ದುಷ್ಟರ ದುರ್ಲಕ್ಷಣ ಮತ್ತು ದೇವರ ಮಹಾಪ್ರೀತಿ
೩೬
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಯೆಹೋವನ ಸೇವಕನಾದ ದಾವೀದನ ಕೀರ್ತನೆ.
 
೧ ಪಾಪವು ದುಷ್ಟನ ಮನಸ್ಸಿನೊಳಗೆ ನುಡಿಯುತ್ತಿರುವುದರಿಂದ
ಅವನ ಕಣ್ಣೆದುರಿಗೆ ದೇವರ ಭಯವೇ ಇಲ್ಲ.
೨ ಅದು ಅವನನ್ನು ವಂಚಿಸಿ, “ನಿನ್ನ ದ್ರೋಹವು ಬೈಲಿಗೆ ಬರುವುದಿಲ್ಲ ಮತ್ತು
ನಿನಗೆ ಕೇಡು ತರುವುದಿಲ್ಲ” ಎಂದು ಊದಿಬಿಡುತ್ತದೆ.
೩ ಅವನ ಬಾಯಿಂದ ಕೆಡುಕೂ, ವಂಚನೆಯೂ ಬರುತ್ತವೆ;
ವಿವೇಕಮಾರ್ಗವನ್ನೂ, ಪರಹಿತವನ್ನೂ ಬಿಟ್ಟೇಬಿಟ್ಟಿದ್ದಾನೆ.
೪ ಹಾಸಿಗೆಯ ಮೇಲೆ ಇರುವಾಗಲೂ ಕೆಡುಕನ್ನೇ ಯೋಚಿಸುತ್ತಿರುವನು;
ದುಷ್ಟ ಮಾರ್ಗದಲ್ಲಿ ನಿಂತುಕೊಂಡಿದ್ದಾನೆ; ಎಂಥ ದುಷ್ಕೃತ್ಯಕ್ಕೂ ಹೇಸುವುದಿಲ್ಲ.
೫ ಯೆಹೋವನೇ, ನಿನ್ನ ಪ್ರೀತಿಯು ಆಕಾಶದಷ್ಟು ಉನ್ನತವಾಗಿದೆ;
ನಿನ್ನ ನಂಬಿಗಸ್ತಿಕೆಯು ಮೇಘಮಾರ್ಗವನ್ನು ಮುಟ್ಟುತ್ತದೆ.
೬ ನಿನ್ನ ನೀತಿಯು ದಿವ್ಯಪರ್ವತಗಳಂತೆಯೂ,
ನಿನ್ನ ನ್ಯಾಯವು ಮಹಾಸಾಗರದಂತೆಯೂ ಇವೆ;
ಯೆಹೋವನೇ, ನೀನು ಮನುಷ್ಯರನ್ನೂ, ಮೃಗಗಳನ್ನೂ ಸಂರಕ್ಷಿಸುತ್ತೀ.
೭ ದೇವರೇ, ನಿನ್ನ ಪ್ರೀತಿ ಎಷ್ಟೋ ಅಮೂಲ್ಯವಾದದ್ದು;
ಮಾನವರು ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುತ್ತಾರೆ.
೮ ನಿನ್ನ ಮಂದಿರದ ಸಮೃದ್ಧಿಯಿಂದ ಅವರನ್ನು ಸಂತೃಪ್ತಿಪಡಿಸುತ್ತೀ;
ನಿನ್ನ ಸಂಭ್ರಮಪ್ರವಾಹದಲ್ಲಿ ಅವರಿಗೆ ಪಾನಮಾಡಿಸುತ್ತೀ.
೯ ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ;
ನಿನ್ನ ತೇಜಸ್ಸು ನಮಗೆ ಬೆಳಕು ಕೊಡುತ್ತದೆ.
೧೦ ನಿನ್ನನ್ನು ಅರಿತವರಿಗೆ ನಿನ್ನ ಪ್ರೀತಿಯನ್ನು ಯಾವಾಗಲೂ ದಯಪಾಲಿಸು;
ಯಥಾರ್ಥಚಿತ್ತರಿಗೆ ನಿನ್ನ ನ್ಯಾಯವನ್ನು ನಿರಂತರವೂ ಅನುಗ್ರಹಿಸು.
೧೧ ಗರ್ವಿಷ್ಠರ ಕಾಲಕೆಳಗೆ ನಮ್ಮನ್ನು ಬೀಳಿಸಬೇಡ;
ದುರ್ಜನರಿಂದ ನಾವು ದೇಶಭ್ರಷ್ಟರಾಗದಂತೆ ಮಾಡು.
೧೨ ಇಗೋ, ಕೆಡುಕರು ಕೆಡವಲ್ಪಟ್ಟು ಏಳಲಾರದೆ ಬಿದ್ದಿದ್ದಾರೆ.