ಮೋವಾಬಿನ ವಿಷಯವಾದ ದೈವೋಕ್ತಿ
೪೮
೧ ಮೋವಾಬನನ್ನು ಕುರಿತು ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ,
“ಅಯ್ಯೋ ನೆಬೋ ಊರಿನ ಗತಿಯನ್ನು ಏನು ಹೇಳಲಿ! ಅದು ಹಾಳಾಯಿತು; ಕಿರ್ಯಾತಯಿಮು ಶತ್ರುವಿನ ಕೈಗೆ ಸಿಕ್ಕಿ ಮಾನಭಂಗ ಹೊಂದಿದೆ,
ಮಿಸ್ಗಾಬ್ ಕೆಡವಲ್ಪಟ್ಟು ಅವಮಾನಕ್ಕೆ ಗುರಿಯಾಗಿದೆ.
೨ ಮೋವಾಬಿನ ಕೀರ್ತಿಯು ಮಾಯವಾಯಿತು; ಶತ್ರುಗಳು ಹೆಷ್ಬೋನಿನಲ್ಲಿ ದೇಶಕ್ಕೆ ಕೇಡನ್ನು ಕಲ್ಪಿಸಿ,
‘ಮೋವಾಬ್ ಇನ್ನು ಜನಾಂಗವೆನಿಸಿಕೊಳ್ಳದಂತೆ ಅದನ್ನು ನಿರ್ಮೂಲಮಾಡೋಣ ಬನ್ನಿರಿ’ ಎಂದು ಆಲೋಚಿಸಿಕೊಂಡಿದ್ದಾರೆ.
ಮದ್ಮೆನೇ, ನೀನು ಸಹ ಸುಮ್ಮನಾಗುವಿ; ಖಡ್ಗವು ನಿನ್ನನ್ನು ಹಿಂದಟ್ಟುವುದು.
೩ ‘ಅಯ್ಯೋ, ಸೂರೆ ಹೋದೆವು, ಬಹು ನಾಶವಾದೆವು’ ಎಂಬ ಕೂಗಾಟವು ಹೊರೊನಯಿಮಿನಿಂದ ಕೇಳಬರುತ್ತದೆ!
೪ ಮೋವಾಬಿಗೆ ಭಂಗವಾಯಿತು; ಅಲ್ಲಿ ದಿಕ್ಕುಗೆಟ್ಟವರು ಮೊರೆಯಿಟ್ಟಿದ್ದಾರೆ.
೫ ಅಳುತ್ತಾ ಲೂಹೀತ್ ದಿಣ್ಣೆಯನ್ನು ಹತ್ತುತ್ತಾರೆ; ನಾಶವಾದೆವಲ್ಲಾ ಎಂಬ ಪ್ರಾಣಸಂಕಟ ಪ್ರಲಾಪವು ಹೊರೊನಯಿಮ್ ಇಳಿಜಾರಿನಲ್ಲಿ ಕೇಳಿಸುತ್ತದೆ.
೬ ಓಡಿಹೋಗಿರಿ, ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಿರಿ, ಅಡವಿಯಲ್ಲಿನ ಜಾಲಿಯಂತಿರಿ.
೭ ನೀನು ನಿನ್ನ ಕೆಲಸಗಳಲ್ಲಿಯೂ, ಧನರಾಶಿಗಳಲ್ಲಿಯೂ ಭರವಸವಿಟ್ಟದ್ದರಿಂದ ನೀನೂ ಶತ್ರುವಿನ ಕೈವಶವಾಗುವಿ;
ಕೆಮೋಷ್ ದೇವತೆಯೂ ಅದರ ಭಕ್ತರಾದ ಯಾಜಕರೂ ಮತ್ತು ಪ್ರಧಾನರೂ ಒಟ್ಟಾಗಿ ಸೆರೆಗೆ ಹೋಗುವರು.
೮ ಸೂರೆಗಾರನು ಪ್ರತಿಯೊಂದು ಪಟ್ಟಣದ ಮೇಲೆ ಬೀಳುವನು, ಯಾವ ಪಟ್ಟಣವೂ ಉಳಿಯದು;
ಯೆಹೋವನು ನುಡಿದಂತೆಯೇ ತಗ್ಗಿನ ಭೂಮಿಯು ಹಾಳಾಗುವುದು, ಮೇಲ್ನಾಡೂ ನಾಶವಾಗುವುದು.
