ಮಹಾಭಯಂಕರನಾದ ದೇವರಿಗೆ ಸ್ತುತಿ
೭೬
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ತಂತಿವಾದ್ಯದೊಡನೆ ಹಾಡತಕ್ಕದ್ದು; ಕೀರ್ತನೆ; ಆಸಾಫನ ಹಾಡು.
(ಕೀರ್ತ. 75)
 
೧ ದೇವರು ಯೆಹೂದ ದೇಶದಲ್ಲಿ ಪ್ರಸಿದ್ಧಗೊಂಡವನು;
ಇಸ್ರಾಯೇಲರಲ್ಲಿ ಆತನ ನಾಮವು ದೊಡ್ಡದು.
೨ ಸಾಲೇಮಿನಲ್ಲಿ ಆತನ ಬಿಡಾರವಿದೆ;
ಚೀಯೋನಿನಲ್ಲಿ ಆತನು ವಾಸಿಸುತ್ತಾನೆ.
೩ ಅಲ್ಲಿ ಆತನು ಮಿಂಚಿನಂತೆ ಹಾರಿ ಬರುವ ಬಾಣಗಳನ್ನೂ,
ಗುರಾಣಿ, ಖಡ್ಗ ಮುಂತಾದ ಯುದ್ಧ ಆಯುಧಗಳನ್ನೂ ಮುರಿದುಬಿಟ್ಟಿದ್ದಾನೆ.
ಸೆಲಾ
೪ ನೀನು ತೇಜೋಮಯನು;
ಕೊಳ್ಳೆಹೊಡೆದ ಬೆಟ್ಟಗಳಿಗಿಂತ ಘನ ಗಾಂಭೀರ್ಯಯುಳ್ಳವನು.
೫ ಧೀರಹೃದಯರು ಸುಲಿಗೆಯಾಗಿ ದೀರ್ಘನಿದ್ರೆ ಮಾಡಿದ್ದಾರೆ;
ಎಲ್ಲಾ ಶೂರರ ಕೈಗಳು ಬಿದ್ದುಹೋದವು.
೬ ಯಾಕೋಬ ವಂಶದವರ ದೇವರೇ,
ನಿನ್ನ ಗದರಿಕೆಯಿಂದ ರಥಬಲವೂ, ಅಶ್ವಬಲವೂ ಮೈಮರೆತು ಹೋದವು.
೭ ನೀನು ಮಹಾಶಕ್ತಿಶಾಲಿ;
ನೀನು ಸಿಟ್ಟುಗೊಂಡಾಗ ನಿನ್ನ ಮುಂದೆ ಯಾರು ನಿಂತಾರು?
೮ ಪರಲೋಕದಲ್ಲಿರುವ ನೀನು ನಿನ್ನ ನ್ಯಾಯವಿಧಿಯನ್ನು ಆಜ್ಞಾಪಿಸುವಾಗ,
೯ ದೇವರು ಲೋಕದ ದೀನರನ್ನು ರಕ್ಷಿಸಿ,
ನ್ಯಾಯವನ್ನು ಸ್ಥಾಪಿಸುವುದಕ್ಕೋಸ್ಕರ ಎದ್ದು ಬಂದಿದ್ದಾನೆಂದು
ಭೂನಿವಾಸಿಗಳು ಭಯದಿಂದ ಸ್ತಬ್ಧರಾದರು.
ಸೆಲಾ
೧೦ ಮನುಷ್ಯರ ಮೇಲಿನ ಕೋಪವೂ ನಿನ್ನ ಘನತೆಗೆ ಸಾಧನವಾಗುವುದು;
ಕೋಪಶೇಷವನ್ನು ನಡುಕಟ್ಟಿನಂತೆ ಬಿಗಿದುಕೊಳ್ಳುವಿ.
೧೧ ನಿಮ್ಮ ದೇವನಾದ ಯೆಹೋವನಿಗೆ ಹರಕೆಮಾಡಿ ಸಲ್ಲಿಸಿರಿ;
ಅವನ ಸುತ್ತಲಿರುವ ಜನರು ಮಹಾಮಹಿಮನಿಗೆ ಕಾಣಿಕೆಗಳನ್ನು ಸಮರ್ಪಿಸಲಿ.
೧೨ ಆತನು ಭೂಪತಿಗಳಿಗೆ ಭಯಪ್ರದರಾಗಿದ್ದ
ಪ್ರಭುಗಳ ಅಹಂಭಾವವನ್ನು ಮುರಿದುಬಿಡುವನು.