ವಿಶ್ವಾಸಯುಕ್ತ ಸಂಧ್ಯಾಕಾಲದ ಗೀತೆ
ಪ್ರಧಾನ ಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ತಂತಿವಾದ್ಯದೊಡನೆ ಹಾಡತಕ್ಕದ್ದು; ದಾವೀದನ ಕೀರ್ತನೆ.
 
೧ ನ್ಯಾಯವನ್ನು ಸ್ಥಾಪಿಸುವ ನನ್ನ ದೇವರೇ, ನಿನಗೆ ಮೊರೆಯಿಡುತ್ತೇನೆ;
ಸದುತ್ತರವನ್ನು ದಯಪಾಲಿಸು.
ನನ್ನನ್ನು ಅಪತ್ತಿನಿಂದ ಬಿಡಿಸಿ, ಸುರಕ್ಷಿತ ಸ್ಥಳದಲ್ಲಿ ಸೇರಿಸಿದಾತನೇ,
ನನ್ನನ್ನು ಕರುಣಿಸಿ ನನ್ನ ಪ್ರಾರ್ಥನೆಯನ್ನು ಆಲಿಸು.
೨ ಜನರೇ, ನೀವು ಎಷ್ಟರವರೆಗೆ ನನ್ನ ಗೌರವವನ್ನು ಕೆಡಿಸುವಿರಿ,
ಎಷ್ಟರವರೆಗೆ ನನ್ನನ್ನು ಅವಮಾನಪಡಿಸುವಿರಿ?
ಎಷ್ಟರವರೆಗೆ ವ್ಯರ್ಥವಾದದ್ದನ್ನು ಪ್ರೀತಿಸಿ ಸುಳ್ಳನ್ನು ಹಿಂಬಾಲಿಸುವಿರಿ?
ಸೆಲಾ
೩ ಯೆಹೋವನು ತನ್ನ ಭಕ್ತನನ್ನು ತನಗೋಸ್ಕರ ಪ್ರತ್ಯೇಕಿಸಿಕೊಂಡಿದ್ದಾನೆ ಎಂದು ತಿಳಿದುಕೊಳ್ಳಿರಿ.
ನಾನು ಆತನಿಗೆ ಮೊರೆಯಿಡುವಾಗೆಲ್ಲಾ ಆತನು ಕೇಳುತ್ತಾನೆ.
೪ ಭಯಪಡಿರಿ, ಪಾಪಮಾಡಬೇಡಿರಿ;
ಹಾಸಿಗೆಯ ಮೇಲೆ ಇರುವಾಗ ಹೃದಯದಲ್ಲೇ ಆಲೋಚಿಸಿಕೊಳ್ಳಿರಿ ಮತ್ತು ಮೌನವಾಗಿರಿ.
ಸೆಲಾ
೫ ನ್ಯಾಯವಾದ ಯಜ್ಞಗಳನ್ನು ಸಮರ್ಪಿಸಿರಿ;
ಯೆಹೋವನಲ್ಲಿಯೇ ಭರವಸವಿಡಿರಿ.
೬ “ನಮಗೆ ಒಳ್ಳೆಯದನ್ನು ಮಾಡುವವರು ಯಾರಿದ್ದಾರೆ?” ಎಂದು ಅನೇಕರು ಹೇಳಿಕೊಳ್ಳುತ್ತಾರೆ.
ಯೆಹೋವನೇ, ನೀನು ಪ್ರಸನ್ನಮುಖದಿಂದ ನಮ್ಮನ್ನು ನೋಡಬೇಕು.
೭ ಧಾನ್ಯದ್ರಾಕ್ಷೆಗಳು ಸಮೃದ್ಧಿಯಾಗಿ ಬೆಳೆದ ಸುಗ್ಗಿ ಕಾಲದಲ್ಲಿ ಜನರಿಗಾಗುವ ಸಂತೋಷಕ್ಕಿಂತಲೂ
ನೀನು ನನ್ನ ಹೃದಯದಲ್ಲಿ ಹೆಚ್ಚಾದ ಆನಂದವನ್ನು ಉಂಟುಮಾಡಿದ್ದೀ.
೮ ನಾನು ನಿರ್ಭಯವಾಗಿರುವುದರಿಂದ ಮಲಗಿಕೊಂಡು ಕೂಡಲೆ ನಿದ್ದೆಮಾಡುವೆನು.
ಏಕೆಂದರೆ ಯೆಹೋವನೇ, ನನಗೆ ಯಾವ ಅಪಾಯವೂ ಬಾರದಂತೆ ನೀನು ನನ್ನನ್ನು ಸುರಕ್ಷಿತವಾಗಿ ಕಾಪಾಡುತ್ತೀ.