ಪಾಪಕ್ಷಮಾಪಣೆಗಾಗಿ ವಿಜ್ಞಾಪನೆ
೫೧
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನು ಬತ್ಷೆಬಳ ಬಳಿಗೆ ಹೋದ ಮೇಲೆ ಪ್ರವಾದಿಯಾದ ನಾತಾನನು ಎಚ್ಚರಿಸಿದಾಗ ರಚಿಸಿದ ಕೀರ್ತನೆ.
 
೧ ಪ್ರೀತಿಸ್ವರೂಪನಾದ ದೇವರೇ, ನನ್ನನ್ನು ಕರುಣಿಸು;
ಕರುಣಾನಿಧಿಯೇ, ನನ್ನ ದ್ರೋಹವನ್ನೆಲ್ಲಾ ಅಳಿಸಿಬಿಡು.
೨ ನನ್ನ ಪಾಪವನ್ನು ಸಂಪೂರ್ಣವಾಗಿ ತೊಳೆದುಬಿಡು;
ನನ್ನ ದೋಷವನ್ನು ಪರಿಹರಿಸಿ, ನನ್ನನ್ನು ಶುದ್ಧಿಗೊಳಿಸು.
೩ ನಾನು ದ್ರೋಹಿ ಎಂದು ನಾನೇ ಒಪ್ಪಿಕೊಂಡಿದ್ದೇನೆ;
ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ.
೪ ನಿನಗೇ, ಕೇವಲ ನಿನಗೇ ತಪ್ಪುಮಾಡಿದ್ದೇನೆ;
ನಿನ್ನ ದೃಷ್ಟಿಗೆ ಕೆಟ್ಟದ್ದಾಗಿರುವುದನ್ನೇ ಮಾಡಿದ್ದೇನೆ.
ನಿನ್ನ ನಿರ್ಣಯ ನ್ಯಾಯವಾಗಿಯೂ, ನಿನ್ನ ತೀರ್ಪು ನಿಷ್ಕಳಂಕವಾಗಿಯೂ ಇರುತ್ತದೆ.
೫ ಹುಟ್ಟಿದಂದಿನಿಂದ ನಾನು ಪಾಪಿಯೇ;
ಮಾತೃಗರ್ಭವನ್ನು ಹೊಂದಿದ ದಿನದಿಂದ ದ್ರೋಹಿಯೇ.
೬ ಯಥಾರ್ಥಚಿತ್ತವೇ ನಿನಗೆ ಸಂತೋಷ;
ಸುಜ್ಞಾನದ ರಹಸ್ಯಗಳನ್ನು ನನಗೆ ತಿಳಿಯಪಡಿಸು.
೭ ಹಿಸ್ಸೋಪ್ ಗಿಡದ ಬರಲಿನಿಂದ ನೀರನ್ನು ಚಿಮಕಿಸಿಯೋ ಎಂಬಂತೆ
ನನ್ನ ಅಶುದ್ಧತ್ವವನ್ನು ತೆಗೆದುಬಿಡು, ಆಗ ಶುದ್ಧನಾಗುವೆನು;
ನನ್ನನ್ನು ತೊಳೆ, ಆಗ ಹಿಮಕ್ಕಿಂತಲೂ ಬೆಳ್ಳಗಾಗುವೆನು.
೮ ನನ್ನಲ್ಲಿ ಸಂಭ್ರಮೋತ್ಸವದ ಧ್ವನಿ ಉಂಟಾಗುವಂತೆ ಮಾಡು;
ಆಗ ನೀನು ಜಜ್ಜಿದ ಎಲುಬುಗಳು ಆನಂದಪಡುವವು.
೯ ನನ್ನ ದೋಷಕ್ಕೆ ವಿಮುಖನಾಗು;
ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
೧೦ ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು;
ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನಪಡಿಸು.
೧೧ ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಬೇಡ;
ನಿನ್ನ ಪರಿಶುದ್ಧಾತ್ಮವನ್ನು ನನ್ನಿಂದ ತೆಗೆಯಬೇಡ.
೧೨ ನಿನ್ನ ರಕ್ಷಣಾನಂದವನ್ನು ನಾನು ಪುನಃ ಅನುಭವಿಸುವಂತೆ ಮಾಡು;
ನನ್ನಲ್ಲಿ ಸಿದ್ಧಮನಸ್ಸನ್ನು ಹುಟ್ಟಿಸಿ ನನಗೆ ಆಧಾರನಾಗು.
೧೩ ಆಗ ನಿನ್ನ ಮಾರ್ಗವನ್ನು ದ್ರೋಹಿಗಳಿಗೆ ಬೋಧಿಸುವೆನು;
ಪಾಪಿಗಳು ನಿನ್ನ ಕಡೆಗೆ ತಿರುಗಿಕೊಳ್ಳುವರು.
೧೪ ದೇವರೇ, ನನ್ನ ರಕ್ಷಣಾ ಕರ್ತನೇ,
ಪ್ರಾಣಹತ್ಯದ ಅಪರಾಧದಿಂದ ನನ್ನನ್ನು ಬಿಡಿಸು;
ಆಗ ನನ್ನ ನಾಲಿಗೆಯು ಉತ್ಸಾಹದಿಂದ ನಿನ್ನ ನೀತಿಯನ್ನು ಕೊಂಡಾಡುವುದು.
೧೫ ಕರ್ತನೇ, ನನ್ನ ಬಾಯಿ ನಿನ್ನನ್ನು ಸ್ತೋತ್ರಮಾಡುವಂತೆ
ನನ್ನ ತುಟಿಗಳನ್ನು ತೆರೆಯಮಾಡು.
೧೬ ನಿನಗೆ ಯಜ್ಞಗಳಲ್ಲಿ ಅಪೇಕ್ಷೆಯಿಲ್ಲ, ಇದ್ದರೆ ಸಮರ್ಪಿಸುತ್ತಿದ್ದೆನು;
ಸರ್ವಾಂಗಹೋಮಗಳಲ್ಲಿ ನಿನಗೆ ಸಂತೋಷವಿಲ್ಲ.
೧೭ ಕುಗ್ಗಿದ ಮನಸ್ಸೇ ದೇವರಿಗೆ ಇಷ್ಟವಾದ ಯಜ್ಞ;
ದೇವರೇ, ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವುದಿಲ್ಲ.
೧೮ ಚೀಯೋನ್ ಪಟ್ಟಣವನ್ನು ಕಟಾಕ್ಷಿಸಿ ಅದಕ್ಕೆ ಶುಭವನ್ನುಂಟುಮಾಡು;
ಯೆರೂಸಲೇಮಿನ ಪೌಳಿಗೋಡೆಯನ್ನು ಕಟ್ಟಿಸು.
೧೯ ಆಗ ಜನರು ನ್ಯಾಯವಾದ ಯಜ್ಞಗಳನ್ನೂ, ಸರ್ವಾಂಗಹೋಮಗಳನ್ನೂ ಸಮರ್ಪಿಸಿ,
ದೇವರೇ ನಿನಗೆ ಸಂತೋಷವನ್ನು ಉಂಟುಮಾಡುವರು.
ನಿನ್ನ ಯಜ್ಞವೇದಿಯ ಮೇಲೆ ಹೋರಿಗಳನ್ನು ಸಮರ್ಪಿಸುವರು.