ಸೃಷ್ಟಿಪಾಲಕನಾಗಿರುವ ಏಕದೇವರಿಗೆ ಸ್ತೋತ್ರ
೧೩೫
(ಕೀರ್ತ. 136)
೧ ಯೆಹೋವನಿಗೆ ಸ್ತೋತ್ರ!
ಯೆಹೋವನ ನಾಮವನ್ನು ಸ್ತುತಿಸಿರಿ.
ಯೆಹೋವನ ಸೇವಕರೇ,
೨ ಯೆಹೋವನ ಮಂದಿರದಲ್ಲಿಯೂ,
ನಮ್ಮ ದೇವರ ಆಲಯದ ಅಂಗಳಗಳಲ್ಲಿಯೂ ಸೇವೆ ಮಾಡುವವರೇ,
ಆತನನ್ನು ಕೀರ್ತಿಸಿರಿ.
೩ ಯೆಹೋವನಿಗೆ ಸ್ತೋತ್ರ!
ಯೆಹೋವನು ಒಳ್ಳೆಯವನು.
ಆತನ ನಾಮವನ್ನು ಕೊಂಡಾಡಿರಿ;
ಆತನು ಕೃಪಾಪೂರ್ಣನು.
೪ ಯೆಹೋವನು ಯಾಕೋಬನ ವಂಶದವರನ್ನು ತನಗಾಗಿಯೂ,
ಇಸ್ರಾಯೇಲರನ್ನು ಸ್ವಕೀಯ ಜನರನ್ನಾಗಿಯೂ ಆರಿಸಿಕೊಂಡನಲ್ಲಾ.
೫ ಯೆಹೋವನು ದೊಡ್ಡವನೆಂದೂ,
ನಮ್ಮ ಕರ್ತನು ಎಲ್ಲಾ ದೇವರುಗಳಿಗಿಂತ ಹೆಚ್ಚಿನವನೆಂದೂ ತಿಳಿದಿದ್ದೇನೆ.
೬ ಯೆಹೋವನು ಭೂಮಿಯಲ್ಲಿಯೂ, ಆಕಾಶದಲ್ಲಿಯೂ,
ಸಮುದ್ರಗಳಲ್ಲಿಯೂ, ಬೇರೆ ಎಲ್ಲಾ ಜಲರಾಶಿಗಳಲ್ಲಿಯೂ
ತನಗೆ ಬೇಕಾದದ್ದನ್ನು ಮಾಡುತ್ತಾನೆ.
೭ ಆತನು ಭೂಮಿಯ ಕಟ್ಟಕಡೆಯಿಂದ ಮೋಡಗಳನ್ನು ಮೇಲೇರುವಂತೆ ಮಾಡುತ್ತಾನೆ;
ಮಳೆಗೋಸ್ಕರ ಮಿಂಚನ್ನು ಹೊಳೆಯುವಂತೆ ಮಾಡುತ್ತಾನೆ;
ತನ್ನ ಉಗ್ರಾಣದಿಂದ ಗಾಳಿಯನ್ನು ಬೀಸುವಂತೆ ಮಾಡುತ್ತಾನೆ.
೮ ಆತನು ಐಗುಪ್ತದ ಮನುಷ್ಯರು ಮೊದಲುಗೊಂಡು ಪಶುಗಳವರೆಗೂ,
ಚೊಚ್ಚಲುಗಳನ್ನೆಲ್ಲಾ ಸಂಹರಿಸಿದನು.
೯ ಐಗುಪ್ತವೇ, ಆತನು ನಿನ್ನ ಮಧ್ಯದಲ್ಲಿ ಫರೋಹನಿಗೂ,
ಅವನ ಸೇವಕರಿಗೂ ವಿರುದ್ಧವಾಗಿ ಅದ್ಭುತಗಳನ್ನು,
ಮಹತ್ಕಾರ್ಯಗಳನ್ನು ನಡೆಸಿದನು.
