ಅಪಾಯದಿಂದ ತಪ್ಪಿಸಲ್ಪಟ್ಟವರು ಯೆಹೋವನನ್ನು ಕೊಂಡಾಡುವುದು
೩೦
ದಾವೀದನ ಕೀರ್ತನೆ, ದೇವಾಲಯದ ಪ್ರತಿಷ್ಠೆಯಲ್ಲಿ ಹಾಡತಕ್ಕದ್ದು.
(ಕೀರ್ತ. 6; ಯೋಹಾ. 10:22)
 
೧ ಯೆಹೋವನೇ, ನನ್ನ ಶತ್ರುಗಳು ಸಂತೋಷಿಸುವುದಕ್ಕೆ ಅವಕಾಶಕೊಡದೆ,
ನನ್ನನ್ನು ಉದ್ಧರಿಸಿದ್ದರಿಂದ ನಿನ್ನನ್ನು ಕೊಂಡಾಡುವೆನು.
೨ ಯೆಹೋವನೇ, ನನ್ನ ದೇವರೇ,
ನಿನಗೆ ಮೊರೆಯಿಡಲು ನನ್ನನ್ನು ಸ್ವಸ್ಥಮಾಡಿದಿ.
೩ ಯೆಹೋವನೇ, ನನ್ನ ಪ್ರಾಣವನ್ನು ಪಾತಾಳದಿಂದಲೂ ಎತ್ತಿದಿಯಲ್ಲಾ;
ನನ್ನನ್ನು ಸಮಾಧಿಯಲ್ಲಿ ಸೇರಿಸದೆ ಬದುಕಿಸಿದಿಯಲ್ಲಾ.
೪ ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ;
ಆತನ ಪರಿಶುದ್ಧನಾಮವನ್ನು ಕೊಂಡಾಡಿರಿ.
೫ ಆತನ ಕೋಪವು ಕ್ಷಣಮಾತ್ರವೇ;
ಆತನ ಅನುಗ್ರಹವೋ ಜೀವಮಾನವೆಲ್ಲಾ ಇರುವುದು;
ಸಂಜೆಗೆ ದುಃಖವೆಂಬುದು ಬಂದು ನಮ್ಮ ಬಳಿಯಲ್ಲಿ ಇಳಿದುಕೊಂಡರೂ,
ಮುಂಜಾನೆ ಹರ್ಷಧ್ವನಿಯು ಕೇಳಿಸುವುದು.
೬ ನಾನಂತೂ ಸುಖದಿಂದಿದ್ದಾಗ, “ನಾನು ಎಂದಿಗೂ ಕದಲುವುದಿಲ್ಲ”
ಎಂದು ಹೇಳಿಕೊಂಡಿದ್ದೆನು.
೭ ಯೆಹೋವನೇ, ಕೃಪೆಮಾಡಿ ನಾನಿರುವ ಬೆಟ್ಟಕ್ಕೆ ಸ್ಥಿರವಾದ ಬಲವನ್ನು ಅನುಗ್ರಹಿಸಿದಿಯಲ್ಲಾ.
ಆದರೂ ನೀನು ನಿನ್ನ ಮುಖವನ್ನು ಮರೆಮಾಡಿಕೊಂಡಾಗ ನಾನು ಕಳವಳಗೊಂಡೆನು.
೮ ಯೆಹೋವನೇ, ನಿನಗೆ ಮೊರೆಯಿಟ್ಟೆನು; ನನ್ನ ಒಡೆಯನಿಗೆ ಬಿನ್ನವಿಸಿ,
೯ “ನನ್ನನ್ನು ಕೊಂದುಹಾಕಿ ಸಮಾಧಿಗೆ ಸೇರಿಸಿದರೆ ನಿನಗೆ ಲಾಭವೇನು?
ಮಣ್ಣು ನಿನ್ನನ್ನು ಸ್ತುತಿಸುವುದೋ? ಅದು ನಿನ್ನ ನಂಬಿಕೆಯನ್ನು ಹೊಗಳುವುದೇನು?
೧೦ ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ಕರುಣಿಸು;
ಯೆಹೋವನೇ, ನನ್ನ ಸಹಾಯಕ್ಕೆ ಬಾ” ಎಂದು ಹೇಳಿದೆನು.
೧೧ ಆಗ ನೀನು ನನ್ನ ಗೋಳಾಟವನ್ನು ತಪ್ಪಿಸಿ, ಸಂತೋಷದಿಂದ ಕುಣಿದಾಡುವಂತೆ ಮಾಡಿದಿ;
ನಾನು ಕಟ್ಟಿಕೊಂಡಿದ್ದ ಗೋಣಿತಟ್ಟನ್ನು ತೆಗೆದುಬಿಟ್ಟು,
ಹರ್ಷವಸ್ತ್ರವನ್ನು ನನಗೆ ಧಾರಣೆಮಾಡಿಸಿದಿ.
೧೨ ಇದರಿಂದ ಯೆಹೋವನೇ, ನನ್ನ ಮನಸ್ಸು ಎಡೆಬಿಡದೆ ನಿನ್ನನ್ನು ಕೀರ್ತಿಸುತ್ತಿರುವುದು;
ನನ್ನ ದೇವರೇ, ನಿನ್ನನ್ನು ಸದಾಕಾಲವೂ ಸ್ತುತಿಸುವೆನು.