ಆದರೆ ನೀವು ಎಚ್ಚರದಿಂದಿರಬೇಕು; ನಿಮ್ಮ ಹೃದಯವು ಮರುಳುಗೊಂಡು ಯೆಹೋವನು ಹೇಳಿದ ಮಾರ್ಗವನ್ನು ಬಿಟ್ಟು, ಇತರ ದೇವರುಗಳನ್ನು ಅವಲಂಭಿಸಿ ಪೂಜಿಸಿದರೆ, ೧೭ ಆತನು ನಿಮ್ಮ ಮೇಲೆ ಸಿಟ್ಟುಗೊಂಡು ಮಳೆಬಾರದಂತೆ ಆಕಾಶವನ್ನು ಮುಚ್ಚಿಬಿಟ್ಟಾನು; ಆಗ ಭೂಮಿಯಲ್ಲಿ ಬೆಳೆಯಾಗದೆ ಯೆಹೋವನು ನಿಮಗೆ ಕೊಡುವ ಆ ಉತ್ತಮ ದೇಶದಲ್ಲಿ ನೀವು ಉಳಿಯದೆ ಬೇಗ ನಾಶವಾಗಿ ಹೋಗುವಿರಿ.
೧೮ ಆದುದರಿಂದ ನೀವು ಈ ನನ್ನ ಮಾತುಗಳನ್ನು ನಿಮ್ಮ ಹೃದಯದಲ್ಲಿಯೂ, ಮನಸ್ಸಿನಲ್ಲಿಯೂ ಇಟ್ಟುಕೊಳ್ಳಬೇಕು. ಇವುಗಳನ್ನು ಜ್ಞಾಪಕಾರ್ಥವಾಗಿ ಕೈಗೆ ಕಟ್ಟಿಕೊಳ್ಳಬೇಕು. ಇವು ನಿಮ್ಮ ಹಣೆಗೆ ಕಟ್ಟಿಕೊಳ್ಳುವ ಜ್ಞಾಪಕದ ಪಟ್ಟಿಯಂತಿರಬೇಕು. ೧೯ ನೀವು ಮನೆಯಲ್ಲಿರುವಾಗಲೂ, ಪ್ರಯಾಣದಲ್ಲಿರುವಾಗಲೂ, ಮಲಗುವಾಗಲೂ ಮತ್ತು ಏಳುವಾಗಲೂ ಇವುಗಳ ವಿಷಯದಲ್ಲಿ ಮಾತನಾಡುತ್ತಾ ನಿಮ್ಮ ಮಕ್ಕಳಿಗೆ ಇವುಗಳನ್ನು ಅಭ್ಯಾಸಮಾಡಿಸಬೇಕು. ೨೦ ನಿಮ್ಮ ಮನೇಬಾಗಿಲಿನ ನಿಲುವುಪಟ್ಟಿಗಳಲ್ಲಿಯೂ ಮತ್ತು ಹೆಬ್ಬಾಗಿಲುಗಳ ಮೇಲೆಯೂ ಇವುಗಳನ್ನು ಬರೆಯಬೇಕು. ೨೧ ಹೀಗೆ ಮಾಡಿದರೆ ಭೂಮಿಯ ಮೇಲೆ ಆಕಾಶವು ಎಷ್ಟು ಕಾಲ ಇರುವುದೋ, ಅಷ್ಟು ಕಾಲದ ವರೆಗೆ ನೀವೂ ಮತ್ತು ನಿಮ್ಮ ಸಂತತಿಯವರೂ ಯೆಹೋವನು ನಿಮ್ಮ ಪಿತೃಗಳಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ಆ ದೇಶದಲ್ಲಿ ಬಾಳುವಿರಿ.
