೨೪
ಕಿಲುಬಿನ ಹಂಡೆಯ ಸಾಮ್ಯ
೧ ಒಂಭತ್ತನೆಯ ವರುಷದ, ಹತ್ತನೆಯ ತಿಂಗಳಿನ, ಹತ್ತನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, ೨ “ನರಪುತ್ರನೇ, ಈ ದಿನದ, ಇದೇ ದಿನದ ಹೆಸರನ್ನು ಬರೆದುಕೋ; ಇದೇ ದಿನದಲ್ಲಿ ಬಾಬೆಲಿನ ಅರಸನು ಯೆರೂಸಲೇಮಿಗೆ ಮುತ್ತಿಗೆ ಹಾಕಿದ್ದಾನೆ.
೩ “ಈ ದಂಗೆಕೋರ ಮನೆತನದವರಿಗೆ ಸಾಮ್ಯವನ್ನು ತಿಳಿಸಿ ಹೀಗೆ ಹೇಳು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ,
‘ಹಂಡೆಯನ್ನು ಒಲೆಯ ಮೇಲಿಡು, ಅದರಲ್ಲಿ ನೀರನ್ನು ಹೊಯ್ಯಿ;
೪ ಮಾಂಸದ ತುಂಡುಗಳನ್ನು ಅಂದರೆ ತೊಡೆ, ಹೆಗಲು ಮೊದಲಾದ ಒಳ್ಳೆಯ ತುಂಡುಗಳನ್ನೆಲ್ಲಾ ಅದರಲ್ಲಿ ಒಟ್ಟಿಗೆ ಹಾಕು,
ಉತ್ತಮವಾದ ಎಲುಬುಗಳನ್ನು ಅದರಲ್ಲಿ ತುಂಬಿಸು.
೫ ಹಿಂಡಿನಲ್ಲಿ ಶ್ರೇಷ್ಠವಾದದನ್ನು ತೆಗೆದುಕೋ; ಹಂಡೆಯ ತಳದಲ್ಲಿ ಎಲುಬುಗಳನ್ನು ರಾಶಿಯಾಗಿ ಒಟ್ಟು;
ಚೆನ್ನಾಗಿ ಕುದಿಸು; ಹೌದು, ಎಲುಬುಗಳು ಅದರಲ್ಲಿ ಬೇಯಲಿ.’
೬ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆಹಾ, ರಕ್ತಮಯವಾದ ಪಟ್ಟಣವೇ ನನಗೆ ಧಿಕ್ಕಾರ ಹಂಡೆಯಲ್ಲಿನ ಕಿಲುಬು ಹೊರಗೆ ಬಾರದೆ ಅದರಲ್ಲಿ ಉಳಿದಿರುವುದೋ ಆ ಹಂಡೆಗೆ ಕಷ್ಟ! ಅದರಿಂದ ಮಾಂಸವನ್ನು ತುಂಡು ತುಂಡಾಗಿ ತೆಗೆ. ಆಯ್ಕೆಯ ಚೀಟಿಯನ್ನು ಹಾಕಬೇಡ.
೭ “ಯೆರುಸಲೇಮ್ ನಗರ ಸುರಿಸಿದ ರಕ್ತವು ಅದರ ಮಧ್ಯದಲ್ಲಿದೆ; ಅದು ಅದನ್ನು ಬಂಡೆಯ ತುದಿಯಲ್ಲಿ ಇಟ್ಟಿದ್ದಾರೆ. ಧೂಳು ಮುಚ್ಚುವ ಹಾಗೆ ನೆಲದ ಮೇಲೆ ಚೆಲ್ಲಲಿಲ್ಲ. ೮ ಮುಯ್ಯಿಗೆ ಮುಯ್ಯಿ ತೀರಿಸುವುದಕ್ಕೆ, ರೋಷವನ್ನೆಬ್ಬಿಸುವ ಹಾಗೆ, ನಾನು ಅದರ ರಕ್ತಾಪರಾಧವನ್ನು ಮುಚ್ಚಿ ಬಿಡದಂತೆ ಅದನ್ನು ಬಂಡೆಯ ತುದಿಯ ಮೇಲೆ ಇಟ್ಟಿದ್ದೇನೆ.”
೯ ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆಹಾ, ರಕ್ತಾಪರಾಧವುಳ್ಳ ಆ ಪಟ್ಟಣಕ್ಕೆ ಕಷ್ಟ! ನಾನೇ ಬೆಂಕಿಯನ್ನು ರಾಶಿಯಾಗಿ ಹೆಚ್ಚಿಸುವೆನು. ೧೦ ಬಹಳ ಸೌದೆ ಹಾಕಿ, ಬೆಂಕಿಯನ್ನು ಹೆಚ್ಚಿಸಿ, ಮಾಂಸವನ್ನು ಬೇಯಿಸು, ಸಾರು ಮಂದವಾಗಿರಲಿ, ಎಲುಬುಗಳು ಬೆಂದು ಹೋಗಲಿ.
