೨೯
೧ ತರುವಾಯ ಯೋಬನು ಪ್ರಸ್ತಾಪವನ್ನೆತ್ತಿ ಇಂತೆಂದನು,
೨ “ಅಯ್ಯೋ ನಾನು ಹಿಂದಿನ ತಿಂಗಳುಗಳಲ್ಲಿ ಇದ್ದಂತೆ ಈಗಲೂ ಇದ್ದರೆ ಎಷ್ಟೋ ಸಂತೋಷವಾಗಿತ್ತು!
ಆ ದಿನಗಳಲ್ಲಿ ದೇವರು ನನ್ನನ್ನು ಕಾಯುತ್ತಿದ್ದನಲ್ಲಾ!
೩ ಆತನ ದೀಪವು ನನ್ನ ತಲೆಯ ಮೇಲೆ ಪ್ರಕಾಶಿಸುತ್ತಿತ್ತು,
ಆತನ ಬೆಳಕಿನಿಂದ ಕತ್ತಲಲ್ಲೂ ಸಂಚರಿಸುತ್ತಿದ್ದೆನು.
೪ ಆ ದಿನಗಳು ನನ್ನ ಜೀವಮಾನದ ಸುಗ್ಗೀಕಾಲವು,
ದೇವರ ಸ್ನೇಹವು ನನ್ನ ಗುಡಾರವನ್ನು ಆವರಿಸಿಕೊಂಡಿತ್ತು.
೫ ಸರ್ವಶಕ್ತನು ಇನ್ನೂ ನನ್ನೊಂದಿಗಿದ್ದನು,
ನನ್ನ ಮಕ್ಕಳು ನನ್ನ ಸುತ್ತಲಿದ್ದರು.
೬ ಹಾಲು ತುಪ್ಪದಲ್ಲಿ ನನ್ನ ಪಾದಗಳನ್ನು ತೊಳೆಯುತ್ತಿದ್ದೆ,
ಬಂಡೆಯು ನನಗೋಸ್ಕರ ಎಣ್ಣೆಯನ್ನು ಪ್ರವಾಹವಾಗಿ ಸುರಿಸುತ್ತಿತ್ತು.
೭ ಊರ ಮುಂದಿನ ಚಾವಡಿಗೆ ಹೋದಾಗಲೂ,
ಚೌಕದಲ್ಲಿ ಆಸನವನ್ನು ಹಾಕಿಸಿಕೊಂಡಾಗಲೂ
೮ ಯೌವನಸ್ಥರು ನನ್ನನ್ನು ನೋಡಿ ಪಕ್ಕಕ್ಕೆ ಸರಿದು ನಿಲ್ಲುತ್ತಿದ್ದರು,
ವೃದ್ಧರು ಎದ್ದು ನಿಂತರು.
೯ ಪ್ರಭುಗಳು ಮೌನವಾಗಿ
ಬಾಯ ಮೇಲೆ ಕೈಯಿಟ್ಟುಕೊಂಡರು.
೧೦ ಮುಖಂಡರ ನಾಲಿಗೆಯು
ಸೇದಿಹೋಗಿ ಧ್ವನಿಯಡಗಿತು.
೧೧ ಕೇಳಿದ ಕಿವಿಯು ನನ್ನನ್ನು ಹರಸಿತು,
ನೋಡಿದ ಕಣ್ಣು ಸಾಕ್ಷಿ ಕೊಟ್ಟಿತು.
೧೨ ಏಕಂದರೆ ಅಂಗಲಾಚುವ ಬಡವನನ್ನೂ,
ಸಹಾಯಕನಿಲ್ಲದ ಅನಾಥನನ್ನೂ ರಕ್ಷಿಸುವವನಾಗಿದ್ದೆನು.
೧೩ ಗತಿಯಿಲ್ಲದವನು ನನ್ನನ್ನು ಹರಸುತ್ತಿದ್ದನು,
ವಿಧವೆಯ ಹೃದಯವನ್ನು ಉತ್ಸಾಹಗೊಳಿಸುತ್ತಿದ್ದೆನು.
೧೪ ನಾನು ಧರ್ಮವನ್ನು ಧರಿಸಿಕೊಂಡೆನು,
ಧರ್ಮವು ನನ್ನನ್ನು ಧರಿಸಿತು.