೯ ಮೋವಾಬಿಗೆ ರೆಕ್ಕೆಕಟ್ಟಿರಿ, ಅದು ಹಾರಿಹೋಗಬೇಕಲ್ಲಾ; ಅದರ ಪಟ್ಟಣಗಳು ಹಾಳುಬಿದ್ದು ನಿರ್ಜನವಾಗುವವು.
೧೦ ಯೆಹೋವನು ನೇಮಿಸಿದ ಕೆಲಸದಲ್ಲಿ ಆಲಸ್ಯಗಾರನು ಶಾಪಗ್ರಸ್ತನಾಗಲಿ;
ತನ್ನ ಕತ್ತಿಯನ್ನು ರಕ್ತಸುರಿಸದಂತೆ ತಡೆಯುವವನಿಗೆ ಶಾಪ ತಗಲಲಿ.
೧೧ ಮೋವಾಬು ಚಿಕ್ಕನಂದಿಂದಲೂ ನೆಮ್ಮದಿಯಾಗಿದೆ; ಅದು ಮಡ್ಡಿಯ ಮೇಲೆ ನಿಂತಿರುವ ದ್ರಾಕ್ಷಾರಸದಂತಿದೆ;
ಅದನ್ನು ಪಾತ್ರೆಯಿಂದ ಪಾತ್ರೆಗೆ ಯಾರೂ ಹೊಯ್ಯಲಿಲ್ಲ, ಅದು ಸೆರೆಹೋಗಲಿಲ್ಲ; ಆದಕಾರಣ ಅದರ ರುಚಿಯು ಅದರಲ್ಲಿದೆ, ಅದರ ವಾಸನೆಯು ಬೇರ್ಪಡಲಿಲ್ಲ.”
೧೨ ಹೀಗಿರಲು ಯೆಹೋವನು ಇಂತೆನ್ನುತ್ತಾನೆ, “ಇಗೋ, ಮುಂದಿನ ಕಾಲದಲ್ಲಿ ನಾನು ಅವರ ಬಳಿಗೆ ಹೊಯ್ಯತಕ್ಕವರನ್ನು ಕಳುಹಿಸುವೆನು,
ಅವರು ಅದನ್ನು ಹೊಯ್ದುಬಿಡುವರು, ಪಾತ್ರೆಗಳನ್ನು ಬರಿದು ಮಾಡುವರು, ಗಡಿಗೆಗಳನ್ನು ಒಡೆದುಬಿಡುವರು” ಎಂಬುದೇ.
೧೩ ಆಗ ಇಸ್ರಾಯೇಲ್ ವಂಶದವರು ತಮಗೆ ಭರವಸವಾದ ಬೇತೇಲಿನಿಂದ ಆಶಾಭಂಗಪಟ್ಟಂತೆ ಮೋವಾಬ್ಯರು ಕೆಮೋಷಿನಿಂದ ಆಶಾಭಂಗಪಡುವರು.
೧೪ “ ‘ನಾವು ಶೂರರು, ಯುದ್ಧಪ್ರವೀಣರಾದ ಪರಾಕ್ರಮಶಾಲಿಗಳು’ ಎಂದು ನೀವು ಅಂದುಕೊಳ್ಳುವುದು ಹೇಗೆ?
೧೫ ಮೋವಾಬು ಹಾಳಾಗಿದೆ; ಸುಟ್ಟುಹೋದ ಅದರ ಪಟ್ಟಣಗಳಿಂದ ಹೊಗೆ ಎದ್ದಿದ್ದೆ.
ಅದರಲ್ಲಿನ ಶ್ರೇಷ್ಠ ಯುವಕರು ಹತರಾಗುವುದಕ್ಕೆ ಇಳಿದುಹೋಗಿದ್ದಾರೆ. ಇದು ಸೇನಾಧೀಶ್ವರನಾದ ಯೆಹೋವನೆಂಬ ನಾಮವುಳ್ಳ ರಾಜಾಧಿರಾಜನ ನುಡಿ.