೧೧ “ಆ ಮೇಲೆ ಹಂಡೆಯು ಕಾದು ತಾಮ್ರವು ಕೆಂಪಾಗಿ, ಒಳಗಿನ ಕಲ್ಮಷವು ಕರಗಿ, ಕಿಲುಬು ಇಲ್ಲವಾಗುವಂತೆ ಅದನ್ನು ಬರಿದುಮಾಡಿ ಕೆಂಡಗಳ ಮೇಲೆ ಇಡು. ೧೨ ಅದರ ಕಲ್ಮಶವು ನನ್ನಲ್ಲಿ ಕೇವಲ ಪ್ರಯಾಸವನ್ನೂ, ಆಯಾಸವನ್ನೂ ಉಂಟುಮಾಡಿದೆ; ಆದರೂ ಅದಕ್ಕೆ ಹತ್ತಿದ ಕಿಲುಬು ಹೋಗಲಿಲ್ಲ, ಬೆಂಕಿಯಿಂದಲೂ ನೀಗಲಿಲ್ಲ.
೧೩ “ಅಂತೆಯೇ ನಿನ್ನ ದುಷ್ಕರ್ಮವು ಅಸಹ್ಯವಾಗಿರುವುದರಿಂದಲೂ, ನಾನು ನಿನ್ನನ್ನು ಎಷ್ಟು ಶುದ್ಧಿಮಾಡಿದರೂ ನೀನು ಶುದ್ಧಿಯಾಗದೆ ಹೋದದ್ದರಿಂದಲೂ ನಾನು ನನ್ನ ರೋಷವನ್ನು ನಿನ್ನಲ್ಲಿ ತೀರಿಸಿ ಶಾಂತನಾಗುವವರೆಗೂ ನೀನು ನಿನ್ನ ಕೊಳೆಯನ್ನು ಇನ್ನು ಕಳೆದುಕೊಳ್ಳದೆ, ಶುದ್ಧಿಯಾಗದೆ ಇರುವಿ.”
೧೪ ಯೆಹೋವನಾದ ನಾನೇ ಇದನ್ನು ನುಡಿದಿದ್ದೇನೆ, “ಇದು ನಡೆಯುವುದು ನಿಶ್ಚಯ, ನಾನು ನೆರವೇರಿಸುವೆನು; ಹಿಂದೆಗೆಯೆನು, ಕ್ಷಮಿಸೆನು, ಕರುಣಿಸೆನು; ನಿನ್ನ ದುರ್ಮಾರ್ಗ, ದುಷ್ಕೃತ್ಯಗಳಿಗೆ ಸರಿಯಾಗಿ ನಿನಗೆ ನ್ಯಾಯತೀರ್ಪು ಆಗುವುದು” ಇದು ಕರ್ತನಾದ ಯೆಹೋವನ ನುಡಿ.
ಯೆಹೆಜ್ಕೇಲನ ಪತ್ನಿವಿಯೋಗದ ಸೂಚನೆ
೧೫ ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು, ೧೬ “ನರಪುತ್ರನೇ, ಇಗೋ, ಒಂದೇ ಏಟಿನಿಂದ ನಾನು ನಿನಗೆ ನೇತ್ರಾನಂದವಾಗಿರುವವಳನ್ನು ನಿನ್ನಿಂದ ತೆಗೆದುಬಿಡುವೆನು, ಆದರೂ ನೀನು ಗೋಳಾಡಬೇಡ, ಅಳಬೇಡ, ನಿನ್ನ ಕಣ್ಣೀರು ಸುರಿಯದಿರಲಿ. ೧೭ ಸದ್ದಿಲ್ಲದೆ ಮೊರೆಯಿಡು, ವಿಯೋಗ ದುಃಖವನ್ನು ತೋರಿಸಬೇಡ, ರುಮಾಲನ್ನು ಸುತ್ತಿಕೊಂಡಿರು, ಕೆರಗಳನ್ನು ಮೆಟ್ಟಿಕೊಂಡಿರು, ಬಾಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಡ, ಗಾರಿಗೆಯನ್ನು ತಿನ್ನಬೇಡ.”
