ಯೆಹೋವನ ಸ್ತುತಿ
೧೩೬
(ಕೀರ್ತ. 135)
೧ ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ,
ಆತನು ಒಳ್ಳೆಯವನು. ಆತನ ಪ್ರೀತಿಯು ಶಾಶ್ವತವಾದದ್ದು.
೨ ದೇವಾಧಿದೇವನಿಗೆ ಕೃತಜ್ಞತಾಸ್ತುತಿ ಮಾಡಿರಿ,
ಆತನ ಪ್ರೀತಿಯು ಶಾಶ್ವತವಾದದ್ದು.
೩ ಕರ್ತರ ಕರ್ತನಿಗೆ ಕೃತಜ್ಞತಾಸ್ತುತಿ ಮಾಡಿರಿ,
ಆತನ ಪ್ರೀತಿಯು ಶಾಶ್ವತವಾದದ್ದು.
೪ ಮಹತ್ಕಾರ್ಯಗಳನ್ನು ನಡೆಸುವುದಕ್ಕೆ ಆತನೊಬ್ಬನೇ ಶಕ್ತನು,
ಆತನ ಪ್ರೀತಿಯು ಶಾಶ್ವತವಾದದ್ದು.
೫ ಆತನು ಆಕಾಶವನ್ನು ಜ್ಞಾನದಿಂದ ನಿರ್ಮಿಸಿದ್ದಾನೆ,
ಆತನ ಪ್ರೀತಿಯು ಶಾಶ್ವತವಾದದ್ದು.
೬ ಆತನು ಭೂಮಿಯನ್ನು ಜಲರಾಶಿಗಳ ಮೇಲೆ ಹಾಸಿದ್ದಾನೆ,
ಆತನ ಪ್ರೀತಿಯು ಶಾಶ್ವತವಾದದ್ದು.
೭ ಆತನು ಮಹಾ ಜ್ಯೋತಿರ್ಮಂಡಲಗಳನ್ನು ಸೃಷ್ಟಿಸಿದ್ದಾನೆ,
ಆತನ ಪ್ರೀತಿಯು ಶಾಶ್ವತವಾದದ್ದು.
೮ ಸೂರ್ಯನು ಹಗಲನ್ನು ಆಳುತ್ತಾನೆ,
ಆತನ ಪ್ರೀತಿಯು ಶಾಶ್ವತವಾದದ್ದು.
೯ ಚಂದ್ರ, ನಕ್ಷತ್ರಗಳು ರಾತ್ರಿಯನ್ನು ಆಳುತ್ತವೆ,
ಆತನ ಪ್ರೀತಿಯು ಶಾಶ್ವತವಾದದ್ದು.
೧೦ ಆತನು ಐಗುಪ್ತ್ಯರ ಚೊಚ್ಚಲ ಮಕ್ಕಳನ್ನು ಸಂಹರಿಸಿದನು,
ಆತನ ಪ್ರೀತಿಯು ಶಾಶ್ವತವಾದದ್ದು.
೧೧ ಇಸ್ರಾಯೇಲರನ್ನು ಅವರ ಮಧ್ಯದಿಂದ ಹೊರಗೆ ತಂದನು,
ಆತನ ಪ್ರೀತಿಯು ಶಾಶ್ವತವಾದದ್ದು.
೧೨ ತನ್ನ ಭುಜಬಲ, ಶಿಕ್ಷಾಹಸ್ತ ಇವುಗಳಿಂದ ಅವರನ್ನು ಬಿಡಿಸಿದನು,
ಆತನ ಪ್ರೀತಿಯು ಶಾಶ್ವತವಾದದ್ದು.
೧೩ ಆತನು ಕೆಂಪು ಸಮುದ್ರವನ್ನು ವಿಭಾಗಿಸಿದನು,
ಆತನ ಪ್ರೀತಿಯು ಶಾಶ್ವತವಾದದ್ದು.
೧೪ ಇಸ್ರಾಯೇಲರನ್ನು ಅದರ ಮಧ್ಯದಲ್ಲಿಯೇ ನಡೆಸಿದನು,
ಆತನ ಪ್ರೀತಿಯು ಶಾಶ್ವತವಾದದ್ದು.
೧೫ ಫರೋಹನನ್ನೂ, ಅವನ ಸೈನ್ಯವನ್ನೂ ಕೆಂಪು ಸಮುದ್ರದಲ್ಲಿ ಕೆಡವಿಬಿಟ್ಟನು,
ಆತನ ಪ್ರೀತಿಯು ಶಾಶ್ವತವಾದದ್ದು.
೧೬ ಆತನು ತನ್ನ ಪ್ರಜೆಯನ್ನು ಅರಣ್ಯದೊಳಗೆ ಕರೆತಂದನು,
ಆತನ ಪ್ರೀತಿಯು ಶಾಶ್ವತವಾದದ್ದು.
೧೭ ದೊಡ್ಡ ಅರಸರನ್ನು ಹೊಡೆದನು,
ಆತನ ಪ್ರೀತಿಯು ಶಾಶ್ವತವಾದದ್ದು.
೧೮ ಶ್ರೇಷ್ಠ ರಾಜರನ್ನು ಸಂಹರಿಸಿದನು,
ಆತನ ಪ್ರೀತಿಯು ಶಾಶ್ವತವಾದದ್ದು.
೧೯ ಅಮೋರಿಯರ ಅರಸನಾದ ಸೀಹೋನನು ಅವರಲ್ಲೊಬ್ಬನು,
ಆತನ ಪ್ರೀತಿಯು ಶಾಶ್ವತವಾದದ್ದು.
೨೦ ಬಾಷಾನಿನ ಅರಸನಾದ ಓಗನು ಇನ್ನೊಬ್ಬನು,
ಆತನ ಪ್ರೀತಿಯು ಶಾಶ್ವತವಾದದ್ದು.
೨೧ ಅವರ ದೇಶವನ್ನು ಇಸ್ರಾಯೇಲರಿಗೆ ಸ್ವಾಸ್ತ್ಯವಾಗಿ ಕೊಟ್ಟನು,
ಆತನ ಪ್ರೀತಿಯು ಶಾಶ್ವತವಾದದ್ದು.
೨೨ ಆತನ ಸೇವಕರಾದ ಇಸ್ರಾಯೇಲರಿಗೆ ಅದು ಸ್ವಾಸ್ತ್ಯವಾಯಿತು,
ಆತನ ಪ್ರೀತಿಯು ಶಾಶ್ವತವಾದದ್ದು.
೨೩ ನಾವು ದೀನಾವಸ್ಥೆಯಲ್ಲಿ ಇದ್ದಾಗ ನಮ್ಮನ್ನು ನೆನಪುಮಾಡಿಕೊಂಡನು,
ಆತನ ಪ್ರೀತಿಯು ಶಾಶ್ವತವಾದದ್ದು.
೨೪ ನಮ್ಮ ಶತ್ರುಗಳಿಂದ ನಮ್ಮನ್ನು ಬಿಡಿಸಿದನು,
ಆತನ ಪ್ರೀತಿಯು ಶಾಶ್ವತವಾದದ್ದು.
೨೫ ಎಲ್ಲಾ ಜೀವಿಗಳಿಗೂ ಆಹಾರ ಕೊಡುವವನು ಆತನೇ,
ಆತನ ಪ್ರೀತಿಯು ಶಾಶ್ವತವಾದದ್ದು.
೨೬ ಪರಲೋಕದಲ್ಲಿರುವ ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ,
ಆತನ ಪ್ರೀತಿಯು ಶಾಶ್ವತವಾದದ್ದು.