೧೬ ಮೋವಾಬಿಗೆ ದುರ್ಗತಿ ಸಮೀಪಿಸಿದೆ, ವಿಪತ್ತು ಬೇಗ ಬರುವುದು.
೧೭ ಮೋವಾಬಿನ ನೆರೆಹೊರೆಯವರೇ, ಅದರ ಹೆಸರನ್ನೂ, ಪ್ರಖ್ಯಾತಿಯನ್ನು ಬಲ್ಲವರೇ, ನೀವೆಲ್ಲರೂ ಅದಕ್ಕಾಗಿ ಎದೆಬಡುಕೊಳ್ಳಿರಿ.
‘ಅಯ್ಯೋ, ಬಲವಾದ ಕೋಲು, ಮಹಿಮೆಯ ದಂಡವು ಮುರಿದುಹೋಯಿತಲ್ಲಾ’ ಎಂದು ಪ್ರಲಾಪಿಸಿರಿ.
೧೮ ಯುವತಿಯೇ, ದೀಬೋನ್ ಪುರಿಯೇ, ನಿನ್ನ ಮಹಿಮೆಯ ಪದವಿಯಿಂದ ಕೆಳಕ್ಕಿಳಿದು ಬಾಯಾರಿದವಳಾಗಿ ಕುಳಿತುಕೋ!
ಮೋವಾಬನ್ನು ಹಾಳುಮಾಡುವವನು ನಿನ್ನ ವಿರುದ್ಧವಾಗಿ ಬಂದು ನಿನ್ನ ಕೋಟೆಕೊತ್ತಲಗಳನ್ನು ಕೆಡವಿದ್ದಾನಲ್ಲಾ.
೧೯ ಅರೋಯೇರಿನವರೇ, ದಾರಿಯ ಮಗ್ಗುಲಲ್ಲಿ ನಿಂತುಕೊಂಡು ನೋಡಿರಿ;
ಓಡಿಹೋಗುವವನನ್ನೂ ಮತ್ತು ತಪ್ಪಿಸಿಕೊಳ್ಳುವವಳನ್ನೂ ‘ಏನಾಯಿತು?’ ಎಂದು ವಿಚಾರಿಸಿರಿ.
೨೦ ಮೋವಾಬು ಭಂಗಪಟ್ಟು ಅವಮಾನಕ್ಕೆ ಈಡಾಗಿದೆ; ಗೋಳಾಡಿರಿ, ದುಃಖದಿಂದ ಕೂಗಿರಿ;
ಮೋವಾಬು ಹಾಳಾಯಿತೆಂದು ಅರ್ನೋನಿನ ತೀರದಲ್ಲಿ ತಿಳಿಸಿರಿ.
೨೧ ಮೇಲ್ನಾಡಿಗೆ ದಂಡನೆಯಾಗಿದೆ; ಹೋಲೋನ್, ಯಾಚಾ, ಮೆಫಾತ್,
೨೨ ದೀಬೋನ್, ನೆಬೋ ಮತ್ತು ಬೇತ್ ದಿಬ್ಲಾತಯಿಮ್,
೨೩ ಕಿರ್ಯಾತಯಿಮ್, ಬೇತ್ ಗಾಮೂಲ್ ಮತ್ತು ಬೇತ್ ಮೆಯೋನ್,
೨೪ ಕೆರೀಯೋತ್, ಬೊಚ್ರ ಅಂತು ದೂರದ ಮತ್ತು ಹತ್ತಿರದ ಮೋವಾಬಿನ ಎಲ್ಲಾ ಪಟ್ಟಣಗಳಿಗೂ ದಂಡನೆಯಾಗದೆ ಇರುವುದಿಲ್ಲ.
೨೫ ಮೋವಾಬಿನ ಕೊಂಬು ಕಡಿದು ಬಿದ್ದಿದೆ, ಅದರ ತೋಳು ಮುರಿದುಹೋಗಿದೆ. ಇದು ಯೆಹೋವನ ನುಡಿ” ಎಂಬುದೇ.
