ಯೆಹೋವನ ಕೃಪೆಯಿಂದಲೇ ಕೃತಾರ್ಥರಾಗುವೆವು
೧೨೭
ಯಾತ್ರಾಗೀತೆ; ಸೊಲೊಮೋನನದು.
(ನೆಹೆ. 7:3-4)
 
೧ ಯೆಹೋವನು ಮನೆಯನ್ನು ಕಟ್ಟದಿದ್ದರೆ,
ಅದನ್ನು ಕಟ್ಟುವವರು ಕಷ್ಟಪಡುವುದು ವ್ಯರ್ಥ;
ಯೆಹೋವನು ಪಟ್ಟಣವನ್ನು ಕಾಯದಿದ್ದರೆ,
ಕಾವಲುಗಾರರು ಅದನ್ನು ಕಾಯುವುದು ವ್ಯರ್ಥ.
೨ ಬೆಳಗಾಗುವುದಕ್ಕಿಂತ ಮುಂಚೆ ಏಳುವವರೇ,
ಹೊತ್ತು ಮೀರಿ ಮಲಗುವವರೇ,
ನೀವು ಆಹಾರಕ್ಕಾಗಿ ಇಷ್ಟು ಕಷ್ಟಪಡುವುದು ವ್ಯರ್ಥ;
ಆತನು ಅದನ್ನು ತನ್ನ ಪ್ರಿಯರಿಗೆ ನಿದ್ರೆಯಲ್ಲಿಯೂ ಕೊಡುತ್ತಾನೆ.
೩ ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು;
ಗರ್ಭಫಲವು ಆತನ ಬಹುಮಾನವೇ.
೪ ಯೌವನದಲ್ಲಿ ಹುಟ್ಟಿದ ಮಕ್ಕಳು,
ಯುದ್ಧವೀರನ ಕೈಯಲ್ಲಿರುವ ಅಂಬುಗಳಂತಿದ್ದಾರೆ;
೫ ಇವುಗಳಿಂದ ತನ್ನ ಬತ್ತಳಿಕೆಯನ್ನು ತುಂಬಿದವನು ಧನ್ಯನು.
ಊರ ಬಾಗಿಲಲ್ಲಿ ವೈರಿಗಳ ಸಂಗಡ ವ್ಯಾಜ್ಯವಾಡುವಾಗ
ಅಂಥವರು ಅವಮಾನ ಹೊಂದುವುದಿಲ್ಲ.