೨೩
ಸಾರಳ ಮರಣ
೧ ಸಾರಳು ನೂರಿಪ್ಪತ್ತೇಳು ವರ್ಷ ಬದುಕಿದಳು. ಇದು ಅವಳ ಒಟ್ಟು ಜೀವಮಾನ ಕಾಲದ ವರ್ಷಗಳು. ೨ ಸಾರಳು ಕಾನಾನ್ ದೇಶದಲ್ಲಿರುವ ಹೆಬ್ರೋನೆಂಬ ಕಿರ್ಯತರ್ಬದಲ್ಲಿ ಸತ್ತಳು. ಅಬ್ರಹಾಮನು ಬಂದು ಆಕೆಗಾಗಿ ಗೋಳಾಡಿ ಕಣ್ಣೀರು ಸುರಿಸಿದನು. ೩ ಆಮೇಲೆ ಆಕೆಯ ಶವದ ಬಳಿಯಿಂದ ಅಬ್ರಹಾಮನು ಎದ್ದು ಹಿತ್ತಿಯರ ಬಳಿಗೆ ಹೋಗಿ ಅವರಿಗೆ, ೪ “ನಾನು ನಿಮ್ಮಲ್ಲಿ ಪರದೇಶದವನೂ, ಪ್ರವಾಸಿಯೂ ಆಗಿದ್ದೇನೆ. ಈಗ ಮರಣಹೊಂದಿರುವ ನನ್ನ ಪತ್ನಿಯ ಸಮಾಧಿಗೋಸ್ಕರ ಸ್ವಲ್ಪ ಭೂಮಿಯನ್ನು ನನ್ನ ಸ್ವಂತಕ್ಕೆ ಕೊಡಿ” ಎಂದು ಕೇಳಿಕೊಂಡನು.
೫ ಹಿತ್ತಿಯರು ಅಬ್ರಹಾಮನಿಗೆ, ೬ “ಸ್ವಾಮಿ, ನಮ್ಮ ಮಾತನ್ನು ಕೇಳು. ನೀನು ನಮಗೆ ಮಹಾ ಪ್ರಭುವಾಗಿದ್ದೀಯಷ್ಟೆ. ಮರಣಹೊಂದಿರುವ ನಿನ್ನ ಪತ್ನಿಯ ದೇಹವನ್ನು ನಮಗಿರುವ ಸಮಾಧಿಯೊಳಗೆ ಶೇಷ್ಠವಾದದ್ದರಲ್ಲಿ ಇಡಬಹುದು. ನಿನ್ನ ಹೆಂಡತಿಯ ಶವವನ್ನು ಇಡುವುದಕ್ಕೆ ನಮ್ಮೊಳಗೆ ಯಾರೂ ಸ್ಮಶಾನ ಭೂಮಿಯನ್ನು ಕೊಡುವುದಕ್ಕೆ ಹಿಂದೆಗೆಯುವುದಿಲ್ಲ” ಎಂದು ಉತ್ತರ ಕೊಡಲು ೭ ಅಬ್ರಹಾಮನು ಎದ್ದು, ಹಿತ್ತಿಯರಾಗಿದ್ದ ಆ ದೇಶದವರಿಗೆ ತಲೆಬಾಗಿ ನಮಸ್ಕರಿಸಿದನು. ೮ ಅವನು ಅವರ ಸಂಗಡ ಪುನಃ ಮಾತನಾಡಿ, “ನಾನು ನಿಮ್ಮಲ್ಲಿ ನನ್ನ ಪತ್ನಿಯ ಶವವನ್ನು ಸಮಾಧಿಮಾಡುವುದು ನಿಮಗೆ ಒಪ್ಪಿಗೆಯಾಗಿದ್ದರೆ ನನಗೆ ನಿಮ್ಮಲ್ಲಿ ಒಂದು ವಿಜ್ಞಾಪನೆ ಇದೆ. ನೀವು ಚೋಹರನ ಮಗನಾದ ಎಫ್ರೋನನ ಸಂಗಡ ನನಗೋಸ್ಕರ ಮಾತನಾಡಿ, ೯ ಅವನ ಭೂಮಿಯ ಅಂಚಿನಲ್ಲಿರುವ ಮಕ್ಪೇಲ ಗವಿಯನ್ನು ನನಗೆ ಕೊಡಿಸಿ ಎಂದು ಕೇಳಿದನು. ಅವನು ನನ್ನ ಸ್ವಂತಕ್ಕೆ ಈ ಸಮಾಧಿಯ ಸ್ಥಳ ನಿಮ್ಮೆದುರಿನಲ್ಲಿ ನನಗೆ ಕೊಟ್ಟರೆ ಪೂರ್ಣ ಕ್ರಯವನ್ನು ಕೊಡುತ್ತೇನೆ” ಎಂದನು. ೧೦ ಎಫ್ರೋನನು ಅಲ್ಲಿ ಹಿತ್ತಿಯರ ನಡುವೆ ಕುಳಿತಿದ್ದನು. ಹೀಗಿರಲಾಗಿ ಹಿತ್ತಿಯನಾದ ಎಫ್ರೋನನು ಹಿತ್ತಿಯರಾಗಿದ್ದ ಆ ಊರಿನವರೆಲ್ಲರ ಎದುರಿನಲ್ಲಿ ಅಬ್ರಹಾಮನಿಗೆ, ೧೧ “ಹಾಗಲ್ಲ ಸ್ವಾಮಿ, ನನ್ನ ಮಾತನ್ನು ಲಾಲಿಸು. ಆ ಭೂಮಿಯನ್ನೂ ಅದರಲ್ಲಿರುವ ಗವಿಯನ್ನೂ ನಿನಗೆ ದಾನವಾಗಿ ಕೊಡುತ್ತೇನೆ; ನನ್ನ ಜನರ ಮುಂದೆಯೇ ಕೊಡುತ್ತೇನೆ; ಮರಣಹೊಂದಿದ ನಿನ್ನ ಪತ್ನಿಯನ್ನು ಅದರಲ್ಲಿ ಸಮಾಧಿ ಮಾಡಬಹುದು” ೧೨ ಎಂದು ಹೇಳಲು ಅಬ್ರಹಾಮನು ಆ ದೇಶದ ಜನರಿಗೆ ನಮಸ್ಕರಿಸಿ ಅವರೆಲ್ಲರ ಮುಂದೆ ೧೩ ಎಫ್ರೋನನಿಗೆ, “ಕೊಡಲಿಕ್ಕೆ ಮನಸ್ಸಿದ್ದರೆ ದಯವಿಟ್ಟು ನಾನು ಅರಿಕೆಮಾಡುವುದನ್ನು ಕೇಳು; ಆ ಭೂಮಿಗೆ ಕ್ರಯವನ್ನು ಕೊಡುತ್ತೇನೆ. ನನ್ನಿಂದ ಕ್ರಯ ತೆಗೆದುಕೊಂಡರೆ ಅದರಲ್ಲಿ ನನ್ನ ಪತ್ನಿಗೆ ಸಮಾಧಿ ಮಾಡುವೆನು” ಎಂದು ಹೇಳಿದನು. ೧೪ ಅದಕ್ಕೆ ಎಫ್ರೋನನು ಅಬ್ರಹಾಮನಿಗೆ, ೧೫ “ಸ್ವಾಮಿ, ನನ್ನ ಮಾತನ್ನು ಲಾಲಿಸು; ನಾನೂರು ನಾಣ್ಯಗಳ ಬೆಲೆಬಾಳುವ ಭೂಮಿಯ ವಿಷಯದಲ್ಲಿ ನಿನಗೂ ನನಗೂ ವಾದವೇತಕ್ಕೆ? ಸಮಾಧಿಮಾಡಬಹುದು” ಎಂದನು. ೧೬ ಅಬ್ರಹಾಮನು ಎಫ್ರೋನನ ಮಾತಿಗೆ ಒಪ್ಪಿದನು. ಎಫ್ರೋನನು ಹಿತ್ತಿಯರ ಎದುರಿನಲ್ಲಿ ಹೇಳಿದ ನಾನೂರು ನಾಣ್ಯಗಳನ್ನು ಅಬ್ರಹಾಮನು ವರ್ತಕರಲ್ಲಿ ಸಲ್ಲುವ ಬೆಳ್ಳಿಯಿಂದ ತೂಕ ಮಾಡಿಕೊಟ್ಟನು. ೧೭ ಹೀಗೆ ಮಮ್ರೆಗೆ ಎದುರಾಗಿರುವ ಮಕ್ಪೇಲಕ್ಕೆ ಸೇರಿದ ಎಫ್ರೋನನ ಭೂಮಿಯು, ಅದಕ್ಕೆ ಸೇರಿದ ಗವಿಯು ಅದರಲ್ಲಿ ಮತ್ತು ಅದರ ಸುತ್ತಣ ಅಂಚಿನಲ್ಲಿ ಇದ್ದ ಮರಗಳ ಸಹಿತವಾಗಿ, ೧೮ ಅಬ್ರಹಾಮನ ಸ್ವಂತ ಭೂಮಿಯೆಂದು ಹಿತ್ತಿಯರಾಗಿದ್ದ ಆ ಊರಿನವರೆಲ್ಲರ ಮುಂದೆ ತೀರ್ಮಾನವಾಯಿತು. ೧೯ ಇದಾದ ಮೇಲೆ ಅಬ್ರಹಾಮನು ತನ್ನ ಹೆಂಡತಿಯಾದ ಸಾರಳ ಶವವನ್ನು ಕಾನಾನ್ ದೇಶದಲ್ಲಿ ಹೆಬ್ರೋನೆಂಬ ಮಮ್ರೆಗೆ ಎದುರಾಗಿರುವ ಮಕ್ಪೇಲದ ಭೂಮಿಯಲ್ಲಿರುವ ಗವಿಯೊಳಗೆ ಹೂಣಿಟ್ಟನು. ೨೦ ಹಿತ್ತಿಯರು ಆ ಭೂಮಿಯನ್ನೂ ಅದರಲ್ಲಿರುವ ಗವಿಯನ್ನೂ ಸ್ವಂತವಾದ ಸ್ಮಶಾನ ಭೂಮಿಯನ್ನಾಗಿ ಅಬ್ರಹಾಮನಿಗೆ ಕೊಟ್ಟು ದೃಢಪಡಿಸಿದರು.