೨೧
ದೇವರ ಘನತೆ ಗೌರವವನ್ನು ಉಳಿಸುವಂತೆ ಯಾಜಕರಿಗೆ ಎಚ್ಚರಿಕೆ
೧ ಯೆಹೋವನು ಮೋಶೆಯೊಂದಿಗೆ ಮಾತನಾಡಿ, “ನೀನು ಆರೋನನ ಮಕ್ಕಳಾದ ಯಾಜಕರಿಗೆ ಹೀಗೆ ಆಜ್ಞಾಪಿಸಬೇಕು, ‘ಕುಲದಲ್ಲಿ ಸತ್ತವರಿಗೋಸ್ಕರ ಯಾವ ಯಾಜಕನೂ ತನ್ನನ್ನು ಅಪವಿತ್ರ ಮಾಡಿಕೊಳ್ಳಬಾರದು. ೨ ಆದರೂ ಸಮೀಪ ರಕ್ತಸಂಬಂಧಿಗಳಾದ ತಾಯಿ, ತಂದೆ, ಮಕ್ಕಳು ಮತ್ತು ಅಣ್ಣತಮ್ಮಂದಿರು ಇವರಿಗೋಸ್ಕರ ಈ ನಿಯಮ ಇರುವುದಿಲ್ಲ. ೩ ಇದಲ್ಲದೆ ಕನ್ನಿಕೆಯಾಗಿರುವ ತಂಗಿ ಇನ್ನು ಮದುವೆಯಾಗದೆ ಅವನ ಆಶ್ರಯದಲ್ಲಿರುವುದರಿಂದ ಅವಳಿಗೋಸ್ಕರ ಅವನು ಅಪವಿತ್ರ ಮಾಡಿಕೊಳ್ಳಬಹುದು. ೪ ಅವನು ಕುಲದಲ್ಲಿ ನಾಯಕನಾಗಿರುವುದರಿಂದ ತನ್ನನ್ನು ಅಪವಿತ್ರ ಮಾಡಿಕೊಳ್ಳಬಾರದು, ಮಾಡಿದರೆ ಯಾಜಕಸೇವೆಗೆ ಅಯೋಗ್ಯನಾದಾನು. ೫ ಅವರು ತಲೆಬೋಳಿಸಿಕೊಳ್ಳಬಾರದು, ಗಡ್ಡವನ್ನು ಕತ್ತರಿಸಿ ವಿಕಾರಗೊಳಿಸಬಾರದು; ದೇಹವನ್ನು ಗಾಯಮಾಡಿಕೊಳ್ಳಬಾರದು. ೬ ಅವರು ದೇವರಿಗೆ ಮೀಸಲಾಗಿರಬೇಕು; ತಾವು ಸೇವಿಸುವ ದೇವರ ಹೆಸರನ್ನು ಅಪಕೀರ್ತಿಗೆ ಗುರಿಪಡಿಸಬಾರದು. ತಮ್ಮ ದೇವರ ಆಹಾರವನ್ನು ಅಂದರೆ ಯೆಹೋವನ ಹೋಮದ್ರವ್ಯಗಳನ್ನು ಅವರು ಸಮರ್ಪಿಸುವವರು ಆಗಿರುವುದರಿಂದ ಪವಿತ್ರರಾಗಿರಬೇಕು. ೭ ಯಾಜಕರು ತಮ್ಮ ದೇವರಿಗೆ ಮೀಸಲಾದವರು ಆಗಿರುವುದರಿಂದ ವೇಶ್ಯಾ ಸ್ತ್ರೀಯನ್ನಾಗಲಿ, ಮಾನವನ್ನು ಭಂಗಪಡಿಸಿಕೊಂಡ ಸ್ತ್ರೀಯನ್ನಾಗಲಿ ಅಥವಾ ಗಂಡನಿಂದ ಬಿಡಲ್ಪಟ್ಟವಳನ್ನಾಗಲಿ ಹೆಂಡತಿಯನ್ನಾಗಿ ತೆಗೆದುಕೊಳ್ಳಬಾರದು. ೮ ಅವರು ನಿಮ್ಮ ದೇವರ ಆಹಾರವನ್ನು ಸಮರ್ಪಿಸುವವರಾದ ಕಾರಣ ಅವರನ್ನು ದೇವರ ಸೇವಕರೆಂದು ಭಾವಿಸಬೇಕು. ನಿಮ್ಮನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡಿರುವ ಯೆಹೋವನೆಂಬ ನಾನು ಪರಿಶುದ್ಧನಾಗಿರುವುದರಿಂದ ಅವರನ್ನು ಪರಿಶುದ್ಧರೆಂದು ನೀವು ಭಾವಿಸಬೇಕು. ೯ ಯಾಜಕನ ಮಗಳು ವೇಶ್ಯೆ ಎಂಬ ನಿಂದೆಗೆ ಒಳಗಾದರೆ ತನ್ನ ತಂದೆಯನ್ನು ನಿಂದೆಗೆ ಒಳಪಡಿಸಿದವಳಾದಳು, ಅವಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
೧೦ “ ‘ಮಹಾಯಾಜಕನು ಅಂದರೆ ತನ್ನ ಸಹೋದರರಲ್ಲಿ ಪ್ರಧಾನನು, ಯಾವನು ತೈಲಾಭಿಷೇಕಹೊಂದಿ, ದೀಕ್ಷಾವಸ್ತ್ರಗಳನ್ನು ಧರಿಸಿ, ಪಟ್ಟಕ್ಕೆ ಬರುವನೋ ಅವನು ದುಃಖಸೂಚನೆಗಾಗಿ ತನ್ನ ತಲೆಯ ಕೂದಲನ್ನು ಕೆದರಿಕೊಳ್ಳಬಾರದು, ಬಟ್ಟೆಗಳನ್ನು ಹರಿದುಕೊಳ್ಳಬಾರದು. ೧೧ ಅವನು ಶವವಿರುವ ಯಾವ ಸ್ಥಳಕ್ಕೂ ಹೋಗಬಾರದು. ತಂದೆತಾಯಿಗಳ ಮರಣದ ನಿಮಿತ್ತ ತನ್ನನ್ನು ಅಪವಿತ್ರ ಮಾಡಿಕೊಳ್ಳಬಾರದು. ೧೨ ಇದಕ್ಕಾಗಿ ಅವನು ದೇವಸ್ಥಾನವನ್ನು ಬಿಡಲೇ ಬಾರದು; ಬಿಟ್ಟುಹೋದರೆ ತಾನು ಸೇವೆಮಾಡುವ ದೇವರ ಮಂದಿರದ ಗೌರವಕ್ಕೆ ಕುಂದು ಬರುವುದು. ತನ್ನ ದೇವರ ಅಭಿಷೇಕತೈಲವನ್ನು ತಲೆಯ ಮೇಲೆ ಹೊಯ್ಯಿಸಿಕೊಂಡು ಪ್ರತಿಷ್ಠಿತನಾಗಿದ್ದಾನಲ್ಲಾ, ನಾನು ಯೆಹೋವನು. ೧೩ ಅವನು ಕನ್ನಿಕೆಯನ್ನು ಮದುವೆ ಮಾಡಿಕೊಳ್ಳಬೇಕು. ೧೪ ಅವನು ವಿಧವೆಯನ್ನಾಗಲಿ, ಗಂಡನಿಂದ ಬಿಡಲ್ಪಟ್ಟವಳನ್ನಾಗಲಿ, ಮಾನವನ್ನು ಭಂಗಪಡಿಸಿಕೊಂಡ ಸ್ತ್ರೀಯನ್ನಾಗಲಿ ಅಥವಾ ವೇಶ್ಯಾ ಸ್ತ್ರೀಯನ್ನಾಗಲಿ ಹೆಂಡತಿಯನ್ನಾಗಿ ಮಾಡಿಕೊಳ್ಳಬಾರದು. ಸ್ವದೇಶದವರಲ್ಲಿಯ ಕನ್ನಿಕೆಯನ್ನೇ ಮದುವೆ ಮಾಡಿಕೊಳ್ಳಬೇಕು. ೧೫ ಇಲ್ಲವಾದರೆ ಅವನ ಸಂತತಿಯ ಸ್ವಜನರೊಳಗೆ ಅವನು ಅಪವಾದಕ್ಕೆ ಗುರಿಯಾಗುವನು. ಅವನನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಯೆಹೋವನು ನಾನು’ ” ಎಂದು ಹೇಳಿದನು.