೨೬ “ಮೋವಾಬಿಗೆ ತಲೆಗೇರುವಂತೆ ಕುಡಿಸಿರಿ, ಅದು ಯೆಹೋವನನ್ನು ತಿರಸ್ಕರಿಸಿ ಉಬ್ಬಿಕೊಂಡಿತಲ್ಲಾ; ಅದು ತನ್ನ ವಾಂತಿಯಲ್ಲಿ ದೊಪ್ಪನೆ ಬಿದ್ದು ಪರಿಹಾಸ್ಯಕ್ಕೆ ಗುರಿಯಾಗುವುದು. ೨೭ ಇಸ್ರಾಯೇಲೇ ನಿನಗೆ ಗೇಲಿಯಾಯಿತಷ್ಟೆ. ಅದು ಕಳ್ಳರ ಗುಂಪಿನಲ್ಲಿ ಸೇರಿದ್ದಾಗಿ ಹಿಡಿಯಲ್ಪಟ್ಟಿತೋ? ನೀನು ಇಸ್ರಾಯೇಲಿನ ಪ್ರಸ್ತಾಪ ಎತ್ತುವಾಗೆಲ್ಲಾ ತಲೆಯಾಡಿಸುತ್ತೀಯಲ್ಲವೆ?
೨೮ ಮೋವಾಬ್ಯರೇ, ಪಟ್ಟಣಗಳನ್ನು ಬಿಟ್ಟು ಬಂಡೆಯ ಗುಹೆಗಳಲ್ಲಿ ವಾಸಿಸಿರಿ; ಹಳ್ಳಕೊಳ್ಳದ ಆಚೆಯ ಪಕ್ಕದಲ್ಲಿ ಗೂಡನ್ನು ಕಟ್ಟಿಕೊಳ್ಳುವ ಪಾರಿವಾಳದಂತಿರಿ;
೨೯ ಮೋವಾಬ್ಯರಿಗೆ ಬಹು ಸೊಕ್ಕೇರಿದೆ ಎಂಬ ಅವರ ಹೆಮ್ಮೆಯ ಸುದ್ದಿಯೂ, ಅವರ ಡಂಭ, ಅಹಂಕಾರ, ಸ್ವಾಭಿಮಾನ ಮತ್ತು ಸ್ವಪ್ರತಿಷ್ಠೆ ಇವುಗಳ ಸಮಾಚಾರವೂ ನಮ್ಮ ಕಿವಿಗೆ ಬಿದ್ದಿವೆ.”
೩೦ ಯೆಹೋವನು ಹೇಳುವುದೇನೆಂದರೆ, “ಅವರ ಗರ್ವೋದ್ರೇಕವು ನನಗೆ ಗೊತ್ತು, ಅದು ಬರೀ ಬುರುಡೆಯೇ; ಅವರು ಕೊಚ್ಚಿಕೊಳ್ಳುವುದೆಲ್ಲಾ ನಿರರ್ಥಕ.
೩೧ ಆದಕಾರಣ ನಾನು ಮೋವಾಬಿನ ನಿಮಿತ್ತ ಗೋಳಾಡುವೆನು;
ಹೌದು, ಇಡೀ ದೇಶದ ದುರ್ಗತಿಯನ್ನು ನೋಡಿ ಪ್ರಲಾಪಿಸುವೆನು; ಕೀರ್ ಹೆರೆಸಿನವರ ವಿಷಯವಾಗಿ ನರಳಾಟವಾಗುವುದು.
೩೨ ಸಿಬ್ಮದ ದ್ರಾಕ್ಷಾಲತೆಯೇ, ಯಜ್ಜೇರಿನ ನಿಮಿತ್ತ ಅಳುವುದಕ್ಕಿಂತಲೂ ನಿನ್ನನ್ನು ಕಂಡು ಹೆಚ್ಚಾಗಿ ಅಳುವೆನು;
ನಿನ್ನ ಶಾಖೆಗಳು ಸಮುದ್ರದಾಚೆಗೂ ಯಜ್ಜೇರಿನ ಸರೋವರದವರೆಗೂ ವ್ಯಾಪಿಸಿದ್ದವಲ್ಲಾ;
ಈಗ ನಿನ್ನ ಹಣ್ಣುಹಂಪಲುಗಳ ಮೇಲೆಯೂ ಮತ್ತು ದ್ರಾಕ್ಷೆಯ ಸುಗ್ಗಿಯ ಮೇಲೆಯೂ ಸೂರೆಗಾರನು ಬಿದ್ದಿದ್ದಾನೆ.
