ಸಾರ್ವಭೌಮನಾದ ಯೆಹೋವನು ಸಿಂಹಾಸನಾರೂಢನಾಗಿರುವುದು
೪೭
ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಕೀರ್ತನೆ.
(ಕೀರ್ತ. 93; 95—100)
 
೧ ಸರ್ವಜನಾಂಗದವರೇ, ಚಪ್ಪಾಳಿ ಹೊಡೆಯಿರಿ;
ಆರ್ಭಟದಿಂದ ದೇವರಿಗೆ ಜಯಧ್ವನಿ ಮಾಡಿರಿ.
೨ ಮಹೋನ್ನತನಾದ ಯೆಹೋವನು ಭಯಂಕರನಾಗಿದ್ದಾನೆ;
ಆತನು ಭೂಲೋಕಕ್ಕೆಲ್ಲಾ ಮಹಾರಾಜನು ಆಗಿದ್ದಾನೆ.
೩ ಆತನು ಜನಾಂಗಗಳನ್ನು ನಮಗೆ ಅಧೀನಪಡಿಸಿ,
ಜನಾಂಗಗಳನ್ನು ನಮ್ಮ ಕಾಲಕೆಳಗೆ ಹಾಕಿದ್ದಾನೆ.
೪ ಆತನು ಘನತೆಯುಳ್ಳ ಯಾಕೋಬನ ವಂಶದವರಾದ ನಮ್ಮನ್ನು ಪ್ರೀತಿಸಿ,
ನಮ್ಮ ಸ್ವಾಸ್ತ್ಯವನ್ನು ಆಯ್ದುಕೊಂಡಿದ್ದಾನೆ.
ಸೆಲಾ
೫ ದೇವರು ಜಯಘೋಷದಿಂದ ಏರಿದ್ದಾನೆ;
ಯೆಹೋವನು ತುತೂರಿಯ ಧ್ವನಿಯೊಡನೆ ಆರೋಹಣ ಮಾಡಿದ್ದಾನೆ.
೬ ದೇವರನ್ನು ಸಂಕೀರ್ತಿಸಿರಿ, ಸ್ತುತಿಸಿ ಹಾಡಿರಿ;
ನಮ್ಮ ಅರಸನನ್ನು ಕೀರ್ತಿಸಿರಿ, ಕೊಂಡಾಡಿರಿ.
೭ ಏಕೆಂದರೆ, ದೇವರು ಭೂಲೋಕಕ್ಕೆಲ್ಲಾ ರಾಜನು;
ಆತನನ್ನು ಜ್ಞಾನಯುಕ್ತರಾಗಿ ಕೀರ್ತಿಸಿರಿ.
೮ ದೇವರು ಸರ್ವಾಧಿಪತ್ಯವನ್ನು ವಹಿಸಿಕೊಂಡಿದ್ದಾನೆ;
ಆತನು ತನ್ನ ಪರಿಶುದ್ಧ ಸಿಂಹಾಸನದಲ್ಲಿ ಆಸೀನನಾಗಿದ್ದಾನೆ.
೯ ಜನಾಂಗಗಳನ್ನು ಆಳುವ ಪ್ರಭುಗಳು ಅಬ್ರಹಾಮನ
ದೇವರ ಪ್ರಜೆಗಳೊಂದಿಗೆ ಸೇರಿಕೊಂಡಿದ್ದಾರೆ;
ಏಕೆಂದರೆ ಭೂಪಾರಲೋಕದ ಗುರಾಣಿಗಳು ದೇವರಿಗೆ ಸೇರಿದವುಗಳೇ.
ಆತನೇ ಸರ್ವೋನ್ನತನು.