ಯೆಹೋವನೊಬ್ಬನೇ ರಕ್ಷಕನು
೧೧೫
ದಾವೀದನ ಕೀರ್ತನೆ.
 
೧ ನಮ್ಮನ್ನಲ್ಲ, ಯೆಹೋವನೇ, ನಮ್ಮನ್ನಲ್ಲ, ನಿನ್ನ ಪ್ರೀತಿ, ಸತ್ಯೆತೆಗಳ ನಿಮಿತ್ತವಾಗಿ
ನಿನ್ನ ಹೆಸರನ್ನೇ ಘನಪಡಿಸು.
೨ “ಅವರ ದೇವರು ಎಲ್ಲಿದ್ದಾನೆ?” ಎಂದು ಅನ್ಯರು ಏಕೆ ಹೇಳಬೇಕು?
೩ ನಮ್ಮ ದೇವರು ಪರಲೋಕದಲ್ಲಿದ್ದಾನೆ;
ಆತನು ತನಗೆ ಬೇಕಾದುದನ್ನೆಲ್ಲಾ ಮಾಡುತ್ತಾನೆ.
೪ ಅವರ ವಿಗ್ರಹಗಳೋ ಬೆಳ್ಳಿ ಬಂಗಾರದವುಗಳೇ;
ಅವು ಮನುಷ್ಯರ ಕೈಕೆಲಸವಷ್ಟೇ.
೫ ಅವು ಬಾಯಿದ್ದರೂ ಮಾತನಾಡುವುದಿಲ್ಲ;
ಕಣ್ಣಿದ್ದರೂ ನೋಡುವುದಿಲ್ಲ.
೬ ಕಿವಿಯಿದ್ದರೂ ಕೇಳುವುದಿಲ್ಲ;
ಮೂಗಿದ್ದರೂ ಮೂಸುವುದಿಲ್ಲ.
೭ ಕೈಯುಂಟು ಮುಟ್ಟುವುದಿಲ್ಲ;
ಕಾಲುಂಟು ನಡೆಯುವುದಿಲ್ಲ;
ಅವುಗಳ ಗಂಟಲಲ್ಲಿ ಶಬ್ದವೇ ಇಲ್ಲ.
೮ ಅವುಗಳನ್ನು ಮಾಡುವವರೂ,
ಅವುಗಳಲ್ಲಿ ಭರವಸವಿಡುವವರೂ ಅವುಗಳಂತೆಯೇ.
೯ ಇಸ್ರಾಯೇಲರೇ, ಯೆಹೋವನಲ್ಲಿ ಭರವಸವಿಡಿರಿ.
ಅವರ ಸಹಾಯಕನು, ಗುರಾಣಿಯು ಆತನೇ.
೧೦ ಆರೋನನ ಮನೆತನದವರೇ, ಯೆಹೋವನಲ್ಲಿ ಭರವಸವಿಡಿರಿ.
ಅವರ ಸಹಾಯಕನು, ಗುರಾಣಿಯು ಆತನೇ.
೧೧ ಯೆಹೋವನ ಭಕ್ತರೇ, ಯೆಹೋವನಲ್ಲಿ ಭರವಸವಿಡಿರಿ.
ಅವರ ಸಹಾಯಕನು, ಗುರಾಣಿಯು ಆತನೇ.
೧೨ ಯೆಹೋವನು ನಮ್ಮನ್ನು ನೆನಪುಮಾಡಿಕೊಂಡಿದ್ದಾನೆ;
ಸಣ್ಣವರು ಮೊದಲುಗೊಂಡು ದೊಡ್ಡವರ ವರೆಗೆ ಎಲ್ಲರನ್ನೂ ಆಶೀರ್ವದಿಸುವನು.
೧೩ ಇಸ್ರಾಯೇಲನ ಮನೆತನದವರನ್ನು ಆಶೀರ್ವದಿಸುವನು;
ಆರೋನನ ಮನೆತನದವರನ್ನು ಆಶೀರ್ವದಿಸುವನು.
ತನ್ನ ಭಕ್ತರನ್ನು ಆಶೀರ್ವದಿಸುವನು.
೧೪ ಯೆಹೋವನು ನಿಮ್ಮನ್ನೂ, ನಿಮ್ಮ ಮಕ್ಕಳನ್ನೂ ಅಭಿವೃದ್ಧಿಪಡಿಸಲಿ;
೧೫ ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ.
ಆತನು ಭೂಪರಲೋಕಗಳನ್ನು ಉಂಟುಮಾಡಿದ್ದಾನೆ.
೧೬ ಪರಲೋಕವು ಯೆಹೋವನದು;
ಭೂಲೋಕವನ್ನು ಮಾನವ ಸಂತಾನಕ್ಕೆ ಕೊಟ್ಟಿದ್ದಾನೆ.
೧೭ ಸತ್ತವರು ಯೆಹೋವನನ್ನು ಸ್ತುತಿಸುವುದಿಲ್ಲ;
ಮೌನಲೋಕವನ್ನು ಸೇರಿದವರಲ್ಲಿ ಯಾರೂ ಆತನನ್ನು ಕೀರ್ತಿಸುವುದಿಲ್ಲ.
೧೮ ನಾವೋ ಇಂದಿನಿಂದ ಸದಾಕಾಲವೂ
ಯೆಹೋವನನ್ನು ಕೊಂಡಾಡುವೆವು.
ಯೆಹೋವನಿಗೆ ಸ್ತೋತ್ರ!