ಬಿಲ್ದದನಿಗೆ ಯೋಬನ ಉತ್ತರ
1ಆಗ ಯೋಬನು ಹೀಗೆ ಉತ್ತರಕೊಟ್ಟನು:
2“ನಿನ್ನಿಂದ ಬಲಹೀನನಿಗೆ ಎಷ್ಟೋ ಸಹಾಯವಾಯಿತು!
ನೀನು ನನ್ನ ಬಲಹೀನವಾದ ತೋಳುಗಳನ್ನು ಮತ್ತೆ ಬಲಗೊಳಿಸಿದೆ!
3ಹೌದು, ಅಜ್ಞಾನಿಗೆ ಎಷ್ಟೋ ಒಳ್ಳೆಯ ಬುದ್ಧಿವಾದ ಮಾಡಿದೆ!
ನೀನು ಎಷ್ಟು ಜ್ಞಾನಿ ಎಂಬುದನ್ನು ತೋರಿಸಿಕೊಟ್ಟಿರುವೆ.
4ಇವುಗಳನ್ನು ತಿಳಿಸಲು ನಿನಗೆ ಯಾರು ಸಹಾಯ ಮಾಡಿದವರು?
ಯಾರ ಆತ್ಮವು ನಿನ್ನನ್ನು ಪ್ರೇರೇಪಿಸಿತು?
5“ಸತ್ತವರ ಆತ್ಮಗಳು
ಭೂಗರ್ಭದಲ್ಲಿರುವ ಜಲರಾಶಿಗಳಲ್ಲಿ ನಡುಗುತ್ತವೆ.
6ದೇವರಿಗೆ ಪಾತಾಳವೂ ಸ್ಪಷ್ಟವಾಗಿ ಕಾಣುತ್ತದೆ;
ಮರಣವು ಆತನಿಗೆ ಮರೆಯಾಗಿಲ್ಲ.
7ದೇವರು ಶೂನ್ಯದ ಮೇಲೆ ಉತ್ತರದಿಕ್ಕಿನ ಆಕಾಶವನ್ನು ವಿಸ್ತರಿಸಿದನು.
ಆತನು ಭೂಮಿಯನ್ನು ಯಾವ ಆಧಾರವೂ ಇಲ್ಲದೆ ತೂಗುಹಾಕಿದ್ದಾನೆ.
8ದೇವರು ಮೋಡಗಳನ್ನು ನೀರಿನಿಂದ ತುಂಬಿಸುವನು.
ಆದರೆ ಮೋಡಗಳು ನೀರಿನ ಭಾರದಿಂದ ಒಡೆದುಹೋಗದಂತೆ ನೋಡಿಕೊಳ್ಳುವನು.
9ದೇವರು ತನ್ನ ಮೋಡಗಳನ್ನು ಹರಡಿ
ಪೂರ್ಣಚಂದ್ರನನ್ನು ಮರೆಮಾಡುವನು.
10ದೇವರು ಸಮುದ್ರದ ಮೇಲೆ ಬೆಳಕು ಮತ್ತು ಕತ್ತಲೆಗಳು ಸಂಧಿಸುವ ಸ್ಥಳದಲ್ಲಿ
ಕ್ಷಿತಿಜವನ್ನು ಗಡಿರೇಖೆಯನ್ನಾಗಿ ಎಳೆದಿದ್ದಾನೆ.
11ದೇವರು ಗದರಿಸುವಾಗ
ಆಕಾಶಮಂಡಲದ ಸ್ತಂಭಗಳು ಭಯದಿಂದ ನಡುಗುತ್ತವೆ.
12ದೇವರ ಶಕ್ತಿಯು ಸಮುದ್ರವನ್ನು ಪ್ರಶಾಂತಗೊಳಿಸುವುದು.
ದೇವರ ಶಕ್ತಿಯು ರಹಬನ ಸಹಾಯಕರನ್ನು ನಾಶಮಾಡುವುದು.
13ಆತನ ಉಸಿರು ಆಕಾಶಮಂಡಲವನ್ನು ಶುಭ್ರಗೊಳಿಸುವುದು.
ಆತನ ಜ್ಞಾನವು ಓಡಿಹೋಗಲು ಪ್ರಯತ್ನಿಸಿದ ರಹಬನನ್ನು ನಾಶಮಾಡುವುದು.
14ದೇವರ ಶಕ್ತಿಯುತವಾದ ಕಾರ್ಯಗಳಲ್ಲಿ ಇವು ಕೇವಲ ಒಂದು ಚಿಕ್ಕ ಭಾಗವಾಗಿವೆ.
ಆತನ ವಿಷಯವಾಗಿ ಸೂಕ್ಷ್ಮ ಧ್ವನಿಯನ್ನು ಮಾತ್ರ ಕೇಳಿದ್ದೇವೆ.
ಆತನ ಶಕ್ತಿಯ ಗರ್ಜನೆಯನ್ನು ಯಾರು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲರು?”

Notes


*26:3: ನಿನ್ನಿಂದ … ತೋರಿಸಿಕೊಟ್ಟಿರುವೆ ಯೋಬನ 2 ಮತ್ತು 3ನೆಯ ವಚನಗಳು ಆ ಮೂವರ ವಾಸ್ತವ ಚಿತ್ರಣವಲ್ಲ. ನೀವು ಈ ರೀತಿ ಮಾಡಬೇಕಿದ್ದರೂ ಮಾಡಿಲ್ಲ ಎಂಬ ಅರ್ಥ ಬರುವಂತೆ ಯೋಬನು ಇಲ್ಲಿ ತಿಳಿಸಿದ್ದಾನೆ. ಇದಕ್ಕೆ ವ್ಯಂಗ್ಯ ನುಡಿ ಎನ್ನುತ್ತಾರೆ.

26:12: ರಹಬ ಅಥವಾ ಮಹಾಸಮುದ್ರ ಪ್ರಾಣಿ. ಯೆಶಾಯ 27:1ನ್ನು ನೋಡಿರಿ.