ಅಂಗಹೀನರು ಯಾಜಕ ಉದ್ಯೋಗವನ್ನು ನಡೆಸಬಾರದೆಂಬ ನಿಯಮ
೧೬ ಯೆಹೋವನು ಮೋಶೆಯೊಂದಿಗೆ ಮಾತನಾಡಿ, ೧೭ “ನೀನು ಆರೋನನಿಗೆ ಹೀಗೆ ಆಜ್ಞಾಪಿಸು, ‘ನಿನ್ನ ಸಂತತಿಯವರ ಎಲ್ಲಾ ತಲಾಂತರಗಳಲ್ಲಿಯೂ ಯಾವ ಅಂಗವಿಕಲನೂ ದೇವರ ಆಹಾರವನ್ನು ಸಮರ್ಪಿಸುವುದಕ್ಕೆ ನನ್ನ ಸನ್ನಿಧಿಗೆ ಬರಬಾರದು; ಅಂಗವಿಕಲನು ಈ ಕಾರ್ಯವನ್ನು ವಹಿಸಿಕೊಳ್ಳಲೇ ಬಾರದು. ೧೮ ಅವನು ಕುರುಡನಾಗಲಿ, ಕುಂಟನಾಗಲಿ, ವಿಕಾರ ಮುಖವುಳ್ಳವನಾಗಲಿ, ೧೯ ವಿಪರೀತ ಅವಯವಗಳುಳ್ಳವನಾಗಲಿ, ಕೈಕಾಲು ಮುರಿದವನಾಗಲಿ, ೨೦ ಗೂನು ಇಲವೇ ಕುಬ್ಜರಾಗಲಿ, ಹೂಗಣ್ಣ ಅಥವಾ ಕಾಯಿಗಣ್ಣನಾಗಲಿ, ಕಜ್ಜಿ, ತುರಿಗಳುಳ್ಳವನಾಗಲಿ, ೨೧ ನಪುಂಸಕನಾಗಲಿ, ಬೇರೆ ಯಾವ ಕಳಂಕವಿದ್ದವನಾಗಲಿ ಯೆಹೋವನಿಗೆ ಹೋಮದ್ರವ್ಯಗಳನ್ನು ಸಮರ್ಪಿಸುವುದಕ್ಕೆ ಸನ್ನಿಧಿಗೆ ಬರಬಾರದು. ಅಂಥವನು ದೇಹದಲ್ಲಿ ದೋಷವಿರುವುದರಿಂದ ದೇವರ ಆಹಾರವನ್ನು ಸಮರ್ಪಿಸಲೇಬಾರದು. ೨೨ ದೇವರಿಗೆ ನೈವೇದ್ಯವಾದ ಆಹಾರದಲ್ಲಿ ಪರಿಶುದ್ಧವಾದದ್ದನ್ನು ಮತ್ತು ಮಹಾಪರಿಶುದ್ಧವಾದುದನ್ನು ಅವನು ಊಟಮಾಡಬಹುದು. ೨೩ ಅವನಿಗೆ ಕಳಂಕವಿರುವುದರಿಂದ ತೆರೆಯನ್ನು ದಾಟಿ ಒಳಗೆ ಬರಬಾರದು; ಯಜ್ಞವೇದಿಯ ಬಳಿಗೆ ಬರಬಾರದು; ನನ್ನ ಪವಿತ್ರಸ್ಥಾನಗಳ ಗೌರವಕ್ಕೆ ಅವನಿಂದ ಕುಂದು ಉಂಟಾಗಬಾರದು; ಆ ಸ್ಥಾನಗಳನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಯೆಹೋವನು ನಾನು’ ” ಎಂದು ಹೇಳಿದನು.
೨೪ ಮೋಶೆಯು ಆರೋನನಿಗೂ, ಅವನ ಮಕ್ಕಳಿಗೂ ಮತ್ತು ಇಸ್ರಾಯೇಲರೆಲ್ಲರಿಗೂ ಈ ಆಜ್ಞೆಗಳನ್ನು ತಿಳಿಸಿದನು.