೧೨
ಬಾಣಂತಿಯರ ಶುದ್ಧೀಕರಣ
೧ ಯೆಹೋವನು ಮೋಶೆಗೆ, ೨ “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ಒಬ್ಬ ಸ್ತ್ರೀ ಗಂಡುಮಗುವಿಗೆ ಜನ್ಮ ನೀಡಿದರೆ ತಾನು ತಿಂಗಳ ಮುಟ್ಟಿನಿಂದ ಹೇಗೆ ಅಶುದ್ಧಳಾಗುವಳೋ ಹಾಗೆಯೇ ಏಳು ದಿನಗಳ ತನಕ ಅಶುದ್ಧಳಾಗಿರಬೇಕು. ೩ ಎಂಟನೆಯ ದಿನದಲ್ಲಿ ಆ ಮಗುವಿಗೆ ಸುನ್ನತಿಮಾಡಿಸಬೇಕು. ೪ ಆ ಮೇಲೆ ಅವಳ ಶುದ್ಧೀಕರಣ ಪೂರ್ಣಗೊಳ್ಳಲು ಇನ್ನು ಮೂವತ್ತಮೂರು ದಿನ ಆಗುವುದು. ಅದು ಪೂರ್ಣಗೊಳ್ಳುವ ತನಕ ಅವಳು ದೇವರ ಪವಿತ್ರ ವಸ್ತುವನ್ನು ಮುಟ್ಟಬಾರದು ಅಥವಾ ದೇವಸ್ಥಾನಕ್ಕೆ ಬರಬಾರದು. ೫ ಹೆಣ್ಣುಮಗುವಿಗೆ ಜನ್ಮ ನೀಡಿದರೆ ತಾನು ತಿಂಗಳ ಮುಟ್ಟಿನಿಂದ ಹೇಗೆ ಅಶುದ್ಧಳಾಗುವಳೋ ಹಾಗೆಯೇ ಎರಡು ವಾರಗಳು ಅಶುದ್ಧಳಾಗಿರಬೇಕು ಮತ್ತು ಶುದ್ಧೀಕರಣ ಪೂರ್ಣಗೊಳ್ಳಲು ಅರುವತ್ತಾರು ದಿನಗಳು ಆಗುವುದು.
೬ “ ‘ಗಂಡುಮಗುವಿಗೆ ಜನ್ಮ ನೀಡಿದರೂ ಅಥವಾ ಹೆಣ್ಣುಮಗುವಿಗೆ ಜನ್ಮ ನೀಡಿದರೂ ಅವಳ ಶುದ್ಧೀಕರಣದ ದಿನಗಳು ಪೂರೈಸಿದಾಗ ಅವಳು ಸರ್ವಾಂಗಹೋಮಕ್ಕಾಗಿ ಒಂದು ವರುಷದ ಕುರಿಯನ್ನು, ದೋಷಪರಿಹಾರಕ್ಕಾಗಿ ಪಾರಿವಾಳದ ಮರಿಯನ್ನು ಇಲ್ಲವೆ ಬೆಳವಕ್ಕಿಯನ್ನು ದೇವದರ್ಶನದ ಗುಡಾರದ ಬಾಗಿಲಿಗೆ ತಂದು ಯಾಜಕನಿಗೆ ಒಪ್ಪಿಸಬೇಕು. ೭ ಅವನು ಅವುಗಳನ್ನು ಯೆಹೋವನ ಸನ್ನಿಧಿಯಲ್ಲಿ ಸಮರ್ಪಿಸಿ ಅವಳಿಗೋಸ್ಕರ ದೋಷಪರಿಹಾರವನ್ನು ಮಾಡಿದಾಗ ಅವಳಿಗೆ ರಕ್ತಸ್ರಾವದಿಂದುಂಟಾದ ಅಶುದ್ಧತೆಯಿಂದ ಶುದ್ಧಳಾಗುವಳು. ಗಂಡುಮಗುವಿಗಾಗಲಿ ಅಥವಾ ಹೆಣ್ಣು ಮಗುವಿಗಾಗಲಿ ಜನ್ಮ ನೀಡಿದವಳಿಗೆ ಇದೇ ನಿಯಮ. ೮ ಕುರಿಯನ್ನು ಕೊಡುವುದಕ್ಕೆ ಗತಿಯಿಲ್ಲದಿದ್ದರೆ ಅವಳು ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತಂದು ಸರ್ವಾಂಗಹೋಮಕ್ಕಾಗಿ ಒಂದನ್ನು, ದೋಷಪರಿಹಾರಕ್ಕಾಗಿ ಮತ್ತೊಂದನ್ನು ಸಮರ್ಪಿಸಬೇಕು. ಯಾಜಕನು ಅವಳಿಗೋಸ್ಕರ ದೋಷಪರಿಹಾರವನ್ನು ಮಾಡಿದಾಗ ಶುದ್ಧಳಾಗುವಳು’ ” ಎಂಬುದೆ.