ಕೂಷಿನ ವಿಷಯವಾದ ದೈವೋಕ್ತಿ
೧೮
೧ ಓಹೋ, ಕೂಷಿನ ನದಿಗಳ ಆಚೆಯಲ್ಲಿರುವ ಸೀಮೆ, ರೆಕ್ಕೆಗಳನ್ನು ಪಟಪಟನೆ ಬಡಿಯುವ ನಾಡು,
೨ ರಾಯಭಾರಿಗಳನ್ನು ನೀರಿನ ಮೇಲೆ ಬೆಂಡಿನ ದೋಣಿಗಳಲ್ಲಿ ನದಿಯ ಮಾರ್ಗವಾಗಿ ಕಳುಹಿಸುವ ದೇಶ,
ವೇಗವಾಗಿ ಬರುತ್ತಿರುವ ದೂತರೇ, ಎತ್ತರವಾದವರೂ, ನಯವಾದ ಚರ್ಮವುಳ್ಳವರೂ,
ಸರ್ವ ಭಯಂಕರರೂ, ಮಹಾ ಬಲದಿಂದ ಶತ್ರುಗಳನ್ನು ತುಳಿಯುವವರೂ,
ನದಿಗಳಿಂದ ವಿಭಾಗವಾಗಿರುವ ದೇಶದ ನಿವಾಸಿಗಳೂ ಆದ ಜನಾಂಗದವರ ಬಳಿಗೆ ಹೋಗಿರಿ.
೩ ಸಮಸ್ತ ಭೂನಿವಾಸಿಗಳೇ, ಲೋಕದ ಸಕಲ ಜನರೇ,
ಬೆಟ್ಟಗಳಲ್ಲಿ ಧ್ವಜವನ್ನು ಹಾರಿಸುವಾಗ ನೋಡಿರಿ, ತೂತುರಿಯನ್ನೂದುವಾಗ ಕೇಳಿರಿ!
೪ ಯೆಹೋವನು ನನಗೆ ಹೇಳುವುದೇನೆಂದರೆ, “ಬಿಸಿಲಿನಲ್ಲಿ ಜಳಜಳಿಸುವ ದಗೆಯಂತೆಯೂ,
ಸುಗ್ಗಿಯಲ್ಲಿನ ಮಂಜಿನ ಮೋಡದ ಹಾಗೂ ನಾನು ನನ್ನ ವಾಸಸ್ಥಾನದಲ್ಲಿ ಸುಮ್ಮನಿದ್ದು ದೃಷ್ಟಿಸುತ್ತಿರುವೆನು” ಎಂಬುದೇ.
೫ ಕೊಯ್ಲಿನ ಕಾಲಕ್ಕೆ ಮೊದಲು ಮೊಗ್ಗು ಬಿಟ್ಟಾದ ಮೇಲೆ, ಹೂವಿನಿಂದ ಹೀಚು ದ್ರಾಕ್ಷೆ ದೋರೆ ಕಾಯಿಯಾಗುವಾಗ,
ಆತನು ಕುಡುಗೋಲುಗಳಿಂದ ಬಳ್ಳಿಗಳನ್ನು ಕತ್ತರಿಸಿ ಚಿಗುರುಗಳನ್ನು ಕಡಿದುಹಾಕುವನು.
೬ ಅವೆಲ್ಲವು ಬೆಟ್ಟದ ಪಕ್ಷಿಗಳಿಗೂ, ಭೂಮಿಯ ಕಾಡುಮೃಗಗಳಿಗೂ ಆಹಾರವಾಗಿ ಬಿದ್ದಿರುವವು.
ಬೇಸಿಗೆಯಲ್ಲಿ ಪಕ್ಷಿಗಳಿಗೂ, ಹಿಮಕಾಲದಲ್ಲಿ ಕಾಡುಮೃಗಗಳಿಗೂ ಆಹಾರವಾಗುವುದು.
೭ ಆ ಕಾಲದಲ್ಲಿ ಎತ್ತರವಾದವರೂ, ನುಣುಪಾದ ಚರ್ಮವುಳ್ಳವರೂ, ಸರ್ವದಾ ಭಯಂಕರರೂ, ಮಹಾ ಬಲದಿಂದ ಶತ್ರುಗಳನ್ನು ತುಳಿಯುವವರೂ, ನದಿಗಳಿಂದ ವಿಭಾಗವಾಗಿರುವ ದೇಶದ ನಿವಾಸಿಗಳೂ ಆದ ಜನಾಂಗದವರು ಸೇನಾಧೀಶ್ವರನಾದ ಯೆಹೋವನ ನಾಮ ಮಹತ್ವದ ಚೀಯೋನ್ ಪರ್ವತಕ್ಕೆ, ಆತನಿಗೋಸ್ಕರ ಕಾಣಿಕೆಯನ್ನು ತರುವರು.