ನನ್ನ ನ್ಯಾಯವೇ ನನಗೆ ನಿಲುವಂಗಿಯೂ, ಕಿರೀಟವೂ ಆಗಿತ್ತು.
೧೫ ನಾನು ಕುರುಡನಿಗೆ ಕಣ್ಣಾಗಿಯೂ,
ಕುಂಟನಿಗೆ ಕಾಲಾಗಿಯೂ ಇದ್ದೆನು.
೧೬ ದರಿದ್ರರಿಗೆ ತಂದೆಯಾಗಿ,
ಪರಿಚಯವಿಲ್ಲದವನ ವ್ಯಾಜ್ಯವನ್ನೂ ವಿಚಾರಿಸುತ್ತಿದ್ದೆನು.
೧೭ ಅನ್ಯಾಯಗಾರನ ಕೋರೆಗಳನ್ನು ಮುರಿದು,
ಅವನ ಹಲ್ಲುಗಳಿಂದ ಬೇಟೆಯನ್ನು ಕಿತ್ತು ತರುತ್ತಿದ್ದೆನು.
 
೧೮ ಆಗ ನಾನು ಹೇಳಿದ್ದೇನೆಂದರೆ, ‘ನನ್ನ ಗೂಡಿನಲ್ಲಿಯೇ ನಾನು ಸಾಯುವೆನು,
ನನ್ನ ದಿನಗಳು ಮರಳಿನಂತೆ ಅಸಂಖ್ಯಾವಾಗಿರುವವು.
೧೯ ನನ್ನ ಬೇರುಗಳು ನೀರಿನವರೆಗೂ ವ್ಯಾಪಿಸಿಕೊಂಡಿರುವವು,
ರಾತ್ರಿಯಲ್ಲಿ ಇಬ್ಬನಿಯು ನನ್ನ ರೆಂಬೆಗಳ ಮೇಲೆ ಬಿದ್ದಿರುವುದು.
೨೦ ನನ್ನ ಮಾನವು ಹೊಸದಾಗುತ್ತಲೂ,
ನನ್ನ ಬಿಲ್ಲು ಕೈಯಲ್ಲಿ ಬಲಗೊಳ್ಳುತ್ತಲೂ ಇರುವವು’ ಎಂಬುದೇ.
೨೧ ಜನರು ಕಾದುಕೊಂಡಿದ್ದು ನನ್ನ ಮಾತಿಗೆ ಕಿವಿಗೊಟ್ಟು,
ನನ್ನ ಆಲೋಚನೆಯನ್ನು ತಿಳಿದುಕೊಳ್ಳಬೇಕೆಂದು ಮೌನವಾಗಿದ್ದರು.
೨೨ ನಾನು ಮಾತನಾಡಿದ ಮೇಲೆ ಮತ್ತೆ ಅವರು ಮಾತನಾಡುತ್ತಿರಲಿಲ್ಲ,
ನನ್ನ ವಚನವೃಷ್ಟಿಯು ಅವರ ಮೇಲೆ ಬೀಳುತ್ತಿತ್ತು,
೨೩ ಮಳೆಯನ್ನು ಹೇಗೋ ಹಾಗೆಯೇ ನನ್ನನ್ನು ಎದುರು ನೋಡುತ್ತಾ,
ಮುಂಗಾರಿಗೋ ಎಂಬಂತೆ ಬಾಯ್ದೆರೆಯುತ್ತಿದ್ದರು.
೨೪ ನಾನು ಅವರನ್ನು ನೋಡಿ ನಗಲು ಅವರು ಧೈರ್ಯಗೆಟ್ಟರು,
ನನ್ನ ಮುಖಕಾಂತಿಯನ್ನೋ ಅವರು ಎಂದೂ ಕುಂದಿಸಲಿಲ್ಲ.
೨೫ ನಾನು ಅವರಿಗೆ ತಕ್ಕ ಮಾರ್ಗವನ್ನು ಆರಿಸಿಕೊಟ್ಟು,
ತನ್ನ ಸೈನ್ಯಗಳ ಮಧ್ಯದಲ್ಲಿ ಕುಳಿತಿರುವ ರಾಜನಂತೆಯೂ,
ದುಃಖಿತರನ್ನು ಸಂತೈಸುವ ಮುಖಂಡನಾಗಿ ಆಸೀನನಾಗಿದ್ದೆನು.”