೧ ಅವರು, “ಯೆಹೋವನ ಕಡೆಗೆ ಹಿಂದುರುಗಿ ಹೋಗೋಣ ಬನ್ನಿರಿ;
ನಮ್ಮನ್ನು ಸೀಳಿಬಿಟ್ಟವನು ಆತನೇ, ಆತನೇ ಸ್ವಸ್ಥ ಮಾಡುವನು;
ಹೊಡೆದವನು ಆತನೇ, ಆತನೇ ನಮ್ಮ ಗಾಯಗಳನ್ನು ಕಟ್ಟುವನು.
೨ ಒಂದೆರಡು ದಿನದ ಮೇಲೆ ಆತನು ನಮ್ಮನ್ನು ಬದುಕಿಸುವನು;
ಮೂರನೆಯ ದಿನದಲ್ಲಿ ಆತನು ನಮ್ಮನ್ನೆಬ್ಬಿಸಲು ಆತನ ಸಾನ್ನಿಧ್ಯದಲ್ಲಿ ಬಾಳುವೆವು.
೩ ಯೆಹೋವನನ್ನು ತಿಳಿದುಕೊಳ್ಳೋಣ, ನಿರಂತರವಾಗಿ ಹುಡುಕಿ ತಿಳಿದುಕೊಳ್ಳೋಣ,
ಆತನ ಆಗಮನವು ಉದಯದಂತೆ ನಿಶ್ಚಯ;
ಆತನು ಮುಂಗಾರಿನಂತೆಯೂ,
ಭೂಮಿಯನ್ನು ತಂಪುಮಾಡುವ ಹಿಂಗಾರಿನಂತೆಯೂ ನಮಗೆ ಸಿಕ್ಕುವನು” ಅಂದುಕೊಂಡು ನನ್ನನ್ನು ಮೊರೆಹೊಗುವರು.
೪ ಎಫ್ರಾಯೀಮೇ, ನಾನು ನಿನ್ನನ್ನು ಹೇಗೆ ತಿದ್ದಲಿ?
ಯೆಹೂದವೇ, ನಿನ್ನನ್ನು ಹೇಗೆ ಸರಿಮಾಡಲಿ?
ನಿಮ್ಮ ಭಕ್ತಿಯು ಪ್ರಾತಃಕಾಲದ ಮೋಡಕ್ಕೂ, ಬೇಗನೆ ಮಾಯವಾಗುವ ಇಬ್ಬನಿಗೂ ಸಮಾನವಾಗಿದೆ.
೫ ಆದಕಾರಣ ನಾನು ನಿಮ್ಮ ಜನರನ್ನು ಪ್ರವಾದಿಗಳ ಮೂಲಕ ಹತಿಸಿದ್ದೇನೆ,
ನನ್ನ ಬಾಯಿಯ ಮಾತುಗಳಿಂದ ಸಂಹರಿಸಿದ್ದೇನೆ;
ನನ್ನ ನ್ಯಾಯದಂಡನೆಯು ಮಿಂಚಿನಂತೆ ಹೊರಡುವುದು.
೬ ನನಗೆ ಯಜ್ಞವು ಬೇಡ, ಕರುಣೆಯೇ ಬೇಕು; ಹೋಮಗಳಿಗಿಂತ ದೇವಜ್ಞಾನವೇ ಇಷ್ಟ.
ಇಸ್ರಾಯೇಲರ ದುರ್ನಡತೆಗಳು
೭ ಅವರು ಆದಾಮನಂತೆ ನನ್ನ ನಿಬಂಧನೆಯನ್ನು ಮೀರಿದ್ದಾರೆ; ಅಲ್ಲಲ್ಲಿ ನನಗೆ ದ್ರೋಹಮಾಡಿದ್ದಾರೆ.
೮ ಗಿಲ್ಯಾದು ಅಧರ್ಮಿಗಳು ತುಂಬಿದ ಪಟ್ಟಣ, ಅಲ್ಲಿನ ಹೆಜ್ಜೆಜಾಡುಗಳು ರಕ್ತಮಯವೇ.
೯ ಕಳ್ಳರ ಗುಂಪು ಒಬ್ಬನಿಗೆ ಹೊಂಚು ಹಾಕುವಂತೆ ಯಾಜಕರು ಗುಂಪಾಗಿ ದಾರಿಯಲ್ಲಿ ಹೊಂಚಿಕೊಂಡಿದ್ದು,
ಶೆಕೆಮಿಗೆ ಯಾತ್ರೆ ಹೋಗುವವರನ್ನು ದೋಚಿ ಕೊಂದುಹಾಕುತ್ತಾರೆ;
ಹೌದು, ಘೋರಕೃತ್ಯವನ್ನು ನಡೆಸುತ್ತಾರೆ.
೧೦ ನಾನು ಇಸ್ರಾಯೇಲ್ ಮನೆತನದಲ್ಲಿ ಅಸಹ್ಯವನ್ನು ನೋಡಿದ್ದೇನೆ;
ಎಫ್ರಾಯೀಮಿನೊಳಗೆ ವ್ಯಭಿಚಾರವು ನಡೆಯುತ್ತದೆ, ಇಸ್ರಾಯೇಲು ಹೊಲೆಯಾಗಿದೆ.
೧೧ ಯೆಹೂದವೇ, ನಿನಗೂ ಅಧರ್ಮಫಲದ ಸುಗ್ಗಿಯು ನೇಮಕವಾಗಿದೆ.