೩೩ ಹರ್ಷಾನಂದಗಳು ತೋಟಗಳಿಂದಲೂ, ಮೋವಾಬಿನ ಇಡೀ ದೇಶದಿಂದಲೂ ತೊಲಗಿವೆ;
ತೊಟ್ಟಿಗಳಲ್ಲಿ ದ್ರಾಕ್ಷಾರಸವು ಇಲ್ಲದಂತೆ ಮಾಡಿದ್ದೇನೆ; ಯಾರೂ ದ್ರಾಕ್ಷೆತೊಟ್ಟಿಯಲ್ಲಿ ತುಳಿಯುತ್ತಾ ಹರ್ಷಧ್ವನಿಗೈಯರು; ಕೇಳಿಸುವ ಧ್ವನಿ ಹರ್ಷಧ್ವನಿಯಲ್ಲ.
೩೪ ಹೆಷ್ಬೋನಿನಿಂದ ಎಲೆಯಾಲೆಯ ಮತ್ತು ಯಹಚಿನವರೆಗೆ ಜನರು ಅರಚಿಕೊಳ್ಳುತ್ತಾರೆ,
ಚೋಯರಿನಿಂದ ಹೊರೊನಯಿಮಿನ ಮತ್ತು ಎಗ್ಲತ್ ಶೆಲಿಶೀಯದವರೆಗೆ ಕಿರಿಚಿಕೊಳ್ಳುತ್ತಾರೆ; ನಿಮ್ರೀಮ್ ಹಳ್ಳವೂ ಹಾಳಾಗಿದೆ.
೩೫ ಮೋವಾಬಿನೊಳಗೆ ಪೂಜಾಸ್ಥಾನದಲ್ಲಿ ಬಲಿಯರ್ಪಿಸುವವರನ್ನೂ ತಮ್ಮ ದೇವರುಗಳಿಗೆ ಧೂಪಹಾಕುವವರನ್ನೂ ನಿರ್ಮೂಲಮಾಡುವೆನು. ಇದು ಯೆಹೋವನ ನುಡಿ.”
೩೬ ಆದುದರಿಂದ ಮೋವಾಬಿನ ಮತ್ತು ಕೀರ್ ಹೆರೆಸಿನವರ ನಿಮಿತ್ತ ನನ್ನ ಹೃದಯವು ಕೊಳಲುಗಳಂತೆ ಮೊರೆಯಿಡುತ್ತದೆ;
ಮೋವಾಬ್ಯರು ಕೂಡಿಸಿಟ್ಟ ಹೇರಳವಾದ ಆಸ್ತಿಯು ಮಾಯವಾಯಿತಲ್ಲಾ.
೩೭ ಎಲ್ಲರ ತಲೆಯು ಬೋಳು, ಎಲ್ಲರ ಗಡ್ಡವು ವಿಕಾರ, ಎಲ್ಲರ ಕೈಯಲ್ಲಿ ಗಾಯ, ಎಲ್ಲರ ನಡುವಿನ ಮೇಲೆ ಗೋಣಿತಟ್ಟು.
೩೮ ಮೋವಾಬಿನ ಎಲ್ಲಾ ಮಾಳಿಗೆಗಳ ಮೇಲೆಯೂ, ಚೌಕಗಳಲ್ಲಿಯೂ ರೋದನವು ತುಂಬಿದೆ;
“ಮೋವಾಬನ್ನು ಯಾರಿಗೂ ಇಷ್ಟವಲ್ಲದ ಮಡಿಕೆಯಂತೆ ಒಡೆದುಬಿಟ್ಟಿದ್ದೇನೆ” ಎಂದು ಯೆಹೋವನು ಅನ್ನುತ್ತಾನೆ.
೩೯ ಆಹಾ, ಭಂಗವಾಯಿತು! ಕಿರಿಚಿಕೊಳ್ಳುತ್ತಾರಲ್ಲಾ! ಓಹೋ, ಮೋವಾಬು ನಾಚಿಕೆಯಿಂದ ಬೆನ್ನು ತೋರಿಸಿದೆ! ಅದರ ನೆರೆಹೊರೆಯವರು ಅಣಕಿಸುವುದಕ್ಕೂ ಮತ್ತು ಬೆಚ್ಚಿಬೀಳುವುದಕ್ಕೂ ಆಸ್ಪದವಾಗಿದೆ.