೧೮ ಹೀಗೆ ಆಜ್ಞೆಯಾಗಲು ನಾನು ಪ್ರಾತಃಕಾಲದಲ್ಲಿ ಜನರೊಂದಿಗೆ ಮಾತನಾಡಿದನು, ಸಾಯಂಕಾಲಕ್ಕೆ ನನ್ನ ಪತ್ನಿಯು ತೀರಿಹೋದಳು; ಮಾರನೆಯ ಬೆಳಿಗ್ಗೆ ನನಗೆ ಅಪ್ಪಣೆಯಾದಂತೆ ಮಾಡಿದೆನು. ೧೯ ಆಗ ಜನರು, “ನೀನು ಹೀಗೆ ಮಾಡುವುದರಿಂದ ಪ್ರಯೋಜನವೇನೆಂದು ತಿಳಿಸುವುದಿಲ್ಲವೇ?” ಎಂದು ನನ್ನನ್ನು ಕೇಳಲು,
೨೦ ನಾನು ಅವರಿಗೆ ಹೀಗೆ ಹೇಳಿದೆನು, “ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದ್ದಾನೆ. ೨೧ ಇಸ್ರಾಯೇಲ್ ವಂಶದವರಿಗೆ ಹೀಗೆ ಸಾರು, ‘ಇಗೋ, ನಾನು ನನ್ನ ಪವಿತ್ರಾಲಯವನ್ನೂ, ನಿಮಗೆ ನೇತ್ರಾನಂದಕರವಾದದ್ದನ್ನೂ, ನಿಮ್ಮ ಮನಸ್ಸು ಅಭಿಲಾಶಿಸುವುದನ್ನು ನಾನು ಅಪವಿತ್ರ ಪಡಿಸುವೆನು, ನೀವು ಬಿಟ್ಟು ಬಂದಿರುವ ನಿಮ್ಮ ಗಂಡು ಮತ್ತು ಹೆಣ್ಣು ಮಕ್ಕಳು ಖಡ್ಗಕ್ಕೆ ತುತ್ತಾಗುವರು, ಎಂಬುದಾಗಿ ಸೇನಾದೀಶ್ವರನಾದ ಯೆಹೋವನು ನುಡಿದಿದ್ದಾರೆ ೨೨ ನಾನು ಮಾಡಿದಂತೆ ಆಗ ನೀವೂ ಮಾಡುವಿರಿ, ಅಂದರೆ ಬಟ್ಟೆಯಿಂದ ಬಾಯನ್ನು ಮುಚ್ಚಿಕೊಳ್ಳದೆ, ಮನುಷ್ಯರ ರೊಟ್ಟಿಯನ್ನು ತಿನ್ನದೆ ಇರುವಿರಿ, ೨೩ ರುಮಾಲುಗಳು ನಿಮ್ಮ ತಲೆಯ ಮೇಲೆಯೂ, ಕೆರಗಳು ನಿಮ್ಮ ಪಾದಗಳ ಅಡಿಯಲ್ಲಿಯೂ ಇರುವವು; ನೀವು ಗೋಳಾಡುವುದಿಲ್ಲ, ಅಳುವುದಿಲ್ಲ; ನಿಮ್ಮ ಅಧರ್ಮದಿಂದ ಕ್ಷೀಣವಾಗಿ ಹೋಗುವಿರಿ, ಒಬ್ಬರ ಸಂಗಡಲೊಬ್ಬರು ನರಳುವಿರಿ. ೨೪ ಹೀಗೆ ಯೆಹೆಜ್ಕೇಲನು ನಿಮಗೆ ಮುಂಗುರುತಾಗಿರುವನು; ಅವನು ಮಾಡಿದಂತೆಯೇ ಎಲ್ಲವನ್ನು ನೀವು ಮಾಡುವಿರಿ; ಇದು ಸಂಭವಿಸುವಾಗ ನಾನೇ ಕರ್ತನಾದ ಯೆಹೋವನು ಎಂದು ನಿಮಗೆ ಗೊತ್ತಾಗುವುದು.’ ”
೨೫ “ನರಪುತ್ರನೇ, ಅವರ ಬಲಾಧಾರವೂ, ಅವರ ನೇತ್ರಾನಂದಕರವಾದ ಆಲಿಯವನ್ನು, ಅವರು ಅಶಿಸುವುದನ್ನೂ, ಅವರ ಗಂಡು ಮತ್ತು ಹೆಣ್ಣು ಮಕ್ಕಳನ್ನೂ ಅವರ ಬಲದಿಂದ ತೆಗೆದು ಹಾಕುವ ದಿನದಲ್ಲಿ, ೨೬ ಆ ದಿನದಲ್ಲಿ ತಪ್ಪಿಸಿಕೊಂಡವನು ನಿನ್ನ ಬಳಿಗೆ ಬಂದು ನಡೆದ ಸಂಗತಿಯನ್ನು ನಿನಗೆ ತಿಳಿಸುವನು. ೨೭ ಆ ದಿನದಲ್ಲಿ ತಪ್ಪಿಸಿಕೊಂಡವನ ಕಡೆಗೆ ನಿನ್ನ ಬಾಯಿ ತೆರೆದಿರುವುದು. ನೀನು ಇನ್ನು ಮೂಕನಾಗಿರದೆ ಮಾತನಾಡುವೆ ಮತ್ತು ಅವರಿಗೆ ಗುರುತಾಗಿರುವೆ. ನಾನೇ ಯೆಹೋವನು” ಎಂದು ಅವರಿಗೆ ಗೊತ್ತಾಗುವುದು.