ದೇವಭಕ್ತಿಯ ವಿಷಯದಲ್ಲಿ ಪ್ರೋತ್ಸಾಹ ಮತ್ತು ಎಚ್ಚರಿಕೆ
೮೧
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಗಿತ್ತೀಯ ರಾಗದಿಂದ ಹಾಡತಕ್ಕದ್ದು; ಆಸಾಫನ ಕೀರ್ತನೆ.
(ಧರ್ಮೋ. 32; ಕೀರ್ತ. 8; 84)
 
೧ ನಮಗೆ ಬಲಪ್ರದನಾಗಿರುವ ದೇವರಿಗೆ ಉತ್ಸಾಹಧ್ವನಿ ಮಾಡಿರಿ;
ಯಾಕೋಬ್ಯರ ದೇವರಿಗೆ ಜಯಘೋಷಮಾಡಿರಿ.
೨ ರಾಗವನ್ನು ಎತ್ತಿರಿ; ದಮ್ಮಡಿಯನ್ನು ಬಡಿಯಿರಿ;
ಇಂಪಾದ ಕಿನ್ನರಿಯನ್ನೂ, ಸ್ವರಮಂಡಲವನ್ನೂ ಬಾರಿಸಿರಿ.
೩ ಅಮಾವಾಸ್ಯೆಯಲ್ಲಿಯೂ, ನಮ್ಮ ಉತ್ಸವದಿನವಾಗಿರುವ ಹುಣ್ಣಿಮೆಯಲ್ಲಿಯೂ ಕೊಂಬನ್ನು ಊದಿರಿ.
೪ ಇದು ಇಸ್ರಾಯೇಲರಲ್ಲಿ ಒಂದು ಕಟ್ಟಳೆ;
ಇದು ಯಾಕೋಬ್ಯರ ದೇವರು ವಿಧಿಸಿದ್ದು.
೫ ಆತನು ಐಗುಪ್ತ ದೇಶವನ್ನು ಬಾಧಿಸಲಿಕ್ಕೆ ಹೊರಟಾಗ,
ನೆನಪಿಗಾಗಿ ಯೋಸೇಫ್ಯರಲ್ಲಿ ಈ ಕಟ್ಟಳೆಯನ್ನು ನೇಮಿಸಿದನು.
ಪರಿಚಯವಿಲ್ಲದವನ ಮಾತು ನನಗೆ ಕೇಳಿಸುತ್ತದೆ; ಏನೆಂದರೆ,
೬ “ಅವನ ಹೆಗಲನ್ನು ಹೊರೆಗೆ ತಪ್ಪಿಸಿದೆನು;
ಅವನ ಕೈಗಳನ್ನು ಪುಟ್ಟಿಯಿಂದ ಬಿಡಿಸಿದೆನು.
೭ ಕಷ್ಟದಲ್ಲಿ ಮೊರೆಯಿಟ್ಟ ನಿನ್ನನ್ನು ವಿಮೋಚಿಸಿದೆನು;
ಗುಡುಗುವ ಮೋಡದಲ್ಲಿದ್ದು ನಿನಗೆ ಉತ್ತರವನ್ನು ಕೊಟ್ಟೆನು;
ಮೆರೀಬಾ ಪ್ರವಾಹಗಳ ಬಳಿಯಲ್ಲಿ ನಿನ್ನನ್ನು ಪರೀಕ್ಷಿಸಿದೆನು.
ಸೆಲಾ.
 
೮ ನನ್ನ ಜನರೇ, ಕೇಳಿರಿ; ಖಂಡಿತವಾಗಿ ಹೇಳುತ್ತೇನೆ,
ಇಸ್ರಾಯೇಲರೇ, ಕಿವಿಗೊಟ್ಟರೆ ಎಷ್ಟೋ ಒಳ್ಳೇದು,
೯ ನಿಮ್ಮಲ್ಲಿ ಅನ್ಯದೇವತೆಗಳು ಇರಬಾರದು;
ಪರರ ದೇವತೆಗಳನ್ನು ಪೂಜಿಸಬಾರದು;
೧೦ ನಿಮ್ಮನ್ನು ಐಗುಪ್ತದಿಂದ ಕರೆತಂದ ಯೆಹೋವನೆಂಬ ನಾನೇ ನಿಮ್ಮ ದೇವರು;
ಅಗಲವಾಗಿ ಬಾಯಿತೆರೆಯಿರಿ; ಅದನ್ನು ತುಂಬಿಸುವೆನು ಅಂದೆನು.
೧೧ ಆದರೆ ನನ್ನ ಜನರು ನನ್ನ ಮಾತು ಕೇಳಲಿಲ್ಲ;
ಇಸ್ರಾಯೇಲರು ನನಗೆ ಸಮ್ಮತಿಸಲಿಲ್ಲ.
೧೨ ಆದುದರಿಂದ ಇವರು ಹಟಮಾರಿಗಳು;
ತಮ್ಮ ಮನಸ್ಸಿನಂತೆ ನಡೆಯಲಿ ಎಂದು ಬಿಟ್ಟುಬಿಟ್ಟೆನು.
೧೩ ನನ್ನ ಪ್ರಜೆಗಳಾದ ಇಸ್ರಾಯೇಲರು ನನ್ನ ಮಾತನ್ನು ಕೇಳಿ,
ನನ್ನ ಮಾರ್ಗದಲ್ಲಿ ನಡೆದರೆ ಎಷ್ಟೋ ಒಳ್ಳೆಯದು!
೧೪ ನಾನು ಅವರ ಎದುರಾಳಿಗಳ ಮೇಲೆ ಕೈಯೆತ್ತಿ,
ಅವರ ಶತ್ರುಗಳನ್ನು ಸುಲಭವಾಗಿ ಬಗ್ಗಿಸುವೆನು.
೧೫ ಯೆಹೋವನ ದ್ವೇಷಿಗಳು ಅವರ ಮುಂದೆ ಮುದುರಿಕೊಳ್ಳುವರು;
ಅವರಾದರೋ ಸದಾಕಾಲವೂ ಇರುವರು.
೧೬ ನಾನು ಅವರಿಗೆ ಶ್ರೇಷ್ಠವಾದ ಗೋದಿಯನ್ನು ಊಟಕ್ಕೆ ಕೊಟ್ಟು,
ಬಂಡೆಯೊಳಗಿನ ಜೇನಿನಿಂದ ತೃಪ್ತಿಪಡಿಸುವೆನು” ಎಂಬುದೇ.