೨೨ ನಾನು ನಿಮಗೆ ಬೋಧಿಸುವ ಈ ಧರ್ಮೋಪದೇಶವನ್ನೆಲ್ಲಾ ನೀವು ಅನುಸರಿಸುವವರಾಗಿ, ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ, ಎಲ್ಲಾ ವಿಷಯಗಳಲ್ಲಿಯೂ ಆತನು ಹೇಳುವ ಮಾರ್ಗದಲ್ಲೇ ನಡೆದು, ಆತನನ್ನೇ ಹೊಂದಿಕೊಂಡಿರಬೇಕು. ೨೩ ಆಗ ಆತನು ಆ ಜನಾಂಗಗಳನ್ನೆಲ್ಲಾ ನಿಮ್ಮ ಎದುರಿನಿಂದ ಹೊರಡಿಸುವನು. ನಿಮಗಿಂತಲೂ ಮಹಾಬಲಿಷ್ಠ ಜನಾಂಗಗಳ ದೇಶವನ್ನು ನೀವು ಸ್ವಾಧೀನ ಮಾಡಿಕೊಳ್ಳುವಿರಿ. ೨೪ ನೀವು ಹೆಜ್ಜೆಯಿಡುವ ಎಲ್ಲಾ ಸ್ಥಳಗಳು ನಿಮ್ಮದಾಗುವವು. ಅರಣ್ಯ ಮೊದಲುಗೊಂಡು ಲೆಬನೋನ್ ಪರ್ವತದ ವರೆಗೂ ಮತ್ತು ಯೂಫ್ರೇಟೀಸ್ ನದಿಯಿಂದ ಪಶ್ಚಿಮ ಸಮುದ್ರದವರೆಗೂ ನಿಮ್ಮ ಸೀಮೆ ವ್ಯಾಪಿಸುವುದು. ೨೫ ಯಾರೂ ನಿಮ್ಮ ಮುಂದೆ ನಿಲ್ಲುವುದಿಲ್ಲ. ತಾನು ನಿಮಗೆ ಹೇಳಿದಂತೆ ನೀವು ಕಾಲಿಡುವ ಎಲ್ಲಾ ಪ್ರದೇಶಗಳ ಜನಗಳಿಗೂ ನಿಮ್ಮಿಂದ ದಿಗಿಲೂ ಮತ್ತು ಹೆದರಿಕೆಯೂ ಉಂಟಾಗುವಂತೆ ನಿಮ್ಮ ದೇವರಾದ ಯೆಹೋವನು ಮಾಡುವನು.
೨೬ ಇಗೋ ನೋಡಿರಿ, ಈ ಹೊತ್ತು ನಾನು ಆಶೀರ್ವಾದವನ್ನೂ ಮತ್ತು ಶಾಪವನ್ನೂ ನಿಮ್ಮ ಮುಂದೆ ಇಡುತ್ತಾ ಇದ್ದೇನೆ. ೨೭ ನಾನು ಈಗ ನಿಮಗೆ ಬೋಧಿಸುವ ನಿಮ್ಮ ದೇವರಾದ ಯೆಹೋವನ ಆಜ್ಞೆಗಳಿಗೆ ನೀವು ವಿಧೇಯರಾಗಿ ನಡೆದರೆ ಆಶೀರ್ವಾದವೂ, ೨೮ ಈ ಆಜ್ಞೆಗಳಿಗೆ ಅವಿಧೇಯರಾಗಿ, ನಾನು ಈಗ ಬೋಧಿಸುವ ಮಾರ್ಗವನ್ನು ಬಿಟ್ಟು ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ಅವಲಂಬಿಸಿದರೆ ಶಾಪವೂ ನಿಮಗುಂಟಾಗುವವು.
೨೯ ನೀವು ಸ್ವಾಧೀನ ಮಾಡಿಕೊಳ್ಳುವುದಕ್ಕೆ ಹೋಗುವ ಆ ದೇಶಕ್ಕೆ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಸೇರಿಸಿದ ನಂತರ ನೀವು ಗೆರಿಜ್ಜೀಮ್ ಬೆಟ್ಟದ ಮೇಲೆ ಆಶೀರ್ವಾದವನ್ನೂ ಮತ್ತು ಏಬಾಲ್ ಬೆಟ್ಟದ ಮೇಲೆ ಶಾಪವನ್ನೂ ಪ್ರಕಟಿಸಬೇಕು. ೩೦ ಆ ಬೆಟ್ಟಗಳು ಯೊರ್ದನ್ ನದಿಯ ಆಚೆ, ಪಡುವಣ ದಾರಿಯ ಪಶ್ಚಿಮದಲ್ಲಿ ಕಾನಾನ್ಯರು ವಾಸಿಸುವ ಅರಾಬಾ ಪ್ರದೇಶದಲ್ಲಿ, ಗಿಲ್ಗಾಲಿಗೆ ಎದುರಾಗಿ ಮೋರೆ ಎಂಬ ವೃಕ್ಷದ ಬಳಿಯಲ್ಲಿ ಇವೆ.
೩೧ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೆ ನೀವು ಯೊರ್ದನ್ ನದಿಯನ್ನು ದಾಟಬೇಕು. ನೀವು ಆ ದೇಶವನ್ನು ಸ್ವಾಧೀನಮಾಡಿಕೊಂಡು, ಅದರಲ್ಲಿ ವಾಸಮಾಡುವಾಗ ೩೨ ನಾನು ಈಗ ನಿಮಗೆ ತಿಳಿಸುವ ಎಲ್ಲಾ ಆಜ್ಞಾವಿಧಿಗಳನ್ನು ಅನುರಿಸಿ ನಡೆಯಲೇಬೇಕು.