ಸದ್ಭಕ್ತರು ತಮಗಾಗಿಯೂ ತಮ್ಮ ರಾಜನಿಗಾಗಿಯೂ ಮಾಡುವ ವಿಜ್ಞಾಪನೆ
೬೧
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ತಂತಿವಾದ್ಯದೊಡನೆ ಹಾಡತಕ್ಕದ್ದು; ದಾವೀದನ ಕೀರ್ತನೆ.
 
೧ ದೇವರೇ, ನನ್ನ ಕೂಗನ್ನು ಕೇಳಿ ನನ್ನ ಪ್ರಾರ್ಥನೆಗೆ ಕಿವಿಗೊಡು.
೨ ನಾನು ಎದೆಗುಂದಿದವನಾಗಿ ಭೂಮಿಯ ಕಡೇಯ ಭಾಗದಿಂದ ನಿನಗೆ ಮೊರೆಯಿಡುತ್ತೇನೆ;
ನಾನು ಹತ್ತಲಾರದ ಆಶ್ರಯಗಿರಿಯ ಮೇಲೆ ನನ್ನನ್ನು ಹತ್ತಿಸು.
೩ ನೀನು ನನಗೆ ಶರಣನೂ,
ಶತ್ರುಗಳಿಂದ ತಪ್ಪಿಸುವ ಭದ್ರವಾದ ಬುರುಜು ಆಗಿದ್ದೀ.
೪ ನನಗೆ ನಿರಂತರವೂ ನಿನ್ನ ಗುಡಾರದಲ್ಲಿ ಬಿಡಾರವಾಗಲಿ;
ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವಂತೆ ಅನುಗ್ರಹಿಸು.
ಸೆಲಾ
೫ ದೇವರೇ, ನೀನು ನನ್ನ ಹರಕೆಗಳಿಗೆ ಲಕ್ಷ್ಯಕೊಟ್ಟಿದ್ದೀ;
ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ಸಿಕ್ಕತಕ್ಕ ಬಾಧ್ಯತೆಯನ್ನು ನನಗೂ ದಯಪಾಲಿಸಿದ್ದೀ.
೬ ಅರಸನು ದೀರ್ಘಕಾಲ ಬಾಳುವಂತೆ ಅನುಗ್ರಹಿಸು;
ಅವನ ಆಯಸ್ಸು ತಲತಲಾಂತರಗಳವರೆಗೆ ವೃದ್ಧಿಯಾಗಲಿ.
೭ ಅವನು ನಿನ್ನ ಸಾನ್ನಿಧ್ಯವನ್ನು ಪಡೆದು,
ಸದಾಕಾಲವೂ ಸಿಂಹಾಸನಾರೂಢನಾಗಿರಲಿ;
ನಿನ್ನ ಪ್ರೇಮ ಮತ್ತು ಸತ್ಯತೆಗಳು ಅವನನ್ನು ಕಾಯಲಿ.
೮ ಹೀಗಾದರೆ ನಾನು ಪ್ರತಿದಿನವೂ ನನ್ನ ಹರಕೆಗಳನ್ನು ಸಲ್ಲಿಸುವವನಾಗಿ,
ನಿನ್ನ ನಾಮವನ್ನು ಸದಾ ಸ್ಮರಿಸಿ ಕೀರ್ತಿಸುತ್ತಿರುವೆನು.