೧೦ ಆತನು ದೊಡ್ಡ ಜನಾಂಗಗಳನ್ನು ನಾಶಮಾಡಿಬಿಟ್ಟನು;
ಬಲಿಷ್ಠ ರಾಜರನ್ನು ಕೊಂದುಹಾಕಿದನು.
೧೧ ಅವರಲ್ಲಿ ಅಮೋರಿಯರ ಅರಸನಾದ ಸೀಹೋನನೂ,
ಬಾಷಾನಿನ ಅರಸನಾದ ಓಗನೂ ಇದ್ದರು.
ಆತನು ಕಾನಾನ್ ದೇಶದ ಎಲ್ಲಾ ರಾಜ್ಯಗಳನ್ನು ನಿರ್ಮೂಲ ಮಾಡಿದನು.
೧೨ ಅವರ ದೇಶವನ್ನು ಇಸ್ರಾಯೇಲರಿಗೆ ಕೊಟ್ಟನು;
ಆತನ ಪ್ರಜೆಗೆ ಅದು ಸ್ವಾಸ್ತ್ಯವಾಯಿತು.
೧೩ ಯೆಹೋವನೇ, ನಿನ್ನ ನಾಮವು ಶಾಶ್ವತವಾದದ್ದು;
ಯೆಹೋವನೇ, ನೀನು ತಲತಲಾಂತರಕ್ಕೂ ಸ್ಮರಿಸಲು ಯೋಗ್ಯನಾಗಿರುತ್ತೀ.
೧೪ ನಿಜವಾಗಿ ಯೆಹೋವನು ತನ್ನ ಪ್ರಜೆಯ ನ್ಯಾಯವನ್ನು ಸ್ಥಾಪಿಸುವನು,
ತನ್ನ ಸೇವಕರನ್ನು ಕನಿಕರಿಸುವನು.
 
೧೫ ಅನ್ಯಜನಗಳ ವಿಗ್ರಹಗಳು ಬೆಳ್ಳಿ ಮತ್ತು ಬಂಗಾರದವುಗಳೇ;
ಅವು ಮನುಷ್ಯರ ಕೈಕೆಲಸವಷ್ಟೇ.
೧೬ ಅವುಗಳಿಗೆ ಬಾಯಿದ್ದರೂ ಮಾತನಾಡುವುದಿಲ್ಲ,
ಕಣ್ಣಿದ್ದರೂ ನೋಡುವುದಿಲ್ಲ,
೧೭ ಕಿವಿಯಿದ್ದರೂ ಕೇಳುವುದಿಲ್ಲ,
ಇದಲ್ಲದೆ ಅವುಗಳ ಬಾಯಲ್ಲಿ ಶ್ವಾಸವೇ ಇಲ್ಲ.
೧೮ ಅವುಗಳನ್ನು ಮಾಡುವವರು,
ಅವುಗಳಲ್ಲಿ ಭರವಸವಿಡುವವರು ಅವುಗಳಂತೆಯೇ.
೧೯ ಇಸ್ರಾಯೇಲನ ಮನೆತನದವರೇ,
ಯೆಹೋವನನ್ನು ಕೊಂಡಾಡಿರಿ;
ಆರೋನನ ಮನೆತನದವರೇ,
ಯೆಹೋವನನ್ನು ಕೊಂಡಾಡಿರಿ.
೨೦ ಲೇವಿಯ ಮನೆತನದವರೇ,
ಯೆಹೋವನನ್ನು ಕೊಂಡಾಡಿರಿ;
ಯೆಹೋವನ ಭಕ್ತರೇ,
ಯೆಹೋವನನ್ನು ಕೊಂಡಾಡಿರಿ.
೨೧ ಯೆರೂಸಲೇಮಿನಲ್ಲಿ ವಾಸಿಸುವ ಚೀಯೋನಿನ ದೇವರಿಗೆ,
ಕೀರ್ತಿ ಉಂಟಾಗಲಿ,
ಯೆಹೋವನಿಗೆ ಸ್ತೋತ್ರ!