೪೦ ಯೆಹೋವನು ಇಂತೆನ್ನುತ್ತಾನೆ, “ಇಗೋ, ಮೋವಾಬಿನ ಮೇಲೆ ಎರಗಬೇಕೆಂದು ಶತ್ರುವು ರಣಹದ್ದಿನಂತೆ ರೆಕ್ಕೆಗಳನ್ನು ಹರಡಿ ಹಾರುವನು.
೪೧ ಪಟ್ಟಣಗಳನ್ನು ಹಿಡಿದಿದ್ದಾನೆ, ಕೋಟೆಗಳನ್ನು ಆಕ್ರಮಿಸಿದ್ದಾನೆ; ಆ ದಿನಗಳಲ್ಲಿ ಮೋವಾಬಿನ ಶೂರರ ಎದೆಯು ಹೆರುವ ಹೆಂಗಸಿನ ಎದೆಯಂತೆ ಅದರುವುದು.
೪೨ ಮೋವಾಬು ಯೆಹೋವನನ್ನು ತಿರಸ್ಕರಿಸಿ ಉಬ್ಬಿಕೊಂಡಿದ್ದರಿಂದ ಅದು ಹಾಳಾಗಿ ಇನ್ನು ಜನಾಂಗವೆನಿಸಿಕೊಳ್ಳದು.”
೪೩ ಯೆಹೋವನು ಇಂತೆನ್ನುತ್ತಾನೆ, “ಮೋವಾಬಿನ ನಿವಾಸಿಯೇ, ಭಯವೂ, ಗುಂಡಿಯೂ, ಬಲೆಯೂ ನಿನಗೆ ಕಾದಿವೆ;
೪೪ ಭಯಕ್ಕೆ ಓಡುವವನು ಗುಂಡಿಯಲ್ಲಿ ಬೀಳುವನು; ಗುಂಡಿಯಿಂದ ಹತ್ತಿ ಬರುವವನು ಬಲೆಗೆ ಸಿಕ್ಕುವನು;
ನಾನು ದಂಡನೆಯ ವರುಷವನ್ನು ಮೋವಾಬಿಗೆ ಬರಮಾಡುವೆನಷ್ಟೆ. ಇದು ಯೆಹೋವನ ನುಡಿ.”
೪೫ ಪಲಾಯನವಾದವರು ಬಲಗುಂದಿದವರಾಗಿ ಹೆಷ್ಬೋನಿನ ನೆರಳಿನಲ್ಲಿ ನಿಂತಿದ್ದಾರೆ;
ಆದರೆ ಸೀಹೋನನ ರಾಜ್ಯಕ್ಕೆ ಸೇರಿದ ಹೆಷ್ಬೋನಿನಿಂದಲೂ ಅಗ್ನಿಜ್ವಾಲೆ ಹೊರಟು ಮೋವಾಬಿನ ಹಣೆಯನ್ನೂ, ಯುದ್ಧವೀರರ ನೆತ್ತಿಯನ್ನೂ ನುಂಗಿಬಿಟ್ಟಿದೆ.
೪೬ “ಮೋವಾಬ್ಯರೆ, ನಿಮ್ಮ ಗತಿಯೇನೆಂದು ಹೇಳಲಿ? ಕೆಮೋಷಿನ ಭಕ್ತರು ನಾಶವಾದರು;
ನಿನ್ನ ಗಂಡು, ಹೆಣ್ಣುಮಕ್ಕಳು ಗಡೀಪಾರಾಗಿ ಸೆರೆಯಾದರು.
೪೭ ಆದರೂ ಅಂತ್ಯದಲ್ಲಿ ನಾನು ಮೋವಾಬಿನ ದುರವಸ್ಥೆಯನ್ನು ತಪ್ಪಿಸುವೆನು ಎಂದು ಯೆಹೋವನು ಅನ್ನುತ್ತಾನೆ”.
ಮೋವಾಬಿನ ವಿಷಯವಾದ ನ್ಯಾಯತೀರ್ಪು ಇದೇ.